ಸಾರಾಂಶ
ವೇದಗಳಲ್ಲಿ ಹೇಳಿದ್ದನ್ನು ಪಾಲನೆ ಮಾಡುವುದು ಬಲಪಂಥೀಯವಾದರೆ, ಅದನ್ನು ವಿಶ್ಲೇಷಣೆ ಮಾಡಿ ಸರಿಯಾದುದರ ಬಗ್ಗೆ ಸಮಾಜದಲ್ಲಿ ತಿಳಿಸಿ ಜನಮನದಲ್ಲಿ ಜಾಗೃತಿ ಮೂಡಿಸಿದವರು ಶರಣರು
ಗದಗ: ವ್ಯಸನರಹಿತ ಸಮಾಜ, ಮೂಢನಂಬಿಕೆ, ಅಂಧಶ್ರದ್ಧೆ, ಶೋಷಣೆಮುಕ್ತ ಸಮಾಜ ಶರಣರ ಪ್ರಗತಿಪರ ಚಿಂತನೆಗಳಾಗಿದ್ದವು. ಶರಣರ ವಚನಗಳಲ್ಲಿ ಸಾಮಾಜಿಕ ಪ್ರಜ್ಞೆ ಇದೆ. ವಚನಕಾರರ ದೃಷ್ಟಿಕೋನ ಆತ್ಮಕಲ್ಯಾಣದ ಜತೆಗೆ ಸಮಾಜ ಕಲ್ಯಾಣವಾಗಿತ್ತು ಎಂದು ಡಾ.ತೋಂಟದ ಸಿದ್ಧರಾಮ ಸ್ವಾಮಿಗಳು ಹೇಳಿದರು.
ನಗರದ ತೋಂಟದಾರ್ಯ ಮಠದಲ್ಲಿ ಲಿಂಗಾಯತ ಪ್ರಗತಿಶೀಲ ಸಂಘದ 2724ನೇ ಶಿವಾನುಭವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ತಾತ್ವಿಕ ಚಿಂತನೆ ಉಪನಿಷತ್ತುಗಳು ಮಾಡಿದರೆ, ವಚನಗಳು ತಾತ್ವಿಕತೆಯ ಜತೆಗೆ ಸಾಮಾಜಿಕ ಚಿಂತನೆ ಮಾಡಿದವು. ವೇದಗಳಲ್ಲಿ ಹೇಳಿದ್ದನ್ನು ಪಾಲನೆ ಮಾಡುವುದು ಬಲಪಂಥೀಯವಾದರೆ, ಅದನ್ನು ವಿಶ್ಲೇಷಣೆ ಮಾಡಿ ಸರಿಯಾದುದರ ಬಗ್ಗೆ ಸಮಾಜದಲ್ಲಿ ತಿಳಿಸಿ ಜನಮನದಲ್ಲಿ ಜಾಗೃತಿ ಮೂಡಿಸಿದವರು ಶರಣರು ಎಂದರು.ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಪ್ರಾಧ್ಯಾಪಕ ಸಿದ್ದಲಿಂಗೇಶ ಸಜ್ಜನಶೆಟ್ಟರ ಮಾತನಾಡಿ, ಉಪನಿಷತ್‌ಗಳಲ್ಲಿ ಇರುವುದೆಲ್ಲ ವಚನಗಳಲ್ಲಿ ಇದೆ. ಆದರೆ ವಚನಗಳಲ್ಲಿ ಇರುವುದೆಲ್ಲ ಉಪನಿಷತ್‌ಗಳಲ್ಲಿ ಇಲ್ಲ. ಶರಣರು ನುಡಿದಂತೆ ನಡೆದು ಕಾಯಕ ಸಿದ್ಧಾಂತ ಮತ್ತು ಮಾನವಿಯ ಮೌಲ್ಯ ಸಮಾಜಕ್ಕೆ ನೀಡಿದ್ದಾರೆ ಎಂದು ತಿಳಿಸಿದರು.
ರಮಣಶ್ರೀ ಶರಣ ಉತ್ತೇಜನ ಪ್ರಶಸ್ತಿ ಪಡೆದ ಕೆ.ಎಲ್.ಇ. ಸಂಸ್ಥೆಯ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದ ಉಪನ್ಯಾಸಕ ಡಾ. ಅಂದಯ್ಯ ಅರವಟಗಿಮಠ ಅವರನ್ನು ಸನ್ಮಾನಿಸಲಾಯಿತು.ಮೃತ್ಯುಂಜಯ ಹಿರೇಮಠ ಹಾಗೂ ಗುರುನಾಥ ಸುತಾರ ಸಂಗೀತ ಸೇವೆ ನೀಡಿದರು. ಧರ್ಮಗ್ರಂಥ ಪಠಣ ರೇಣುಕಾ ಲಿಂಗರಾಜ ಅಮಾತ್ಯ, ವಚನ ಚಿಂತನ ವಿಜಯಶ್ರೀ ಕಾಶಪ್ಪ ಇಲಕಲ್ ನಡೆಸಿಕೊಟ್ಟರು.
ಲಿಂಗಾಯತ ಪ್ರಗತಿಶೀಲ ಸಂಘದ ಅಧ್ಯಕ್ಷ ಬಾಲಚಂದ್ರ ಭರಮಗೌಡ್ರ, ಕಾರ್ಯದರ್ಶಿ ವೀರಣ್ಣ ಗೋಟಡಕಿ ಹಾಗೂ ಸರ್ವ ಸದಸ್ಯರು ಇದ್ದರು. ಪ್ರೊ. ಶಿವಾನಂದ ಹೊಂಬಳ ಸ್ವಾಗತಿಸಿದರು. ಶಿವಾನುಭವ ಸಮಿತಿಯ ಚೇರಮನ್ ಐ.ಬಿ. ಬೆನಕೊಪ್ಪ ಪರಿಚಯಿಸಿದರು. ವಿದ್ಯಾ ಪ್ರಭು ಗಂಜಿಹಾಳ ನಿರೂಪಿಸಿದರು.