ಕೋರಮಂಗಲದಲ್ಲಿ ಅತ್ಯಾಧುನಿಕ ತಂತ್ರಜ್ಞಾನದ ಘನ ತ್ಯಾಜ್ಯ ನಿರ್ವಹಣಾ ಕಲಿಕಾ ಕೇಂದ್ರ ಹಾಗೂ ವಿವಿಧ ತ್ಯಾಜ್ಯ ಸಂಸ್ಕರಣಾ ಘಟಕಗಳನ್ನು ಅರಣ್ಯ ಸಚಿವ ರಾಮಲಿಂಗಾರೆಡ್ಡಿ ಲೋಕಾರ್ಪಣೆ ಮಾಡಿದರು.

ಕನ್ನಡಪ್ರಭ ವಾರ್ತೆ ಬೆಂಗಳೂರು

ಕೋರಮಂಗಲದಲ್ಲಿ ಅತ್ಯಾಧುನಿಕ ತಂತ್ರಜ್ಞಾನದ ಘನತ್ಯಾಜ್ಯ ನಿರ್ವಹಣಾ ಕಲಿಕಾ ಕೇಂದ್ರ ಹಾಗೂ ವಿವಿಧ ತ್ಯಾಜ್ಯ ಸಂಸ್ಕರಣಾ ಘಟಕಗಳನ್ನು ಲೋಕಾರ್ಪಣೆಗೊಳಿಸಲಾಯಿತು. ಸೋಮವಾರ ಅರಣ್ಯ ಸಚಿವ ರಾಮಲಿಂಗಾರೆಡ್ಡಿ, ಬೆಂಗಳೂರು ದಕ್ಷಿಣ ನಗರ ಪಾಲಿಕೆ ಆಯುಕ್ತ ಕೆ.ಎನ್.ರಮೇಶ್ ಸೇರಿದಂತೆ ಪ್ರಮುಖರು ಸೇರಿ ತ್ಯಾಜ್ಯ ಸಂಸ್ಕರಣಾ ಘಟಕಗಳನ್ನು ಉದ್ಘಾಟಿಸಿದರು.

ಈ ವೇಳೆ ಆಯುಕ್ತ ಕೆ.ಎನ್‌.ರಮೇಶ್‌ ಮಾತನಾಡಿ, ನಗರದಲ್ಲಿ ಉತ್ಪತ್ತಿಯಾಗುವ ಕಸವನ್ನು ಸಮಸ್ಯೆಯಾಗಿ ನೋಡದೆ ಸಂಪನ್ಮೂಲವಾಗಿ ಬಳಸುವ ಕಸದಿಂದ ರಸ ತತ್ವದಡಿ ಈ ಕಲಿಕಾ ಕೇಂದ್ರ ಕಾರ್ಯನಿರ್ವಹಿಸಲಿದೆ. ಶಾಲಾ-ಕಾಲೇಜು ವಿದ್ಯಾರ್ಥಿಗಳು, ವಸತಿ ಸಮುಚ್ಚಯಗಳ ನಿವಾಸಿಗಳು, ವಾಣಿಜ್ಯ ಕಚೇರಿ ಸಿಬ್ಬಂದಿ ಹಾಗೂ ಪಾಲಿಕೆ ಪೌರಕಾರ್ಮಿಕರಿಗೆ ನುರಿತ ತಜ್ಞರಿಂದ ವೈಜ್ಞಾನಿಕ ಕಸ ವಿಂಗಡಣೆ ಮತ್ತು ವಿಲೇವಾರಿ ಬಗ್ಗೆ ಪ್ರಾಯೋಗಿಕ ತರಬೇತಿ ನೀಡಲಾಗುತ್ತದೆ. ಇದಕ್ಕೆ ಆರ್‌ವಿ ಶಿಕ್ಷಣ ಸಂಸ್ಥೆ ಸೇರಿದಂತೆ ಹಲವು ಶಿಕ್ಷಣ ಸಂಸ್ಥೆಗಳು ಕೈಜೋಡಿಸಿವೆ ಎಂದು ತಿಳಿಸಿದರು.

ಬಿಟಿಎಂ ಲೇಔಟ್ ಕ್ಷೇತ್ರ ವ್ಯಾಪ್ತಿಯಲ್ಲಿ ಮನೆಗಳಲ್ಲಿ ನಿರುಪಯುಕ್ತವಾಗಿ ಬಿಸಾಡುವ ಹಳೆಯ ಸೋಫಾ, ಮಂಚ, ಮೇಜು ಮುಂತಾದ ಭಾರೀ ಗಾತ್ರದ ತ್ಯಾಜ್ಯವನ್ನು ನಾಗರಿಕರು ತಮ್ಮ ಆರ್‌ಡಬ್ಲ್ಯುಎ ಗ್ರೂಪ್‌ಗಳಲ್ಲಿ ಮಾಹಿತಿ ನೀಡಿದರೆ ಸಾಹಸ್ ನಂತಹ ಎನ್‌ಜಿಒಗಳು ಮನೆ ಬಾಗಿಲಿಗೆ ತೆರಳಿ ನಿರುಪಯುಕ್ತ ವಸ್ತುಗಳನ್ನು ಸಂಗ್ರಹಿಸಿ ಕಸ ರಸ ಕೇಂದ್ರಕ್ಕೆ ತಲುಪಿಸಲಿದ್ದಾರೆ. ನಂತರ ಅವುಗಳ ಮರುಬಳಕೆಗೆ ಕಳುಹಿಸಲಾಗುತ್ತದೆ ಎಂದು ಹೇಳಿದರು.

13 ಟನ್ ಹಸಿ ಕಸ ಸಂಸ್ಕರಣಾ ಸಾಮರ್ಥ್ಯದ ಬಯೋ-ಮಿಥನೈಸೇಷನ್ ಘಟಕ ಸ್ಥಾಪಿಸಿದ್ದು, ತ್ಯಾಜ್ಯದಿಂದ ಉತ್ಪತ್ತಿಯಾಗುವ ಬಯೋಗ್ಯಾಸ್‌ ಅನ್ನು ಹೋಟೆಲ್‌ಗಳಿಗೆ ಪೂರೈಸಲು ಯೋಜಿಸಲಾಗಿದೆ. ಗಾರ್ಮೆಂಟ್ಸ್ ಹಾಗೂ ಟೈಲರಿಂಗ್ ಅಂಗಡಿಗಳಿಂದ ಬರುವ ಬಟ್ಟೆ ಚಿಂದಿಗಳಿಂದ ಮ್ಯಾಟ್ ಹಾಗೂ ಬೆಡ್‌ಶೀಟ್ ತಯಾರಿಸುವ ಜವಳಿ ಮರುಬಳಕೆ ಘಟಕ ಕಾರ್ಯಾರಂಭ ಮಾಡಿದೆ. ಥರ್ಮಾಕೋಲ್ ತ್ಯಾಜ್ಯವನ್ನು ಕರಗಿಸಿ ಗಟ್ಟಿ ಪದಾರ್ಥವನ್ನಾಗಿಸಿ, ದೆಹಲಿಗೆ ರವಾನಿಸಿ ಆಕರ್ಷಕ ವಸ್ತುಗಳನ್ನಾಗಿ ಪರಿವರ್ತಿಸಲಾಗುತ್ತಿದೆ ಎಂದು ತಿಳಿಸಿದರು.