ಧಾರವಾಡ:
ಸೈನಿಕರು ಯುದ್ಧ ಮಾಡುವುದಕ್ಕೆ ಅಲ್ಲ. ದೇಶದ ಮೇಲೆ ಶತ್ರುಗಳು ದಾಳಿ ಮಾಡದಂತೆ ಕಟ್ಟೆಚರ ವಹಿಸಿ ದೇಶ ರಕ್ಷಣೆ ಮಾಡಲು ಎಂದು ವಿಶ್ರಾಂತ ವಾಯು ಸೇನಾಧಿಕಾರಿ ಏರ್ ಕಮೋಡರ್ ಸಿ.ಎಸ್. ಹವಾಲ್ದಾರ್ ಹೇಳಿದರು.ಕರ್ನಾಟಕ ವಿದ್ಯಾವರ್ಧಕ ಸಂಘವು ಏರ್ಪಡಿಸಿದ್ದ ದಿ. ಎಂ.ಐ. ಸವದತ್ತಿ ದತ್ತಿ ಹಾಗೂ ರಾಷ್ಟ್ರೀಯ ವಿಜ್ಞಾನ ದಿನಾಚರಣೆಯಲ್ಲಿ ದೇಶ ರಕ್ಷಣೆಗೆ ಎಂ.ಐ. ಸವದತ್ತಿ ಕೊಡುಗೆ ವಿಷಯ ಕುರಿತು ಮಾತನಾಡಿದರು.
ಭಾರತವು ಸ್ವಾತಂತ್ರ್ಯಾ ನಂತರ ದೇಶದ ರಕ್ಷಣೆಗೆ ಒತ್ತು ನೀಡಿತು. ಹೀಗಾಗಿ ಇಂದು ಅತ್ಯಾಧುನಿಕ ಯುದ್ಧೋಪಕರಣಗಳ ತಂತ್ರಜ್ಞಾನ ಹೊಂದಿದ್ದು, ಭಾರತದ ರಕ್ಷಣಾ ಪಡೆ ಬಲಾಢ್ಯವಾಗಿದೆ. ಇಂದು ಎಂತಹ ಗಂಭೀರ ಸ್ವರೂಪದ ಯುದ್ಧಗಳನ್ನಾದರೂ ಎದುರಿಸುವ ಸಾಮರ್ಥ್ಯ ಭಾರತ ಹೊಂದಿದೆ ಎಂದರು.ಇತ್ತೀಚೆಗೆ ‘ಆಪರೇಶನ್ ಸಿಂದೂರ’ ಮೂಲಕ ಸ್ಮಾರ್ಟ್ ಬಾಂಬ್ ಲೇಸರ ತಂತ್ರಜ್ಞಾನದ ಮೂಲಕ ಪಾಕಿಸ್ತಾನದ ಉಗ್ರರ ನೆಲೆ ಧ್ವಂಸಗೊಳಿಸಿ ವಿಜಯ ಸಾಧಿಸಿದ್ದನ್ನು ಸ್ಮರಿಸಬಹುದು. ಇಂದು ಜಗತ್ತೆ ಅಂಗೈಯಲ್ಲಿದ್ದು ವಿಜ್ಞಾನ, ತಂತ್ರಜ್ಞಾನ ಜನಹಿತಕ್ಕೆ ಬಳಕೆಯಾಗಬೇಕೇ ವಿನಹ, ಮಾನವ ಕುಲದ ವಿನಾಶಕ್ಕಲ್ಲ. ಇಂದು ವಿಶ್ವಶಾಂತಿ ಕಾಪಾಡುವುದು ಎಲ್ಲ ದೇಶಗಳ ಕರ್ತವ್ಯ ಹೊರತು ಯುದ್ಧ ಸಿದ್ಧತೆ ಅಲ್ಲ ಎಂದು ಹೇಳಿದರು.
ಯುದ್ಧಗಳಿಂದ ಜನಜೀವನ ಅಸ್ತವ್ಯಸ್ಥವಾಗಿ, ಸಂಪನ್ಮೂಲಗಳು ನಾಶವಾಗಿ ದೇಶ ದುರ್ಬಲವಾಗುತ್ತದೆ. ಡಾ. ಎಂ.ಐ. ಸವದತ್ತಿ ಒಬ್ಬ ಶ್ರೇಷ್ಠ ವಿಜ್ಞಾನಿಗಳಾಗಿ ವೈಜ್ಞಾನಿಕ, ತಾಂತ್ರಿಕ ಅನ್ವೇಷಣೆಗೆ ಮಹತ್ವದ ಮಾರ್ಗದರ್ಶನ ಮಾಡಿದ್ದರು. ವಿಜ್ಞಾನಿಗಳಾದ ಡಾ. ವಿ.ಎಸ್. ಅರುಣಾಚಲಂ, ಎ.ಪಿ.ಜೆ. ಅಬ್ದುಲ್ ಕಲಾಂ, ಸತೀಶ ಧವನ್, ವಿಕ್ರಂ ಸಾರಾಬಾಯಿ ಅವರಂಥವರ ಜತೆ ಒಳ್ಳೆಯ ಸಂಬಂಧ ಹೊಂದಿ ತಂತ್ರಜ್ಞಾನಕ್ಕೆ ಮಹತ್ವದ ಮಾರ್ಗದರ್ಶನ ನೀಡಿದ್ದಾರೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಕವಿವಿ ಸಂದರ್ಶಕ ಪ್ರಾಧ್ಯಾಪಕ ಡಾ. ಜಗದೀಶ ಟೋನಣ್ಣವರ ಮಾತನಾಡಿದರು. ಸುಮಿತ್ರಾ ಎಂ. ಸವದತ್ತಿ, ಪುಷ್ಪಾ ಸವದತ್ತಿ ಇದ್ದರು. ವೀರಣ್ಣ ಒಡ್ಡೀನ ಸ್ವಾಗತಿಸಿದರು. ಡಾ. ಮಹೇಶ ಹೊರಕೇರಿ ಪ್ರಾಸ್ತಾವಿಕ ಮಾತನಾಡಿದರು. ಶಂಕರ ಕುಂಬಿ ನಿರ್ವಹಿಸಿದರು.