ಮಣ್ಣಿಗೆ ಅನುಗುಣವಾಗಿ ಕೃಷಿ, ಪೋಷಕಾಂಶ ಬಳಕೆ ಅತಿ ಮುಖ್ಯ: ಡಾ.ಪವಿತ್ರ

| Published : Dec 31 2024, 01:03 AM IST

ಮಣ್ಣಿಗೆ ಅನುಗುಣವಾಗಿ ಕೃಷಿ, ಪೋಷಕಾಂಶ ಬಳಕೆ ಅತಿ ಮುಖ್ಯ: ಡಾ.ಪವಿತ್ರ
Share this Article
  • FB
  • TW
  • Linkdin
  • Email

ಸಾರಾಂಶ

ತರೀಕೆರೆಕೃಷಿ ಕ್ಷೇತ್ರದಲ್ಲಿ ರೈತರ ಆದಾಯ ದ್ವಿಗುಣಗೊಳಿಸುವ ಹಲವು ಅಂಶಗಳಲ್ಲಿ ಮಣ್ಣು ಪರೀಕ್ಷೆಗೆ ಅನುಗುಣವಾಗಿ ಕೃಷಿ ಮತ್ತು ಪೋಷಕಾಂಶ ಬಳಕೆ ಅತಿ ಮುಖ್ಯ ಎಂದು ಬಾವಿಕೆರೆ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಸಂಸ್ಥೆ ಕ್ಷೇತ್ರ ಅಧೀಕ್ಷಕರಾದ ಡಾ.ಪವಿತ್ರ ಹೇಳಿದ್ದಾರೆ.

ಮಣ್ಣು ಪರೀಕ್ಷೆ - ಪೋಷಕಾಂಶ ನಿರ್ವಹಣೆ ಬಗ್ಗೆ ರೈತ ಕ್ಷೇತ್ರ ಪಾಠ ಶಾಲೆ ​ಕಾರ್ಯಕ್ರಮ

ಕನ್ನಡಪ್ರಭ ವಾರ್ತೆ, ತರೀಕೆರೆ

ಕೃಷಿ ಕ್ಷೇತ್ರದಲ್ಲಿ ರೈತರ ಆದಾಯ ದ್ವಿಗುಣಗೊಳಿಸುವ ಹಲವು ಅಂಶಗಳಲ್ಲಿ ಮಣ್ಣು ಪರೀಕ್ಷೆಗೆ ಅನುಗುಣವಾಗಿ ಕೃಷಿ ಮತ್ತು ಪೋಷಕಾಂಶ ಬಳಕೆ ಅತಿ ಮುಖ್ಯ ಎಂದು ಬಾವಿಕೆರೆ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಸಂಸ್ಥೆ ಕ್ಷೇತ್ರ ಅಧೀಕ್ಷಕರಾದ ಡಾ.ಪವಿತ್ರ ಹೇಳಿದ್ದಾರೆ. ಸೋಮವಾರ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ ನಿಂದ ಬಾವಿಕೆರೆಯಲ್ಲಿ, ಕೃಷಿ ವಿಸ್ತರಣಾ ಕಾರ್ಯಕ್ರಮ ಅಂಗವಾಗಿ ಮಣ್ಣು ಪರೀಕ್ಷೆ ಮತ್ತು ಪೋಷಕಾಂಶ ನಿರ್ವಹಣೆ ಬಗ್ಗೆ ನಡೆದ ರೈತ ಕ್ಷೇತ್ರ ಪಾಠ ಶಾಲೆ ​ಕಾರ್ಯಕ್ರಮದಲ್ಲಿ ಮಾತನಾಡಿದರು.ಮಣ್ಣು ಪ್ರಕೃತಿದತ್ತವಾದ ನಿಸರ್ಗದ ಅಮೂಲ್ಯ ಸಂಪತ್ತು. ಸಸ್ಯಗಳಿಗೆ ಪೋಷಕಾಂಶ ಒದಗಿಸುವ ಶಕ್ತಿಗೆ ಮಣ್ಣಿನ ಫಲವತ್ತತೆ ಎನ್ನುತ್ತೇವೆ. ಒಂದೇ ಕ್ಷೇತ್ರದಲ್ಲಿ ನಿರಂತರ ಒಂದೇ ಬೆಳೆ ಬೆಳೆಸುವುದರಿಂದ ಮಣ್ಣಿಲ್ಲಿರುವ ಪೋಷಕಾಂಶಗಳ ಲಭ್ಯತೆ ಪ್ರಮಾಣ ಕಡಿಮೆ ಆಗುತ್ತದೆ, ಈ ಪೋಷಕಾಂಶಗಳ ಲಭ್ಯತೆ ಮಣ್ಣಿನ ಭೌತಿಕ ಹಾಗೂ ಕೆಲವು ರಾಸಾಯನಿಕ ಕ್ರಿಯೆ ಅವಲಂಬಿಸಿರುತ್ತದೆ ಎಂದು ಹೇಳಿದರು. ಸಸ್ಯದ ಬೆಳವಣಿಗೆ ಮತ್ತು ವಯಸ್ಸಿನ ಆಧಾರದ ಮೇಲೆ ಪೋಷಕಾಂಶ ನಿರ್ಧಿಷ್ಟ ಪ್ರಮಾಣದಲ್ಲಿ ಬೇಕಾಗುತ್ತವೆ. ಮಣ್ಣಿನಿಂದ ಸಸ್ಯಗಳಿಗೆ ದೊರೆಯುವ ಲಭ್ಯತೆ, ಪೋಷಕಾಂಶಗಳ ಪ್ರಮಾಣ ಹಾಗೂ ಮಣ್ಣಿನ ಕೆಲವು ಭೌತಿಕ ಮತ್ತು ರಾಸಾಯನಿಕ ಗುಣಲಕ್ಷಣ ತಿಳಿಯುವ ಸಲುವಾಗಿ ಮಣ್ಣು ಪರೀಕ್ಷೆ ಮಾಡಲಾಗುತ್ತದೆ. ಮಣ್ಣು ಪರೀಕ್ಷೆಯಿಂದ ಮಣ್ಣಿನ ಫಲವತ್ತತೆ ತಿಳಿದುಕೊಳ್ಳುವುದಲ್ಲದೆ ಆಮ್ಲೀಯ ಮಣ್ಣು, ಕ್ಷಾರೀಯ ಮಣ್ಣು, ಉಪ್ಪು ಅಥವಾ ಲವಣಯುಕ್ತ ಮಣ್ಣು, ಸರಿಪಡಿಸುವಿಕೆಗೆ ಶಿಫಾರಸ್ಸು ಅನ್ವಯ ಸೂಚಿತ ಪ್ರಮಾಣದಲ್ಲಿ ರಸಗೊಬ್ಬರ ಬಳಕೆಯನ್ನು ರೈತರು ಮಾಡಬೇಕು ಎಂದು ಹೇಳಿದರು.ರೈತರು ತೋಟದ ಒಟ್ಟಾರೆ ಮಣ್ಣಿನಲ್ಲಿ ಸ್ವಲ್ಪ ಮಣ್ಣನ್ನು ಮಾತ್ರ ಮಣ್ಣಿನ ಪರೀಕ್ಷೆಗೆ ಉಪಯೋಗಿಸುವುದರಿಂದ, ಈ ಮಣ್ಣು ಇಡೀ ತೋಟವನ್ನು ಪ್ರತಿನಿಧಿಸುವಂತಿರಬೇಕು. ತೋಟದ ವಿಸ್ತೀರ್ಣ, ಮಣ್ಣಿನ ವೈವಿಧ್ಯತೆಗಳ ಆಧಾರದ ಮೇಲೆ ಅವಶ್ಯಕ ಉಪಭಾಗಗಳನ್ನಾಗಿ ಬೇರೆಬೇರೆಯಾಗಿ ಗುರುತಿಸಿ ಮಾದರಿ ಸಂಗ್ರಹಿಸಬೇಕು. ನಿಗದಿತ ಸ್ಥಳದಲ್ಲಿ ಮಣ್ಣು ತೆಗೆಯುವ ಮೊದಲು ಹುಲ್ಲು, ಕಸಕಡ್ಡಿಗಳನ್ನು ತೆಗೆಯಬೇಕು. ಸಾಮಾನ್ಯ ಮಣ್ಣು ಪರೀಕ್ಷೆ , ಗೊಬ್ಬರಗಳ ಶಿಫಾರಸ್ಸಿಗೆ ಒಂದು ಅಡಿಯಷ್ಟು ಆಳದ ಮಣ್ಣನ ಮಾದರಿ ಸಾಕಾಗುತ್ತದೆ. ಇದಕ್ಕಾಗಿ ಪ್ರತಿ ಜಾಗದಲ್ಲಿ ‘ವಿ’ ಆಕಾರದ 30 ಸೆಂ.ಮೀ. ಆಳದ ಗುಂಡಿ ತೋಡಿ, ಗುಂಡಿ ಬದಿಯಿಂದ ಒಂದು ಅಂಗುಲದಷ್ಟು ಪದರ ಕೆರೆದು ಪ್ರತಿ ಗುಂಡಿಯಿಂದ ಸುಮಾರು 250-500 ಗ್ರಾಂ ಮಣ್ಣನ್ನು ಶೇಖರಿಸಬೇಕು ಎಂದು ವಿವರಿಸಿದರು.ಮಣ್ಣಿನ ಮಾದರಿ: ಗಟ್ಟಿ ಜಮೀನಿನಲ್ಲಿ ಘನಾಕೃತಿಯಲ್ಲಿ ಗುಂಡಿ ತೋಡಿ, ಒಂದು ಬದಿಯಿಂದ ಮಣ್ಣನ್ನು ಕೆರೆದು ಸಂಗ್ರಹಿಸಬೇಕು. ಆಯ್ದ ಜಾಗ ಗಳಿಂದ ಸಂಗ್ರಹಿಸಿದ 5-6 ಮಣ್ಣಿನ ಮಾದರಿಗಳನ್ನು ಒಟ್ಟುಗೂಡಿಸಿ, ಶುದ್ಧವಾದ ಬಟ್ಟೆ ಅಥವ ಪಾಲಿಥಿನ್ ಹಾಳೆಯಲ್ಲಿ ಹರಡಿ, ಕಸಕಡ್ಡಿ, ಕಲ್ಲು ಗಳನ್ನು ಬೇರ್ಪಡಿಸಬೇಕು. ನಂತರ ಹೆಂಟೆಗಳನ್ನು ಪುಡಿಮಾಡಿ ಚೆನ್ನಾಗಿ ಮಿಶ್ರ ಮಾಡಿ ತಿಳಿಸಿದ ಮಾದರಿಯಲ್ಲಿ ವಿಂಗಡಿಸಿ , ಮಣ್ಣಿನ ಮಾದರಿಯನ್ನು ನೆರಳಿನಲ್ಲಿ ಒಣಗಿಸಿ ಶುದ್ಧ ಬಟ್ಟೆ/ಪಾಲಿಥಿನ್ ಚೀಲದಲ್ಲಿ ಹಾಕಿ ಚೀಲದ ಚೀಟಿಯಲ್ಲಿ ರೈತನ ಹೆಸರು, ತೋಟದ ಗುರುತಿನ ಸಂಖ್ಯೆ, ಮಾದರಿ ತೆಗೆದ ದಿನಾಂಕ, ಮುಂತಾದ ವಿವರ ಸ್ಪಷ್ಟವಾಗಿ ಬರೆದು ನೀಡಿ ಮಣ್ಣು ಕಾರ್ಡ್ ಪಡೆಯಲು ಪ್ರಾತ್ಯಕ್ಷತೆ ಮೂಲಕ ತಿಳಿಸಿದರು. ತೋಟಗಾರಿಕೆ ಇಲಾಖೆ ಸಹಾಯಕ ಕೃಷಿ ನಿರ್ದೇಶಕ ಯತಿರಾಜ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ರೈತರು ತಮ್ಮ ಕೃಷಿ ಭೂಮಿಗೆ ಹಸಿರು ಗೊಬ್ಬರ – ಸೆಣಬು, ಅಲಸಂದೆ, ಹೆಸರು, ಹುರುಳಿ, ದಯಾಂಚ ಸಸಿಗಳನ್ನು ಬೆಳೆಸಿ ಉಳುಮೆ ಮಾಡಿ ಅವುಗಳನ್ನು ಭೂಮಿಗೆ ಸೇರಿಸು ವುದರಿಂದ ಮಣ್ಣಿನ ರಸಸಾರ ಗಣನೀಯವಾಗಿ ಹೆಚ್ಚಿಸಬಹುದು. ಏಕ ಬೆಳೆ ಅವಲಂಬಿಸದೇ ಸಮಗ್ರ ಕೃಷಿ ಕೈಗೊಂಡಲ್ಲಿ ಮಣ್ಣಿನ ಪೋಷ ಕಾಂಶ ಸಮತೋಲನದ ಜೊತೆಗೆ ಆದಾಯ ಗಳಿಸಬಹುದು. ತೋಟಗಾರಿಕೆ ಇಲಾಖೆಯಿಂದ ಹನಿ ನೀರಾವರಿ, ಕೃಷಿ ಹೊoಡ, ಜೇನು ಪೆಟ್ಟಿಗೆ, ಕೃಷಿ ಯಂತ್ರಗಳ ಖರೀದಿಗೆ ಸಹಾಯಧನ ನೀಡಲಾಗುತ್ತಿದ್ದು ರೈತರು ಪ್ರಯೋಜನ ಪಡೆಯಲು ತಿಳಿಸಿದರು. ಯೋಜನಾಧಿಕಾರಿ ಕುಸುಮಾದರ್ ಮಾತನಾಡಿ ಕೃಷಿ ಪೂರಕ ತರಬೇತಿಗಳು, ಕೃಷಿ ಅಧ್ಯಯನ ಪ್ರವಾಸ, ಅನುದಾನಗಳು, ಕೃಷಿ ಚಟುವಟಿಕೆಗೆ ಪ್ರಗತಿನಿಧಿ ಕಾರ್ಯಕ್ರಮ ನಡೆಸಲಾಗುತ್ತಿದೆ. ಸದಸ್ಯರು ರೈತರು ಏಕ ಬೆಳೆ ಅಳವಡಿಸಿಕೊಳ್ಳದೆ ಸಮಗ್ರ ಕೃಷಿ ಕೈಗೊಳ್ಳಬೇಕು, ಸಾವಯವ ಕೃಷಿಗೆ ಹೆಚ್ಚು ಒತ್ತು ಕೊಡಬೇಕು. ಪ್ರದೇಶವಾರು ಬೆಳೆ ಬೆಳೆದಲ್ಲಿ ಸಕಾಲದಲ್ಲಿ ಉತ್ತಮ ಆದಾಯ ಇಳುವರಿ ಸಿಗುತ್ತದೆ ಎಂದು ತಿಳಿಸಿದರು. ಸಮಗ್ರ ಕೃಷಿಕ ನಂಜೇಗೌಡ ಅಧ್ಯಕ್ಷತೆ ವಹಿಸಿದ್ದರು. ತೋಟಗಾರಿಕೆ ಇಲಾಖೆ ಸುರೇಶ ಬಾಬು, ಒಕ್ಕೂಟ ಪದಾಧಿಕಾರಿ ಸಂಧ್ಯಾ, ಮಮತ, ಮಾಲಿನಿ, ಸುರೇಶ್, ತೋಟದ ಮಾಲೀಕ ರಮೇಶ್, ಕೃಷಿ ಮೇಲ್ವಿಚಾರಕ ಸಂತೋಷ್, ವಲಯದ ಮೇಲ್ವಿಚಾರಕ ಗಣೇಶ್, ಸೇವಾಪ್ರತಿನಿಧಿ, ಅಮೃತ, ಶೋಭ, ಸಂಘದ ಸದಸ್ಯರು, ಉಪಸ್ಥಿತರಿದ್ದರು.30ಕೆಟಿಆರ್.ಕೆ.1ಃ

ತರೀಕೆರೆ ಸಮೀಪದ ಬಾವಿಕರೆಯಲ್ಲಿ ನಡೆದ ಮಣ್ಣು ಪರೀಕ್ಷೆ ಮತ್ತು ಪೋಷಕಾಂಶ ನಿರ್ವಹಣೆ ಬಗ್ಗೆ ರೈತ ಕ್ಷೇತ್ರ ಪಾಠ ಶಾಲೆ ​ಕಾರ್ಯಕ್ರಮವನ್ನು ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಯತಿರಾಜ್ ಉದ್ಘಾಟಿಸಿದರು. ಬಾವಿಕೆರೆ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಸಂಸ್ಥೆ ಕ್ಷೇತ್ರ ಅಧೀಕ್ಷಕರಾದ ಡಾ.ಪವಿತ್ರ ಬಿ ಸಿ ಟ್ರಸ್ಟ್ ಯೋಜನಾಧಿಕಾರಿ ಕುಸುಮಾದರ್, ಕೃಷಿ ಮೇಲ್ವಿಚಾರಕ ಸಂತೋಷ ಮತ್ತಿತರರು ಇದ್ದರು.