ಸಾರಾಂಶ
ಕನ್ನಡಪ್ರಭ ವಾರ್ತೆ ತುಮಕೂರುಗಲ್ಲಿ ಕ್ರಿಕೆಟ್‌ನಿಂದ ಅಂತಾರಾಷ್ಟ್ರೀಯ ಕ್ರಿಕೆಟ್‌ನ ಕನಸು ಕಾಣುವ ಯುವಜನರಿಗೆ ಸೂಕ್ತ ವೇದಿಕೆ ಒದಗಿಸುವ ಉದ್ದೇಶದಿಂದ ಕರ್ನಾಟಕ ಸ್ಟೇಟ್ ಸಾಪ್ಟ್ ಬಾಲ್ ಕ್ರಿಕೆಟ್ ಆಸೋಸಿಯೇಷನ್‌ನಿಂದ ಐಪಿಎಲ್ ಮಾದರಿಯಲ್ಲಿ ನವೆಂಬರ್ 1 ರಿಂದ ಡಿಸೆಂಬರ್ 1 ರವರೆಗೆ ಒಂದು ತಿಂಗಳ ಕಾಲ ಕರ್ನಾಟಕ ಸಾಫ್ಟ್ ಬಾಲ್ ಪ್ರೀಮಿಯರ್ ಲೀಗ್ (ಕೆಎಸ್‌ಪಿಎಲ್)ಅಯೋಜಿಸಲಾಗಿದೆ ಎಂದು ಕೆಎಸ್‌ಪಿಎಲ್ ಸಂಸ್ಥಾಪಕ ರಾಜ್ಯಾಧ್ಯಕ್ಷ ಗಂಗಾಧರರಾಜು ತಿಳಿಸಿದ್ದಾರೆ.ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ತುಮಕೂರು ತಂಡ ತುಮಕೂರು ಟೈಟಾನ್‌ನ ಪೋಸ್ಟರ್ ಆನಾವರಣೆಗೊಳಿಸಿ ಮಾತನಾಡಿದರು. ಗಲ್ಲಿ ಕ್ರಿಕೆಟ್ ಮೂಲಕ ರಣಜಿ, ರಾಷ್ಟ್ರೀಯ, ಅಂತಾರಾಷ್ಟ್ರೀಯ ಕ್ರಿಕೆಟ್‌ನ ಕನಸು ಕಾಣುವ ಯುವಕರು, ಅದನ್ನು ಕೈಗೂಡಿಸಿಕೊಳ್ಳಲು ಸಾಧ್ಯವಾಗದೆ ಪರದಾಡುತ್ತಿದ್ದಾರೆ. ಇತ್ತ ಗಲ್ಲಿ ಕ್ರಿಕೆಟಿಗರ ಕನಸನ್ನು ನನಸು ಮಾಡುವ ಉದ್ದೇಶದಿಂದ ಕರ್ನಾಟಕ ಸ್ಟೇಟ್ ಸಾಪ್ಟ್ಬಾಲ್ ಕ್ರಿಕೆಟ್ ಅಸೋಸಿಯೇಷನ್ ಸ್ಥಾಪಿಸಲಾಗಿದೆ. ನಮ್ಮ ಸಂಸ್ಥೆಯ ಮೂಲಕ ರಾಜ್ಯದ 31 ಜಿಲ್ಲೆಗಳಲ್ಲಿಯೂ ಸಾಫ್ಟ್ ಬಾಲ್ ಕ್ರಿಕೆಟ್ ಆಡುವ ಆಟಗಾರರನ್ನು ಗುರುತಿಸಿ, ಅವರಿಗಾಗಿಯೇ ರಾಜ್ಯ, ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಸಾಫ್ಟ್ ಬಾಲ್ ಕ್ರಿಕೆಟ್ ಟೂರ್ನಿ ಏರ್ಪಡಿಸುವ ಮೂಲಕ ಲೆದರ್ ಬಾಲ್‌ನಷ್ಟೇ ಗೌರವ ಸಾಫ್ಟ್ ಬಾಲ್ ಕ್ರಿಕೆಟ್ ಪ್ಲೇಯರ್‌ಗಳಿಗೂ ಲಭಿಸುವಂತೆ ಮಾಡುವುದು ಸಂಸ್ಥೆಯ ಉದ್ದೇಶವಾಗಿದೆ ಎಂದರು.ಇದೇ ಮೊದಲ ಬಾರಿಗೆ ನವೆಂಬರ್ 1 ರಿಂದ ಡಿಸೆಂಬರ್ 1 ರ ವರೆಗೆ ಐಪಿಎಲ್ ಮಾದರಿಯಲ್ಲಿ ಸಾಫ್ಟ್ ಬಾಲ್ ಟೂರ್ನಿಯನ್ನು ಬೆಂಗಳೂರಿನ ಸೂಲದೇವನ ಹಳ್ಳಿಯಲ್ಲಿರುವ ಆಚಾರ್ಯ ಸ್ಟೇಡಿಯಂನಲ್ಲಿ ಆಯೋಜಿಸಲಾಗಿದೆ. ರಾಜ್ಯದ ೩೧ ಜಿಲ್ಲೆಗಳ ೩೨ ತಂಡಗಳು ಭಾಗವಹಿಸುತ್ತಿದ್ದು, ಪ್ರಥಮ ಸ್ಥಾನ ಪಡೆದ ತಂಡಕ್ಕೆ 50 ಲಕ್ಷ ರು, ಎರಡನೇ ಸ್ಥಾನ ಪಡೆದ ತಂಡಕ್ಕೆ 25 ಲಕ್ಷ ರು.ಬಹುಮಾನ ನೀಡಲಾಗುತ್ತಿದೆ. ನವೆಂಬರ್ 1 ರಿಂದ ಆರಂಭವಾಗುವ ಟೂರ್ನಿಯಲ್ಲಿ ಒಟ್ಟು 32ರ ತಂಡಗಳ 699 ಜನ ಕ್ರೀಡಾಪಟುಗಳು ಪಾಲ್ಗೊಳ್ಳುತ್ತಿದ್ದು, ವಸತಿ, ಊಟದ ವ್ಯವಸ್ಥೆಯನ್ನು ಮಾಡಲಾಗಿದೆ ಎಂದರು.ಸುದ್ದಿಗೋಷ್ಠಿಯಲ್ಲಿ ತುಮಕೂರು ಟೈಟಾನ್ ತಂಡದ ಆಟಗಾರರಾದ ನಿತೀನ್,ಪವನ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.