ಸಾರಾಂಶ
ಹೂವಿನಹಡಗಲಿ: ರಾಜ್ಯ ಸರ್ಕಾರಿ ನೌಕರರು ಕೇವಲ ವೇತನಕ್ಕಾಗಿ ಕೆಲಸ ಮಾಡದೇ ತಮ್ಮ ಸಂಘದಿಂದ ಸಾರ್ವಜನಿಕರಿಗೆ ಉಚಿತ ಆರೋಗ್ಯ ಶಿಬಿರವನ್ನು ಆಯೋಜಿಸಿ, ಸಮಾಜಮುಖಿ ಕಾರ್ಯಕ್ಕೆ ಮುಂದಾಗಿರುವುದು ಉತ್ತಮ ಬೆಳವಣಿಗೆ ಎಂದು ಹರಪನಹಳ್ಳಿ ಉಪ ವಿಭಾಗಾಧಿಕಾರಿ ಚಿದಾನಂದ ಗುರುಸ್ವಾಮಿ ಹೇಳಿದರು.
ಇಲ್ಲಿನ ಜಿಬಿಆರ್ ಕಾಲೇಜಿನ ಸಭಾಂಗಣದಲ್ಲಿ ರಾಜ್ಯ ಸರ್ಕಾರಿ ನೌಕರರ ಸಂಘ, ದಾವಣಗೆರೆಯ ಎಸ್.ಎಸ್. ನಾರಾಯಣ ಸೂಪರ್ ಸ್ಪೇಷಾಲಿಟಿ ಸೆಂಟರ್, ವಿಶ್ವಾರಾಧ್ಯ ಕ್ಯಾನ್ಸರ್ ಹಾಸ್ಪಿಟಲ್, ಐಎಂಎ, ಎಎಫ್‌ಐ, ಜಿಬಿಆರ್ ಕಾಲೇಜು ಮತ್ತು ಕುಟುಂಬ ಕಲ್ಯಾಣ ಇಲಾಖೆ, ವಿವಿಧ ವೃಂದ ಸಂಘಗಳ ಸಹಯೋಗದಲ್ಲಿ, ಸರ್ಕಾರಿ ನೌಕರ ಸಂಘದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದ ಅಂಗವಾಗಿ ಉಚಿತ ಆರೋಗ್ಯ ತಪಾಸಣೆ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು.ರಾಜ್ಯದ ವಿವಿಧ ಕಡೆಗಳಿಂದ ಹೃದ್ರೋಗ, ಇಸಿಜಿ, ಇಸಿಎಚ್‌ಒ ಪರೀಕ್ಷೆ, ಕ್ಯಾನ್ಸರ್ ಪತ್ತೆ ಹಚ್ಚುವ ಪರೀಕ್ಷೆ ಸೇರಿದಂತೆ ಇನ್ನಿತರ ಆರೋಗ್ಯಕ್ಕೆ ಸಂಬಂಧಿಸಿದ, ವೈದ್ಯರ ತಂಡವನ್ನು ಕರೆ ತಂದು ಉಚಿತ ಆರೋಗ್ಯ ಶಿಬಿರ ಆಯೋಜಿಸಿ ಜನರ ಆರೋಗ್ಯವನ್ನು ಕಾಪಾಡುವಂತ ಕೆಲಸವಾಗುತ್ತಿದೆ ಇಂತಹ ಕಾರ್ಯಕ್ರಮಗಳನ್ನು ನಿರಂತರವಾಗಿ ಮುಂದುವರಿಸಬೇಕು ಎಂದರು.
ನಾರಾಯಣ ಸೂಪರ್ ಸ್ಪೆಷಾಲಿಟಿ ಸೆಂಟರ್‌ನ ಡಾ. ಗುರುರಾಜ ಮಾತನಾಡಿ, ಜನ ಹೃದ್ರೋಗ, ಸಕ್ಕರೆ ಕಾಯಿಲೆ ಅವುಗಳಿಗೆ ಚಿಕಿತ್ಸೆ ಮತ್ತು ಮಾತ್ರೆಗಳನ್ನು ಪಡೆದುಕೊಳ್ಳಲು ಗಮನ ಹರಿಸುತ್ತಾರೆ. ಆದರೆ, ಮುಂಜಾಗ್ರತಾ ಕ್ರಮವಾಗಿ ಅವುಗಳನ್ನು ಹೇಗೆ ತಡೆಗಟ್ಟುವತ್ತ ಗಮನ ಹರಿಸಬೇಕಿದೆ ಎಂದರು.ದಾವಣಗೆರೆ ಚಿಟಗೇರಿ ಆಸ್ಪತ್ರೆಯ ಡಾ. ಸುಭಾಶ್ಚಂದ್ರ ಮಾತನಾಡಿ, ಮನುಷ್ಯ ರೋಗಗಳನ್ನು ಆರಂಭದಲ್ಲೇ ತಡೆಯಲು ನಿತ್ಯ ವ್ಯಾಯಾಮ, ಯೋಗಾಸನಗಳನ್ನು ರೂಢಿಸಿಕೊಳ್ಳಬೇಕಿದೆ. ನಾವು ದೇಹವನ್ನು ಧಣಿಸುವಂತಹ ಕೆಲಸ ಮಾಡುತ್ತಿಲ್ಲ. ಅದಕ್ಕಾಗಿಯೇ ರೋಗಗಳು ನಮ್ಮ ಬೆನ್ನು ಬಿದ್ದಿವೆ. ದೇಹ ಸಂರಕ್ಷಣೆ ಹಾಗೂ ನಿರ್ವಹಣೆಗೆ ಹೆಚ್ಚು ಗಮನ ಹರಿಸಬೇಕು ಎಂದು ಹೇಳಿದರು.
ಸರ್ಕಾರಿ ನೌಕರರ ಸಂಘದ ನೂತನ ಅಧ್ಯಕ್ಷ ಎ. ಕೊಟ್ರಗೌಡ ಮಾತನಾಡಿ, ಸರ್ಕಾರಿ ನೌಕರರು ನಿತ್ಯ ಒತ್ತಡ ಮಧ್ಯೆ ಕೆಲಸ ಮಾಡುತ್ತಿದ್ದೇವೆ. ಮೊದಲು ನಮ್ಮ ಆರೋಗ್ಯ ಕಾಪಾಡಿಕೊಂಡರೇ, ನಾವು ಪ್ರಾಮಾಣಿಕ ಮತ್ತು ದಕ್ಷತೆಯಿಂದ ಕರ್ತವ್ಯ ನಿರ್ವಹಿಸಲು ಸಾಧ್ಯವಾಗುತ್ತಿದೆ. ಆ ಕಾರಣಕ್ಕಾಗಿ ಸಂಘದಿಂದ ಉಚಿತ ಆರೋಗ್ಯ ಶಿಬಿರ ಆಯೋಜಿಸಿದ್ದೇವೆ ಎಂದರು.ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ ಮೋಹನರೆಡ್ಡಿ, ನಿವೃತ್ತ ಸಹಾಯಕ ಶಿಕ್ಷಣಾಧಿಕಾರಿ ಎಚ್.ಎಂ. ಬೆಟ್ಟಯ್ಯ, ತಹಸೀಲ್ದಾರ್ ಜಿ.ಸಂತೋಷಕುಮಾರ, ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ, ತಹಸೀಲ್ದಾರ್ ರಾಘವೇಂದ್ರ ರಾವ್, ವೈದ್ಯ ಡಾ. ವೀರೇಶ ಮಾತನಾಡಿದರು.
ಬಿಇಒ ಮಹಶ ಪೂಜಾರ್, ಟಿಎಚ್‌ಒ ಸಪ್ನಾ ಕಟ್ಟಿ, ಎಂ.ಪಿ.ಎಂ. ಅಶೋಕ, ನಂಜುಂಡಿ, ಮಲ್ಲೇಶಪ್ಪ, ಕಾಲೇಜು ಪ್ರಾಚಾರ್ಯ ಎಸ್.ಎಸ್. ಪಾಟೀಲ್, ಡಾ. ಬಿ. ಶಿವಕುಮಾರ, ಫಕ್ಕೀರಗೌಡ, ಬಸವರಾಜ ಕೊಳ್ಳಿ, ಗೌಸು ಸೇರಿದಂತೆ ಇತರರಿದ್ದರು.ಇದೇ ಸಂದರ್ಭದಲ್ಲಿ ತಹಸೀಲ್ದಾರ್ ಜಿ. ಸಂತೋಷಕುಮಾರ ನೂತನ ಪದಾಧಿಕಾರಿಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು. ಆರೋಗ್ಯ ಶಿಬಿರದಲ್ಲಿ 265 ಜನ ವಿವಿಧ ಪರೀಕ್ಷೆಗಳಿಗೆ ಒಳಪಟ್ಟಿದ್ದರು.
ದ್ವಾರಕೀಶ ರೆಡ್ಡಿ ನಿರೂಪಿಸಿದರು. ಹಡಗಲಿ ಬಸವರಾಜ ಪ್ರಾರ್ಥಿಸಿದರು. ಕೆ.ಪ್ರಕಾಶ ಸ್ವಾಗತಿಸಿದರು.