ಗ್ರಾಮಾಭಿವೃದ್ದಿ ಯೋಜನೆಯಿಂದ ಸಾಮಾಜಿಕ ಕಳಕಳಿಯುಳ್ಳ ಕಾರ್ಯ

| Published : Apr 01 2025, 12:50 AM IST

ಸಾರಾಂಶ

ನಗರದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಯೋಜನಾ ಕಚೇರಿಯಲ್ಲಿ 2024-25ನೇ ಸಾಲಿನ ತಾಲೂಕು ಸಾಧನಾ ಸಂಚಿಕೆ ಬಿಡುಗಡೆ ಹಾಗೂ ಲಕ್ಷ್ಮೀ ಪೂಜಾ ಕಾರ್ಯಕ್ರಮವನ್ನು ಶುಕ್ರವಾರ ಆಯೋಜಿಸಲಾಗಿತ್ತು.

ಕನ್ನಡಪ್ರಭ ವಾರ್ತೆ ತಿಪಟೂರು

ನಗರದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಯೋಜನಾ ಕಚೇರಿಯಲ್ಲಿ 2024-25ನೇ ಸಾಲಿನ ತಾಲೂಕು ಸಾಧನಾ ಸಂಚಿಕೆ ಬಿಡುಗಡೆ ಹಾಗೂ ಲಕ್ಷ್ಮೀ ಪೂಜಾ ಕಾರ್ಯಕ್ರಮವನ್ನು ಶುಕ್ರವಾರ ಆಯೋಜಿಸಲಾಗಿತ್ತು.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾಧಿಕಾರಿ ಕೆ. ಉದಯ್ ಮಾತನಾಡಿ ನಮ್ಮ ಯೋಜನೆಯಿಂದ ಸಾಲಸೌಲಭ್ಯ ಪಡೆದ ಸಾವಿರಾರು ಜನರು ಸ್ವಾವಲಂಬಿಗಳಾಗಿ ಜೀವನ ಕಟ್ಟಿಕೊಂಡು ಸಮಾಜದಲ್ಲಿ ಧೈರ್ಯದಿಂದ ಬದುಕನ್ನ ನಡೆಸುತ್ತಿದ್ದಾರೆ. ನಮ್ಮಲ್ಲಿ ಎರಡು ಸಾವಿರಕ್ಕೂ ಹೆಚ್ಚು ಸಂಘಗಳಿದ್ದು ಪ್ರಸ್ತುತ ವರ್ಷ ನಮ್ಮ ಯೋಜನೆಯು ತಾಲೂಕಿನಲ್ಲಿ ರಾಷ್ಟ್ರೀಕೃತ ಬ್ಯಾಂಕ್ ಮೂಲಕ 102ಕೋಟಿರೂ ಸಾಲ ಸೌಲಭ್ಯ ನೀಡಲಾಗಿದೆ. 106 ನಿರ್ಗತಿಕ ಕುಟುಂಬಕ್ಕೆ ಮಾಸಾಶನ, 106 ಕುಟುಂಬಗಳಿಗೆ ವಾತ್ಸಲ್ಯ ಕಿಟ್, ಆರು ವಾತ್ಸಲ್ಯ ಮನೆ ನಿರ್ಮಾಣ, 432 ವಿದ್ಯಾರ್ಥಿಗಳಿಗೆ ಸುಜ್ಞಾನನಿಧಿ ಶಿಷ್ಯ ವೇತನ, ಜನಮಂಗಳ ಕಾರ್ಯಕ್ರಮದಡಿ 136 ವಿಕಲಚೇತನರಿಗೆ ವೀಲ್‌ಚೇರ್, ವಾಟರ್ ಬೆಡ್ ಮತ್ತಿತರ ಪರಿಕರಗಳನ್ನು ನೀಡಲಾಗಿದೆ. ನಮ್ಮೂರು ನಮ್ಮ ಕೆರೆ ಯೋಜನೆಯಡಿ 9ಕೆರೆಗಳನ್ನು ಹೂಳೆತ್ತುವ ಮೂಲಕ ರೈತರ ಕೃಷಿಗೆ ಅನುಕೂಲ ಮಾಡಿಕೊಡಲಾಗಿದೆ. ಹಾಲು ಉತ್ಪಾದಕರ ಸಹಕಾರ ಸಂಘಗಳ ಕಟ್ಟಡ ರಚನೆ, ಸಮುದಾಯ ಭವನ ಕಟ್ಟಡ, ದೇವಸ್ಥಾನ ಜೀರ್ಣೋದ್ಧಾರಕ್ಕೆ ಅನುದಾನ, ಸ್ವ ಉದ್ಯೋಗ ತರಬೇತಿ, ಜ್ಞಾನ ವಿಕಾಸ ಕಾರ್ಯಕ್ರಮದಡಿ ಮಹಿಳೆಯರ ಸಬಲೀಕರಣಕ್ಕಾಗಿ ಹಲವು ಕಾರ್ಯಕ್ರಮಗಳನ್ನು ತರಲಾಗಿದೆ. ಒಟ್ಟಾರೆ ನಮ್ಮ ಯೋಜನೆಯು ಮಹಿಳೆಯರು, ರೈತರು, ವಿದ್ಯಾರ್ಥಿಗಳು ಸೇರಿದಂತೆ ನಿರ್ಗತಿಕ ಬಡ ಕುಟುಂಬಗಳ ಶ್ರೇಯೋಭಿವೃದ್ದಿಗಾಗಿ ಶ್ರಮಿಸುತ್ತಿದ್ದು ಎಲ್ಲರ ಸಹಕಾರ ಪ್ರೋತ್ಸಾಹದೊಂದಿಗೆ ಮುಂದಿನ ದಿನಗಳಲ್ಲಿಯೂ ಉತ್ತಮ ಸೇವೆ ಸಲ್ಲಿಸಲಿದ್ದು ಈ ಮಹತ್ಕಾರ್ಯಕ್ಕೆ ಜನರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದು ಮತ್ತಷ್ಟು ಸೇವೆ ಮಾಡಲು ಶ್ರೀ ಮಂಜುನಾಥಸ್ವಾಮಿ ಶಕ್ತಿ ನೀಡಲಿದೆ ಎಂದು ಹಾರೈಸಿದರು. ಕಾರ್ಯಕ್ರಮಕ್ಕೆ ಮಾಜಿ ಸಚಿವ ಬಿ.ಸಿ. ನಾಗೇಶ್ ಆಗಮಿಸಿ ಯೋಜನೆಯ ಕಾರ್ಯಕ್ರಮಗಳು, ಜನರು ಶ್ರೀ ಕ್ಷೇತ್ರ ಧರ್ಮಸ್ಥಳ ಸಂಘದ ಮೇಲಿಟ್ಟಿರುವ ನಂಬಿಕೆ, ಪೂಜ್ಯರ ಸಾಮಾಜಿಕ ಕಳಕಳಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಇದೇ ರೀತಿ ಮುಂದೆಯೂ ನಡೆಯಲಿ ಎಂದು ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ಜ್ಞಾನವಿಕಾಸ ಸಮನ್ವಯಾಧಿಕಾರಿ ಎಂ.ಡಿ. ಪದ್ಮಾವತಿ, ಮೇಲ್ವಿಚಾರಕರಾದ ಪ್ರದೀಪ್, ಪ್ರಮೋದ್, ಪರಶಿವಮೂರ್ತಿ, ದಿನೇಶ್, ಅನಿತಾ, ಸಿಎಸ್‌ಸಿ ವಿಭಾಗ ಶೋಭಾ, ಆಡಿಟರ್ ವಿನೋದ್ ಶುದ್ದ ಕುಡಿಯುವ ನೀರಿನ ಘಟಕದ ನಿರ್ವಾಹಕ ಲೋಕೇಶ್ ಸೇರಿದಂತೆ ಕಚೇರಿ ಸಿಬ್ಬಂದಿ ವರ್ಗದವರಿದ್ದರು.