ಸರಕಾರಿ ಸಹಾಯ ಸೌಲಭ್ಯಗಳ ಜೊತೆಗೆ ರಾಷ್ಟ್ರೀಕೃತ ಬ್ಯಾಂಕ್‌ಗಳಿಂದ ಸಿಗುವ ಸಾಲ ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಂಡು ಸಾಮಾಜಿಕವಾಗಿ ಮತ್ತು ಅರ್ಥಿಕವಾಗಿ ಸಬಲೀಕರಣಗೊಳ್ಳುವತ್ತ ಮನಸ್ಸು ಮಾಡಿ ಎಂದು ಸೋಮ ವಾರಪೇಟೆ ತಾಲೂಕು ಸಹಾಯಕ ಕೃಷಿ ನಿರ್ದೇಶಕ ಮತ್ತು ಕೊಡಗರಹಳ್ಳಿ ಗ್ರಾಪಂ ಆಡಳಿತಾಧಿಕಾರಿ ವೀರಣ್ಣ ಹೇಳಿದರು.

ಸುಂಟಿಕೊಪ್ಪ: ಸರಕಾರಿ ಸಹಾಯ ಸೌಲಭ್ಯಗಳ ಜೊತೆಗೆ ರಾಷ್ಟ್ರೀಕೃತ ಬ್ಯಾಂಕ್‌ಗಳಿಂದ ಸಿಗುವ ಸಾಲ ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಂಡು ಸಾಮಾಜಿಕವಾಗಿ ಮತ್ತು ಅರ್ಥಿಕವಾಗಿ ಸಬಲೀಕರಣಗೊಳ್ಳುವತ್ತ ಮನಸ್ಸು ಮಾಡಿ ಎಂದು ಸೋಮ ವಾರಪೇಟೆ ತಾಲೂಕು ಸಹಾಯಕ ಕೃಷಿ ನಿರ್ದೇಶಕ ಮತ್ತು ಕೊಡಗರಹಳ್ಳಿ ಗ್ರಾಪಂ ಆಡಳಿತಾಧಿಕಾರಿ ವೀರಣ್ಣ ಹೇಳಿದರು.

ಕೊಡಗರಹಳ್ಳಿ ಗ್ರಾಪಂ ಮತ್ತು ಸಂಜೀವಿನಿ ಒಕ್ಕೂಟ ವತಿಯಿಂದ ಆಯೋಜಿಸಲಾಗಿದ್ದ 2 ದಿನಗಳ ಮಾಸಿಕ ಸಂತೆಯನ್ನು ಕೊಡಗರಹಳ್ಳಿ ನೇತಾಜಿ ಭವನದಲ್ಲಿ ಉದ್ಘಾಟಿಸಿ ಮಾತನಾಡಿದ ಅವರು, ಸರಕಾರವು ಮಹಿಳೆಯರ ಅಭಿವೃದ್ಧಿಗಾಗಿ ಸಾಕಷ್ಟು ಯೋಜನೆಗಳನ್ನು ರೂಪಿಸಿ ಸಾಲ ಸೌಲಭ್ಯ ಮತ್ತು ರಿಯಾಯಿತಿ ದರದಲ್ಲಿ ಧನ ಸಹಾಯ ನೀಡುತ್ತಿದ್ದು ಮಹಿಳೆಯರು ಸ್ವಾಲಂಬಿಗಳಾಗಲು ವಿಪುಲ ಅವಕಾಶಗಳು ಇವೆ ಎಂದು ಹೇಳಿದರು. ಬುಧವಾರ ಮತ್ತು ಗುರುವಾರ ನಡೆದ 2 ದಿನಗಳ ಮಾಸಿಕ ಸಂತೆಯಲ್ಲಿ 17ಕ್ಕೂ ಹೆಚ್ಚು ಮಳಿಗಳು ಪಾಲ್ಗೊಂಡಿದ್ದವು. ಇದರಲ್ಲಿ ಮಹಿಳೆಯರು ತಾವೇ ಬೆಳೆದ ಸೊಪ್ಪು ತರಕಾರಿ ಮನೆಯಲ್ಲಿ ಮಾಡಿದ ತಿಂಡಿ ತಿನ್ನಿಸು ಮಜ್ಜಿಗೆ ಪಾನಕ ಮೊದಲಾದುವುಗಳು ಗಮನ ಸೆಳೆದವು. ಕಾರ್ಯಕ್ರಮದಲ್ಲಿ ಯೂನಿಯನ್ ಬ್ಯಾಂಕ್ ಗ್ರಾಮೀಣ ಸ್ವ ಉದ್ಯೋಗ ಸಂಸ್ಥೆಯ ಕೂಡಿಗೆ ಕೇಂದ್ರದಿಂದ ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡಿದ ನವ್ಯ ಮಾತನಾಡಿ, ಸ್ವ ಉದ್ಯೋಗ ತರಬೇತಿಯಲ್ಲಿ 64 ವಿಧದ ಸ್ವ ಉದ್ಯೋಗ ತರಬೇತಿ ನೀಡಲಾಗುತ್ತಿದ್ದು, ಊಟ ವಸತಿಯೊಂದಿಗೆ ಉಚಿತ ತರಬೇತಿ ನೀಡಲಾಗುತ್ತಿದೆ. ನಿರುದ್ಯೋಗ ಎಂಬುದು ಸಮಸ್ಯೆಯಲ್ಲ. ಉದ್ಯೋಗ ಮಾಡುವವವರಿಗೆ ನೂರೆಂಟು ಮಾರ್ಗಗಳು ಇವೆ ಎಂದು ಮಾಹಿತಿ ನೀಡಿದರು.

ಇದೇ ಸಂದರ್ಭ ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾದ ಸುಂಟಿಕೊಪ್ಪ ಶಾಖೆಯ ಸಹಾಯಕ ವ್ಯವಸ್ಥಾಪಕ ಮಾತನಾಡಿ, ಬ್ಯಾಂಕ್ ವತಿಯಿಂದ ನೀಡಲಾಗುವ ಸಾಲಸೌಲಭ್ಯ ಕುರಿತು ವಿವರವಾದ ಮಾಹಿತಿ ನೀಡಿದರು. ಇದೇ ಸಂದರ್ಭ ಕಂಬಿಬಾಣೆಯ ಬ್ರಹ್ಮಜ್ಞಾನ ಮಂದಿರ ವತಿಯಿಂದ ಮಾಸಿಕ ಸಂತೆಯಲ್ಲಿ ಪಾಲ್ಗೊಂಡವರಿಗೆ ಶಾಲಾ ವಿದ್ಯಾರ್ಥಿಗಳಿಗೆ ಹಾಗೂ ಆಸಕ್ತರಿಗೆ ಉಚಿತವಾಗಿ ಶ್ರೀಮದ್ ಭಗವದ್ಗೀತಾ ಗ್ರಂಥವನ್ನು ವಿತರಿಸಲಾಯಿತು.

2 ದಿನಗಳ ಮಾಸಿಕ ಸಂತೆಯ ಕುರಿತು ಮಾತನಾಡಿದ ಸರಕಾರಿ ಮಾದರಿ ಪ್ರಾಥಮಿಕ ಶಾಲೆ ಶಿಕ್ಷಕಿ ಸುಮ ಅವರು ಇದೊಂದು ಪ್ರೇರಣಾದಾಯಕ ಕಾರ್ಯಕ್ರಮ. ಮಕ್ಕಳು ಮತ್ತು ಮಹಿಳೆಯರಿಗೆ ಸಾರ್ವಜನಿಕ ಮತ್ತು ವ್ಯವಹಾರಿಕ ಜೀವನವನ್ನು ಈ ಮಾಸಿಕ ಸಂತೆ ತೋರಿಸಿಕೊಟ್ಟಿದೆ. ಸ್ವ ಉದ್ಯೋಗದಿಂದ ಸ್ವಾವಲಂಬಿಗಳಾಗಿ ಬದುಕಲು ಈ ರೀತಿಯ ಕಾರ್ಯಕ್ರಮಗಳು ಹೆಚ್ಚು ಹೆಚ್ಚಾಗಿ ನಡೆಯಬೇಕೆಂದು ಹೇಳಿದರು. ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ಭುವನೇಶ್ವರಿ, ಉಪಾಧ್ಯಕ್ಷೆ ಇಂದಿರಾ, ಖಜಾಂಜಿ ಪುಷ್ಪಾಲತಾ, ಗ್ರಾಪಂ ಅಭಿವೃದ್ಧಿ ಅಧಿಕಾರಿ ರವೀಶ್, ನಿಕಟಪೂರ್ವ ಸದಸ್ಯೆ ಕಲಾಮಣಿ, ಸಂಜೀವಿನಿ ಒಕ್ಕೂಟದ ಮುಖ್ಯಲೆಕ್ಕಾಧಿಕಾರಿ ಶಾರದಾ, ಮೇಲ್ವಿಚಾರಕಾರದ ಪದ್ಮಶ್ರೀ, ಸ್ಥಳೀಯ ಸಂಪನ್ನೂಲ ವ್ಯಕ್ತಿ ಪೂರ್ಣಿಮ, ಸಂಜೀವಿನಿ ಒಕ್ಕೂಟದ ತಾಲೂಕು ವ್ಯವಸ್ಥಾಪಕ ರವಿ, ಕೃಷಿ ಉತ್ತೇಜನಕ್ಕೆ ಶ್ರಮಿಸುತ್ತಿರುವ ಸ್ವಯಂ ಸೇವಾ ಸಂಸ್ಥೆ ಸಬಲದ ರೇವಣ ಸಿದ್ಧಪ್ಪ, ಪ್ರಸನ್ನ ಸೇರಿದಂತೆ 7ನೇ ಹೊಸಕೋಟೆ, ಸುಂಟಿಕೊಪ್ಪ, ನಾಕೂರು ಶಿರಂಗಾಲ, ಮಾದಾಪುರ ವ್ಯಾಪ್ತಿಯ ಪ್ರತಿನಿಧಿಗಳು ಪದಾಧಿಕಾರಿಗಳು ಪಾಲ್ಗೊಂಡಿದ್ದರು.