ಸಾರಾಂಶ
ಕನ್ನಡಪ್ರಭ ವಾರ್ತೆ ಕಾರವಾರ
ಉತ್ತರ ಕನ್ನಡ ಜಿಲ್ಲೆಯ ಜನತೆಗೆ ಹಲವು ಸಮಸ್ಯೆಗಳು ಬಿಟ್ಟು ಬಿಡದೆ ಕಾಡುತ್ತಿವೆ. ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ಅರಣ್ಯಭೂಮಿ ಅತಿಕ್ರಮಣದಾರರ ಸಮಸ್ಯೆ.....ಇವುಗಳು ಪರಿಹಾರ ಕಂಡೀತು ಎಂದು ಪ್ರತಿ ಬಾರಿ ವಿಧಾನಮಂಡಳದ ಅಧಿವೇಶನ ಬಂದಾಗಲೂ ಜನತೆ ಚಾತಕಪಕ್ಷಿಯಂತೆ ಕಾಯುತ್ತಾರೆ. ಹೌದು, ಈಗ ಬೆಳಗಾವಿಯ ಅಧಿವೇಶನ ಆರಂಭವಾಗುತ್ತಿದೆ. ಜಿಲ್ಲೆಯ ಜನತೆಯ ಚಿತ್ತ ಬೆಳಗಾವಿ ಅಧಿವೇಶನದತ್ತ ನೆಟ್ಟಿದೆ.ಅರಣ್ಯ ಅತಿಕ್ರಮಣದಾರರು ತಾವು ವಾಸ ಇರುವ ಭೂಮಿಯ ಹಕ್ಕುಪತ್ರಕ್ಕಾಗಿ ಕಾದು ಕುಳಿತಿದ್ದಾರೆ. ಆದರೆ ಈ ಸಮಸ್ಯೆಗೆ ಇದುವರೆಗೂ ಪೂರ್ಣಪ್ರಮಾಣದಲ್ಲಿ ಪರಿಹಾರ ಸಿಕ್ಕೇ ಇಲ್ಲ. ಹಕ್ಕುಪತ್ರಕ್ಕಾಗಿ 85 ಸಾವಿರಕ್ಕೂ ಹೆಚ್ಚು ಜನರು ಅರ್ಜಿ ಸಲ್ಲಿಸಿದ್ದರೆ ಕೇವಲ 2 ಸಾವಿರದಷ್ಟು ಜನರಿಗೆ ಮಾತ್ರ ಹಕ್ಕುಪತ್ರ ನೀಡಲಾಗಿದೆ. ಪಟ್ಟಾ ನೀಡಿಕೆಗೆ ಇರುವ ಮಾನದಂಡ ಅತಿಕ್ರಮಣದಾರರನ್ನು ಕಂಗೆಡಿಸಿದೆ. ಈ ನಡುವೆ ಅರಣ್ಯ ಅಧಿಕಾರಿಗಳ ಕಿರಿಕಿರಿಯನ್ನೂ ಅತಿಕ್ರಮಣದಾರರು ಎದುರಿಸಬೇಕಾಗಿದೆ. ಪ್ರತಿ ವಿಧಾನಮಂಡಳ ಅಧಿವೇಶನದಲ್ಲೂ ಅತಿಕ್ರಮಣದಾರರು ತಾವು ಎದುರಿಸುತ್ತಿರುವ ಸಮಸ್ಯೆಗೆ ಪರಿಹಾರ ದೊರಕೀತು ಎಂದು ಆಶಾಭಾವನೆಯಿಂದ ಎದುರು ನೋಡುತ್ತಿದ್ದಾರೆ.
ಇನ್ನು ಕಸ್ತೂರಿರಂಗನ್ ಸಮಿತಿ ವರದಿಯ ಭೂತವೂ ಅರಣ್ಯವಾಸಿಗಳ ನಿದ್ದೆಗೆಡಿಸಿದೆ. ಈ ವರದಿ ಜಾರಿಯಿಂದ ವಸತಿ ಪ್ರದೇಶಗಳಿಗೆ ಮೂಲಭೂತ ಸೌಲಭ್ಯಗಳು ಮರೀಚಿಕೆಯಾಗುವ ಭಯ ಅವರನ್ನು ಕಾಡುತ್ತಿದೆ. ಅರಣ್ಯದಂಚಿನ ಊರುಗಳು ಅಭಿವೃದ್ಧಿ ವಂಚಿತವಾಗಿ ಬದುಕು ಅಸಹನೀಯವಾದೀತು ಎಂದು ಜನತೆ ಈ ಸಮಿತಿಯ ವರದಿಯ ಜಾರಿಯನ್ನು ಸಾರಾಸಗಟಾಗಿ ವಿರೋಧಿಸುತ್ತಿದ್ದಾರೆ. ಈಚೆಗೆ ಜಿಲ್ಲೆಯ ವಿವಿಧೆಡೆ ಈ ಬಗ್ಗೆ ಜಾಗೃತಿ ಸಭೆ ನಡೆದು ಶಿರಸಿಯಲ್ಲಿ ಬೃಹತ್ ರ‍್ಯಾಲಿಯೂ ನಡೆದಿದೆ.ಬಹುಕಾಲದ ಬೇಡಿಕೆಯಾದ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಾಗಿ ಬಿಜೆಪಿ ಸರ್ಕಾರದ ಅವಧಿಯಲ್ಲಿ ಜಿಲ್ಲೆಯಲ್ಲಿ ದೊಡ್ಡ ಅಭಿಯಾನವೇ ನಡೆಯಿತು. ವಿಧಾನಸಭೆಯಲ್ಲೂ ಚರ್ಚೆಯಾಯಿತು. ಸರ್ಕಾರ ಕುಮಟಾದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಮಂಜೂರು ಮಾಡಿತು. ಕಾರವಾರದ ಮೆಡಿಕಲ್ ಕಾಲೇಜಿನಲ್ಲಿ ಸೂಪರ್ ಸ್ಪೆಷಾಲಿಟಿ ಸೌಲಭ್ಯ ಕಲ್ಪಿಸುವುದಾಗಿ ಘೋಷಿಸಿತು. ಕುಮಟಾದಲ್ಲಿ ಸ್ಥಳ ಗುರುತಿಸಿ ಬಜೆಟ್‌ನಲ್ಲೂ ಘೋಷಣೆ ಮಾಡಲಾಯಿತು. ಇನ್ನೇನು ಶಂಕುಸ್ಥಾಪನೆ ಬಾಕಿ ಇರುವಾಗ ಚುನಾವಣೆ ನೀತಿ ಸಂಹಿತಿ ಜಾರಿಗೆ ಬಂತು. ಆನಂತರ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗ ಆಸ್ಪತ್ರೆಯ ಕೂಗು ತಣ್ಣಗಾಗಿದೆ. ಆದರೆ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಮಾಡುವುದಾಗಿ ತಿಳಿಸಿದ್ದಾರೆ. ಬೆಳಗಾವಿ ಅಧಿವೇಶನದಲ್ಲಿ ಈ ಬಗ್ಗೆ ಒಪ್ಪಿಗೆ ದೊರೆಯಲಿದೆ ಎಂದು ಶಾಸಕ ಸತೀಶ ಸೈಲ್ ತಿಳಿಸಿದ್ದಾರೆ. ಅಧಿವೇಶನದಲ್ಲಿ ಚರ್ಚೆಯಾಗಿ, ಸರ್ಕಾರದಿಂದ ಘೋಷಣೆಯಾಗಿ ಬಜೆಟ್‌ನಲ್ಲೂ ಘೋಷಣೆ ಆದ ಮೇಲೆ ಮತ್ತೆ ಚರ್ಚೆಯ ಹಂತಕ್ಕೆ ಬಂದಿರುವುದು ಏಕೆಂದು ಅರ್ಥವಾಗುತ್ತಿಲ್ಲ? ಏನೇ ಇರಲಿ, ಜಿಲ್ಲೆಗೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣವಾದರೆ ಸಾಕು ಎನ್ನುವುದು ಜನತೆಯ ಬೇಡಿಕೆ.
ಇದಲ್ಲದೆ ಹತ್ತಾರು ಸಮಸ್ಯೆಗಳು ಜಿಲ್ಲೆಯ ಜನರನ್ನು ಕಾಡುತ್ತಿದೆ. ಅವುಗಳಿಗೆಲ್ಲ ಪರಿಹಾರ ಸಿಕ್ಕೀತೆ ಎನ್ನುವ ಪ್ರಶ್ನೆಯೂ ಉಂಟಾಗಿದೆ. ಬೆಳಗಾವಿ ಅಧಿವೇಶನದಲ್ಲಿ ಕಸ್ತೂರಿ ರಂಗನ್ ಕರಡು ಪ್ರತಿ ಸಂಪೂರ್ಣ ತಿರಸ್ಕಾರಕ್ಕೆ ನಿರ್ಣಯ ಕೈಗೊಳ್ಳಬೇಕು. ಅರಣ್ಯವಾಸಿಗಳಿಗೆ ಸಂಬಂಧಪಟ್ಟಂತೆ ಅರಣ್ಯ ಹಕ್ಕು ಕಾಯಿದೆ ವೈಫಲ್ಯದ ಬಗ್ಗೆ ಸಮಗ್ರ ಚಿಂತನೆ ಮಾಡಿ ಹಕ್ಕು ಪತ್ರ ಕೊಡುವ ಬಗ್ಗೆ ಚರ್ಚೆ ಮಾಡಿ ನಿರ್ಣಯ ಕೈಗೊಳ್ಳಬೇಕೆಂದು ಆಗ್ರಹಿಸುತ್ತೇನೆ.ರವೀಂದ್ರ ನಾಯ್ಕ-ಅಧ್ಯಕ್ಷರು, ಅರಣ್ಯಭೂಮಿ ಹಕ್ಕು ಹೋರಾಟಗಾರರ ವೇದಿಕೆ