ಅಧ್ಯಾತ್ಮಿಕ ಚಿಂತನೆಯಿಂದ ನೆಮ್ಮದಿ

| Published : Feb 08 2024, 01:33 AM IST

ಸಾರಾಂಶ

ಬದುಕಿನ ಅನೇಕ ಏರಿಳಿತಗಳ ನಡುವೆಯೂ ಆಧ್ಯಾತ್ಮ, ಸಂಸ್ಕೃತಿ ಮರೆಯಬಾರದು. ಆಧ್ಯಾತ್ಮಿಕ ಚಿಂತನೆಯಲ್ಲಿ ನೆಮ್ಮದಿ ಅಡಗಿದೆ. ಅದರಿಂದ ವಿಮುಖವಾಗುವುದು ದುಃಖಕ್ಕೆ ಕಾರಣ ಎಂದು ಎಡತೊರೆಯ ಶ್ರೀ ಯೋಗಾನಂದೇಶ್ವರ ಸರಸ್ವತಿ ಮಠದ ಶಂಕರ ಭಾರತಿ ಶ್ರೀಗಳು ಹೇಳಿದರು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಬದುಕಿನ ಅನೇಕ ಏರಿಳಿತಗಳ ನಡುವೆಯೂ ಆಧ್ಯಾತ್ಮ, ಸಂಸ್ಕೃತಿ ಮರೆಯಬಾರದು. ಆಧ್ಯಾತ್ಮಿಕ ಚಿಂತನೆಯಲ್ಲಿ ನೆಮ್ಮದಿ ಅಡಗಿದೆ. ಅದರಿಂದ ವಿಮುಖವಾಗುವುದು ದುಃಖಕ್ಕೆ ಕಾರಣ ಎಂದು ಎಡತೊರೆಯ ಶ್ರೀ ಯೋಗಾನಂದೇಶ್ವರ ಸರಸ್ವತಿ ಮಠದ ಶಂಕರ ಭಾರತಿ ಶ್ರೀಗಳು ಹೇಳಿದರು.

ದಿಗ್ವಿಜಯ ಯಾತ್ರೆ ಅಂಗವಾಗಿ ನಗರದ ಸೀತಾರಾಮ ಮಂಗಲ ಭವನದಲ್ಲಿ ಚಂದ್ರಮೌಳೇಶ್ವರ ದೇವರಿಗೆ ಮಹಾಪೂಜೆ ಸಲ್ಲಿಸಿದ ಬಳಿಕ ಅನುಗ್ರಹ ಸಂದೇಶ ನೀಡಿದ ಅವರು, ಇಂದು ನಮ್ಮತನ ಬಿಟ್ಟು ದೂರಾಗುತ್ತಿರುವ ಕಾರಣಕ್ಕೆ ಮನಸ್ಸು ಸಂತೋಷದಿಂದ ಇಲ್ಲ. ಬದುಕು ನೆಮ್ಮದಿಯಾಗಿಲ್ಲ. ಭಾರತದ ಶಕ್ತಿಯೇ ಆಧ್ಯಾತ್ಮ. ಅದನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದರು.

ನಾಡಿಗೆ ಹಾಗೂ ಭೂ ಮಂಡಲಕ್ಕೆ ಮನುಕುಲದ ಏಳಿಗೆಗಾಗಿ ಶಂಕರ ಭಗವತ್ಪಾದರು ಶಕ್ತಿಯುತ ಬೀಜಾಕ್ಷರಗಳ ಮೂಲಕ ಮಂತ್ರ, ಸ್ತೋತ್ರ ರಚನೆ ಮಾಡಿದ್ದಾರೆ. ಚಿಕ್ಕ ವಯಸ್ಸಿನಲ್ಲಿ ಮಕ್ಕಳಿಗೆ ಅವುಗಳ ಪಾಠ, ಬೋಧನೆ ಮಾಡಬೇಕು. ನಿತ್ಯವು ಅವುಗಳ ಪಠಣೆ ಮಾಡುವುದರಿಂದ ಶಾಂತಿ, ನೆಮ್ಮದಿ, ಅಂತರ ಶಕ್ತಿ ಹೆಚ್ಚುತ್ತದೆ. ಎಲ್ಲ ವೇದಗಳಲ್ಲಿ ಶಂಕರ ಭಗವತ್ಪಾದರು ನೀಡಿದ ಮಂತ್ರ, ಸ್ತೋತ್ರಗಳು ಮನುಕುಲದ ಏಳಿಗೆ ಅಡಗಿದೆ ಹಾಗೂ ಮಂಗಳವಾಗುತ್ತದೆ ಎಂದರು.

ದಿಗ್ವಿಜಯ ಯಾತ್ರೆ ಹಿನ್ನೆಲೆಯಲ್ಲಿ ಎರಡು ದಿನಗಳ ಕಾಲ ನಗರಕ್ಕೆ ಆಗಮಿಸಿದ್ದ ಶ್ರೀಗಳಿಗೆ ಗುರುವಾರ ಸಂಜೆ ಪೂರ್ಣಕುಂಭ ಸ್ವಾಗತ, ವಾದ್ಯ, ವೇದಘೋಷಗಳ ಪಠಣಗಳೊಂದಿಗೆ ಸ್ವಾಗತಿಸಲಾಯಿತು. ಶುಕ್ರವಾರ ಆರಾಧ್ಯ ದೇವರು ಚಂದ್ರಮೌಳೇಶ್ವರ ಸಂಸ್ಥಾನ ಪೂಜೆ ನೆರವೇರಿಸಿದರು. ಭಕ್ತರಿಗೆ ಮಂತ್ರಾಕ್ಷತೆ ನೀಡಿ ಆಶೀರ್ವದಿಸಿದರು.

ಪಂಡಿತರಾದ ಶ್ರೀನಿವಾಸಚಾರ್ಯ ಜೋಶಿ, ಆನಂದ ಪುರೋಹಿತ, ಬಿಂದು ಮಾಧವಾಚಾರ್ಯ ನಾಗಸಂಪಗಿ, ಶಿವರಾಮ ಹೆಗಡೆ, ರಮೇಶ ಜೋಶಿ, ವಾಮನರಾವ ಕವಟೇಕರ, ಕಿರಣ ಬಾಗಲಕೋಟೆ, ಟಿ.ಎಸ್. ಕುಲಕರ್ಣಿ, ಡಾ.ಗಿರೀಶ ಮಾಸೂರಕರ, ಪ್ರಸನ್ನ ಭೋಕರೆ, ಆರ್.ವಿ. ದೇಸಾಯಿ, ಶ್ರೀಕಾಂತ ದೇಸಾಯಿ, ಡಾ.ಆನಂದ ಕುಲಕರ್ಣಿ, ಸಂಜೀವ ಪಾಟೀಲ ಸೇರಿದಂತೆ ಶಂಕರ ಸ್ವಾಧ್ಯಾಯ ಮಂಡಳಿ, ಶಾರದ ಶಂಕರ ಭಜನಾ ಮಂಡಳಿ, ಶುಕ್ಲ ಯಜುರ್ವೇದಿ ಸಂಘದ ಪದಾಧಿಕಾರಿಗಳು ಇದ್ದರು.

ಬ್ರಾಹ್ಮಣದ ತರುಣ ಸಂಘದ ಪದಾಧಿಕಾರಿಗಳಾದ ಡಿ.ಬಿ. ಕುಲಕರ್ಣಿ, ವಿನಾಯಕ ದೇಸಾಯಿ, ಅನಂತ ಮಳಗಿ, ಶಶಿ ದೇಶಪಾಂಡೆ ಶ್ರೀಗಳಿಗೆ ಗೌರವ ಪೂರ್ವಕ ಪುಷ್ಪ ಸಲ್ಲಿಸಿದರು.

---

ಫೋಟೋ 3ಬಿಕೆಟಿ7