ಬ್ಯಾಡಗಿ: ಧರ್ಮ ಮತ್ತು ಸಂಸ್ಕೃತಿಗಳ ಪ್ರಭಾವದಿಂದ ಸಮಾಜ ಶ್ರೀಮಂತಗೊಂಡಿದೆ. ಬದುಕಿನ ಯಥಾರ್ಥ ಮತ್ತು ವಾಸ್ತವಿಕವಾದ ಅಂಶಗಳನ್ನು ತಿಳಿಸುವುದೇ ನಿಜವಾದ ಧರ್ಮ ಎಂದು ಹಾವೇರಿ ಹುಕ್ಕೇರಿಮಠದ ಸದಾಶಿವಶ್ರೀಗಳು ಅಭಿಪ್ರಾಯ ವ್ಯಕ್ತಪಡಿಸಿದರು.

ಬ್ಯಾಡಗಿ ಮತಕ್ಷೇತ್ರದ ಕಾಕೋಳ ಗ್ರಾಮದಲ್ಲಿ ಮಹಾಪ್ರಭುಸ್ವಾಮಿ ಮಠದಲ್ಲಿ ನಿಜೈಕ್ಯ ಶ್ರೀ ಗುರು ಶರಣಬಸವೇಶ್ವರ ಮಹಾಪ್ರಭುಸ್ವಾಮಿಗಳ 157ನೇ ಪುಣ್ಯಾರಾಧನೆ ಕಾಯಕ್ರಮದ ಸಾನಿಧ್ಯವಹಿಸಿ ಅವರು ಮಾತನಾಡಿದರು.

ಆಧುನಿಕ ಜಗತ್ತಿನಲ್ಲಿ ಹಣದ ಕೊರತೆಯಿಲ್ಲ, ಅಂತೆಯೇ ಮಾನಸಿಕ ತೊಳಲಾಟವೂ ನಿಂತಿಲ್ಲ. ಹೊಟ್ಟೆಕಿಚ್ಚಿನ ಮಾನಸಿಕತೆಯಿಂದ ಹೊರಬರಲಾರದೇ ಸ್ಪರ್ಧೆಗಿಳಿದಿರುವ ಎಲ್ಲರೂ ತಮ್ಮ ಬದುಕನ್ನೇ ನಶ್ವರ ಎನ್ನುವಂತೆ ಮಾಡಿಕೊಳ್ಳುತ್ತಿದ್ದಾರೆ ಎಂದು ಖೇದ ವ್ಯಕ್ತಪಡಿಸಿದರು.

ತಿಳಿವಳಿಕೆ ನೀಡುವಲ್ಲಿ ವಿಫಲರಾಗುತ್ತಿದ್ದೇವೆ: ಕಾರ್ಯಕ್ರಮ ಉದ್ಘಾಟಿಸಿದ ಶಾಸಕ ಬಸವರಾಜ ಶಿವಣ್ಣನವರ ಮಾತನಾಡಿ, ನಮ್ಮ ಮಕ್ಕಳಿಗೆ ಆಧ್ಯಾತ್ಮದ ಬೋಧನೆ ಕೊರತೆಯಾಗುತ್ತಿದೆ, ಕೇಳುವ ಜನರಿಲ್ಲದೇ ಶ್ರಾವಣ ಮಾಸದಲ್ಲಿ ನಡೆಯುತ್ತಿದ್ದ ಪುರಾಣ ಪುಣ್ಯ ಕಥೆಗಳು ಇನ್ನಿಲ್ಲದಂತಾಗಲಿವೆ, ಧರ್ಮ ಬೋಧನೆ ಅರಿವಿಗಾಗಿಯೇ ಹೊರತು ಅನಿವಾರ್ಯಕ್ಕಲ್ಲ, ಮಕ್ಕಳಿಗೆ ಅವರ ತಪ್ಪನ್ನು ತಿದ್ದಿಹೇಳಲು ಸಹ ಪಾಲಕರಿಂದ ಸಾಧ್ಯವಾಗುತ್ತಿಲ್ಲ. ಯುವಕರಲ್ಲಿ ಕುಗ್ಗುತ್ತಿರುವ ಆತ್ಮಸ್ಥೆರ್ಯದಿಂದ ಹತ್ಯೆ ಹಾದಿ ಹಿಡಿಯುತ್ತಿದ್ದಾರೆ ಎಂದು ಖೇದ ವ್ಯಕ್ತಪಡಿಸಿದರು.

ವೇದಿಕೆಯಲ್ಲಿ ಕವಲಗಿಮಠದ ಅಭಿನವ ಶ್ರೀ ಸಿದ್ದರಾಮೇಶ್ವರಶ್ರೀಗಳು ಸೇರಿದಂತೆ ಉದ್ಯಮಿ ನಾಗರಾಜ ಆನವೇರಿ, ರಾಜಶೇಖರಗೌಡ ಪಾಟೀಲ, ಚನ್ನಬಸಪ್ಪ ನವಲಿ, ಚಂದ್ರಶೇಖರ ಕದುರಿಹಾಳ, ಚಂದ್ರಶೇಖರ ಕೊಂಬಳಿ, ಬಸವರಾಜ ಸವಣೂರು, ರಾಜಶೇಖರ ಕೊಂಬಳಿ, ಅಂದಾನೆಪ್ಪ ಅಸುಂಡಿ, ಮಂಜುನಾಥ ಕೊಂಬಳಿ, ವೀರನಗೌಡ ಪಾಟೀಲ ಇನ್ನಿತರರಿದ್ದರು.