ಕಳೆದ 34 ವರ್ಷಗಳಿಂದ ಕುಂದಾಪುರ ತಾಲೂಕು ಬಿಲ್ಲವ ಸಂಘವು ವಿದ್ಯಾರ್ಥಿ ಪ್ರತಿಭಾ ಪುರಸ್ಕಾರ ಹಾಗೂ ವಿದ್ಯಾರ್ಥಿವೇತನ ವಿತರಣೆ ಕಾರ್ಯಕ್ರಮವನ್ನು ನಿರಂತರವಾಗಿ ನಡೆಸಿಕೊಂಡು ಬರುತ್ತಿರುವುದು ಶ್ಲಾಘನೀಯ ಕಾರ್ಯವಾಗಿದ್ದು, ಸಂಘದ ಮೇಲಿನ ಸಮಾಜದ ವಿಶ್ವಾಸವೇ ಅದರ ದೊಡ್ಡ ಶಕ್ತಿಯಾಗಿದೆ ಎಂದು ಬಿಲ್ಲವ ಸಮಾಜ ಸೇವಾ ಸಂಘದ ಗೌರವಾಧ್ಯಕ್ಷ ಎನ್.ಟಿ. ಪೂಜಾರಿ ಹೇಳಿದರು.

ಕುಂದಾಪುರ: ಕಳೆದ 34 ವರ್ಷಗಳಿಂದ ಕುಂದಾಪುರ ತಾಲೂಕು ಬಿಲ್ಲವ ಸಂಘವು ವಿದ್ಯಾರ್ಥಿ ಪ್ರತಿಭಾ ಪುರಸ್ಕಾರ ಹಾಗೂ ವಿದ್ಯಾರ್ಥಿವೇತನ ವಿತರಣೆ ಕಾರ್ಯಕ್ರಮವನ್ನು ನಿರಂತರವಾಗಿ ನಡೆಸಿಕೊಂಡು ಬರುತ್ತಿರುವುದು ಶ್ಲಾಘನೀಯ ಕಾರ್ಯವಾಗಿದ್ದು, ಸಂಘದ ಮೇಲಿನ ಸಮಾಜದ ವಿಶ್ವಾಸವೇ ಅದರ ದೊಡ್ಡ ಶಕ್ತಿಯಾಗಿದೆ ಎಂದು ಬಿಲ್ಲವ ಸಮಾಜ ಸೇವಾ ಸಂಘದ ಗೌರವಾಧ್ಯಕ್ಷ ಎನ್.ಟಿ. ಪೂಜಾರಿ ಹೇಳಿದರು.ಇಲ್ಲಿನ ಶ್ರೀ ನಾರಾಯಣ ಗುರು ಸಭಾಭವನದಲ್ಲಿ ಭಾನುವಾರ ಬಿಲ್ಲವ ಸಮಾಜ ಸೇವಾ ಸಂಘ ಹಾಗೂ ಶ್ರೀ ನಾರಾಯಣ ಗುರು ಶೈಕ್ಷಣಿಕ ಮತ್ತು ಸಾಂಸ್ಕೃತಿಕ ದತ್ತಿ ಸಂಸ್ಥೆ ಆಶ್ರಯದಲ್ಲಿ ದಿ. ಸುರೇಶ್ ಪೂಜಾರಿ ಪಡುಕೋಣೆ ಅವರ ಸ್ಮರಣಾರ್ಥ ನಡೆದ 34ನೇ ವರ್ಷದ ವಿದ್ಯಾರ್ಥಿ ಧನ ಸಹಾಯ ವಿತರಣೆ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

ವಿದ್ಯಾರ್ಥಿಗಳು, ಪೋಷಕರ ಭಾಗವಹಿಸುವಿಕೆ ಸಂಘದ ಮೇಲಿನ ಪ್ರೀತಿ, ವಿಶ್ವಾಸ ಮತ್ತು ಒಗ್ಗಟ್ಟನ್ನು ಎತ್ತಿ ತೋರಿಸುತ್ತಿದ್ದು, ಒಗ್ಗಟ್ಟಿನಿಂದ ಇಂತಹ ಸಮಾಜಮುಖಿ ಕಾರ್ಯಕ್ರಮಗಳು ಇನ್ನಷ್ಟು ಯಶಸ್ವಿಯಾಗಲಿವೆ. ವಿದ್ಯಾರ್ಥಿವೇತನದ ಮೊತ್ತಕ್ಕಿಂತ ಅದರ ಹಿಂದಿರುವ ಸಮಾಜಮುಖಿ ಚಿಂತನೆ ಮತ್ತು ಮೌಲ್ಯಗಳೇ ಮುಖ್ಯ ಎಂದು ಹೇಳಿದರು.ಶ್ರೀ ನಾರಾಯಣ ಗುರು ಅಭಿವೃದ್ಧಿ ನಿಗಮದ ಅಧ್ಯಕ್ಷ ಮಂಜುನಾಥ್ ಪೂಜಾರಿ ಮುದ್ರಾಡಿ ಮಾತನಾಡಿ, ನಾರಾಯಣ ಗುರುಗಳ ಸಂದೇಶ ನಮ್ಮ ಜೀವನದ ನಿತ್ಯ ಸ್ಮರಣೆಯಾಗಬೇಕು. ಬದಲಾಗುತ್ತಿರುವ ಕಾಲಘಟ್ಟದಲ್ಲಿ ಬಿಲ್ಲವ ಸಮಾಜ ಹಿಂದಿನ ಕಷ್ಟಗಳನ್ನು ಮೆಟ್ಟಿ ನಿಂತಿದೆ. ಬಿಲ್ಲವ ಸಮುದಾಯದ 26 ಪಂಗಡಗಳ ಸರ್ವಾಂಗೀಣ ಅಭಿವೃದ್ಧಿಗಾಗಿ ಸ್ಥಾಪನೆಯಾಗಿರುವ ಬಿಲ್ಲವ ಅಭಿವೃದ್ಧಿ ನಿಗಮ ಸರ್ಕಾರದ ಆಶಯಗಳನ್ನು ಈಡೇರಿಸಲು ಬದ್ಧವಾಗಿದೆ ಎಂದರು.ವಿದ್ಯಾರ್ಥಿವೇತನ ವಿತರಿಸಿ ಮಾತನಾಡಿದ ಮುಂಬೈ ಉದ್ಯಮಿ ಬಾಬು ಪೂಜಾರಿ ಸಂಕುಮನೆ ಪಡುಕೋಣೆ, ವಿದ್ಯಾರ್ಥಿಗಳ ಸಾಧನೆ ಎಂದಿಗೂ ನಿಂತ ನೀರಾಗಬಾರದು. ವಿದ್ಯೆಯೇ ಪ್ರತಿಭೆಗೆ ಶ್ರೀರಕ್ಷೆಯಾಗಬೇಕು. ದಿ. ಸುರೇಶ್ ಎಸ್. ಪೂಜಾರಿ ಅವರು ನೆಟ್ಟು ಬೆಳೆಸಿದ ಶಿಕ್ಷಣ ಸೇವೆಯ ವೃಕ್ಷ ಇಂದು ಸಮೃದ್ಧ ಫಲ ನೀಡುತ್ತಿದೆ ಎಂದು ಹೇಳಿದರು.

ಸಾಧಕರನ್ನು ಸನ್ಮಾನಿಸಿ ಮಾತನಾಡಿದ ಶ್ರೀ ನಾರಾಯಣ ಗುರು ಶೈಕ್ಷಣಿಕ ಮತ್ತು ಸಾಂಸ್ಕೃತಿಕ ದತ್ತಿ ಸಂಸ್ಥೆ ಅಧ್ಯಕ್ಷ ಭರತ್ ಎಸ್. ಪೂಜಾರಿ, ವಿದ್ಯಾರ್ಥಿಗಳು ತಮ್ಮ ಭವಿಷ್ಯದ ನಿರ್ಧಾರಗಳನ್ನು ವಿವೇಚನೆಯಿಂದ ತೆಗೆದುಕೊಳ್ಳಬೇಕು. ಪುಸ್ತಕದ ಓದಿನೊಂದಿಗೆ ಜೀವನವನ್ನೇ ನಿರಂತರ ಕಲಿಕೆಯ ಶಾಲೆಯಾಗಿ ಪರಿಗಣಿಸಬೇಕು ಎಂದು ಸಲಹೆ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಅಶೋಕ ಪೂಜಾರಿ ಬೀಜಾಡಿ ಮಾತನಾಡಿ, ವ್ಯಕ್ತಿತ್ವ ಹಾಗೂ ಧೀಮಂತಿಕೆಯ ಮೂಲಕ ಸಮಾಜಕ್ಕೆ ಮಾರ್ಗದರ್ಶನ ನೀಡುತ್ತಿರುವ ಎನ್.ಟಿ. ಪೂಜಾರಿ ಅವರ ಸೇವೆ ಸಮಾಜಕ್ಕೆ ಇನ್ನೂ ದೀರ್ಘಕಾಲ ಅಗತ್ಯವಾಗಿದೆ ಎಂದು ಹೇಳಿದರು.

ಈ ಸಂದರ್ಭ ತಾಲೂಕು ವೈದ್ಯಾಧಿಕಾರಿ ಡಾ. ಕೆ. ಪ್ರೇಮಾನಂದ, ಉದ್ಯಮಿಗಳಾದ ಅಭಿಷೇಕ್ ಪೂಜಾರಿ, ವಿಜಯ್ ಪಿ. ಪೂಜಾರಿ, ಮಂಜುನಾಥ್ ಪೂಜಾರಿ ಸೇನಾಪುರ, ಉದಯ್ ಕುಮಾರ್ ಪೂಜಾರಿ ಬೆಳ್ವೆ, ಉಪನ್ಯಾಸಕಿ ಮಂಜುಳಾ ಜಿ. ತೆಕ್ಕಟ್ಟೆ, ಸಂಘದ ಉಪಾಧ್ಯಕ್ಷರಾದ ರಾಮ ಪೂಜಾರಿ ಮುಲ್ಲಿಮನೆ, ಶ್ರೀನಿವಾಸ ಪೂಜಾರಿ ವಂಡ್ಸೆ, ಮೋಹನ್ ಪೂಜಾರಿ ಉಪ್ಪುಂದ, ಗಿರಿಜಾ ಮಾಣಿ ಗೋಪಾಲ, ಶ್ರೀ ನಾರಾಯಣ ಗುರು ಯುವಕ ಮಂಡಲದ ಅಧ್ಯಕ್ಷ ರವೀಂದ್ರ ಪೂಜಾರಿ ಹಂಗಳೂರು, ಬಿಲ್ಲವ ಮಹಿಳಾ ಘಟಕದ ಅಧ್ಯಕ್ಷೆ ಶಾಂತಾ ವಾಸುದೇವ ಪೂಜಾರಿ, ಯು. ಕುಪ್ಪಯ್ಯ ಬಿಲ್ಲವ, ಆನಂದ್ ಪೂಜಾರಿ ಕೊಡೇರಿ ಉಪಸ್ಥಿತರಿದ್ದರು.ಈ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ಪ್ರೀತಮ್ ಜಿ. ಪೂಜಾರಿ ಹಾಗೂ ದ್ವಿತೀಯ ಸ್ಥಾನ ಪಡೆದ ಅನ್ವರ್ಥ್ ಪೂಜಾರಿ ಅವರನ್ನು ವಿಶೇಷವಾಗಿ ಸನ್ಮಾನಿಸಲಾಯಿತು. ಒಟ್ಟು 627 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಿಸಲಾಯಿತು.

ಎಸ್ಸೆಸ್ಸೆಲ್ಸಿಹಾಗೂ ಪಿಯುಸಿ ಪರೀಕ್ಷೆಗಳಲ್ಲಿ ಉನ್ನತ ಅಂಕ ಗಳಿಸಿದ ವಿದ್ಯಾರ್ಥಿಗಳು ಮತ್ತು ಎಂಎಸ್‌ಸಿ ಪರೀಕ್ಷೆಯಲ್ಲಿ ರ್‍ಯಾಂಕ್‌ ಗಳಿಸಿದ ವಿಶೇಷ ಚೇತನ ವಿದ್ಯಾರ್ಥಿನಿ ರೂಪಾ ಅವರನ್ನು ಗೌರವಿಸಲಾಯಿತು.ಗೀತಾ ಸುಧಾಕರ ಪೂಜಾರಿ ಹಾಗೂ ನಯನ ಪೂಜಾರಿ ಪ್ರಾರ್ಥಿಸಿದರು. ಸಂಘದ ಕಾರ್ಯದರ್ಶಿ ಯೋಗೀಶ್ ಪೂಜಾರಿ ಕೋಡಿ ಸ್ವಾಗತಿಸಿದರು. ಶಿಕ್ಷಕ ಸತೀಶ್ ಪೂಜಾರಿ ವಡ್ಡರ್ಸೆ ನಿರೂಪಿಸಿದರು. ಪ್ರಧಾನ ಕಾರ್ಯದರ್ಶಿ ಆನಂದ್ ಪೂಜಾರಿ ಕೊಡೇರಿ ವಂದಿಸಿದರು.