ಸಾರಾಂಶ
ಕನ್ನಡಪ್ರಭ ವಾರ್ತೆ ಕುಶಾಲನಗರ
ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ನ ಕೊಡಗು ಜಿಲ್ಲಾ ಸಂಸ್ಥೆ ಮತ್ತು ಕುಶಾಲನಗರ ಸ್ಥಳೀಯ ಸಂಸ್ಥೆ ಹಾಗೂ ಕುಶಾಲನಗರ ಮಾಜಿ ಸೈನಿಕರ ಸಂಘದ ಸಂಯುಕ್ತಾಶ್ರಯದಲ್ಲಿಮುಳ್ಳುಸೋಗೆಯ ಕೆದಂಬಾಡಿ ಶ್ರೀ ಸಣ್ಣಪ್ಪ ಸಭಾಂಗಣದಲ್ಲಿ ಕಾರ್ಗಿಲ್ ವಿಜಯೋತ್ಸವ ಆಚರಿಸಲಾಯಿತು.
ವಿಜಯೋತ್ಸವದಲ್ಲಿ ವೀರ ಮರಣ ಹೊಂದಿದ ಸೈನಿಕರ ಸೇವೆಯನ್ನು ಸ್ಮರಿಸಿ ಗೌರವ ನಮನ ಸಲ್ಲಿಸಲಾಯಿತು. ಕಾರ್ಗಿಲ್ ವಿಜಯೋತ್ಸವದಲ್ಲಿ ಯೋಧರ ತ್ಯಾಗ , ಬಲಿದಾನ ಸ್ಮರಿಸಿ ನಿವೃತ್ತ ಯೋಧರಿಗೆ ಸನ್ಮಾನಿಸಿ ಗೌರವಿಸಲಾಯಿತು.ಭಾರತೀಯ ಸೇನೆಯ ಮಹತ್ವ ಹಾಗೂ ಕಾರ್ಗಿಲ್ ವಿಜಯೋತ್ಸವದ ಕುರಿತು ಪ್ರಧಾನ ಭಾಷಣ ಮಾಡಿದ ಕೊಡಗು ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಉಪನ್ಯಾಸಕ ಡಾ ಜಮೀರ್ ಅಹ್ಮದ್ , ದೇಶದ ರಕ್ಷಣೆಗಾಗಿ ತಮ್ಮ ಜೀವವನ್ನು ಒತ್ತೆ ಇಟ್ಟು , ಮಳೆ- ಚಳಿ ಎನ್ನದೇ ಹವಾಮಾನ ವೈಪರೀತ್ಯದ ನಡುವೆಯೂ ರಾಷ್ಟ್ರದ ರಕ್ಷಣೆಗಾಗಿ ಸದಾ ದುಡಿಯುತ್ತಿರುವ ಹಾಗೂ ದುಡಿದು ವಿಶ್ರಾಂತ ಜೀವನ ನಡೆಸುತ್ತಿರುವ ಯೋಧರ ತ್ಯಾಗ ಮತ್ತು ಸೇವೆಯನ್ನು ಸಮಾಜ ಗೌರವಿಸಬೇಕು ಹಾಗೂ ಅವರ ಸೇವಾ ಕಾರ್ಯಗಳಿಗೆ ಸರ್ಕಾರ ಮತ್ತು ಆಡಳಿತ ವ್ಯವಸ್ಥೆ ಸಕಾರಾತ್ಮಕವಾಗಿ ಸ್ಪಂದಿಸಬೇಕು ಎಂದರು.
ಸೈನಿಕರು ದೇಶದ ನಿಜವಾದ ಆಸ್ತಿ:ನಮ್ಮ ದೇಶದ ಸೈನಿಕರು ದೇಶದ ನಿಜವಾದ ಆಸ್ತಿ, ನಮ್ಮ ದೇಶದ ಗಡಿ ಕಾಯುವ ಸೈನಿಕರ ಬಗ್ಗೆ ಸಮಾಜದ ಅಸಡ್ಡೆ, ನಿರ್ಲಕ್ಷ್ಯ ಧೋರಣೆ ಸಲ್ಲದು. ದೇಶದ ರಕ್ಷಣೆ ಕಾಯುವ ಸೈನಿಕರ ಶಿಸ್ತಿನ ಜೀವನ ಸಮಾಜಕ್ಕೆ ಆದರ್ಶ ಪ್ರಾಯವಾಗಬೇಕು ಎಂದರು.
ಕಾರ್ಗಿಲ್ ಯುದ್ಧದಲ್ಲಿ ವೀರ ಮರಣನ್ನಪ್ಪಿದ ವೀರ ಯೋಧರ ಆದರ್ಶಗಳು ವಿದ್ಯಾರ್ಥಿಗಳು ಹಾಗೂ ಯುವ ಜನಾಂಗಕ್ಕೆ ದಾರಿದೀಪವಾಗಬೇಕು. ಯೋಧರಿಗೆ ಸಮಾಜದಲ್ಲಿ ನಾವು ವಿಶೇಷ ಸ್ಥಾನಮಾನ ಹಾಗೂ ಗೌರವ ಕೊಡುವ ಮೂಲಕ ಭಯೋತ್ಪಾದನೆಯನ್ನು ಹಿಮ್ಮೆಟ್ಟಿಸಿ ನಮ್ಮ ರಾಷ್ಟ್ರದ ರಕ್ಷಣೆಗಾಗಿ ಎಲ್ಲರೂ ಸಂಕಲ್ಪ ತೊಡಬೇಕು ಎಂದು ಡಾ ಜಮೀರ್ ಅಹ್ಮದ್ ಹೇಳಿದರು.ದೇಶದ ಹೆಮ್ಮೆಯ ದಿವಸ:
ಕಾರ್ಯಕ್ರಮಕ್ಕೆ ಚಾಲನೆ ನೀಡಿ ಕಾರ್ಗಿಲ್ ವಿಜಯೋತ್ಸವದ ಕುರಿತು ಮಾತನಾಡಿದ ಸ್ಕೌಟ್ಸ್ ಮತ್ತು ಗೈಡ್ಸ್ ನ ಜಿಲ್ಲಾ ಸಂಸ್ಥೆಯ ಪ್ರಧಾನ ಆಯುಕ್ತ ಕೆ.ಟಿ.ಬೇಬಿಮ್ಯಾಥ್ಯೂ,ಕಾರ್ಗಿಲ್ ವಿಜಯೋತ್ಸವವು ನಮ್ಮ ದೇಶದ ಹೆಮ್ಮೆಯ ದಿವಸವಾಗಿದ್ದು, 26 ವರ್ಷಗಳ ಹಿಂದೆ ಕಾರ್ಗಿಲ್ ಯುದ್ಧದಲ್ಲಿ ಹುತಾತ್ಮರಾದ ಯೋಧರ ತ್ಯಾಗ, ಬಲಿದಾನಗಳನ್ನು
ಸ್ಮರಿಸುವ ಮೂಲಕ ಅವರ ದೇಶ ಸೇವೆ ಬಗ್ಗೆ ನಾವು ಗೌರವಿಸಬೇಕು. ದೇಶ ರಕ್ಷಣೆಗಾಗಿ ದೇಶ ಕಾಯುವ ಯೋಧ ಕುಟುಂಬಸ್ಥರ ಜೀವನ ಮತ್ತು ಅವರ ಕಷ್ಟದ ಬಗ್ಗೆ ಸರ್ಕಾರ ಸ್ಪಂದಿಸಬೇಕು ಎಂದರು.ಕಾರ್ಗಿಲ್ ವಿಜಯೋತ್ಸವದ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲಾ ಸ್ಕೌಟ್ಸ್ ಆಯುಕ್ತ ಜಿಮ್ಮಿ ಸಿಕ್ವೇರಾ, ಸೇನೆಯಲ್ಲಿ ಯೋಧರು ಸಲ್ಲಿಸಿರುವ ಸೇವೆ ಹಾಗೂ ಯುದ್ದದಲ್ಲಿ ಹುತಾತ್ಮರಾದ ಯೋಧರ ತ್ಯಾಗ, ಬಲಿದಾನದ ಬಗ್ಗೆ ನಾವು ವಿದ್ಯಾರ್ಥಿ ಸಮುದಾಯಕ್ಕೆ ಪರಿಚಯಿಸುವ ಮೂಲಕ ವಿದ್ಯಾರ್ಥಿಗಳಲ್ಲಿ ದೇಶಾಭಿಮಾನ ಬೆಳೆಸಬೇಕು ಎಂದರು.
ಕಾರ್ಗಿಲ್ ವಿಜಯೋತ್ಸವ ಹಾಗೂ ಯುದ್ಧಭೂಮಿಯಲ್ಲಿ ಯೋಧರ ಕಾರ್ಯತಂತ್ರದ ಕುರಿತು ಮಾಹಿತಿ ನೀಡಿದ ಸಂಘದ ಕಾರ್ಯದರ್ಶಿ ಸುಬೇದಾರ್ ಮೇಜರ್ ಎಸ್.ಆರ್.ಮಾದಪ್ಪ ಕಾರ್ಗಿಲ್ ಬಗ್ಗೆ ಸಮಗ್ರ ಮಾಹಿತಿ ಒದಗಿಸಿದರು.ರಾಷ್ಟ್ರದ ರಕ್ಷಣೆಗೆ ಪಣ:
ಅಧ್ಯಕ್ಷತೆ ವಹಿಸಿದ್ದ ಕ್ಯಾಪ್ಟನ್ ಡಿ.ಕೆ.ಚಿಣ್ಣಪ್ಪ ಮಾತನಾಡಿ, ಪ್ರತಿಯೊಬ್ಬರೂ ದೇಶದ ಅಭಿಮಾನ ಬೆಳೆಸಿಕೊಂಡು ರಾಷ್ಟ್ರದ ರಕ್ಷಣೆಗೆ ಪಣ ತೊಡಬೇಕು ಎಂದರು.ಸಂಸ್ಥೆಯ ಜಿಲ್ಲಾ ಸಾರ್ವಜನಿಕ ಸಂಪರ್ಕಾಧಿಕಾರಿ ಟಿ.ಜಿ.ಪ್ರೇಮಕುಮಾರ್, ಜಿಲ್ಲಾ ಗೈಡ್ಸ್ ಸಂಸ್ಥೆಯ ಆಯುಕ್ತೆ ರಾಣಿ ಮಾಚಯ್ಯ, ಸಹಾಯಕ ಆಯುಕ್ತೆ ಸಿ.ಎಂ.ಸುಲೋಚನ,
ಜಿಲ್ಲಾ ಸಂಸ್ಥೆಯ ಕಾರ್ಯದರ್ಶಿ, ಎಂ.ಎಂ.ವಸಂತಿ, ಕೋಶಾಧಿಕಾರಿ ಟಿ.ಎಸ್.ಮುದ್ದಯ್ಯ, ಕುಶಾಲನಗರ ಸ್ಥಳೀಯ ಸಂಸ್ಥೆಯ ಅಧ್ಯಕ್ಷ ಡಾ ಪ್ರವೀಣ್ ದೇವರಗುಂಡ ಸೋಮಪ್ಪ, ಕಾರ್ಯಾಧ್ಯಕ್ಷ ಎ.ಎಸ್.ತಮ್ಮಯ್ಯ, ಕಾರ್ಯದರ್ಶಿ ಎಂ.ಎಸ್.ಗಣೇಶ್, ಸಂಸ್ಥೆಯ ವಿವಿಧ ಹಂತದ ಪದಾಧಿಕಾರಿಗಳಾದ ಎಚ್.ಆರ್.ಮುತ್ತಪ್ಪ,ಕೆ.ಯು.ರಂಜಿತ್, ಚಂದ್ರಶೇಖರ್, ಕೆ.ಬಿ. ಗಣೇಶ್, ಎಸ್.ಆರ್.ಶಿವಲಿಂಗ, ಮಾಜಿ ಸೈನಿಕರ ಸಂಘದ ಕೋಶಾಧಿಕಾರಿ ಎನ್.ಎಸ್.ನರೇಶ್ ಇತರರು ಇದ್ದರು.
ರಂಗಭೂಮಿ ಕಲಾವಿದ ಭರಮಣ್ಣ ಬೆಟಗೇರಿ, ಕಾರ್ಗಿಲ್ ವಿಜಯೋತ್ಸವದ ಕುರಿತು ಹಾಡು ಹಾಡಿ ಗಮನ ಸೆಳೆದರು.ಹಾರಂಗಿ ಜ್ಞಾನಗಂಗಾ ವಸತಿ ಶಾಲೆ, ಕೂಡುಮಂಗಳೂರು ಸರ್ಕಾರಿ ಪ್ರೌಢಶಾಲೆ ಹಾಗೂ ಗುಮ್ಮನಕೊಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸ್ಕೌಟ್ಸ್, ಗೈಡ್ಸ್ ವಿದ್ಯಾರ್ಥಿಗಳು ದೇಶಭಕ್ತಿ ಗೀತೆ ಹಾಡಿದರು.
ಸಂಪಾಜೆ ಸ್ಥಳೀಯ ಸಂಸ್ಥೆಯ ಕಾರ್ಯದರ್ಶಿ ಕೆ.ಬಿ.ಉಷಾ ಕಾರ್ಯಕ್ರಮ ನಿರ್ವಹಿಸಿದರು. ಸಂಸ್ಥೆಯ ಜಿಲ್ಲಾ ಸಂಘಟಕಿ ಯು.ಸಿ.ದಮಯಂತಿ ವಂದಿಸಿದರು.11 ಮಾಜಿ ಯೋಧರಿಗೆ ಸನ್ಮಾನ:
ಇದೇ ವೇಳೆಯಲ್ಲಿ ಸ್ಕೌಟ್ಸ್, ಗೈಡ್ಸ್ ಸಂಸ್ಥೆಯ ವತಿಯಿಂದ ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತಗೊಂಡಿರುವ 11 ಮಂದಿ ನಿವೃತ್ತ ಯೋಧರನ್ನು ಸನ್ಮಾನಿಸಿ ಗೌರವಿಸಿ ನೆನಪಿನ ಕಾಣಿಕೆ ನೀಡಿ ಸತ್ಕರಿಸಲಾಯಿತು.ಸನ್ಮಾನಿತ ನಿವೃತ್ತ ಯೋಧರು: ಸುಬೇದಾರ್ ಮೇಜರ್ ಸುಳ್ಯಕೋಡಿ ಆರ್. ಮಾದಪ್ಪ, ಹವಾಲ್ದಾರ್ ಪಿ.ಎ. ಮಹಮ್ಮದ್ ನಬಿ, ಸುಬೇದಾರ್ ಮೇಜರ್ ಮುಕ್ಕಾಟಿರ ಡಿ. ಮುದ್ದಪ್ಪ, ಹವಾಲ್ದಾರ್ ನಡುವಟ್ಟಿರ ನರೇಶ್ ಕುಮಾರ್, ಬಿ.ಟಿ. ರಮೇಶ್, ಸುಬೇದಾರ್ ಮೇಜರ್ ಎ.ಪಿ. ಸುಬ್ಬಯ್ಯ ದೇವಜನ ಕಾಳಪ್ಪ ಚಿಣ್ಣಪ್ಪ, ಬಿ.ಆರ್. ಸೋಮಪ್ಪ, ಅಲ್ಬರ್ಟ್ ಗಾನ್‌ಸೆಲ್ವಾಸ್, ಸುಬೇದಾರ್ ಮೇಜರ್ ಬಿ.ಪಿ. ಅರವಿಂದ ಬಾಬು ಹಾಗೂ ಎನ್.ಎಂ. ಕಾವೇರಪ್ಪ ಅವರನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು.
ಇದೇ ವೇಳೆಯಲ್ಲಿ ಉಪನ್ಯಾಸಕ ಡಾ ಜಮೀರ್ ಅಹ್ಮದ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.