ಸಾಹಿತ್ಯ ಕ್ಷೇತ್ರ ಸಮಾಜದ ವಾಸ್ತವ ಸ್ಥಿತಿಯ ಬಗ್ಗೆ ಅರಿವು ಮೂಡಿಸುವ ಅಗತ್ಯವಿದೆ ಎಂದು ಸಿದ್ದರಬೆಟ್ಟದ ಶ್ರೀವೀರಭದ್ರ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು

ಕನ್ನಡಪ್ರಭ ವಾರ್ತೆ ಕೊರಟಗೆರೆ

ಕಲಿಯುಗದ ಮನುಷ್ಯ ದುಡ್ಡಿಗಾಗಿ ಧರ್ಮ ಬೀಡುತ್ತಿದ್ದಾನೆ. ಮಾನವೀಯ ಮೌಲ್ಯಯುಳ್ಳ ಜೀವನದ ಆದರ್ಶವೇ ಮಾಯವಾಗ್ತಿದೆ. ಹಣಕ್ಕಾಗಿ ತಂದೆತಾಯಿಯನ್ನೂ ದೂರ ಮಾಡುತ್ತಿದ್ದಾನೆ. ಈ ಬಗ್ಗೆ ಸಾಹಿತ್ಯ ಕ್ಷೇತ್ರ ಸಮಾಜದ ವಾಸ್ತವ ಸ್ಥಿತಿಯ ಬಗ್ಗೆ ಅರಿವು ಮೂಡಿಸುವ ಅಗತ್ಯವಿದೆ ಎಂದು ಸಿದ್ದರಬೆಟ್ಟದ ಶ್ರೀವೀರಭದ್ರ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.ಪಟ್ಟಣದ ಖಾಸಗಿ ಕಲ್ಯಾಣ ಮಂಟಪದಲ್ಲಿ ಕನ್ನಡ ಸಾಹಿತ್ಯ ಪರಿಷತ್‌ನಿಂದ ಸೋಮವಾರ ಏರ್ಪಡಿಸಲಾಗಿದ್ದ ೨ನೇ ಕನ್ನಡ ಸಾಹಿತ್ಯ ಸಮ್ಮೇಳನ ಕಾರ್ಯಕ್ರಮದ ದಿವ್ಯಸಾನಿದ್ಯ ವಹಿಸಿ ಮಾತನಾಡಿದರು.ಭಾರತ ದೇಶದ ಸಂಸ್ಕೃತಿಯಲ್ಲಿ ಮನುಷ್ಯ ಧರ್ಮಕ್ಕಾಗಿ ಪ್ರಾಣತ್ಯಾಗ ಮಾಡುತ್ತಿದ್ದ. ಆದರೆ ಈಗ ಹಣವೇ ಮನುಷ್ಯನ ಉಸಿರಾಗಿದೆ. ಹಣ ಇದ್ದರೆ ಅಧಿಕಾರ ಮತ್ತು ಅಂತಸ್ತು ಬರುತ್ತೆ ಎಂಬ ಭ್ರಮೆಯಲ್ಲಿ ಮನುಷ್ಯನ ಜೀವನ ನಡಿಯುತ್ತಿದೆ. ಸಮಾಜವನ್ನು ತಿದ್ದುಕಡೆಗೆ ಸಾಹಿತ್ಯಕ್ಷೇತ್ರ ಪ್ರಮುಖ ಪಾತ್ರ ವಹಿಸಬೇಕಿದೆ. ಆಹ್ವಾನ ಪತ್ರಿಕೆ ಸಿದ್ದಪಡಿಸುವ ವ್ಯಕ್ತಿಗೂ ಸಹ ಆಪಾದನೇ ತಪ್ಪದು. ಕನ್ನಡದ ಕಾರ್ಯಕ್ರಮ ಯಶಸ್ವಿ ಮಾಡೋದು ನಮ್ಮ ಕರ್ತವ್ಯ ಎಂದರು. ತುಮಕೂರು ಕಸಾಪ ಜಿಲ್ಲಾಧ್ಯಕ್ಷ ಕೆ.ಎಸ್.ಸಿದ್ದಲಿಂಗಪ್ಪ ಮಾತನಾಡಿ ಕೊರಟಗೆರೆಯಲ್ಲಿ ಹಿಂದೆ ಕೇವಲ ೩೦೦ಜನ ಅಜೀವ ಸದಸ್ಯರಿದ್ರು ಈಗ ಸಾವಿರಾರು ಕಸಾಪ ಅಜೀವ ಸದಸ್ಯರಿದ್ದಾರೆ. ತಹಸೀಲ್ದಾರ್ ಮತ್ತು ಕಸಪಾ ಅಧ್ಯಕ್ಷರು ೧೦ದಿನದಿಂದ ಹಗಲುರಾತ್ರಿ ಎನ್ನದೇ ಸಮ್ಮೇಳನ ಮಾಡಿದ್ದಾರೆ. ಕಸಾಪ ನಮ್ಮೇಳನ ಯಶಸ್ವಿ ಮಾಡಿರುವ ಪ್ರತಿಯೊಬ್ಬ ಕನ್ನಡಿಗರಿಗೂ ಅಭಿನಂದನೆಗಳು ಎಂದರು. ಕೊರಟಗೆರೆ ತಹಸೀಲ್ದಾರ್ ಮಂಜುನಾಥ.ಕೆ ಮಾತನಾಡಿ, ಕೊರಟಗೆರೆಯಲ್ಲಿ ೨೦೧೨ರಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನ ಮತ್ತೆ ಈಗ ೨೦೨೬ರಲ್ಲಿ ನಡೆದಿದೆ. ಕಸಾಪ ಸಮ್ಮೇಳನಕ್ಕೆ ೧೪ವರ್ಷಗಳಿಂದ ಹಿಡಿದಿದ್ದ ವನವಾಸದ ಗ್ರಹಣ ಈಗ ದೂರವಾಗಿದೆ. ಆಪಾದನೆ ಮಾಡುವವರು ಪುಟ್ಟ ಹಳ್ಳಿಯಲ್ಲಿ ಚಿಕ್ಕ ಕಾರ್ಯಕ್ರಮ ಮಾಡಿ ನೋಡಿ ಗೊತ್ತಾಗುತ್ತದೆ ಎಂದರು.ಕಾರ್ಯಕ್ರಮದಲ್ಲಿ ಸಮ್ಮೇಳನಾಧ್ಯಕ್ಷ ತುಂಬಾಡಿ ರಾಮಯ್ಯ, ಹಿರಿಯ ಸಂಸ್ಕೃತಿ ಚಿಂತಕ ಅಗ್ರಹಾರ ಕೃಷ್ಣಮೂರ್ತಿ, ಹಿರಿಯ ಕತೆಗಾರ ಡಾ.ಕರೀಗೌಡ, ನಿಹಾ ರವಿಕುಮಾರ್, ವಡ್ಡಗೆರೆ ನಾಗರಾಜಯ್ಯ, ಗ್ಯಾರಂಟಿ ಸಮಿತಿ ಜಿಲ್ಲಾಧ್ಯಕ್ಷ ಚಂದ್ರಶೇಖರಗೌಡ, ಗೃಹಸಚಿವ ವಿಶೇಷಾಧಿಕಾರಿ ನಾಗಣ್ಣ, ಸ.ನೌ.ಸಂಘದ ಅಧ್ಯಕ್ಷ ಎಚ್.ಎಂ.ರುದ್ರೇಶ್, ಅತಾಪಂ ಇಓ ಅಪೂರ್ವ, ಪುರಸಭೆ ಸಿಇಓ ಕೆ.ಎಸ್.ಉಮೇಶ್, ಸಿಪಿಐ ಅನಿಲ್ ಸೇರಿದಂತೆ ಇತರರು ಇದ್ದರು.