ಮೇಲುಕೋಟೆ ಗ್ರಾಪಂ ಪಿಡಿಒ ವರ್ಗಾವಣೆಗಾಗಿ ಏಕಾಂಗಿ ಪ್ರತಿಭಟನೆ

| Published : Sep 25 2025, 01:00 AM IST

ಸಾರಾಂಶ

ಗ್ರಾಮಗಳ ಮೂಲಸೌಲಭ್ಯಕ್ಕಾಗಿ ಹಲವು ಅರ್ಜಿಗಳನ್ನು ನೀಡಿ ಗಮನ ಸೆಳೆದರೂ ಕ್ರಮವಹಿಸದೆ ಉಡಾಫೆ ತೋರುತ್ತಿದ್ದಾರೆ. ಪ್ರಸಿದ್ಧ ಪ್ರವಾಸಿತಾಣ ಮೇಲುಕೋಟೆಯ ಬೀದಿ ಬೀದಿಗಳಲ್ಲಿ ಕಸದ ರಾಶಿ ಬಿದ್ದಿವೆ. ನವರಾತ್ರಿ ನಡೆಯುತ್ತಿದ್ದರೂ ಉತ್ಸವ ಬೀದಿಗಳಲ್ಲಿ ಬಿದ್ದಿರುವ ಕಸದ ರಾಶಿ ಬಿದ್ದಿದ್ದರೂ ಸ್ವಚ್ಛ ಮಾಡಿಲ್ಲ.

ಕನ್ನಡಪ್ರಭ ವಾರ್ತೆ ಮೇಲುಕೋಟೆ

ಗ್ರಾಪಂ ಅಭಿವೃದ್ಧಿ ಅಧಿಕಾರಿ ರಾಜೇಶ್ವರ್‌ ಅವರನ್ನು ತಕ್ಷಣ ವರ್ಗಾವಣೆ ಮಾಡುವಂತೆ ಒತ್ತಾಯಿಸಿ ರೈತ ಮತ್ತು ಕಾರ್ಮಿಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಮೇಲುಕೋಟೆ ಬೆಟ್ಟಸ್ವಾಮಿಗೌಡ ಏಕಾಂಗಿ ಪ್ರತಿಭಟನೆ ನಡೆಸಿದರು.

ಗ್ರಾಮ ಪಂಚಾಯ್ತಿ ಕಚೇರಿ ಎದುರು ಧರಣಿ ಕುಳಿತ ಅವರು, ಕಳೆದ ಐದು ವರ್ಷದಿಂದ ಗ್ರಾಪಂನಲ್ಲಿ ಠಿಕಾಣಿಹೂಡಿ ಮೂಲ ಸೌಕರ್ಯ ಕಲ್ಪಿಸಲು ವಿಫಲರಾಗಿದ್ದಾರೆ. ಇವರ ವಿರುದ್ಧ ಶಿಸ್ತು ಕ್ರಮ ಜರುಗಿಸಬೇಕು, ಮೂಲ ಸೌಕರ್ಯಗಳನ್ನು ತ್ವರಿತವಾಗಿ ಕಲ್ಪಿಸಬೇಕು ಎಂದು ಒತ್ತಾಯಿಸಿದರು.

ಪಂಚಾಯ್ತಿ ಅಧ್ಯಕ್ಷರು ಮತ್ತು ಸದಸ್ಯರು ಪಿಡಿಒರಿಂದ ಸಾರ್ವಜನಿಕರ ಪರ ಕೆಲಸ ಮಾಡಿಸಬೇಕು. ಇಲ್ಲವೇ, ತಮ್ಮ ಸ್ಥಾನ ತ್ಯಜಿಸಬೇಕು ಎಂದೂ ಆಗ್ರಹಿಸಿದರು.

ಗ್ರಾಮಗಳ ಮೂಲಸೌಲಭ್ಯಕ್ಕಾಗಿ ಹಲವು ಅರ್ಜಿಗಳನ್ನು ನೀಡಿ ಗಮನ ಸೆಳೆದರೂ ಕ್ರಮವಹಿಸದೆ ಉಡಾಫೆ ತೋರುತ್ತಿದ್ದಾರೆ. ಪ್ರಸಿದ್ಧ ಪ್ರವಾಸಿತಾಣ ಮೇಲುಕೋಟೆಯ ಬೀದಿ ಬೀದಿಗಳಲ್ಲಿ ಕಸದ ರಾಶಿ ಬಿದ್ದಿವೆ. ನವರಾತ್ರಿ ನಡೆಯುತ್ತಿದ್ದರೂ ಉತ್ಸವ ಬೀದಿಗಳಲ್ಲಿ ಬಿದ್ದಿರುವ ಕಸದ ರಾಶಿ ಬಿದ್ದಿದ್ದರೂ ಸ್ವಚ್ಛ ಮಾಡಿಲ್ಲ ಎಂದು ದೂರಿದರು.

ವಾರಕ್ಕೊಂದು ದಿನ ಕುಡಿಯುವ ನೀರಿನ ಸರಬರಾಜು ಮಾಡಲಾಗುತ್ತಿದೆ. ಬೀದಿ ದೀಪಗಳು ಕೆಟ್ಟು ನಿಂತರೂ ಸರಿಯಾದ ಸಮಯದಲ್ಲಿ ದೀಪ ಅಳವಡಿಸಿಲ್ಲ. ಚರಂಡಿ ಸ್ವಚ್ಛತೆ ಮಾಡದ ಕಾರಣ ಗಬ್ಬುನಾರುತ್ತಿದೆ. ಸೊಳ್ಳೆಗಳು ಹೆಚ್ಚಾಗಿ ಸಾಂಕ್ರಾಂಮಿಕ ರೋಗ ಹರಡುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಚರಂಡಿಗಳು ದುರಸ್ತಿ ಭಾಗ್ಯ ಕಂಡಿಲ್ಲ. ಗ್ರಾಮದ ಒಳಗಿನ ಕಾಂಕ್ರೀಟ್ ರಸ್ತೆ ಹಾಳಾಗಿವೆ. ಈ ಬಗ್ಗೆ ಕೇಳಿದರೆ ಗ್ರಾಪಂ ಜನಪ್ರತಿನಿಧಿಗಳೇ ಕಾರಣ, ಪಂಚಾಯ್ತಿಯಲ್ಲಿ ಹಣ ಇಲ್ಲ ಎಂದು ಸಬೂಬು ಹೇಳುತ್ತಾರೆ. ಹಣ ಇಲ್ಲದಿದ್ದರೆ ಪಂಚಾಯ್ತಿಗೆ ಬೀಗ ಹಾಕಿ ಎಂದು ಒತ್ತಾಯಿಸಿದರು.

ಸರ್ಕಾರಿ ಆಸ್ತಿಗಳನ್ನು ಸಂರಕ್ಷಿಸಬೇಕಾದ ಪಿಡಿಒ ಖಾಸಗಿಯವರ ಪರ ನಿಂತು ಲೇ ಔಟ್ ಮಾಡಲು ಅನುಕೂಲ ಮಾಡಿಕೊಡುತ್ತಿದ್ದಾರೆ. ಗ್ರಾಪಂ ವ್ಯಾಪ್ತಿ ಕಳಪೆ ಮಟ್ಟದ ಶೌಚಾಲಯಗಳ ನಿರ್ಮಾಣವಾಗಿದೆ. ಬಳಸಲು ಯೋಗ್ಯವಾಗಿಲ್ಲ. ಕೋತಿಗಳ ಕಾಟ ವಿಪರೀತವಾಗಿದೆ. ಬಸವಗಳು ವೃದ್ಧರನ್ನು ಗುದ್ದಿ ಗಾಯಗೊಳಿಸಿವೆ. ದೇವಾಲಯದ ಬೆಟ್ಟ ಕಲ್ಯಾಣಿಗಳ ಬಳಿ ಆಡುಗಳ ಕಾಟ ಹೆಚ್ಚಾಗಿದ್ದರೂ ಯಾವುದೇ ಕ್ರಮ ಜರುಗಿಸಿಲ್ಲ ಎಂದು ಆರೋಪಿಸಿದರು.

ನರೇಗಾ ಮತ್ತು ಜಲಜೀವವನ್ ಮಿಷನ್‌ನ ಮನೆ ಮನೆಗೆ ಗಂಗೆ ಯೋಜನೆ ಸಮರ್ಪಕ ಅನುಷ್ಠಾನವಾಗಿಲ್ಲ. ತಕ್ಷಣ ಜಿಪಂ ಸಿಇಒ ಅವರು ಪಿಡಿಒ ರಾಜೇಶ್ ಅವರನ್ನು ವರ್ಗಾವಣೆ ಮಾಡಬೇಕು ಎಂದು ಆಗ್ರಹಿಸಿದರು.

ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಅಧ್ಯಕ್ಷೆ ಮಣಿಮುರುಗನ್ ಮಾತನಾಡಿ, ನನ್ನ ಅವಧಿ ಮುಕ್ತಾಯವಾಗಿದೆ. ಸಂಬಂಧಿಸಿದವರ ಗಮನಕ್ಕೆ ತಂದು ಸೂಕ್ತ ಕ್ರಮ ಜರುಗಿಸಲಾಗುವುದು. ಅಂತಿಮವಾಗಿ ಪಿಡಿಒಗೆ ಮತ್ತೊಂದು ಮನವಿ ನೀಡಿದ್ದೇವೆ. ತಕ್ಷಣ ಕ್ರಮ ವಹಿಸದಿದ್ದರೆ ಉಗ್ರಹೋರಾಟ ಮಾಡುವುದಾಗಿ ಎಚ್ಚರಿಸಿದರು.

ಈ ವೇಳೆ ಕೆ.ಆರ್.ಎಸ್ ಸಮಿತಿ ಪ್ರಕಾಶ್ ಇದ್ದರು.