ಸಮಾಜದ ಅಂಕು-ಡೊಂಕು ತಿದ್ದುವ ರಂಗಭೂಮಿ

| Published : Feb 16 2025, 01:46 AM IST

ಸಾರಾಂಶ

ನಾಟಕ ಜೀವಂತ ಕಲೆಯಾಗಿದೆ. ನಮ್ಮ ಸಾಮಾಜಿಕ ಸಂಬಂಧ ಗಟ್ಟಿಗೊಳಿಸುವ ಶಕ್ತಿ ನಾಟಕಕ್ಕಿದೆ. ಆಧುನಿಕ ಭರಾಟೆಯಲ್ಲಿ ನಮ್ಮ ಸಂಸ್ಕೃತಿಯ ಪ್ರತೀಕವಾದ ನಾಟಕಗಳು ತಮ್ಮ ಹಿಂದಿನ ವೈಭವ ಕಳೆದುಕೊಳ್ಳುತ್ತಿರುವುದು ವಿಷಾದನೀಯ.

ಧಾರವಾಡ:

ನಾಟಕಗಳು ಸಮಾಜದ ಪ್ರತಿಬಿಂಬವಾಗಿದ್ದು, ಸಮಾಜದ ಅಂಕು-ಡೊಂಕು ತಿದ್ದುವ ಶಕ್ತಿ ರಂಗಭೂಮಿಗಿದೆ. ನಾಟಕಗಳು ಎಲ್ಲವನ್ನು ಒಳಗೊಂಡ ಸಮಗ್ರ ಕಲೆ ಎಂದು ಕರ್ನಾಟಕ ವಿದ್ಯಾವರ್ಧಕ ಸಂಘದ ಕಾರ್ಯಕಾರಿ ಸಮಿತಿ ಸದಸ್ಯ ಗುರು ಹಿರೇಮಠ ಹೇಳಿದರು.

ಕರ್ನಾಟಕ ವಿದ್ಯಾವರ್ಧಕ ಸಂಘವು ಆಯೋಜಿಸಿದ್ದ ಬಿ. ಶಿವಶಂಕರ ವಿರಚಿತ ‘ನವಲಗುಂದ ಅಜಾತ ನಾಗಲಿಂಗ ಲೀಲೆ’ ಆಧ್ಯಾತ್ಮಿಕ ನಾಟಕ ಪ್ರದರ್ಶನಕ್ಕೆ ಚಾಲನೆ ನೀಡಿ ಮಾತನಾಡಿದರು.

ನಾಟಕ ಜೀವಂತ ಕಲೆಯಾಗಿದೆ. ನಮ್ಮ ಸಾಮಾಜಿಕ ಸಂಬಂಧ ಗಟ್ಟಿಗೊಳಿಸುವ ಶಕ್ತಿ ನಾಟಕಕ್ಕಿದೆ. ಆಧುನಿಕ ಭರಾಟೆಯಲ್ಲಿ ನಮ್ಮ ಸಂಸ್ಕೃತಿಯ ಪ್ರತೀಕವಾದ ನಾಟಕಗಳು ತಮ್ಮ ಹಿಂದಿನ ವೈಭವ ಕಳೆದುಕೊಳ್ಳುತ್ತಿರುವುದು ವಿಷಾದನೀಯ. ರಂಗ ಕಲಾವಿದರ ಬದುಕು ಇಂದು ಸಂಕೀರ್ಣ ಸ್ಥಿತಿಯಲ್ಲಿದ್ದು, ಅವರಿಗೆ ಸಿಗಬೇಕಾದ ಉತ್ತಮ ಸ್ಥಾನಮಾನ ಸಿಗುತ್ತಿಲ್ಲ. ಕಲೆ ಮತ್ತು ಕಲಾವಿದರು ಈ ನಾಡಿನ ಬಹುದೊಡ್ಡ ಆಸ್ತಿ. ಪ್ರೇಕ್ಷಕರೇ ನಾಟಕದ ನಿಜವಾದ ಜೀವಾಳ. ಈ ರಂಗ ಕಲೆ ಉಳಿಸಿ ಬೆಳೆಸುವುದು ನಮ್ಮೆಲ್ಲರ ಹೊಣೆಯಾಗಿದೆ ಎಂದರು.

ಸತೀಶ ತುರಮರಿ ಅಧ್ಯಕ್ಷತೆ ವಹಿಸಿದ್ದರು. ಇದೇ ವೇಳೆ ನಿರ್ದೇಶಕ, ನಾಗಲಿಂಗ ಪಾತ್ರಧಾರಿ ಎಂ.ಎಸ್. ಕೊಟ್ರೇಶ ಅವರನ್ನು ಸನ್ಮಾನಿಸಲಾಯಿತು. ಬಿ. ಶಿವಶಂಕರ ವಿರಚಿತ ಎಂ.ಎಸ್. ಕೊಟ್ರೇಶ ನಿರ್ದೇಶನದ ‘ನವಲಗುಂದ ಅಜಾತ ನಾಗಲಿಂಗ ಲೀಲೆ’ ಆಧ್ಯಾತ್ಮಿಕ ನಾಟಕ ಪ್ರದರ್ಶನವನ್ನು ಕೊಟ್ಟೂರೇಶ್ವರ ನಾಟಕ ಮಂಡಳಿಯಿಂದ ಪ್ರದರ್ಶಗೊಂಡಿತು. ಎಚ್.ಟಿ. ಬಸವರಾಜ ಸಂಗೀತ ನೀಡಿದರು. ಶಾನವಾಡ ಮಾಸ್ತರ, ಚಂದ್ರಣ್ಣ ಅಣ್ಣಿಗೇರಿ ವಾದ್ಯ ವೃಂದದಲ್ಲಿದ್ದರು. ಶಂಕರ ಹಲಗತ್ತಿ ನಿರೂಪಿಸಿದರು.