ಸಾರಾಂಶ
ರಾಣಿಬೆನ್ನೂರು: ಮಣ್ಣು ನಿಸರ್ಗ ಕೊಟ್ಟ ಅಮೂಲ್ಯ ಸಂಪತ್ತಾಗಿದ್ದು, ಕೃಷಿಯಲ್ಲಿ ಉತ್ತಮ ಇಳುವರಿ ಪಡೆದು ಹೆಚ್ಚಿನ ಲಾಭ ಪಡೆಯಲು ಮಣ್ಣಿನ ಫಲವತ್ತತೆಯನ್ನು ನಿರಂತರವಾಗಿ ಕಾಯ್ದುಕೊಳ್ಳಬೇಕಾಗುತ್ತದೆ ಎಂದು ಸಾವಯವ ಕೃಷಿಕ ಹಾಗೂ ಜಲತಜ್ಞ ಚನ್ನಬಸಪ್ಪ ಕೊಂಬಳಿ ಹೇಳಿದರು. ನಗರದ ಆರ್‌ಟಿಇಎಸ್ ಪದವಿ ಮಹಾವಿದ್ಯಾಲಯದಲ್ಲಿ ಗುರುವಾರ ವಿಶ್ವ ಮಣ್ಣು ದಿನದ ಅಂಗವಾಗಿ ಏರ್ಪಡಿಸಲಾಗಿದ್ದ ಸಮಾರಂಭದಲ್ಲಿ ಅವರು ಮಾತನಾಡಿದರು. ಮಣ್ಣಿಗೆ ಜೀವ ಹಾಗೂ ಚೈತನ್ಯ ಶಕ್ತಿಯಿದೆ. ಅದನ್ನು ತಿಳಿಯಬೇಕಾದರೆ ಪ್ರಕೃತಿಯೊಂದಿಗೆ ಬೆರೆಯಬೇಕು, ಒಂದು ಇಂಚು ಮಣ್ಣು ನಿರ್ಮಾಣವಾಗಲು ಸಾವಿರಾರು ವರ್ಷಗಳು ಬೇಕಾಗುತ್ತದೆ. ಅದು ಹಾಲಿನ ಕೆನೆಯಂತೆ ಮಹತ್ವಪೂರ್ಣವಾಗಿದೆ. ಅದು ನಾಶವಾದರೆ ಇಡೀ ಕೃಷಿ ಚಟುವಟಿಕೆಗಳು ನಿಂತು ಭೂಮಿಯು ಬರಡಾಗುವ ಆತಂಕ ಎದುರಿಸಬೇಕಾಗುತ್ತದೆ. ಮಣ್ಣಿನ ಸವಕಳಿ ನಿಲ್ಲಿಸಲು ಬದುಗಳನ್ನು ನಿರ್ಮಿಸಬೇಕು ಹಾಗೂ ಗಿಡ ಮರಗಳನ್ನು ಬೆಳೆಸಬೇಕು ಎಂದರು. ಕಾರ್ಯಕ್ರಮ ಉದ್ಘಾಟಿಸಿದ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಸುಭಾಸ ಸಾವಕಾರ ಮಾತನಾಡಿ, ಕೃಷಿಯ ಬೆಳವಣಿಗೆಗೆ ಮಣ್ಣಿನ ಮಹತ್ವವನ್ನು ಕುರಿತು ಸರಿಯಾದ ಮಾಹಿತಿಯನ್ನು ಪಡೆದು ತಮ್ಮ ನೆರೆಹೊರೆಯವರಿಗೆ ನೀಡಬೇಕು ಎಂದರು. ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಎಸ್.ಕೆ. ಕೋಟಿ, ಭೂಗೋಳಶಾಸ್ತ್ರ, ವಿಭಾಗದ ಮುಖ್ಯಸ್ಥ ಡಿ.ಎಂ.ಇಂಗಳಗಿ, ಐಕ್ಯೂಎಸಿ ಸಂಯೋಜಕ ಡಾ. ಮಧುಕುಮಾರ ಆರ್. ವೇದಿಕೆಯಲ್ಲಿದ್ದರು. ಪ್ರಾ. ಸಿ.ಎ. ಹರಿಹರ ಅಧ್ಯಕ್ಷತೆ ವಹಿಸಿದ್ದರು. ಬಿ.ಕೆ. ಕಾಟೇನಹಳ್ಳಿ, ಡಾ. ರಾಮರೆಡ್ಡಿ, ಡಾ.ಪಿ.ಬಿ. ಕೊಪ್ಪದ, ಡಿ.ಟಿ.ಲಮಾಣಿ, ಸಿ.ಎನ್. ಪೂಜಾರ, ಶಿವಕುಮಾರ ಬೆಣ್ಣಿ, ಉಮೇಶ ವಡ್ಡರ, ಪೂಜಾ ಹಾಗೂ ಶಿಕ್ಷಕೇತರ ಸಿಬ್ಬಂದಿ ಉಪಸ್ಥಿತರಿದ್ದರು.