ಹಗರಿಬೊಮ್ಮನಹಳ್ಳಿ: ಕೃಷಿಯಲ್ಲಿ ಮಣ್ಣಿನ ಸಂರಕ್ಷಣೆಗೆ ರೈತರು ಆದ್ಯತೆ ನೀಡಬೇಕು. ಸುಸ್ಥಿರ ಕೃಷಿಯ ಮೂಲಕ ಆರ್ಥಿಕ ಪ್ರಗತಿ ಸಾಧಿಸಬೇಕು ಎಂದು ಜಿಲ್ಲಾ ಉಪ ಕೃಷಿ ನಿರ್ದೇಶಕ ವಾಮದೇವ ಕೊಳ್ಳಿ ಸಲಹೆ ನೀಡಿದರು.
ತಾಲೂಕಿನ ಕನ್ನಿಹಳ್ಳಿ ಗ್ರಾಮದಲ್ಲಿ ತಾಲೂಕು ಕೃಷಿ ಇಲಾಖೆ ಬುಧವಾರ ಆಯೋಜಿಸಿದ್ದ ಆತ್ಮ ಯೋಜನೆಯಡಿ ಖೇತ್ ಬಚಾವೋ ಅಭಿಯಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರುಪ್ರತಿ ಮೂರು ವರ್ಷಕ್ಕೊಮ್ಮೆ ಕೃಷಿ ಜಮೀನುಗಳಿಗೆ ಸಮೀಪದ ಕೆರೆಯ ಮಣ್ಣನ್ನು ಹಾಕಿ ಉಪಚರಿಸಬೇಕು. ರಸಾಯನಿಕ ಗೊಬ್ಬರಗಳನ್ನು ನಿಧಾನವಾಗಿ ಕಡಿಮೆ ಮಾಡುತ್ತಾ ಹಸಿರೆಲೆ ಹಾಗೂ ಕೊಟ್ಟಿಗೆ ಗೊಬ್ಬರಗಳನ್ನು ಬಳಸುವತ್ತ ರೈತರು ಕೇಂದ್ರೀಕರಿಸಬೇಕು. ರೈತರು ಮಣ್ಣಿನ ಆರೋಗ್ಯ ನಿರ್ವಹಣೆಯನ್ನು ಜವಾಬ್ದಾರಿಯಿಂದ ನಿಭಾಯಿಸಬೇಕು ಎಂದು ತಿಳಿಸಿದರು.
ಕೃಷಿ ವಿಜ್ಞಾನಿ ಡಾ.ಸಿ.ಎಂ.ಕಾಲಿಬಾವಿ ಸಾವಯವ ಕೃಷಿ ಕುರಿತಂತೆ ಮಾತನಾಡಿ, ದೇಶದಲ್ಲಿ ಆಹಾರದ ಬೇಡಿಕೆ ಹೆಚ್ಚಾದಂತೆಲ್ಲಾ ಕೃಷಿಯಲ್ಲಿ ರಾಸಾಯನಿಕಗಳ ಬಳಕೆ ಹೆಚ್ಚಾಯಿತು. ರಾಸಾಯನಿಕ ಗೊಬ್ಬರಗಳ ಬಳಕೆ ಹೆಚ್ಚಾದಂತೆಲ್ಲಾ ಮಣ್ಣಿನ ಫಲವತ್ತತೆ ಕ್ಷೀಣಿಸಿತು. ಗೋವು ಆಧಾರಿತ ಕೃಷಿಯೇ ಇಲ್ಲದಂತಾಗಿ ಆರೋಗ್ಯಕ್ಕೆ ಪೂರಕವಾದ ಆಹಾರ ಸಿಗುತ್ತಿಲ್ಲ ಎಂದು ವಿಷಾದಿಸಿದರು.ಇನ್ನೋರ್ವ ಕೃಷಿ ವಿಜ್ಞಾನಿ ಡಾ.ಬದರಿಪ್ರಸಾದ್ ಮಾತನಾಡಿ, ಮುಂಗಾರಿನ ಬೆಳೆಗಳಿಗೆ ತಗಲುವ ಕೀಟ ಮತ್ತು ರೋಗಬಾಧೆಯ ಹತೋಟಿ ಕ್ರಮದ ಕುರಿತು ಕಾರ್ಯಕ್ರಮದಲ್ಲಿ ರೈತರಿಗೆ ಮಾಹಿತಿ ಒದಗಿಸಿದರು. ತಾಲೂಕು ಸಹಾಯಕ ಕೃಷಿ ನಿರ್ದೇಶಕ ಎಸ್.ಬಿ.ಪಾಟೀಲ್ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ತೋಟಗಾರಿಕೆ ಸಹಾಯಕ ನಿರ್ದೆಶಕ ವಿಜಯ್ ನಿಚ್ಚಾಪುರ್, ಕೃಷಿ ಅಧಿಕಾರಿಗಳಾದ ಅರ್ಚನಾ, ಎಂ.ನಾಗಾರ್ಜುನ್, ಶಿವಮೂರ್ತಿ ಸೇರಿದಂತೆ ಕನ್ನಿಹಳ್ಳಿ, ಕೋಗಳಿ, ಚಿಮ್ನಳ್ಳಿ, ನೆಲ್ಕುದ್ರಿ ಹಾಗೂ ಮಾಲವಿ ಗ್ರಾಮದ ಪ್ರಗತಿಪರ ರೈತರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಆತ್ಮ ಯೋಜನೆಯ ತಾಲೂಕು ತಾಂತ್ರಿಕ ವ್ವವಸ್ಥಾಪಕ ಭೋಜ್ಯಾನಾಯ್ಕ ಮತ್ತು ವಿ.ಕೆ.ಪ್ರವೀಣ್‌ಕುಮಾರ್ ಕಾರ್ಯಕ್ರಮವನ್ನು ನಿರ್ವಹಿಸಿದರು.
ಹಗರಿಬೊಮ್ಮನಹಳ್ಳಿ ತಾಲೂಕಿನ ಕನ್ನಿಹಳ್ಳಿ ಗ್ರಾಮದಲ್ಲಿ ಬುಧವಾರ ಕೃಷಿ ಇಲಾಖೆ ಆಯೋಜಿಸಿದ್ದ ಖೇತ್ ಬಚಾವೋ ಅಭಿಯಾನ ಕಾರ್ಯಕ್ರಮವನ್ನು ಉಪ ಕೃಷಿ ನಿರ್ದೇಶಕ ವಾಮದೇವ ಕೊಳ್ಳಿ ಉದ್ಘಾಟಿಸಿದರು.