ಸಾರಾಂಶ
ಯಲಬುರ್ಗಾ: ರಾಜ್ಯ ಸರ್ಕಾರ ಹಿಂದುಳಿದ ವರ್ಗಗಳ ಆಯೋಗದಿಂದ ನಡೆಸುತ್ತಿರುವ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಸಮೀಕ್ಷೆಯ ಕಾರ್ಯವು ತಾಂತ್ರಿಕ ಸಮಸ್ಯೆಯಿಂದ ಆರಂಭದಲ್ಲಿಯೇ ಮುಗ್ಗರಿಸಿತ್ತು. ಈಗ ಸಮಸ್ಯೆ ಪರಿಹಾರವಾಗಿ ಗಣತಿಕಾರ್ಯ ವೇಗ ಪಡೆದುಕೊಂಡಿದ್ದು, ಉತ್ತಮ ಪ್ರಗತಿಯಿಂದಾಗಿ ಜಿಲ್ಲೆಯಲ್ಲಿ ಯಲಬುರ್ಗಾ ಎರಡನೇ ಸ್ಥಾನದಲ್ಲಿದೆ.
ತಾಲೂಕಿನಲ್ಲಿ ಒಟ್ಟು ೩೧,೮೩೫ ಕುಟುಂಬಗಳಿದ್ದು, ಸಮೀಕ್ಷೆಯ ಆರಂಭದಿಂದ ಇದುವರೆಗೆ ೧೮,೫೦೦ ಕುಟುಂಬಗಳ ಸಮೀಕ್ಷೆ ಪೂರ್ಣಗೊಂಡಿದೆ. ಸಮೀಕ್ಷೆಗೆ ೨೯೨ ಜನರನ್ನು ನೇಮಿಸಲಾಗಿದೆ. ೧೫ ಜನ ಮೇಲ್ವಿಚಾರಕರನ್ನು ನಿಯೋಜಿಸಲಾಗಿದೆ. ಶೇ. ೧೦೦ರಷ್ಟು ಗಣತಿ ಕಾರ್ಯ ಪೂರ್ಣಗೊಳಿಸುವ ವಿಶ್ವಾಸ ತಾಲೂಕಾಡಳಿತ ಹೊಂದಿದೆ.ಆರಂಭದಲ್ಲಿ ತಾಂತ್ರಿಕ ಸಮಸ್ಯೆಯಿಂದಾಗಿ ಗಣತಿ ಕಾರ್ಯ ಮಂದಗತಿಯಲ್ಲಿ ಸಾಗಿತ್ತು. ಇದರಿಂದ ಗಣತಿದಾರರು ಉತ್ಸಾಹ ಕಳೆದುಕೊಳ್ಳುವ ಜತೆಗೆ ಒತ್ತಡಕ್ಕೆ ಒಳಗಾಗಿದ್ದರು. ದಿನಗಳೆದಂತೆ ಸರ್ವರ್ ವೇಗ ಪಡೆದುಕೊಂಡು ಸಮಸ್ಯೆಗೆ ಪರಿಹಾರ ದೊರಕಿದೆ. ಹೀಗಾಗಿ ಜಿಲ್ಲೆಯಲ್ಲಿ ಯಲಬುರ್ಗಾ ತಾಲೂಕು ಸಮೀಕ್ಷೆಯಲ್ಲಿ ಮುಂಚೂಣಿಯಲ್ಲಿದೆ. ಇದು ಸಮೀಕ್ಷೆಗೆ ನಿಯೋಜನೆಗೊಂಡ ಅಧಿಕಾರಿಗಳು ಮತ್ತು ಸಿಬ್ಬಂದಿ ಕಾರ್ಯಕ್ಷಮತೆಗೆ ಸಾಕ್ಷಿಯಾಗಿದೆ.
ಸಮೀಕ್ಷೆಯ ಉಸ್ತುವಾರಿ ವಹಿಸಿಕೊಂಡ ತಹಸೀಲ್ದಾರ್ ಬಸವರಾಜ ತೆನ್ನಳ್ಳಿ, ಬಿಸಿಎಂ ತಾಲೂಕು ಅಧಿಕಾರಿ ಶಿವಶಂಕರ ಕರಡಕಲ್ ಗಣತಿದಾರರೊಂದಿಗೆ ನಿರಂತರ ಸಂವಹನ ಸಾಧಿಸಿದ್ದು, ಸಮೀಕ್ಷೆ ಕಾರ್ಯ ಪ್ರತಿನಿತ್ಯ ನಿಗದಿತ ಗುರಿಗಿಂತ ಹೆಚ್ಚು ಪ್ರಮಾಣದಲ್ಲಿ ನಡೆಯುತ್ತಿರುವುದು ವಿಶೇಷ.ಡಿಸಿಯಿಂದ ಪ್ರಶಂಸನಾ ಪತ್ರ: ಸಮೀಕ್ಷೆಗೆ ನಿಯೋಜಿಸಲಾದ ಗಣತಿದಾರರು ನಿಗದಿತ ಅವಧಿಯಲ್ಲಿ ಗಣತಿ ಕಾರ್ಯವನ್ನು ಗುರಿ ಮೀರಿ ಸಾಧನೆ ಮಾಡಿದವರಿಗೆ ಡಿಸಿಯಿಂದ ಪ್ರಶಂಸನಾ ಪತ್ರ ನೀಡಲಾಗುತ್ತಿದೆ. ಅಂಥವರಲ್ಲಿ ವಜ್ರಬಂಡಿಯ ರಾಘವೇಂದ್ರ, ಹಿರೇಅರಳಿಹಳ್ಳಿಯ ರಾಮಪ್ಪ ಭಜಂತ್ರಿ, ಮುರಡಿಯ ರಮೇಶ ಹಾಗೂ ಸಂಗನಾಳದ ಮಂಜುನಾಥ ಬೂದಿಹಾಳ ಗಣತಿ ಕಾರ್ಯದಲ್ಲಿ ಗುರಿ ಮೀರಿ ಸಾಧನೆ ಮಾಡಿದ್ದಾರೆ. ಅಲ್ಲದೆ ಮತ್ತೆ ಹೆಚ್ಚುವರಿ ಸಮೀಕ್ಷೆ ಕಾರ್ಯದಲ್ಲಿ ತೊಡಗಿಸಿಕೊಂಡಿರುವುದು ವಿಶೇಷ.
ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕ ಸಮೀಕ್ಷೆಯಲ್ಲಿ ಜಿಲ್ಲೆಗೆ ಯಲಬುರ್ಗಾ ತಾಲೂಕು ಎರಡನೇ ಸ್ಥಾನದಲ್ಲಿದೆ. ಆರಂಭದಲ್ಲಿ ತಾಂತ್ರಿಕ ಸಮಸ್ಯೆಯಿತ್ತು. ಕಳೆದ ಎರಡು ದಿನಗಳಿಂದ ನಿವಾರಣೆಯಾಗಿದೆ. ಗಣತಿ ಕಾರ್ಯ ವೇಗ ಪಡೆದುಕೊಂಡಿದ್ದು, ನಿಗದಿತ ಅವಧಿಯಲ್ಲಿ ಪೂರ್ಣಗೊಳ್ಳಲಿದೆ ಎಂದು ಯಲಬುರ್ಗಾ ತಹಸೀಲ್ದಾರ್ ಬಸವರಾಜ ತೆನ್ನಳ್ಳಿ ಹೇಳಿದರು.ಸರ್ಕಾರ ಗಣತಿ ಕಾರ್ಯಕ್ಕೆ ವೇಗ ನೀಡಲು ತಂತ್ರಾಂಶದ ಗೂಗಲ್ ಲಿಂಕ್ ಮೂಲಕ ತಮ್ಮ ಕುಟುಂಬದ ವೈಯಕ್ತಿಕ ಮಾಹಿತಿ ಅಳವಡಿಸಲು ಸಾರ್ವಜನಿಕರಿಗೆ ಅವಕಾಶ ಒದಗಿಸಲಾಗಿದೆ. ಸಮೀಕ್ಷೆಯಿಂದ ಹೊರಗುಳಿದವರನ್ನು ಗಣತಿ ಕಾರ್ಯಕ್ಕೆ ಸಹಕರಿಸಲು ಗ್ರಾಪಂ ಮೂಲಕ ಸಾರಲಾಗುತ್ತದೆ. ಶೇ. ೧೦೦ರಷ್ಟು ಗುರಿ ಸಾಧಿಸುವ ಕೆಲಸ ಮಾಡಲಾಗುವುದು. ಇದಕ್ಕೆ ಸಾರ್ವಜನಿಕರು ಸಹಕಾರ ನೀಡಬೇಕು ಎಂದು ಯಲಬುರ್ಗಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಶಿವಶಂಕರ ಕರಡಕಲ್ ಹೇಳಿದರು.
ಸರ್ಕಾರದ ಗಣತಿ ಕಾರ್ಯ ಸಕಾಲದಲ್ಲಿ ಪೂರ್ಣಗೊಳಿಸಲು ತಾಲೂಕಿನ ಗಣತಿದಾರರು ವೇಗವಾಗಿ ಕೆಲಸ ಮಾಡುತ್ತಿದ್ದಾರೆ. ಗಣತಿದಾರರು ಅಸಹಕಾರ ತೋರುವುದು ಸರಿಯಲ್ಲ. ನಿಗದಿತ ಸಮಯದಲ್ಲಿ ಗಣತಿ ಕಾರ್ಯ ಪೂರ್ಣಗೊಳಿಸುವುದು ನಮ್ಮ ಆದ್ಯತೆಯಾಗಲಿದೆ ಎಂದು ಯಲಬುರ್ಗಾ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಎಸ್.ವಿ. ಧರಣಾ ಹೇಳಿದರು.