ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರು
ಸಾಂಸ್ಕೃತಿಕ ಚಟುವಟಿಕೆಯು ಮಾನಸಿಕ ದೃಢತೆ, ಇಚ್ಛಾಶಕ್ತಿಯನ್ನು ಹೆಚ್ಚಿಸಿ ಯಾಂತ್ರಿಕ ಬದುಕಿನ ಒತ್ತಡವನ್ನು ಕಡಿಮೆ ಮಾಡುತ್ತದೆ. ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಕಾಪಾಡಿಕೊಂಡು ಸದೃಢ ಸಮಾಜ ನಿರ್ಮಾಣ ಮಾಡಬೇಕು ಎಂದು ರಂಗಭೂಮಿ ಮತ್ತು ಕಿರುತೆರೆ ಕಲಾವಿದ, ಸಂಸ್ಥೆಯ ಹಿರಿಯ ವಿದ್ಯಾರ್ಥಿ ಎಚ್. ಅಶ್ವಿನ್ ಹೇಳಿದರು.ವಿಜಯವಿಠಲ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ಸಾಂಸ್ಕೃತಿಕ ವೇದಿಕೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳ ಜೀವನ ಖಾಲಿ ಹಾಳೆ ಇದ್ದಂತೆ. ಅದರಲ್ಲಿ ಮೌಲ್ಯಾಧಾರಿತ ಮತ್ತು ಸುಂದರವಾದ ಬದುಕಿನ ಬರಹವನ್ನು ಬರೆಯಲು ಪ್ರಯತ್ನಿಸಿ. ಯಾವುದೇ ಕ್ಷೇತ್ರದಲ್ಲಿ ಸಾಧನೆ ಮಾಡಲು ಶಿಕ್ಷಣ ಅತ್ಯಗತ್ಯ. ನಿರ್ದಿಷ್ಟವಾದ ಗುರಿಯಿದ್ದಾಗ ಪ್ರತಿಯೊಂದು ಕ್ಷೇತ್ರದಲ್ಲೂ ಶ್ರಮಕ್ಕೆ ತಕ್ಕ ಪ್ರತಿಫಲ ನಿಶ್ಚಿತ. ವಿದ್ಯಾರ್ಥಿಗಳು ಓದಿನ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕೆಂದು ಕರೆ ನೀಡಿದರು.
ಮುಖ್ಯ ಅತಿಥಿಗಳಾಗಿ ಸುಗಮ ಸಂಗೀತ ಗಾಯಕರು ಮತ್ತು ಸಂಸ್ಥೆಯ ಹಿರಿಯ ವಿದ್ಯಾರ್ಥಿನಿ ಅಮೂಲ್ಯ ಮಾತನಾಡಿ, ನಿಮ್ಮಲ್ಲಿರುವ ಸುಪ್ತವಾದ ಪ್ರತಿಭೆಯನ್ನು ನೀವೇ ಗುರುತಿಸಿಕೊಳ್ಳಬೇಕು. ಆ ಪ್ರತಿಭೆಯು ಚಿಗುರಿ ಅರಳುವಂತೆ ಮಾಡುವಲ್ಲಿ ಕಾರ್ಯತತ್ಪರರಾಗಬೇಕು ಎಂದು ಹೇಳಿ ಚಲನಚಿತ್ರ ಗೀತೆಯೊಂದನ್ನು ಪ್ರಸ್ತುತಪಡಿಸಿದರು.ಅಧ್ಯಕ್ಷತೆ ವಹಿಸಿದ್ದ ವಿಜಯ ವಿಠಲ ವಿದ್ಯಾಸಂಸ್ಥೆಗಳ ಗೌರವ ಕಾರ್ಯದರ್ಶಿ ಆರ್. ವಾಸುದೇವ ಭಟ್ ಮಾತನಾಡಿ, ಸಾಂಸ್ಕೃತಿಕ ವೇದಿಕೆಯು ಸಹಪಠ್ಯ ಚಟುವಟಿಕೆಗಳು ಬೆಳೆಸಲು ಸಹಕಾರಿಯಾಗಿದೆ. ಯಾವುದೇ ಕ್ಷೇತ್ರದಲ್ಲಿ ಅವಿರತವಾಗಿ ಕ್ರಿಯಾಶೀಲರಾಗುವುದರಿಂದ ಸಾಧನೆಯ ಶಿಖರಕ್ಕೇರಬಹುದು ಎಂದು ಹೇಳಿದರು.
ಕಾಲೇಜಿನ ಪ್ರಾಂಶುಪಾಲ ಎಚ್. ಸತ್ಯಪ್ರಸಾದ್ ಮಾತನಾಡಿ, ವೇದಿಕೆಯ ಉದ್ದೇಶ, ಮಹತ್ವ ಮತ್ತು ಕಾರ್ಯಚಟುವಟಿಕೆಗಳನ್ನು ವಿವರಿಸಿ, ಅತಿಥಿಗಳನ್ನು ಪರಿಚಯಿಸಿದರು. ಮಕ್ಕಳ ಸುಪ್ತ ಪ್ರತಿಭೆಯನ್ನು ಹೊರ ತೆಗೆದು ಅದನ್ನು ಪೋಷಿಸಲು ಸಾಂಸ್ಕೃತಿಕ ವೇದಿಕೆಯು ಸಹಕಾರಿ. ಲಲಿತಕಲೆಗಳಲ್ಲಿ ಆಸಕ್ತಿ ತೋರುವುದರಿಂದ ಏಕಾಗ್ರತೆ ಹೆಚ್ಚಿ ಶೈಕ್ಷಣಿಕವಾಗಿ ಉತ್ತಮ ಸಾಧನೆಗಳನ್ನು ಮಾಡಲು ಸಾಧ್ಯವಾಗುತ್ತದೆ. ಸಾಧಕರ ಸಾಧನೆಗಳು ನಮ್ಮೆಲ್ಲರಿಗೂ ಪ್ರೇರಣೆಯಾಗಬೇಕು ಎಂದರು.ಉಪನ್ಯಾಸಕಿ ಮಯೂರಲಕ್ಷ್ಮಿ, ಅನ್ನಪೂರ್ಣ ರಾವ್, ಅನಿತಾ, ಆರ್. ವೈಶಾಲಿ ಮತ್ತು ನಾಗೇಂದ್ರ ಇದ್ದರು.
ಪ್ರಾರ್ಥನಾ ಪ್ರಾರ್ಥಿಸಿದರು. ಕೆ.ವಿ. ಅದ್ವೈತ್ ಸ್ವಾಗತಿಸಿದರು. ಸಾನ್ವಿ ರಾವ್ ವಂದಿಸಿದರು. ಹಿಮಾನಿ ಕಾರ್ಯಕ್ರಮ ನಿರೂಪಿಸಿದರು. ಪ್ರಣತಿ ಮತ್ತು ಸಂಗಡಿಗರು ಗೀತಗಾಯನವನ್ನು ಪ್ರಸ್ತುತಪಡಿಸಿದರು. ಅಕ್ಷರ್ ಗೌಡ ಗಿಟಾರ್ ವಾದನ ಪ್ರಸ್ತುತಪಡಿಸಿದರು.