ಸೋದೆ ಸದಾಶಿವರಾಯರ ಸಾಹಸಗಾಥೆ ತೆರೆದಿಟ್ಟ ವಿಜಯ ದಿವಸ

| Published : Feb 28 2024, 02:40 AM IST

ಸಾರಾಂಶ

ದೇಶದಲ್ಲೇ ಮೊಟ್ಟಮೊದಲು ಬ್ರಿಟಿಷರನ್ನು ಹೊರದಬ್ಬಿ, ಅವರ ಧ್ವಜ ಇಳಿಸಿ ಸ್ವಾತಂತ್ರ್ಯ ಘೋಷಿಸಿದ ಸೋದೆ ಸದಾಶಿವರಾಯರ ಸಾಹಸ ಗಾಥೆಯ ಸ್ಮರಣಾರ್ಥ ಕಾರ್ಯಕ್ರಮ ನಡೆಯಿತು.

ಕಾರವಾರ:

ಬೈಕ್ ರ್‍ಯಾಲಿ, ಧ್ವಜಾರೋಹಣ ನೆರವೇರಿಸುವ ಮೂಲಕ ತಾಲೂಕಿನ ನಂದವಾಳದಲ್ಲಿ ಸೋಮವಾರ ವಿಜಯ ದಿವಸ ಆಚರಿಸಲಾಯಿತು. ಸೋದೆ ಸದಾಶಿವರಾಯರ ಸಾಹಸಗಾಥೆಯನ್ನು ತೆರೆದಿಟ್ಟಿತು.

ದೇಶದಲ್ಲೇ ಮೊಟ್ಟಮೊದಲು ಬ್ರಿಟಿಷರನ್ನು ಹೊರದಬ್ಬಿ, ಅವರ ಧ್ವಜ ಇಳಿಸಿ ಸ್ವಾತಂತ್ರ್ಯ ಘೋಷಿಸಿದ ಸೋದೆ ಸದಾಶಿವರಾಯರ ಸಾಹಸ ಗಾಥೆಯ ಸ್ಮರಣಾರ್ಥ ಏರ್ಪಡಿಸಿದ್ದ ಈ ಕಾರ್ಯಕ್ರಮದಲ್ಲಿ ರಾಜ್ಯ ಬಿಜೆಪಿ ಉಪಾಧ್ಯಕ್ಷೆ ರೂಪಾಲಿ ನಾಯ್ಕ್, ನಮ್ಮ ನಾಡು, ನುಡಿ, ನೆಲದ ರಕ್ಷಣೆಗೆ ಜೀವದ ಹಂಗು ತೊರೆದು ಹೋರಾಡಿದ ಸೋದೆ ಅರಸರು ನಮಗೆಲ್ಲ ಆದರ್ಶಪ್ರಾಯರು. ಅವರು ನಡೆಸಿದ ವಿಜಯೋತ್ಸವದ ಹಿನ್ನೆಲೆಯಲ್ಲಿ ನಡೆಸುವ ವಿಜಯ ದಿವಸ ಈ ದಿನ. ಈ ಕಾರ್ಯಕ್ರಮ ಕೇವಲ ಒಂದು ದಿನದ ಕಾರ್ಯಕ್ರಮ ಆಗದೆ ಯುವಜನತೆ ದೇಶಪ್ರೇಮ ಬೆಳೆಸಿಕೊಳ್ಳಲು ಮತ್ತು ದೇಶ ಸೇವೆ ಮಾಡಲು ಪ್ರೇರಣೆ ಆಗಬೇಕು ಎಂದು ಹೇಳಿದರು.ದಿಕ್ಸೂಚಿ ಭಾಷಣಕಾರರಾಗಿದ್ದ ಡಾ. ಜಿ.ಜಿ. ಹೆಗಡೆ, ಸದಾಶಿವರಾಯರು ಈ ನಾಡು ಕಂಡ ಮಹಾಪುರುಷ. ಕರ್ನಾಟಕ ಕಾಶ್ಮೀರ ಎಂದು ಗುರುತಿಸಿಕೊಂಡಿರುವ ಕಾರವಾರದಲ್ಲಿ ಹೋರಾಟದ ಕಿಚ್ಚು ಮತ್ತು ಅದರ ಜ್ಯೋತಿ ಬೆಳಗಿಸಿದ್ದಾರೆ. ಬ್ರಿಟಿಷರ ಒಡೆದು ಆಳುವ ನೀತಿ ಖಂಡಿಸಿ ಸ್ವಾತಂತ್ರ್ಯಹೋರಾಟದ ಕಿಚ್ಚು ಹಚ್ಚಿ ಪ್ರಥಮ ಬಾರಿಗೆ ಬ್ರಿಟಿಷರ ಧ್ವಜ ಇಳಿಸಿ ನಮ್ಮ ಭಗವಾಧ್ವಜ ಹಾರಿಸಿದ್ದಾರೆ. ಸದಾಶಿವರಾಯರ ಸಾಹಸಗಾಥೆ ಅವಿಸ್ಮರಣೀಯವಾದುದು ಎಂದರು.ಬಿಜೆಪಿಯ ನಿಕಟಪೂರ್ವ ಜಿಲ್ಲಾಧ್ಯಕ್ಷ ವೆಂಕಟೇಶ ನಾಯಕ ಹಾಗೂ ಜಿಲ್ಲಾ ವಿಶೇಷ ಅಹ್ವಾನಿತರಾದ ನಾಗರಾಜ್ ನಾಯಕ ಮಾತನಾಡಿದರು.ಉದ್ಘಾಟಕರಾಗಿದ್ದ ಬಿಜೆಪಿ ಜಿಲ್ಲಾಧ್ಯಕ್ಷ ಎನ್‌.ಎಸ್. ಹೆಗಡೆ, ಸದಾಶಿವರಾಯರಂತ ಮಹಾಪುರುಷರನ್ನು ನಾವು ಪದೇ ಪದೇ ನೆನಪಿಸಿಕೊಳ್ಳುತ್ತಿರಬೇಕು. ಅವರ ಜೀವನ ಚರಿತ್ರೆ ಓದಿ ತಿಳಿದುಕೊಳ್ಳಬೇಕು. ಇಂಥ ಮಹಾಪುರುಷರ ಬಗ್ಗೆ ಮುಂದಿನ ಪೀಳಿಗೆಗೆ ಮಾಹಿತಿ ನೀಡುವ ಕಾರ್ಯಕ್ರಮ ಏರ್ಪಡಿಸಿರುವುದು ಶ್ಲಾಘನೀಯ ಎಂದರು.ದಿಕ್ಸೂಚಿ ಭಾಷಣ ಮಾಡಿದ ಡಾ. ಜಿ.ಜಿ. ಹೆಗಡೆ, ಉದ್ಘಾಟಕರಾದ ಎನ್‌.ಎಸ್. ಹೆಗಡೆ ಹಾಗೂ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸ್ಥಳೀಯ ಸಾಧಕರನ್ನು ಗೌರವಿಸಲಾಯಿತು. ಬಿಜೆಪಿ ಕಾರವಾರ ಗ್ರಾಮೀಣ ಅಧ್ಯಕ್ಷ ಸುಭಾಷ್ ಗುನಗಿ ಸ್ವಾಗತಿಸಿದರು. ಪಕ್ಷದ ಜಿಲ್ಲಾ ಉಪಾಧ್ಯಕ್ಷ ಗಜಾನನ್ ಗುನಗ, ಸಂಜಯ್ ಸಾಳುಂಕೆ, ನಗರಾಧ್ಯಕ್ಷ ನಾಗೇಶ ಕುರುಡೇಕರ, ಅಂಕೋಲಾ ಮಂಡಲ ಅಧ್ಯಕ್ಷ ಗೋಪಾಲಕೃಷ್ಣ ವೈದ್ಯ, ಭೂ ದಾನಿಗಳಾದ ಸುಧಾಕರ ನಾಯ್ಕ, ಮೀನುಗಾರ ಮಹಿಳಾ ಸಂಘದ ಅಧ್ಯಕ್ಷೆ ಸುಶೀಲಾ ಹರಿಕಂತ್ರ, ಸ್ಥಾಯಿ ಸಮಿತಿ ಅಧ್ಯಕ್ಷ ಮನೋಜ್ ಬಾಂದೇಕರ್ ಇದ್ದರು. ಇದಕ್ಕೂ ಮುನ್ನ ಶೇಜವಾಡ ಶೆಜ್ಜೇಶ್ವರ ದೇವಾಲಯದಿಂದ ನಂದವಾಳ ತನಕ ಬೈಕ್ ರ್‍ಯಾಲಿ ನಡೆಸಲಾಯಿತು.