ಪ್ರಾಮಾಣಿಕ ಸೇವೆಯನ್ನು ಸಮಾಜ ಎಂದಿಗೂ ಸ್ಮರಿಸುತ್ತದೆ: ಮುನೀರ್‌

| Published : Aug 17 2024, 12:53 AM IST

ಪ್ರಾಮಾಣಿಕ ಸೇವೆಯನ್ನು ಸಮಾಜ ಎಂದಿಗೂ ಸ್ಮರಿಸುತ್ತದೆ: ಮುನೀರ್‌
Share this Article
  • FB
  • TW
  • Linkdin
  • Email

ಸಾರಾಂಶ

ಸ್ವಾತಂತ್ರ್ಯೋತ್ಸವದ ಅಂಗವಾಗಿ ವಿರಾಜಪೇಟೆಯ ವಿದ್ಯಾನಗರದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಮಳೆ ಗಾಳಿಯನ್ನು ಲೆಕ್ಕಿಸದೆ ಪಟ್ಟಣಕ್ಕೆ ಸಮರ್ಪಕವಾದ ವಿದ್ಯುತ್ ಪೂರೈಸಲು ಹಗಲಿರುಳು ಶ್ರಮಿಸುತ್ತಿರುವ ವಿರಾಜಪೇಟೆಯ ಸೆಸ್ಕ್ ಪವರ್ ಮ್ಯಾನ್‌ಗಳನ್ನು ಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಸನ್ಮಾನಿಸಲಾಯಿತು.

ಕನ್ನಡಪ್ರಭ ವಾರ್ತೆ ಮಡಿಕೇರಿ

ಸಾರ್ವಜನಿಕರಿಂದ ಯಾವುದೇ ಫಲಾಪೇಕ್ಷಿಯನ್ನು ಬಯಸದೆ ಜನರಿಗಾಗಿ ಮಾಡುವ ಪ್ರಾಮಾಣಿಕ ಸೇವೆಯನ್ನು ಸಮಾಜ ಸದಾ ಸ್ಮರಿಸಿಕೊಳ್ಳುತ್ತದೆ. ಸರ್ಕಾರಿ ನೌಕರರಾದರೂ ಅವರು ನಿರ್ವಹಿಸುವ ಕಾಯಕದಲ್ಲಿ ಸೇವಾ ಬದ್ಧತೆ ಮತ್ತು ಪ್ರಾಮಾಣಿಕತೆ ಇದ್ದರೆ ಅದಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ ಎಂದು ವಿರಾಜಪೇಟೆಯ ಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಮಂದಮಾಡ ಎ. ಮುನೀರ್ ಹೇಳಿದರು.

78ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ವಿರಾಜಪೇಟೆಯ ವಿದ್ಯಾನಗರದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಮಳೆ ಗಾಳಿಯನ್ನು ಲೆಕ್ಕಿಸದೆ ಪಟ್ಟಣಕ್ಕೆ ಸಮರ್ಪಕವಾದ ವಿದ್ಯುತ್ ಪೂರೈಸಲು ಹಗಲಿರುಳು ಶ್ರಮಿಸುತ್ತಿರುವ ವಿರಾಜಪೇಟೆಯ ಸೆಸ್ಕ್ ಪವರ್ ಮ್ಯಾನ್‌ಗಳನ್ನು ಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಸನ್ಮಾನಿಸಿ ಮಾತನಾಡಿದರು.

ಯಾವುದೇ ವೃತ್ತಿಯನ್ನು ಪ್ರಾಮಾಣಿಕವಾಗಿ ನಿರ್ವಹಿಸುವುದು ಅಷ್ಟು ಸುಲಭದ ಮಾತಲ್ಲ. ಅದರಲ್ಲೂ ಮಳೆಗಾಲದ ಸಂದರ್ಭದಲ್ಲಿ ಸೆಸ್ಕ್‌ನ ಪವರ್ ಮ್ಯಾನ್‌ಗಳ ಕಾರ್ಯನಿರ್ವಹಣೆ ಬಲುದೊಡ್ಡ ಸವಾಲಿನ ಕೆಲಸವಾಗಿದೆ. ರಾತ್ರಿ ಸಮಯದಲ್ಲೂ ವಿದ್ಯುತ್ ಪೂರೈಕೆಗಾಗಿ ಜೀವದ ಹಂಗು ತೊರೆದು ಪ್ರಾಮಾಣಿಕವಾಗಿ ಕೆಲಸ ಮಾಡುವ ಪವರ್ ಮೆನ್‌ಗಳ ವೃತ್ತಿಯನ್ನು ಯಾವುದೇ ಕಾರಣಕ್ಕೂ ಕೀಳರಿಮೆಯಿಂದ ನೋಡಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟರು.

ಸಮಾಜದಲ್ಲಿ ಸೇವಾ ವಲಯದ ಎಲ್ಲ ನೌಕರರ ಪಾತ್ರ ಅಮೂಲ್ಯವಾದುದು. ಸರ್ಕಾರಿ ನೌಕರಿ ಪಡೆದವರು ಕೇವಲ ವೃತ್ತಿಯನ್ನು ಮಾತ್ರ ಅವಲಂಬಿಸದೇ ನಿಸ್ವಾರ್ಥದಿಂದ ಸಮಾಜಕ್ಕಾಗಿ ಮಾಡುವ ಸೇವೆಯನ್ನು ಸಾರ್ವಜನಿಕರು ಗುರುತಿಸಬೇಕು. ವಿವಿಧ ಇಲಾಖೆಯ ಕೆಲ ನೌಕರರು ಕರ್ತವ್ಯದ ಹೊಣೆ ಮರೆತು ಭ್ರಷ್ಟಾಚಾರಕ್ಕೆ ಮೊದಲ ಆದ್ಯತೆ ನೀಡುತ್ತಿರುವ ಪರಿಪಾಠ ಹೆಚ್ಚಾಗುತ್ತಿರುವ ಈ ಕಾಲಘಟ್ಟದಲ್ಲೂ ವಿಶೇಷವಾಗಿ ಸೆಸ್ಕ್ ಪವರ್ ಮ್ಯಾನ್ ಗಳ ಸೇವೆ ಸ್ಮರಣಿಯವಾದದ್ದು. ಮಳೆ ಸೈನಿಕರಂತೆ ವೃತ್ತಿಗೂ ಮೀರಿ ಕೆಲಸ ಮಾಡುವ ಇವರು ಇತರ ನೌಕರರಿಗೆ ಮಾದರಿಯಾಗಿದ್ದು, ಇಂಥವರ ಸಂಖ್ಯೆ ಸಮಾಜದಲ್ಲಿ ಇನ್ನಷ್ಟು ಹೆಚ್ಚಾಗಬೇಕಿದೆ ಎಂದರು.

ಪವರ್ ಮ್ಯಾನ್‌ಗಳಾದ ವಿರೂಪಾಕ್ಷ, ಅಶೋಕ, ಗುರುರಾಜ್, ಮಾಂತೇಶ್, ಯಮುನಪ್ಪ ಮತ್ತು ಅರುಣ್ ಅವರನ್ನು ಸನ್ಮಾನಿಸಲಾಯಿತು.

ಇದಕ್ಕೂ ಮೊದಲು ವಿದ್ಯಾನಗರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಟ್ರಸ್ಟಿನ ಅಧ್ಯಕ್ಷ ಮಂದಮಾಡ ಎ. ಮುನೀರ್ ಧ್ವಜಾರೋಹಣ ನೆರವೇರಿಸಿ, ಧ್ವಜವಂದನೆ ಸಲ್ಲಿಸುವ ಮೂಲಕ ಸ್ವಾತಂತ್ರ್ಯೋತ್ಸವ ಆಚರಣೆಗೆ ಚಾಲನೆ ನೀಡಿದರು. ನಂತರ ಶಾಲಾ ವಿದ್ಯಾರ್ಥಿಗಳಿಗೆ ಸಿಹಿ ಹಂಚಲಾಯಿತು.

ಕಾರ್ಯಕ್ರಮದಲ್ಲಿ ಟ್ರಸ್ಟ್ ಉಪಾಧ್ಯಕ್ಷ ಸಿಬಿ ಅಬ್ರಹಾಂ, ಕಾರ್ಯದರ್ಶಿ ನೌಶಾದ್, ಕೋಶಾಧಿಕಾರಿ ಸೈಫುದ್ದೀನ್, ಸಹ ಕಾರ್ಯದರ್ಶಿ ಮುಕ್ತಾರ್ ಅಹಮ್ಮದ್, ಆಡಳಿತ ಮಂಡಳಿ ಪದಾಧಿಕಾರಿಗಳಾದ ಎ.ಎಚ್. ಅಬ್ದುಲ್ ಲತೀಫ್, ಕಬೀರ್, ನವಾಜ್, ಮಣಿ, ಪೈಸಲ್ ಮೊದಲಾದವರು ಪಾಲ್ಗೊಂಡಿದ್ದರು. ಮುಕ್ತಾರ್ ಅಹಮದ್ ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರೆ, ನೌಶಾದ್ ವಂದಿಸಿದರು.