ಸಮಾಜಕ್ಕೆ ಆದರ್ಶ ಶಿಕ್ಷಕರ ಅವಶ್ಯಕ:​ ಮಂಜುನಾಥ್

| Published : Mar 21 2024, 01:04 AM IST / Updated: Mar 21 2024, 01:05 AM IST

ಸಮಾಜಕ್ಕೆ ಆದರ್ಶ ಶಿಕ್ಷಕರ ಅವಶ್ಯಕ:​ ಮಂಜುನಾಥ್
Share this Article
  • FB
  • TW
  • Linkdin
  • Email

ಸಾರಾಂಶ

ದೇಶದ ಭವಿಷ್ಯ ಶಿಕ್ಷಕರ ಕೈಯಲ್ಲಿರುತ್ತದೆ. ಆದರ್ಶ ಶಿಕ್ಷಕರು ಮಕ್ಕಳನ್ನು ಸರಿದಾರಿಗೆ ತರುವ ಪ್ರಯತ್ನ ಮಾಡಬೇಕು.

ಹೊಳಲ್ಕೆರೆ: ಸಮಾಜಕ್ಕೆ ಆದರ್ಶ ಶಿಕ್ಷಕರ ಅವಶ್ಯವಿದ್ದು, ಅದು ಹೆಚ್ಚಾದಾಗ ಮಾತ್ರ ದೇಶ ಸುಭದ್ರಗೊಳ್ಳುತ್ತದೆ ಎಂದು ಪತ್ರಕರ್ತ ಡಾ.ಎಚ್.ಬಿ.ಮಂಜುನಾಥ್ ಹೇಳಿದರು.

ತಾಲೂಕಿನ ಮಲ್ಲಾಡಿಹಳ್ಳಿ ಅನಾಥಸೇವಾಶ್ರಮದ ರಾಘವೇಂದ್ರ ಬಿಇಡಿ ಕಾಲೇಜಿನಲ್ಲಿ ಏರ್ಪಡಿಸಿದ್ದ ವಿದ್ಯಾರ್ಥಿ ಸಾಂಸ್ಕೃತಿಕ ಸಂಘದ ಉದ್ಘಾಟನಾ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.

ಇಂದು ಪ್ರಶಿಕ್ಷಣಾರ್ಥಿಗಳಾದ ನೀವೆಲ್ಲರೂ ಕಲಿಕಾ ಹಂತದಲ್ಲಿ ಮೌಲ್ಯಗಳನ್ನು ರೂಢಿಸಿಕೊಳ್ಳಬೇಕು ಮತ್ತು ಅದನ್ನು ಪಾಲಿಸಬೇಕು. ಪಠ್ಯಕ್ಕಷ್ಟೇ ಸೀಮಿತವಾದ ಶಿಕ್ಷಕರಾಗದೇ ಮೌಲ್ಯಗಳನ್ನು ಕಲಿಸುವ ಶಿಕ್ಷಕರಾದಾಗ ಮಾತ್ರ ವಿದ್ಯಾರ್ಥಿಗಳು ನಿಮ್ಮನ್ನು ಇಷ್ಟಪಡುವರು ಇಂತಹ ಮೌಲ್ಯಗಳನ್ನು ಕಲಿಸಿದಾಗ ವಿದ್ಯಾರ್ಥಿಗಳು ಸಮಗ್ರ ಭಾರತದ ನಾಗರೀಕರಾಗಿ ದೇಶ ಸುಭದ್ರಗೊಳ್ಳಲು ಸಾಧ್ಯವಾಗುತ್ತದೆ ಎಂದರು.

ಅನಾಥಸೇವಾಶ್ರಮದ ವ್ಯವಸ್ಥಾಪಕ ಡಿ.ಕೆ.ಚಂದ್ರಪ್ಪ ಮಾತನಾಡಿ, ಸಂಸ್ಥೆಯಲ್ಲಿರುವ ಶಿಕ್ಷಕರ ಗುಣಮಟ್ಟ ಅತ್ಯಂತ ಶ್ರೇಷ್ಠವಾಗಿದ್ದು, ಆಡಳಿತ ಮಂಡಳಿಯ ಸಹಕಾರ ಮತ್ತು ಪ್ರೋತ್ಸಾಹದಿಂದ ಮಲ್ಲಾಡಿಹಳ್ಳಿ ಬಿಇಡಿ ಕಾಲೇಜು ಈ ಭಾಗದ ಜನರಲ್ಲಿ ಉತ್ತಮ ಕಾಲೇಜು ಎಂಬ ಖ್ಯಾತಿಗಳಿಸಲು ಸಾಧ್ಯವಾಗಿದೆ. ಪೂಜ್ಯ ರಾಘವೇಂದ್ರ ಸ್ವಾಮೀಜಿಯವರ ವೈಭವದ ಕಾಲವನ್ನು ಮತ್ತೆ ತರುವಲ್ಲಿ ಪ್ರತಿಯೊಬ್ಬ ಶಿಕ್ಷಕರು ಶ್ರಮಿಸಬೇಕು ಎಂದರು.

ಅಧ್ಯಕ್ಷತೆವಹಿಸಿದ್ದ ಪ್ರಾಚಾರ್ಯ ಡಾ.ಜಿ.ಯು.ನಾಗರಾಜ್ ಮಾತನಾಡಿ, ಸಂಸ್ಥೆಯಲ್ಲಿ ನಿರ್ವಹಿಸಲ್ಪಡುವ ಹತ್ತು ಹಲವಾರು ಚಟುವಟಿಕೆಗಳು ಉತ್ತಮ ಬೋಧನಾ ವ್ಯವಸ್ಥೆಯಿಂದ ದಾವಣಗೆರೆ ವಿಶ್ವವಿದ್ಯಾನಿಲಯದ ಹಂತದಲ್ಲಿ ಪ್ರಥಮ ದರ್ಜೆಯ ಕಾಲೇಜು ಎಂಬ ಹೆಸರುಗಳಿಸಿಕೊಳ್ಳಲಿಕ್ಕೆ ಸಾಧ್ಯವಾಗಿದೆ ಎಂದರು. ಇದೇ ಸಂದರ್ಭದಲ್ಲಿ ವಿಶ್ವವಿದ್ಯಾನಿಲಯದ ಮಟ್ಟದಲ್ಲಿ ಅತೀ ಹೆಚ್ಚಿನ ಅಂಕಗಳಿಸಿದ ಸುದರ್ಶನ್, ತಮನ್ನಾ ಮೊಹಮ್ಮದಿ, ರೂಪಾ ಇವರನ್ನು ಸನ್ಮಾನಿಸಲಾಯಿತು.

ಹಿರಿಯ ಉಪನ್ಯಾಸಕ ಎನ್.ಧನಂಜಯ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಣಾರ್ಥಿ ಗೀತಾ ಸ್ವಾಗತಿಸಿ, ಮೇಘನಾ ನಿರೂಪಿಸಿ, ನೂರ್ ತಸ್ಮಿಯಾ ವಂದಿಸಿದರು. ಕಾಲೇಜಿನ ಉಪನ್ಯಾಸಕರು ಹಾಗೂ ಸಿಬ್ಬಂದಿ ವರ್ಗದವರು ಮತ್ತು ಶಿಕ್ಷಣಾರ್ಥಿಗಳು ಉಪಸ್ಥಿತರಿದ್ದರು.