ಹುಬ್ಬಳ್ಳಿ:

ಸಾಮಾಜಿಕ ಸೇವೆಗಳಿಂದಲೇ ಹೆಸರು ಪಡೆದವರು ಮಜೇಥಿಯಾ ಫೌಂಡೇಷನ್‌ ಸಂಸ್ಥಾಪಕ ಜಿತೇಂದ್ರ ಮಜೇಥಿಯಾ ಅವರ ಸಾಮಾಜಿಕ ಸೇವಾ ಕಾರ್ಯ ನೋಡಿ ಕರ್ನಾಟಕ ವಿಶ್ವ ವಿದ್ಯಾಲಯ ಗೌರವ ಡಾಕ್ಟರೇಟ್‌ ನೀಡಿದೆ.

ಮುಂಬೈನಲ್ಲಿ ಜನಿಸಿದ ಜಿತೇಂದ್ರ ಅವರು, ಬಿಕಾಂ ಪದವೀಧರರು. ನಾಲ್ಕು ವರ್ಷಗಳ ಕಾಲ ಚಾರ್ಟರ್ಡ್‌ ಅಕೌಂಟೆನ್ಸಿಯಲ್ಲಿ ತೊಡಗಿಸಿಕೊಂಡಿದ್ದರು. ಆದರೆ, ಸಿಎ ಆಗಬೇಕು ಎಂಬ ಅವರ ಕನಸು ನನಸಾಗಲಿಲ್ಲ. ಆದರೂ ಧೃತಿಗೆಡಲಿಲ್ಲ. ಸಿಎ ಆಗದಿದ್ದರೆ ಏನಾಯ್ತು ಉದ್ಯಮ ಮಾಡಿ ಆ ಮೂಲಕ ಸಾಮಾಜಿಕ ಸೇವೆ ಮಾಡೋಣ ಎಂದುಕೊಂಡು ಹುಬ್ಬಳ್ಳಿಗೆ 1975ರಲ್ಲಿ ವಲಸೆ ಬಂದರು. ವೀಳ್ಯದೆಲೆ, ಪಾನ್‌ಮಸಾಲಾ ಡಿಸ್ಟಿಬ್ಯೂಟರ್‌ ಆಗುವ ಮೂಲಕ ವ್ಯಾಪಾರ ಜಗತ್ತಿಗೆ ಕಾಲಿಟ್ಟರು. ಹಂತ-ಹಂತವಾಗಿ ವ್ಯಾಪಾರದಲ್ಲಿ ವೃದ್ಧಿಯಾಗುತ್ತಾ, ವಿಂಡ್‌ ಮಿಲ್‌, ಸೌರವಿದ್ಯುತ್ ಸ್ಥಾವರದ ಮೇಲೂ ಗಮನ ಹರಿಸಿದರು. ಜತೆಗೆ ಹುಬ್ಬಳ್ಳಿಯನ್ನು ಕರ್ಮಭೂಮಿ ಮಾಡಿಕೊಂಡರು. 5 ದಶಕಗಳ ಕಾಲ ವ್ಯಾಪಾರ ಜಗತ್ತಿನಲ್ಲಿ ತಮ್ಮದೇ ಆದ ಛಾಪು ಮೂಡಿಸಿದರು. ಬರೀ ವ್ಯಾಪಾರ ಮಾಡಲು ಅಷ್ಟೇ ತಮ್ಮನ್ನು ತಾವೂ ಸೀಮಿತಗೊಳಿಸಿಕೊಳ್ಳದೆ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡರು.

ಮಜೇಥಿಯಾ ಫೌಂಡೇಷನ್‌ ಹುಟ್ಟುಹಾಕಿ ಲೋಕೋಪಕಾರಿ ಕೆಲಸ ಮಾಡಲು ಶುರು ಮಾಡಿದರು. ಇದೇ ಫೌಂಡೇಷನ್‌ನಡಿ ಕ್ಯಾನ್ಸರ್ ರೋಗಿಗಳಿಗೆ ಉಪಶಮನಕಾರಿ ವಿಶ್ರಾಂತಿ ಆರೈಕೆ ಕೇಂದ್ರವಾದ ಹಾಸ್ಪೈಸ್‌ ಸೆಂಟರ್‌ ತೆರೆದರು. ಕ್ಯಾನ್ಸರ್‌ ರೋಗಿಗಳಿಗೆ ಇದೊಂದು ಉತ್ತರ ಕರ್ನಾಟಕ ರೇಸಾರ್ಟ್‌ ಎಂದೇ ಹೆಸರುವಾಸಿ. ಸಾಮಾನ್ಯ ಮತ್ತು ವಿಶೇಷ ವಾರ್ಡ್‌ಗಳಲ್ಲಿ 30 ಹಾಸಿಗೆಗಳನ್ನು ಇದು ಒಳಗೊಂಡಿದೆ. ಇದಲ್ಲದೇ ಮಹಾನಗರ ಪಾಲಿಕೆಯ ಚಿಟಗುಪ್ಪಿ ಆಸ್ಪತ್ರೆಯಲ್ಲಿ ಫಿಸಿಯೋಥೆರಪಿ ಕೇಂದ್ರ ಸ್ಥಾಪಿಸಲಾಗಿದೆ. ಪಾರ್ಶ್ವವಾಯು, ನರವೈಜ್ಞಾನಿಕ ಅಸ್ವಸ್ಥತೆ, ಪ್ರಸವಪೂರ್ವ, ನಂತರದ ಆರೈಕೆ ಮತ್ತು ಮೂಳೆ ಪುನರ್ವಸತಿ, ತಜ್ಞ ಸಿಬ್ಬಂದಿ ಮತ್ತು ಆಧುನಿಕ ಉಪಕರಣ ಬಳಸಿಕೊಂಡು ಉಚಿತ ಫಿಸಿಯೋಥೆರಪಿ ಒದಗಿಸುತ್ತದೆ.

ಮೆಡಿಕಲ್ ಎಕ್ವಿಪ್ಮೆಂಟ್ ಸೆಂಟರ್:


ಅಗತ್ಯ ವೈದ್ಯಕೀಯ ಸಾಧನಗಳನ್ನು (ಗಾಲಿಕುರ್ಚಿಗಳು, ನೆಬ್ಯುಲೈಸರ್‌, ಏರ್ ಬೆಡ್‌ ಇತ್ಯಾದಿ) ಅಗತ್ಯವಿರುವವರಿಗೆ 30 ದಿನಗಳ ವರೆಗೆ ಉಚಿತವಾಗಿ ನೀಡಲಾಗುತ್ತೆ. ಹುಬ್ಬಳ್ಳಿಯ ಕೆಎಂಸಿಆರ್‌ಐನಲ್ಲಿ ಫೌಂಡೇಶನ್‌ನ ಮೇ ಐ ಹೆಲ್ಪ್ ಯು ಟೀಮ್ ಮತ್ತು ಸಹಾಯವಾಣಿಯು ಉತ್ತರ ಕರ್ನಾಟಕದ ಸಾವಿರಾರು ಗ್ರಾಮಸ್ಥರಿಗೆ ಮಾರ್ಗದರ್ಶನ ಮತ್ತು ಸಹಾಯ ನೀಡುತ್ತಿದೆ. ಇದಲ್ಲದೇ 17 ವರ್ಷಗಳಿಂದ ದಿವ್ಯಾಂಗರಿಗೆ ವಿವಿಧ ಸಾಧನ ನೀಡುವ ಮೂಲಕ ನೆರವು ನೀಡಲಾಗುತ್ತಿದೆ. ನಾಲ್ಕು ಖಾಸಗಿ ಎನ್‌ಜಿಒ ಶಾಲೆಗಳ 790 ವಿದ್ಯಾರ್ಥಿಗಳಿಗೆ ಪ್ರತಿನಿತ್ಯ ಉಚಿತ ಬಿಸಿಯೂಟ ನೀಡಲಾಗುತ್ತಿದೆ.

ಅಪೌಷ್ಟಿಕತೆ ನಿವಾರಣೆ:

ಅಪೌಷ್ಟಿಕತೆ ಎದುರಿಸಲು 24 ಸಾಮಾಜಿಕ ಸಂಸ್ಥೆಗಳ (ಕಿಮ್ಸ್, ರೆಡ್ ಕ್ರಾಸ್, ವೃದ್ಧಾಶ್ರಮ, ವಸತಿ ನಿಲಯ) ಮೂಲಕ ಮಾಸಿಕವಾಗಿ 1472 ಜನರಿಗೆ ಪ್ರೋಟೀನ್ ಫೌಡರ್ ವಿತರಿಸಲಾಗುತ್ತದೆ. ಆರ್ಥಿಕವಾಗಿ ಹಿಂದುಳಿದವರಿಗೆ ವೈದ್ಯಕೀಯ ನೆರವು ಸೇರಿದಂತೆ ಹಲವು ಬಗೆಯಲ್ಲಿ ಫೌಂಡೇಷನ್‌ ನೆರವು ನೀಡುತ್ತಿದೆ. ಕೇರಳದ ಕೊಚ್ಚಿನ ವ್ಯಾಪಾರ ಕುಟುಂಬದ ರಮಿಳಾ ಅವರನ್ನು ವಿವಾಹವಾಗಿರುವ ಜೀತೇಂದ್ರ ಅವರು 75ರಲ್ಲೂ 25ರ ಹರೆಯ ಯುವಕರು ನಾಚುವಂತೆ ಕಾರ್ಯಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುವ ಮೂಲಕ ಮಾದರಿಯಾಗಿದ್ದಾರೆ.

ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಹತ್ತು ಹಲವು ಪ್ರಶಸ್ತಿ, ಗೌರವ ಸಮ್ಮಾನಗಳು ಜೀತೇಂದ್ರ ಅವರನ್ನು ಅರಸಿ ಬಂದಿವೆ. ಇದೀಗ ಕರ್ನಾಟಕ ವಿವಿ ಗೌರವ ಡಾಕ್ಟರೇಟ್‌ ಕೊಡುತ್ತಿರುವುದು ಉತ್ತರ ಕರ್ನಾಟಕಕ್ಕೆ ಹೆಮ್ಮೆಯ ವಿಷಯವೆಂದರೆ ತಪ್ಪಾಗಲಿಕ್ಕಿಲ್ಲ.ಕರ್ನಾಟಕ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್‌ ಪದವಿ ಬಂದಿರುವುದು ಖುಷಿ ಸಂಗತಿ. ಇದು ನನಗೆ ಬಂದ ಗೌರವವಲ್ಲ, ಜನರ ಸಹಕಾರದಿಂದ ದೊರೆತಿರುವ ಗೌರವ. ಜನರಿಗೆ ಇದು ಸಮರ್ಪಣೆ.

ಜಿತೇಂದ್ರ ಮಜೇಥಿಯಾ,