ಸಾರಾಂಶ
ಡಿವಿ ರಮೇಶ್ ಕುಮಾರ್
ಕನ್ನಡಪ್ರಭ ವಾರ್ತೆ ಚೇಳೂರುಗಡಿಭಾಗದ ತಾಲೂಕಿನಿಂದ ಏನಿಗದಲೆ ಗ್ರಾಮ ಪಂಚಾಯತಿಯು ಗಾಂಧಿ ಗ್ರಾಮ ಪುರಸ್ಕಾರ ಪ್ರಶಸ್ತಿಗೆ ಆಯ್ಕೆಯಾಗಿರುವುದು ಸಂತಸದ ವಿಷಯ. ಆದರೆ, ಕೆಲವು ಪತ್ರಿಕಾ ವರದಿಗಾರರು ಸಣ್ಣ ಸಣ್ಣ ಸಮಸ್ಯೆಯನ್ನು ದೊಡ್ಡ ಸಮಸ್ಯೆ ಎಂದು ತೋರಿಸಿ ಪ್ರಶಸ್ತಿಗೆ ಮಣ್ಣೆರಚುವ ಕೆಲಸ ಮಾಡುತ್ತಿರುವುದು ಖಂಡನೀಯ ಎಂದು ಗ್ರಾಪಂ ಅಧ್ಯಕ್ಷೆ ಶಿವಮ್ಮ ಆರೋಪಿಸಿದರು.
ನೂತನ ಚೇಳೂರು ತಾಲೂಕಿನ ಏನಿಗದಲೆ ಗ್ರಾಪಂನಲ್ಲಿ ಶುಕ್ರವಾರ ಪತ್ರಿಕಾ ಹೇಳಿಕೆ ನೀಡಿದ ಅವರು, 2024ರ ಈ ವರ್ಷ ನಮ್ಮ ಗಡಿ ಭಾಗದ ತಾಲೂಕಿನ ಏನಿಗದಲೆ ಗ್ರಾಮ ಪಂಚಾಯತಿ ಗಾಂಧಿ ಗ್ರಾಮ ಪುರಸ್ಕಾರಕ್ಕೆ ಆಯ್ಕೆ ಆಗಿದ್ದು, ಸಂತಸದ ವಿಷಯ, ಆದರೆ ಕೆಲವು ಪತ್ರಿಕಾ ವರದಿಗಾರರು ಅನ್ಯ ಉದ್ದೇಶಗಳಿಂದ ಕೆಲವು ಸಣ್ಣ ಪುಟ್ಟ ವಿಷಯಗಳನ್ನೇ ಮುಂದಿಟ್ಟುಕೊಂಡು ಇಡೀ ವ್ಯವಸ್ಥೆಯನ್ನೇ ದೂಷಿಸುವ ಕೆಲಸ ಮಾಡುತ್ತಿರುವುದು ಪತ್ರಿಕಾ ಧರ್ಮವಲ್ಲ ಎಂದರು.ಯಾವುದೆ ಗ್ರಾಮ ಪಂಚಾಯತಿಯು ಗಾಂಧಿ ಗ್ರಾಮ ಪ್ರಶಸ್ತಿಗೆ ಆಯ್ಕೆಯಾಗುವುದು ಎಂದರೆ ಅಲ್ಲಿನ ಸ್ಥಳಿಯ ಮೂಲಭೂತ ಸೌಲಭ್ಯಗಳಿಗೆ ಆದ್ಯತೆ ನೀಡಲಾಗಿದೆ ಎಂದರ್ಥ. ಅಭಿವೃದ್ಧಿ ಪಥದಲ್ಲಿ ಸಾಗುತ್ತಿದ್ದರೆ ಮಾತ್ರ ಅದನ್ನು ಪರಿಗಣಿಸಿ ಆಯ್ಕೆ ಮಾಡಲಾಗುವುದು ಹೊರತು, ಯಾವುದೇ ಆಸೆ ಆಮಿಷಗಳನ್ನು ನೋಡಿ ಆಯ್ಕೆ ಮಾಡಿಲ್ಲ ಎಂದು ತಿಳಿಸಿದರು.ಗ್ರಾಮಗಳಲ್ಲಿನ ಚರಂಡಿ, ವಿದ್ಯುತ್, ಸ್ವಚ್ಛತೆಯ ದೈನಂದಿನ ಸಮಸ್ಯೆಗಳನ್ನು ಕೆಲವೊಂದು ಪತ್ರಿಕೆಯಲ್ಲಿನ ವರದಿಗಾರರು ಬೃಹತ್ ಸಮಸ್ಯೆಗಳೆಂದು ತೋರಿಸಿ ಸರ್ಕಾರದ ಆಯ್ಕೆಯ ಪ್ರಕ್ರಿಯೆ ಹಾಗೂ ಗ್ರಾಪಂಗೆ ಕಪ್ಪು ಚುಕ್ಕೆ ತರುವಂಥ ಕೆಲಸ ಮಾಡುತ್ತಿದ್ದಾರೆ. ಇದರಿಂದ ಕೆಲವು ಪತ್ರಿಕಾ ವರದಿಗಾರರು ಸಮಾಜದಲ್ಲಿ ನಿರಂತರ ಗಲಭೆ, ಅಶಾಂತಿ ಸೃಷ್ಟಿಸುವುದು ಹಾಗೂ ಜನರಲ್ಲಿ ಗೊಂದಲ ಮೂಡಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
--------ಸರ್ಕಾರವು ಏನಿಗದಲೆ ಗ್ರಾಮ ಪಂಚಾಯತಿಯನ್ನು ಗಾಂಧಿ ಗ್ರಾಮ ಪ್ರಶಸ್ತಿಗೆ ಆಯ್ಕೆ ಮಾಡಿರುವುದು ಹೆಮ್ಮೆಯ ಸಂಗತಿ, ಯಾವುದೇ ಒಂದು ಪ್ರಶಸ್ತಿ ಪ್ರದಾನ ಮಾಡುವುದು ಎಂದರೆ ಬೆನ್ನುತಟ್ಟಿ ಇನ್ನಷ್ಟು ಪ್ರೋತ್ಸಾಹಿಸುವುದು ಎಂದರ್ಥ. ಆದರೆ, ಕೆಲವು ಪತ್ರಿಕೆಗಳು ಸಣ್ಣ ಚರಂಡಿ ಸಮಸ್ಯೆಯನ್ನೇ ದೊಡ್ಡದಾಗಿ ತೋರಿಸಿ, ಪ್ರಶಸ್ತಿ ಬಂದು ಸಂತಸ ಪಡುವ ಬೆನ್ನಲ್ಲೇ ಹಿಯಾಳಿಸುವುದು ತಾತ್ವಿಕ ಗುಣವಲ್ಲ.
- ಚೌಡರೆಡ್ಡಿ.ಚಿಲಕಲನೇರ್ಪು ಹೋಬಳಿಯ ವಕ್ಕಲಿಗರ ಸಂಘದ ಅಧ್ಯಕ್ಷರು.