ಸಾರಾಂಶ
ಸಾಹಿತ್ಯ ಲೋಕಕ್ಕೆ ರಾಷ್ಟ್ರಕವಿ ಕುವೆಂಪು ಕಿರೀಟಪ್ರಾಯರಾಗಿದ್ದಾರೆ. ಇತಿಹಾಸ, ಪುರಾಣ, ಪುಣ್ಯಕತೆಗಳನ್ನು ಬಿಂಬಿಸಿದ ಈ ಮಹಾತ್ಮರ ಕಾವ್ಯಗಳು ಅಜರಾಮರ
ಕನ್ನಡಪ್ರಭ ವಾರ್ತೆ ಟಿ. ನರಸೀಪುರ
ಬುದ್ಧ, ಬಸವ, ಅಂಬೇಡ್ಕರ್ ಅವರ ಸ್ಥಾನದ ಮೇರು ವ್ಯಕ್ತಿತ್ವ ಕುವೆಂಪು ಅವರದ್ದಾಗಿತ್ತು ಎಂದು ಸಮಾಜಕಲ್ಯಾಣ ಸಚಿವ ಡಾ.ಎಚ್.ಸಿ. ಮಹದೇವಪ್ಪ ಹೇಳಿದರು.ತಾಲೂಕಿನ ಬನ್ನೂರು ಹೋಬಳಿ ಯಾಚೇನಹಳ್ಳಿ ಗ್ರಾಮದಲ್ಲಿ ಮೈಸೂರು ಜಿಲ್ಲಾಡಳಿತ ಹಾಗೂ ಕನ್ನಡ ಸಂಸ್ಕೃತಿ ಇಲಾಖೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ವಿಶ್ವ ಕವಿಕುವೆಂಪು ಚಿತಾಭಸ್ಮ ಸ್ಮಾರಕ ಭವನ ನಿರ್ಮಾಣ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.
ಸಾಹಿತ್ಯ ಲೋಕಕ್ಕೆ ರಾಷ್ಟ್ರಕವಿ ಕುವೆಂಪು ಕಿರೀಟಪ್ರಾಯರಾಗಿದ್ದಾರೆ. ಇತಿಹಾಸ, ಪುರಾಣ, ಪುಣ್ಯಕತೆಗಳನ್ನು ಬಿಂಬಿಸಿದ ಈ ಮಹಾತ್ಮರ ಕಾವ್ಯಗಳು ಅಜರಾಮರ. ಜನರ ನಾಡಿಮಿಡಿತ ಅರಿತು ಅವರ ಹೃದಯ ಮುಟ್ಟುವಲ್ಲಿ ಸಾಹಿತ್ಯ ಕ್ಷೇತ್ರಕ್ಕೆ ಕುವೆಂಪು ಅವರ ಕೊಡುಗೆ ಅಪಾರವಾಗಿದೆ. ಅಂತಹ ಮೇರು ವ್ಯಕ್ತಿತ್ವದ ವ್ಯಕ್ತಿ ತಾನು ವಿದ್ಯಾಭ್ಯಾಸ ಮಾಡದಿದ್ದರೆ ಬ್ರಾಹ್ಮಣರ ಮನೆಯಲ್ಲಿ ಜೀತ ಮಾಡುವ ಪರಿಸ್ಥಿತಿ ನನ್ನದಾಗುತ್ತಿತ್ತು ಎಂದು ಹೇಳಿದ್ದರು. ಅಂದರೆ ಬ್ರಾಹ್ಮಣ್ಯ ವ್ಯವಸ್ಥೆಯಲ್ಲಿ ಅವರು ಅನುಭವಿಸಿದ ನೋವಿನ ಅನಾವರಣ ನಾವಿಲ್ಲಿ ಕಾಣಬಹುದಾಗಿದೆ, ಹಾಗಾಗಿ ಬುದ್ದ ಬಸವ, ಅಂಬೇಡ್ಕರ್ ಅವರ ಸ್ಥಾನದ ಮೇರು ವ್ಯಕ್ತಿತ್ವದ ಕುವೆಂಪು ಅವರನ್ನು ಬಿಟ್ಟರೆ ಶೂದ್ರರಿಗೆ ಉಳಿಗಾಲವಿಲ್ಲ ಎಂದರು.ರಾಮಕೃಷ್ಣ ಸೇವಾ ಕೇಂದ್ರದ ಕಾರ್ಯದರ್ಶಿ ಹಾಗೂ ಹಿರಿಯ ಸಹಕಾರಿ ವೈ.ಎನ್. ಶಂಕರೇಗೌಡ ಮಾತನಾಡಿ, ಗ್ರಾಮದಲ್ಲಿ ನಿರ್ಮಿಸಲು ಉದ್ದೇಶಿರುವ ಸ್ಮಾರಕ ಭವನದಲ್ಲಿ ವಿಚಾರ ಸಂಕೀರ್ಣಗಳು, ಇಲಾಖೆಗೆ ಸಂಬಂಧಿಸಿದ ಚಟುವಟಿಕೆಗಳು, ರೈತರ ಸಮಸ್ಯೆಗಳ ಬಗ್ಗೆ ಉಪನ್ಯಾಸಗಳನ್ನು ಮಾಡುವ ವಿವಿದೋದ್ದೇಶ ಹೊಂದಲಾಗಿದೆ ಎಂದು ತಿಳಿಸಿದರು.
ಯಾಚೇನಹಳ್ಳಿ ರಾಮಕೃಷ್ಣ ಸೇವಾ ಕೇಂದ್ರದ ವ್ಯವಸ್ಥಾಪಕ ಟ್ರಸ್ಟಿ ಶ್ರೀ ನಾದಾನಂದ ಸ್ವಾಮೀಜಿ, ಸಂಸದ ಸುನಿಲ್ ಬೋಸ್, ಮಾಜಿ ಶಾಸಕಿ ಸುನೀತಾ ವೀರಪ್ಪಗೌಡ, ಪ್ರಗತಿ ಪರಚಿಂತಕ ಡಾ.ಕೆ.ಎಸ್. ಭಗವಾನ್, ಮೈಮುಲ್ ನಿರ್ದೇಶಕ ಚೆಲುವರಾಜು, ಪೀ ಕಾರ್ಡ್ ಬ್ಯಾಂಕ್ ಮಾಜಿ ಅಧ್ಯಕ್ಷ ಕೆ. ವಜ್ರೇಗೌಡ, ತಾಪಂ ಮಾಜಿ ಅಧ್ಯಕ್ಷ ಮಲ್ಲಿಕಾರ್ಜುನ, ಮುನಾವರ್ ಪಾಷ, ವೀಣಾ ಶಿವಕುಮಾರ್, ಕ್ಷೇತ್ರ ಶಿಕ್ಷಣಾಧಿಕಾರಿ ಶಿವಮೂರ್ತಿ, ಕೃಷಿ ಸಹಾಯಕ ನಿರ್ದೇಶಕಿ ಸುಹಾಸಿನಿ, ರವಿಕುಮಾರ್, ಲಕ್ಷ್ಮಿ ನಾರಾಯಣ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಎಂ.ಡಿ. ಸುದರ್ಶನ್, ಗ್ರಾಪಂ ಅಧ್ಯಕ್ಷ ವೈ.ಸಿ. ಶಿವಕುಮಾರ್, ಸದಸ್ಯ ವೈ.ಎಸ್. ಶೇಖರ್, ಸರೋಜಮ್ಮ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕ ವಿ.ಎನ್. ಮಲ್ಲಿಕಾರ್ಜುನ ಸ್ವಾಮಿ, ರಾಮಕೃಷ್ಣ ಸೇವಾಕೇಂದ್ರದ ಧರ್ಮ ದರ್ಶಿ ಡಾ.ಎಚ್.ಎಲ್. ನಾಗರಾಜ್, ಎಂ. ಸುಧೀರ್ ಇದ್ದರು.