ಶಿರಸಿ ನಗರದ ಅಗಸೇಬಾಗಿಲಿನ ದೈವಜ್ಞ ಕಲ್ಯಾಣ ಮಂಟಪದಲ್ಲಿ ಶ್ರೀರಾಮ ಕ್ಷೇತ್ರ ಮಹಾಸಂಸ್ಥಾನ ಸೇವಾ ಸಮಿತಿ ಶಿರಸಿ ವಿಭಾಗ ಹಾಗೂ ಶಿರಸಿ ತಾಲೂಕು ಆರ್ಯ ಈಡಿಗ, ನಾಮಧಾರಿ, ಬಿಲ್ಲವ ಸಮಾಜ ಅಭಿವೃದ್ಧಿ ಸಂಘದ ಆಶ್ರಯದಲ್ಲಿ ಗುರುವಂದನಾ ಕಾರ್ಯಕ್ರಮ ಮತ್ತು ಅಭಿನಂದನಾ ಸಮಾರಂಭ ನಡೆಯಿತು.

ಶಿರಸಿ: ನಮ್ಮ ಸಂಬಂಧವನ್ನು ಜಾತಿಗೆ ಸೀಮಿತಗೊಳಿಸಿದಾಗ ಸನಾತನ ಧರ್ಮಕ್ಕೆ ಘಾಸಿಯಾಗುತ್ತದೆ. ಎಲ್ಲ ಜಾತಿಗಳು ಒಗ್ಗಟ್ಟು ಪ್ರದರ್ಶಿಸಿದಾಗ ಸದೃಢ ಸಮಾಜ ನಿರ್ಮಾಣವಾಗುತ್ತದೆ ಎಂದು ಧರ್ಮಸ್ಥಳ ಉಜಿರೆಯ ಶ್ರೀರಾಮ ಕ್ಷೇತ್ರ ಮಹಾಸಂಸ್ಥಾನದ 1008 ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತೀ ಸ್ವಾಮೀಜಿ ನುಡಿದರು.

ಅವರು ನಗರದ ಅಗಸೇಬಾಗಿಲಿನ ದೈವಜ್ಞ ಕಲ್ಯಾಣ ಮಂಟಪದಲ್ಲಿ ಶ್ರೀರಾಮ ಕ್ಷೇತ್ರ ಮಹಾಸಂಸ್ಥಾನ ಸೇವಾ ಸಮಿತಿ ಶಿರಸಿ ವಿಭಾಗ ಹಾಗೂ ಶಿರಸಿ ತಾಲೂಕು ಆರ್ಯ ಈಡಿಗ, ನಾಮಧಾರಿ, ಬಿಲ್ಲವ ಸಮಾಜ ಅಭಿವೃದ್ಧಿ ಸಂಘದ ಆಶ್ರಯದಲ್ಲಿ ಜರುಗಿದ ಗುರುವಂದನಾ ಕಾರ್ಯಕ್ರಮ ಮತ್ತು ಅಭಿನಂದನಾ ಸಮಾರಂಭ ಉದ್ಘಾಟಿಸಿ, ಆಶೀರ್ವಚನ ನೀಡಿದರು.

ಸುಖದ ಮೂಲ ಧರ್ಮವಾಗಿದ್ದು, ಧರ್ಮ ಎಂಬ ಶಬ್ದವನ್ನು ನಿರಂತರವಾಗಿ ಮೂಡಿಸಿಕೊಂಡಾಗ ಬದುಕು ಸಾರ್ಥಕವಾಗುತ್ತದೆ. ಶರೀರ ಎಂಬುದು ನಮ್ಮದಲ್ಲ ಎಂದಾಗ ಎಲ್ಲವೂ ಸಾರ್ಥಕವಾಗುತ್ತದೆ. ಕರ್ತವ್ಯಕ್ಕೆ ಭಗವಂತ ಎಲ್ಲರನ್ನು ನೇಮಕಗೊಳಿಸುತ್ತಾನೆ. ಅಧಿಕಾರ ಒಬ್ಬರ ಕೈನಲ್ಲಿ ಇರಬಾರದು. ವಿಕೇಂದ್ರೀಕರಣದಲ್ಲಿದ್ದಾಗ ಅಭಿವೃದ್ಧಿ ಸಾಧ್ಯವಾಗುತ್ತದೆ. ಸಮಾಜದ ಎಲ್ಲ ಅಂಗಗಳು ಆರೋಗ್ಯಪೂರ್ಣವಾಗಿದ್ದಾಗ ಧರ್ಮ ಉನ್ನತಿ ಸ್ಥಾನದಲ್ಲಿರುತ್ತದೆ. ಸಮಾಜದ ದುರ್ಬಲ ವರ್ಗದ ಜನರ ಶಿಕ್ಷಣ, ಆರೋಗ್ಯ, ಇನ್ನಿತರ ಕಷ್ಟಕ್ಕೆ ಸ್ಪಂದಿಸಬೇಕು ಎಂದರು.

ಶಾಸಕ ಭೀಮಣ್ಣ ನಾಯ್ಕ ಮಾತನಾಡಿ, ಬ್ರಹ್ಮಶ್ರೀ ನಾರಾಯಣ ಗುರುಗಳ ತತ್ವಾದರ್ಶಗಳು ಹಾಗೂ ಬೃಹ್ಮಾನಂದ ಸರಸ್ವತೀ ಸ್ವಾಮೀಜಿ ಮಾರ್ಗದರ್ಶನವು ನಮ್ಮ ಸಮಾಜದ ಶೈಕ್ಷಣಿಕ ಮತ್ತು ಸಾಮಾಜಿಕ ಸುಧಾರಣೆಗೆ ದಾರಿದೀಪವಾಗಿದೆ. ಶ್ರೀ ರಾಮಕ್ಷೇತ್ರ ಮಹಾಸಂಸ್ಥಾನವು ಸಮಾಜದ ಜನರನ್ನು ಸನ್ಮಾರ್ಗದಲ್ಲಿ ಮುನ್ನೆಡೆಸುವಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ ಎಂದರು.

ಮಂಗಳೂರು ವಿದ್ಯುತ್‌ ಸರಬರಾಜು ಮಂಡಳಿ ಅಧ್ಯಕ್ಷ ಹರೀಶಕುಮಾರ ಬೆಳ್ತಂಡಗಿ ಮಾತನಾಡಿ, ಬ್ರಹ್ಮರ್ಷಿ ನಾರಾಯಣ ಗುರು ಹಾಗೂ ಬ್ರಹ್ಮಾನಂದ ಸ್ವಾಮೀಜಿ ಮಾರ್ಗದರ್ಶನದಲ್ಲಿ ನಾವೆಲ್ಲರೂ ಒಗ್ಗಟ್ಟಿನಿಂದ ನಡೆಯಬೇಕಿದೆ ಎಂದರು.

ಬ್ರಹ್ಮಶ್ರೀ ನಾರಾಯಣಗುರು ಅಭಿವೃದ್ಧಿ ನಿಗಮದ ಅಧ್ಯಕ್ಷ ಮಂಜುನಾಥ ಪೂಜಾರಿ ಮಾತನಾಡಿ, ಸೌಲಭ್ಯವನ್ನು ಸಮಾಜದ ಕಟ್ಟಕಡೆಯ ವ್ಯಕ್ತಿಗೆ ತಲುಪಿಸುವ ಕಾರ್ಯವನ್ನು ಪ್ರಾಮಾಣಿಕವಾಗಿ ಮಾಡುತ್ತೇನೆ ಎಂದರು.

ಶ್ರೀರಾಮ ಕ್ಷೇತ್ರ ಮಹಾಸಂಸ್ಥಾನಮ್‌ ಸೇವಾ ಸಮಿತಿ ಶಿರಸಿ ವಿಭಾಗದ ಅಧ್ಯಕ್ಷ ಡಾ. ವೆಂಕಟೇಶ ನಾಯ್ಕ ಪ್ರಾಸ್ತಾವಿಕವಾಗಿ ಮಾತನಾಡಿದರು.

ಜಿಲ್ಲಾ ಗ್ಯಾರಂಟಿ ಪ್ರಾಧಿಕಾರದ ಅಧ್ಯಕ್ಷ ಸತೀಶ ನಾಯ್ಕ, ಆರ್ಯ ಈಡಗಿ, ನಾಮಧಾರಿ, ಬಿಲ್ಲವ ಸಮಾಜ ಅಭಿವೃದ್ಧಿ ಸಂಘದ ನಗರ ಅಧ್ಯಕ್ಷ ಗಣಪತಿ ನಾಯ್ಕ ದೇವಿಕೆರೆ, ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ ನಾಯ್ಕ, ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ, ಜಿಲ್ಲೆಯ ವಿವಿಧ ತಾಲೂಕಿನ ಸಮಾಜದ ಅಧ್ಯಕ್ಷ ಅರುಣ ನಾಯ್ಕ ಭಟ್ಕಳ, ಶ್ರೀಧರ ನಾಯ್ಕ, ಮಂಜುನಾಥ ನಾಯ್ಕ, ವಾಮನ್ ನಾಯ್ಕ, ಟಿ.ಟಿ. ನಾಯ್ಕ, ನಾಗೇಶ ನಾಯ್ಕ ಅಂಕೋಲಾ, ವಿಜಯ ನಾಯ್ಕ ಕಾರವಾರ, ಆನಂದ ನಾಯ್ಕ, ವಿ.ಎನ್. ನಾಯ್ಕ ಬೇಡ್ಕಣಿ, ನರಸಿಂಹ ನಾಯ್ಕ ಯಲ್ಲಾಪುರ, ಎಚ್.ಎಂ. ನಾಯ್ಕ ಮುಂಡಗೋಡ, ಆರ್.ಎಸ್. ನಾಯ್ಕ ದಾಂಡೇಲಿ, ಅಂಡಗಿಯ ಕಲ್ಲೇಶ್ವರ ಮಠದ ಉಪಾಧ್ಯಕ್ಷ ಸಿ.ಎಫ್. ನಾಯ್ಕ, ಸುಮಲತಾ ಅಮಿನ್ ಶಿರಸಿ, ಗೇರುಸೊಪ್ಪ ದೇವಸ್ಥಾನದ ಮೊಕ್ತೇಸರ ಗೋವಿಂದ ನಾಯ್ಕ, ಸೈದಪ್ಪ ಗುತ್ತೇದಾರ, ಮಾರಿಕಾಂಬಾ ದೇವಸ್ಥಾನದ ಅಧ್ಯಕ್ಷ ಆರ್.ಜಿ. ನಾಯ್ಕ, ಆರ್.ಜಿ. ನಾಯ್ಕ, ಕರುಣಾಕರ ನಾಯ್ಕ ಸಾಗರ, ಕೃಷ್ಣ ನಾಯ್ಕ, ಕೆ.ಜಿ. ನಾಗರಾಜ ಮತ್ತಿತರರು ಉಪಸ್ಥಿತರಿದ್ದರು. ಶಾಸಕ ಭೀಮಣ್ಣ ನಾಯ್ಕ ದಂಪತಿ ಹಾಗೂ ಯುವ ಉದ್ಯಮಿ ಅಶ್ವಿನ್ ಭೀಮಣ್ಣ ನಾಯ್ಕ ದಂಪತಿ ಪಾದಪೂಜೆ ನೆರವೇರಿಸಿದರು. ಆಸ್ಥಾನ ವಿದ್ವಾಂಸರು ಮಂತ್ರಘೋಷ ಮೊಳಗಿಸಿದರು. ಕದಂಬ ರತ್ನಾಕರ ಹಾಗೂ ದಿವ್ಯಾ ಶೇಟ್ ನಾರಾಯಣಗುರುಗಳ ಗೀತೆ ಹಾಡಿದರು.

ಟ್ರಸ್ಟಿಗಳಿಗೆ ಸನ್ಮಾನ: ಶ್ರೀರಾಮ ಕ್ಷೇತ್ರ ಮಹಾಸಂಸ್ಥಾನದ ಜಗದ್ಗುರು ಪೀಠದ ನೂತನ ಟ್ರಸ್ಟಿಗಳಾಗಿ ಆಯ್ಕೆಯಾದ ಶಾಸಕ ಭೀಮಣ್ಣ ನಾಯ್ಕ, ಶ್ರೀರಾಮ ಕ್ಷೇತ್ರ ಸೇವಾ ಸಮಿತಿ ಕುಮಟಾ ತಾಲೂಕಾಧ್ಯಕ್ಷ ಹಾಗೂ ಉದ್ಯಮಿ ಎಚ್‌.ಆರ್‌. ನಾಯ್ಕ, ಮಂಗಳೂರು ವಿದ್ಯುತ್ ಸರಬರಾಜು ಮಂಡಳಿ ಅಧ್ಯಕ್ಷ ಹರೀಶಕುಮಾರ ಬೆಳ್ತಂಗಡಿ, ಸಮಾಜ ಸೇವಕಿ ಸುಜಾತಾ ವಸಂತ ಬಂಗೇರ, ಉದ್ಯಮಿ ಎಸ್‌.ಕೆ. ಚಂದ್ರ ಪೂಜಾರಿ ಸಾಗರ ಹಾಗೂ ಬ್ರಹ್ಮಶ್ರೀ ನಾರಾಯಣಗುರು ಅಭಿವೃದ್ಧಿ ನಿಗಮದ ಪ್ರಥಮ ಅಧ್ಯಕ್ಷ ಮಂಜುನಾಥ ಪೂಜಾರಿ ಅವರನ್ನು ಗೌರವಿಸಲಾಯಿತು.