ಭಾರತವು ಜಗತ್ತಿನ ಬಲಿಷ್ಟ ರಾಷ್ಟ್ರವಾಗಿ ರೂಪುಗೊಳ್ಳುವಲ್ಲಿ ಯೋಧರ ಪರಿಶ್ರಮವಿದೆ.ಯುವ ಸಮೂಹ ದೇಶ, ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳಬೇಕು
ಕಾರಟಗಿ: ಭಾರತೀಯ ಸೇನೆಯಲ್ಲಿ ೨೪ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿ ಸ್ವಗಾಮಕ್ಕೆ ಆಗಮಿಸಿದ ವೀರಯೋಧ ಪರ್ವತಾರೋಹಿ ವೀರೇಶ ಪಂಪನಗೌಡ ಗಾದಿಗನೂರಗೆ ಪಟ್ಟಣದಲ್ಲಿ ಮಂಗಳವಾರ ನಾಗರೀಕ ಸನ್ಮಾನ ಮಾಡಿ ಭವ್ಯವಾಗಿ ಸ್ವಾಗತಿಸಲಾಯಿತು.
ಉತ್ತರಾಖಂಡದಲ್ಲಿ ಭಾರತೀಯ ಸೇನೆ ನೆಲದಲ್ಲಿ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿ ಜ.೩೧ರಂದು ನಿವೃತ್ತಿ ಹೊಂದಿದ ವೀರೇಶ ಜಮ್ಮುಕಾಶ್ಮೀರದಿಂದ ಬೆಂಗಳೂರು ಮೂಲಕ ಪಟ್ಟಣಕ್ಕೆ ಮಂಗಳವಾರ ಆಗಮಿಸಿ ತಮ್ಮ ತವರು ಮೈಲಾಪೂರಕ್ಕೆ ತೆರಳುವ ಮಾರ್ಗ ಮಧ್ಯ ಇಲ್ಲಿನ ಪುರಸಭೆ,ಕಂದಾಯ ಮತ್ತು ಪೊಲೀಸ್ ಇಲಾಖೆ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಸೇರಿ ಯೋಧ ವೀರೇಶ ಗೆ ನೆರೆದಿದ್ದ ಮಹಿಳೆಯರು ಸಿಂಧೂರವಿಟ್ಟು ಕಳಸ ಬೆಳಗಿ ಪೂರ್ಣಕುಂಭದೊಂದಿಗೆ ಅದ್ಧೂರಿಯಾಗಿ ಸ್ವಾಗತಿಸಿದರು.ಪುರಸಭೆ ಮುಖ್ಯಾಧಿಕಾರಿ ಡಾ. ಸಾಬಣ್ಣ ಕಟ್ಟೇಕಾರ ಮಾತನಾಡಿ, ಭಾರತವು ಜಗತ್ತಿನ ಬಲಿಷ್ಟ ರಾಷ್ಟ್ರವಾಗಿ ರೂಪುಗೊಳ್ಳುವಲ್ಲಿ ಯೋಧರ ಪರಿಶ್ರಮವಿದೆ.ಯುವ ಸಮೂಹ ದೇಶ, ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದರು.
ಕಂದಾಯ ನಿರೀಕ್ಷಕಿ ಸಂಗಮ್ಮ ಹಿರೇಮಠ ಮಾತನಾಡಿ, ನಾವೆಲ್ಲ ದೇಶದೊಳಗೆ ನೆಮ್ಮದಿಯಿಂದ ಜೀವನ ನಡೆಸಲು ಯೋಧರೆ ಕಾರಣ. ಮನೆ ಬಂಧು-ಬಳಗ ಮತ್ತು ಸಂಭ್ರಮ ತೊರೆದು ಗಡಿಯಲ್ಲಿ ದೇಶ ಕಾಯುವ ಯೋಧರ ತ್ಯಾಗ ದೇಶಪ್ರೇಮ ಸದಾ ಸ್ಮರಣೀಯ. ಪ್ರತಿ ಕ್ಷಣವು ಆತಂಕ, ಶತ್ರುವಿನ ಕುತಂತ್ರ ಎದುರು ನೋಡುತ್ತಾ ದೇಶ ಕಾಯುವ ಕೆಲಸದಲ್ಲಿ ತೊಡಗಿರುವ ಕಾರಣಕ್ಕೆ ರಾಷ್ಟ್ರ ಸುರಕ್ಷಿತವಾಗಿದೆ. ತಾಲೂಕಿನ ಯೋಧ ಇಂದು ತವರೂರಿಗೆ ಬಂದ ಹಿನ್ನೆಲೆಯಲ್ಲಿ ಪಟ್ಟಣದ ಜನರಲ್ಲಿ ಎಷ್ಟೊಂದು ಸಂಭ್ರಮ ಮನೆ ಮಾಡಿದೆ. ಈ ಸಂಭ್ರಮ,ಅಭಿಮಾನ ದೇಶಕಾಯುವ ಯೋಧರ, ದೇಶದ ಮೇಲೆ ಸದಾ ಇರಲಿ ಎಂದರು.ನಿವೃತ್ತ ಯೋಧ ವಿರೇಶ ಪಂಪನಗೌಡ ಗಾದಿಗನೂರ ಮಾತನಾಡಿ. ಭಾರತಿಯ ಸೇನೆಯಲ್ಲಿ ೨೪ ವರ್ಷಗಳ ಕಾಲ ಸೇವೆ ಸಲ್ಲಿಸಿ ೨೦೨೬ರ ಜ.೩೧ ರಂದು ಸೇವೆಯಿಂದ ನಿವೃತ್ತಿ ಹೊಂದಿದ್ದೇನೆ. ಸತತ ೨೪ ವರ್ಷಗಳ ಕಾಲ ಸೇವೆ ಸಲ್ಲಿಸಲು ಅವಕಾಶ ಸಿಕ್ಕಿದ್ದು ಸುವರ್ಣಾವಕಾಶ. ಅದು ನನಗೆ ಆತ್ಮ ಸಂತೃಪ್ತಿ ತಂದಿದೆ ಎಂದರು.
ಮೆರವಣಿಗೆ: ಯೋಧ ವೀರೇಶ ಗಾದಿಗನೂರ ಇವರನ್ನು ತೆರೆದ ವಾಹನದಲ್ಲಿ ಮುಖ್ಯ ರಸ್ತೆಯ ಮಾರ್ಗವಾಗಿ ನವಲಿ ರಸ್ತೆಯ ಮೂಲಕ ವಿವಿಧ ವಾದ್ಯ ಮೇಳಗಳೊಂದಿಗೆ, ಪಠಾಕಿ ಸಿಡಿಸಿ ಕೈಯಲ್ಲಿ ತ್ರಿವರ್ಣ ಧ್ವಜ ಹಿಡಿದು ಜಯ ಘೋಷಗಳ ಮೂಲಕ ಸ್ವಗ್ರಾಮ ಮೈಲಾಪೂರಕ್ಕೆ ಬೈಕ್ ರ‍್ಯಾಲಿಯೊಂದಿಗೆ ಭವ್ಯ ಮೆರವಣಿಗೆ ಮೂಲಕ ಬೀಳ್ಕೊಟ್ಟರು.ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷ ಮಂಜುನಾಥ ಮೇಗೂರ, ಸದಸ್ಯ ಕೆ. ಸಂಗನಗೌಡ, ದೊಡ್ಡಬಸವರಾಜ ಬೂದಿ, ವೀರೇಶ ಮುದುಗಲ್, ರುದ್ರಗೌಡ ನಂದಿಹಳ್ಳಿ, ಜಿ. ಯಂಕನಗೌಡ, ಶಿವರಾಜ, ಬಸವರಾಜ ಶೆಟ್ಟರ್, ಗ್ರಾಮಲೆಕ್ಕಾಧಿಕಾರಿ ದೊಡ್ಡನಗೌಡ, ಪುರಸಭೆ ಅಧಿಕಾರಿ ಸೀಮಾ ರಾಣಿ, ಮಲ್ಲಮ್ಮ, ಅಕ್ಷತಾ, ನಾಗರಾಜ ತಳವಾರ, ಎಚ್.ಪರಮೇಶ್ವರ ಹಾಗೂ ಸಿಬ್ಬಂದಿ ವರ್ಗ ಸೇರಿದಂತೆ ಸಾರ್ವಜನಿಕರು ಇದ್ದರು.