ಸಾರಾಂಶ
ಬಸವರಾಜ ಹಿರೇಮಠ
ಧಾರವಾಡ: ಆರಂಭಿಕ ಅಡೆ-ತಡೆ, ಎಡರು-ತೊಡರುಗಳ ಮಧ್ಯೆ ಸಾಮಾಜಿಕ- ಶೈಕ್ಷಣಿಕ ಸಮೀಕ್ಷೆಯು ಇದೀಗ ಸರಿಯಾದ ಹಾದಿಯಲ್ಲಿ ಸಾಗುತ್ತಿದ್ದು, ಧಾರವಾಡ ಜಿಲ್ಲೆಯಲ್ಲಿ ಶೇ. 80ರಷ್ಟು ಗುರಿ ತಲುಪಿದೆ.ಬಹುತೇಕ ಗಣತಿದಾರರು ಸರ್ಕಾರಿ ಶಾಲಾ ಶಿಕ್ಷಕರಾಗಿದ್ದು, ದಸರಾ ರಜೆಯ ನಂತರ ಅ. 8ರಂದು ಶಾಲೆಗಳು ಮತ್ತೆ ತೆರೆದ ನಂತರ ಅವರು ತರಗತಿಗಳಿಗೆ ಮರಳಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ಸಮೀಕ್ಷೆ ಕಾರ್ಯ ಜೋರು ಪಡೆದಿದೆ. ಗಣತಿದಾರರು ಗುರಿಯಿಟ್ಟುಕೊಂಡ 5.46 ಲಕ್ಷ ಮನೆಗಳಲ್ಲಿ ಇಲ್ಲಿಯವರೆಗೆ ಅಂದಾಜು 4 ಲಕ್ಷ ಮನೆಗಳನ್ನು ಭೇಟಿಯಾಗಿ ಮಾಹಿತಿ ದಾಖಲಿಸಿದ್ದು, ಅ. 7ರ ಗಡುವಿಗೆ 2-3 ದಿನಗಳು ಮಾತ್ರ ಉಳಿದಿದೆ. ಗಣತಿದಾರರು ಮತ್ತಷ್ಟು ಚುರುಕಾಗಿ ಕಾರ್ಯ ಮಾಡುತ್ತಿದ್ದು ಬಹುತೇಕ ಶೇ. 100ರಷ್ಟು ಗುರಿ ತಲುಪುವ ಸಾಧ್ಯತೆ ಇದೆ.
ಇತರ ಜಿಲ್ಲೆಗಳಂತೆ ಧಾರವಾಡ ಜಿಲ್ಲೆಯಲ್ಲೂ ನೆಟ್‌ವರ್ಕ್ ಸಮಸ್ಯೆ ಮತ್ತು ಸಮೀಕ್ಷಾ ಅಪ್ಲಿಕೇಶನ್‌ನಲ್ಲಿನ ದೋಷಗಳಿಂದಾಗಿ ಮೊದಲ ವಾರದಲ್ಲಿ ಸಮೀಕ್ಷೆಗೆ ವಿಳಂಬವಾಯಿತು. ವಿಶಿಷ್ಟ ಮನೆಯ ಐಡಿ ಕಾಣದೇ ತೊಂದರೆಯಾಯಿತು. ಸಮೀಕ್ಷಾ ಕಾಲಂಗಳು ಸಹ ತೆರೆಯಲಿಲ್ಲ ಮತ್ತು ತಾಂತ್ರಿಕ ಕಾರಣಗಳು ಅನೇಕ ಗಣತಿದಾರರನ್ನು ಕಂಗಾಲು ಮಾಡಿದ್ದವು. ಕೆಲವು ಸಿಬ್ಬಂದಿಗೆ ಅಪ್ಲಿಕೇಶನ್ ಡೌನ್‌ಲೋಡ್ ಮಾಡಲು ಸಾಧ್ಯವಾಗಲಿಲ್ಲ.ಪ್ರೋತ್ಸಾಹದ ಕಾರಣ ಜೋರು: ಇದರೊಂದಿಗೆ ಮನೆಗಳ ಮಾಲೀಕರು ಸಮೀಕ್ಷೆಯಲ್ಲಿನ ಪ್ರಶ್ನೆಗಳಿಗೆ ವಿರೋಧಿಸಿದರು. ತಮ್ಮ ಜಾತಿ ಅಥವಾ ಉಪ- ಜಾತಿಯನ್ನು ಬಹಿರಂಗಪಡಿಸಲು ನಿರಾಕರಿಸಿದರು. ಬ್ಯಾಂಕ್ ಖಾತೆ, ಜಾತಿ ಪ್ರಮಾಣಪತ್ರ, ಸಾಲ ಮಾಡಿರುವ ಕುರಿತಾಗಿ ಗಣತಿದಾರರನ್ನು ಪ್ರಶ್ನಿಸಿದರು. ಈ ಮಧ್ಯೆಯೂ ಜಿಲ್ಲಾಡಳಿತವು ಗಣತಿದಾರರಿಗೆ ಪ್ರೋತ್ಸಾಹ ನೀಡಿ ಸಮಯಕ್ಕೆ ಸರಿಯಾಗಿ ಗಣತಿ ಮಾಡಲು ಒತ್ತಾಯಿಸಿದ ಪರಿಣಾಮ ಇದೀಗ ಶೇ. 80ರಷ್ಟು ಗಣತಿ ಕಾರ್ಯ ಪೂರ್ಣಗೊಂಡಿದೆ.
ಕಠಿಣ ಕ್ರಮವೂ ಆಗಿದೆ: ಈ ಮಧ್ಯೆ ಕ್ಷೇತ್ರ ಭೇಟಿಗಳಿಗೆ ಹೋಗದಿರುವುದು, ತಮ್ಮ ಬದಲು ಮತ್ತೊಬ್ಬರನ್ನು ಕಳುಹಿಸುವುದು, ಫೋನ್‌ಗಳನ್ನು ಸ್ವಿಚ್ ಆಫ್ ಮಾಡುವುದು ಅಥವಾ ನೆಪಗಳನ್ನು ನೀಡುವಂತಹ ನಿರಾಸಕ್ತಿ ತೋರಿಸುವ ಗಣತಿದಾರರಿಗೆ ಕಠಿಣ ಕ್ರಮ ಎದುರಿಸಬೇಕಾಗುತ್ತದೆ ಎಂದು ಜಿಲ್ಲಾಧಿಕಾರಿ ಎಚ್ಚರಿಕೆ ನೀಡಿ, ಕರ್ತವ್ಯಕ್ಕೆ ವರದಿ ಮಾಡಲು ವಿಫಲರಾದ ಇಬ್ಬರು ಪಾಲಿಕೆ ಸಿಬ್ಬಂದಿ ಅಮಾನತುಗೊಳಿಸಿದ್ದರು.ಸಮಸ್ಯೆಗೆ ಪರಿಹಾರ:
ಹುಬ್ಬಳ್ಳಿ ಹಾಗೂ ಧಾರವಾಡದ ಕಾರಾಗೃಹ ಬಳಿಯ ಸೈದಾಪುರ, ಗುಲಗಂಜಿಕೊಪ್ಪ, ಕುಮಾರೇಶ್ವರ ನಗರ ಸೇರಿ ಹಲವು ಕಡೆಗಳಲ್ಲಿ ಮೊಬೈಲ್ ನೆಟ್‌ವರ್ಕ್ ಜಾಮರ್ ಇರುವುದರಿಂದ, ಈ ಪ್ರದೇಶಗಳಿಗೆ ಜಿಪಂ ಸಿಇಒ ಭೇಟಿ ನೀಡಿ, ನೆಟ್‌ವರ್ಕ್ ಸಮಸ್ಯೆಯ ಪ್ರದೇಶಗಳಲ್ಲಿ ಕ್ಯಾಂಪ್ ಮೋಡ್ ರೀತಿಯಲ್ಲಿ ಸಮೀಕ್ಷೆ ಮಾಡಲು ಗಣತಿದಾರರಿಗೆ ಸೂಚನೆ ನೀಡಿ ಸಮಸ್ಯೆಗೆ ಪರಿಹಾರ ಒದಗಿಸಿದ್ದರು. ಜತೆಗೆ ಸಾರ್ವಜನಿಕರು ಸಮೀಕ್ಷೆದಾರರಿಗೆ ಕಾಯಬೇಕಿಲ್ಲ. ಆನಲೈನ್‌ನಲ್ಲೂ ಸುಲಭ ವಿಧಾನದಲ್ಲಿ ಸ್ವಂತ ಮೊಬೈಲ್ ಮೂಲಕವೂ ಅರ್ಜಿ ಭರ್ತಿ ಮಾಡಲು ಸಹ ಅವಕಾಶ ನೀಡಿದ್ದು ಸಾಕಷ್ಟು ಕುಟುಂಬಗಳು ಈ ಮೂಲಕ ಸಮೀಕ್ಷೆಯಲ್ಲಿ ಪಾಲ್ಗೊಂಡಿದ್ದರು.ಸಮೀಕ್ಷೆಯಲ್ಲಿದ್ದ ಆರಂಭಿಕ ಸಮಸ್ಯೆಗಳು ಈಗ ಪರಿಹಾರಗೊಂಡು ಗಣತಿದಾರರು ತಮ್ಮ ಗಣತಿ ಕಾರ್ಯಕ್ಕೆ ವೇಗ ನೀಡಿದ್ದಾರೆ. ಮೊದಲ ನಾಲ್ಕು ದಿನಗಳಲ್ಲಿ ಕೇವಲ 10,000 ಮನೆಗಳ ಸಮೀಕ್ಷೆಗಳಾಗಿದ್ದರೆ, ಈ ಸಂಖ್ಯೆ ಅ. 4ಕ್ಕೆ ನಾಲ್ಕು ಲಕ್ಷ ದಾಟಿದೆ. ಧಾರವಾಡದಲ್ಲಿ ನಿಗದಿತ ಅವಧಿಯೊಳಗೆ ಗುರಿ ತಲುಪುವ ವಿಶ್ವಾಸವಿದೆ ಎಂದು ಧಾರವಾಡ ಜಿಪಂ ಸಿಇಒ ಭುವನೇಶ ಪಾಟೀಲ ಹೇಳಿದರು.
ಪ್ರಸ್ತುತ, 4,880 ಗಣತಿದಾರರು ಮತ್ತು 244 ಮೇಲ್ವಿಚಾರಕರು ಕ್ಷೇತ್ರದಲ್ಲಿದ್ದಾರೆ. ಪ್ರತಿಯೊಬ್ಬ ಮೇಲ್ವಿಚಾರಕರು 20 ಗಣತಿದಾರರನ್ನು ನೋಡಿಕೊಳ್ಳುತ್ತಿದ್ದಾರೆ. ಅವರಲ್ಲಿ 3,937 ಜನರು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಶಿಕ್ಷಕರಾಗಿದ್ದರೆ, ಉಳಿದವರನ್ನು ಗ್ರಾಮೀಣಾಭಿವೃದ್ಧಿ, ಮಹಾನಗರಪಾಲಿಕೆ ಮತ್ತು ವಿವಿಧ ಇಲಾಖೆಗಳ ಸಿಬ್ಬಂದಿ ಇದ್ದಾರೆ.