ಮನುಷ್ಯರಷ್ಟೇ ಮಣ್ಣಿನ ಆರೋಗ್ಯವೂ ಮುಖ್ಯ: ಮೂಡಲಗಿರಿಯಪ್ಪ

| Published : May 13 2024, 12:08 AM IST

ಸಾರಾಂಶ

ದಾಬಸ್‌ಪೇಟೆ: ಪರಿಸರದಲ್ಲಿ ಮಣ್ಣಿನ ಆರೋಗ್ಯ ಹೆಚ್ಚಾದಂತೆಲ್ಲಾ ಮನುಷ್ಯನ ಆರೋಗ್ಯವೂ ಅತ್ಯುತ್ತಮವಾಗಿರುತ್ತದೆ. ರೈತರು ಕೃಷಿ ತ್ಯಾಜ್ಯಗಳನ್ನು ಒಂದು ಉತ್ಕೃಷ್ಟವಾದ ಗೊಬ್ಬರವನ್ನಾಗಿ ಪರಿವರ್ತಿಸಿ ಸಾವಯವ ಗೊಬ್ಬರವಾಗಿ ಬಳಸಬಹುದೆಂದು ಬೆಂಗಳೂರು ಕೃಷಿ ವಿಶ್ವದ್ಯಾಲಯ (ಜಿಕೆವಿಕೆ) ಖುಷ್ಕಿ ಬೇಸಾಯ ಪ್ರಾಯೋಜನೆ ಮುಖ್ಯ ವಿಜ್ಞಾನಿ ಡಾ.ಮೂಡಲಗಿರಿಯಪ್ಪ ಅಭಿಪ್ರಾಯಪಟ್ಟರು.

ದಾಬಸ್‌ಪೇಟೆ: ಪರಿಸರದಲ್ಲಿ ಮಣ್ಣಿನ ಆರೋಗ್ಯ ಹೆಚ್ಚಾದಂತೆಲ್ಲಾ ಮನುಷ್ಯನ ಆರೋಗ್ಯವೂ ಅತ್ಯುತ್ತಮವಾಗಿರುತ್ತದೆ. ರೈತರು ಕೃಷಿ ತ್ಯಾಜ್ಯಗಳನ್ನು ಒಂದು ಉತ್ಕೃಷ್ಟವಾದ ಗೊಬ್ಬರವನ್ನಾಗಿ ಪರಿವರ್ತಿಸಿ ಸಾವಯವ ಗೊಬ್ಬರವಾಗಿ ಬಳಸಬಹುದೆಂದು ಬೆಂಗಳೂರು ಕೃಷಿ ವಿಶ್ವದ್ಯಾಲಯ (ಜಿಕೆವಿಕೆ) ಖುಷ್ಕಿ ಬೇಸಾಯ ಪ್ರಾಯೋಜನೆ ಮುಖ್ಯ ವಿಜ್ಞಾನಿ ಡಾ.ಮೂಡಲಗಿರಿಯಪ್ಪ ಅಭಿಪ್ರಾಯಪಟ್ಟರು.

ಚಿಕ್ಕಪುಟ್ಟಯ್ಯನ ಪಾಳ್ಯದಲ್ಲಿ ಮಿಷನ್ ಲೈಪ್ ವಿಶ್ವ ಪರಿಸರ ದಿನಾಚರಣೆ 2024ರ ಅಂಗವಾಗಿ ರೈತರಿಗೆ ಮಣ್ಣಿನ ಅರಿವು ಮೂಡಿಸಲು ಜಿಕೆವಿಕೆ ವತಿಯಿಂದ ಹಮ್ಮಿಕೊಂಡಿದ್ದ ಭೂಮಿಯ ಪುನಃಶ್ಚೇತನಕ್ಕೆ ಕೃಷಿ ತ್ಯಾಜ್ಯಗಳ ನಿರ್ವಹಣೆ ಎಂಬ ವಿಷಯ ಕುರಿತು ತರಬೇತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಕೃಷಿ ಉತ್ಪಾದನೆಗಳಲ್ಲಿ ಗುಣಮಟ್ಟ ಮತ್ತು ಪೌಷ್ಟಿಕಾಂಶ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿರುವುದರಿಂದ ಮಾನವನ ಅನಾರೋಗ್ಯ ಹೆಚ್ಚಾಗುತ್ತಿದೆ. ಮಣ್ಣಿನ ಆರೋಗ್ಯ ಉತ್ತವಾಗಿದ್ದಲ್ಲಿ ಮಾತ್ರ ನಾವು ಬಳಕೆ ಮಾಡುವಂತೆ ಆಹಾರದಲ್ಲಿ ಪೌಷ್ಟಿಕಾಂಶ ಹೆಚ್ಚಿ ನಮ್ಮ ಆರೋಗ್ಯವೂ ಉತ್ತಮವಾಗಲು ಸಾಧ್ಯವಾಗುತ್ತದೆ. ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸುವ ಸಲುವಾಗಿ ಕೃಷಿ ತ್ಯಾಜ್ಯಗಳನ್ನು ಅನುಪಯುಕ್ತಗೊಳಿಸದೆ ಸಾವಯವ ಗೊಬ್ಬರವನ್ನಾಗಿ ಪರಿವರ್ತಿಸಿ ಮತ್ತಿತರ ಕೃಷಿ ಚಟುವಟಿಕೆಯಲ್ಲಿ ಬಳಕೆ ಮಾಡುವುದರಿಂದ ಭೂಮಿಯ ಫಲವತ್ತತೆ ಹೆಚ್ಚಾಗುತ್ತದೆ. ಇದರಿಂದಾಗಿ ಕೃಷಿ ಉತ್ಪಾದನೆಯಲ್ಲಿ ಏರಿಕೆಯನ್ನು ಕಂಡು ಕೃಷಿಕರು ಹೆಚ್ಚಿನ ಲಾಭದೊಂದಿಗೆ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು ಎಂದರು.

ಜಿಕೆವಿಕೆ ಮಣ್ಣು ಹಿರಿಯ ವಿಜ್ಞಾನಿ ಡಾ.ವಾಸಂತಿ ಮಾತನಾಡಿ, ಪ್ರಸ್ತುತ ಪರಿಸರದಲ್ಲಿ ಕಾಲಕಾಲಕ್ಕೆ ಸರಿಯಾಗಿ ಮಳೆಬಾರದ ಕಾರಣ ಮಣ್ಣಿನಲ್ಲಿ ತೇವಾಂಶ ಕಡಿಮೆಯಾಗುತ್ತಿದೆ. ಮಣ್ಣಿನಲ್ಲಿ ತೇವಾಂಶ ಹೆಚ್ಚಿಸುವಲ್ಲಿ ಸಾವಯವ ಗೊಬ್ಬರ ಹೆಚ್ಚು ಪರಿಣಾಮಕಾರಿಯಾಗಿದೆ. ಇತ್ತೀಚೆಗೆ ರಾಸುಗಳ ಸಂಖ್ಯೆ ಕಡಿಮೆಯಾಗುತ್ತಿರುವ ಕಾರಣಕ್ಕೆ ಸಾವಯವ ಗೊಬ್ಬರದ ಉತ್ಪಾದನೆ ಕುಂಠಿತಗೊಂಡಿದೆ. ಸಾವಯವ ಗೊಬ್ಬರ ತಯಾರಿಕೆಯಲ್ಲಿ ವೈಜ್ಞಾನಿಕ ಪದ್ಧತಿಯನ್ನು ಅನುಸರಿಸಿದ ಕಾರಣಕ್ಕೆ ಗುಣಮಟ್ಟದ ಸಾವಯವ ಗೊಬ್ಬರದ ಕೊರತೆ ಹೆಚ್ಚಾಗಿದೆ. ಆದ್ದರಿಂದ ಕೃಷಿಕರು ತಮ್ಮ ಕೃಷಿ ತ್ಯಾಜ್ಯಗಳನ್ನು ವೈಜ್ಞಾನಿಕ ಪದ್ಧತಿಯಿಂದ ಸಾವಯವ ಗೊಬ್ಬರವನ್ನಾಗಿ ಪರಿವರ್ತಿಸಿ ಬಳಕೆ ಮಾಡುವುದರಿಂದ ಉತ್ತಮ ಕೃಷಿ ಉತ್ಪನ್ನಗಳನ್ನು ಉತ್ಪಾದಿಸಬಹುದೆಂದು ಮಣ್ಣಿನ ಫಲವತ್ತತೆ ಹೆಚ್ಚಿಸಲು ಸಾವಯವ ಗೊಬ್ಬರದ ಪ್ರಾಮುಖ್ಯತೆ ಹಾಗೂ ಅದರಿಂದಾಗುವ ಉಪಯೋಗದ ಬಗ್ಗೆ ಅರಿವು ಮೂಡಿಸಿದರು.

ಜಿಕೆವಿಕೆ ಬೇಸಾಯ ಶಾಸ್ತ್ರದ ಹಿರಿಯ ವಿಜ್ಞಾನಿ ಡಾ.ರೂಪಶ್ರೀ ಮಾತನಾಡಿ, ರೈತರಿಗೆ ವೈಜ್ಞಾನಿಕವಾಗಿ ಕಾಂಪೋಸ್ಟ್ ತಯಾರಿಕೆ ಕ್ರಮದ ಬಗ್ಗೆ ಪ್ರಾತ್ಯಕ್ಷಿಕೆಯೊಂದಿಗೆ ವೈಜ್ಞಾನಿಕವಾಗಿ ತಯಾರಿಸುವ ವಿಧಾನದ ಬಗ್ಗೆ ರೈತರಿಗೆ ಮಾಹಿತಿ ನೀಡಿದರು.

ಜಿಕೆವಿಕೆ ಬೇಸಾಯಶಾಸ್ತ್ರದ ಹಿರಿಯ ವಿಜ್ಞಾನಿ ಡಾ.ಎಚ್.ಎಸ್. ಲತಾ ರೈತರಿಗೆ ವಿವಿಧ ಕೃಷಿ ತ್ಯಾಜ್ಯಗಳು ಹಾಗೂ ಅದರಿಂದ ಬೆಳೆಗಳಿಗೆ ದೊರೆಯುವ ಪೋಷಕಾಂಶಗಳ ಬಗ್ಗೆ ವಿವರಿಸಿದರು.

ತರಬೇತಿ ಕಾರ್ಯಾಗಾರದಲ್ಲಿ ಗ್ರಾಮದ ರೈತ ಮುಖಂಡರಾದ ಗಿರೀಶ್, ಕುಮಾರ್ ಸೇರಿದಂತೆ ೫೦ಕ್ಕೂಹೆಚ್ಚು ರೈತರು ಭಾಗವಹಿಸಿದ್ದರು.

ಪೋಟೋ 5 :

ಚಿಕ್ಕಪುಟ್ಟಯ್ಯನಪಾಳ್ಯದಲ್ಲಿ ಬೆಂಗಳೂರಿನ ಜಿಕೆವಿಕೆ ವತಿಯಿಂದ ಹಮ್ಮಿಕೊಂಡಿದ್ದ ರೈತರಿಗೆ ವೈಜ್ಞಾನಿಕವಾಗಿ ಕಾಂಪೋಸ್ಟ್ ತಯಾರಿಕೆ ಕ್ರಮದ ಬಗ್ಗೆ ಪ್ರಾತ್ಯಕ್ಷಿಕೆಯೊಂದಿಗೆ ವೈಜ್ಞಾನಿಕವಾಗಿ ತಯಾರಿಸುವ ವಿಧಾನದ ಬಗ್ಗೆ ರೈತರಿಗೆ ಮಾಹಿತಿ ನೀಡಲಾಯಿತು.