ಕನ್ನಡಪ್ರಭ ವಾರ್ತೆ ಮೈಸೂರು

ದತ್ತಾಂಶದ ಮೂಲಕ ಪರಿಹಾರ ಕಂಡುಕೊಳ್ಳಲು ಹಾಗೂ ವೆಬ್ ಮತ್ತು ಮೊಬೈಲ್ ಅನ್ವಯಿಕೆ ತಯಾರಿಸಲು, ಈ ಜಿಲ್ಲಾ ಮಟ್ಟದ ಕೆ-ಜಿಐಎಸ್ 2.0 ಕಾರ್ಯಾಗಾರ ಸಹಕಾರಿ ಎಂದು ರಾಜ್ಯ ದೂರ ಸಂವೇದಿ ಅನ್ವಯಿಕ ಕೇಂದ್ರ ನಿರ್ದೇಶಕ ಡಾ.ಎನ್‌.ಎಲ್‌.ರಾಜೇಶ್ ತಿಳಿಸಿದರು.

ಜಿಪಂನ ಅಬ್ದುಲ್ ನಜೀರ್ ಸಾಬ್ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಸ್ಥಳೀಯ ಆಡಳಿತಕ್ಕಾಗಿ ಜಿಐಎಸ್ ಆಧಾರಿತ ಮಾಹಿತಿಯನ್ನು ತಲುಪಿಸುವ ತಾಂತ್ರಿಕ ಕಾರ್ಯಾಗಾರಕ್ಕೆ ಚಾಲನೆ ನೀಡಿ ಅವರು ಮಾತನಾಡಿ, ಕರ್ನಾಟಕ ರಾಜ್ಯ ದೂರ ಸಂವೇದಿ ಅನ್ವಯಿಕ ಕೇಂದ್ರ, ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ (ಇ-ಆಡಳಿತ), ಕರ್ನಾಟಕ ಸರ್ಕಾರವು ಸ್ಥಾಪನೆಗೊಂಡ ಬಗ್ಗೆ ಹಾಗೂ ನಂತರದ ದಿನಗಳಲ್ಲಿ ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದ ಹಲವು ಮಹತ್ವದ ಯೋಜನೆಯಶಸ್ವಿಯಾಗಿ ಪೂರ್ಣಗೊಳಿಸಿರುವ ಬಗ್ಗೆ ವಿವರಿಸಿದರು.

ಕೆ-ಜಿಐಎಸ್ ಆವೃತ್ತಿ 1.0 ಅನ್ನು 2016ರಲ್ಲಿ ಅನುಷ್ಟಾನಗೊಳಿಸಲಾಗಿದ್ದು, ಸುಮಾರು 600 ಜಿಐಎಸ್ ಪದರಗಳು ಮತ್ತು 20 ಲಕ್ಷ ಸರ್ಕಾರಿ ಆಸ್ತಿಗಳ ಮಾಹಿತಿಯನ್ನು ಕೆ-ಜಿಐಎಸ್ ಪೋರ್ಟಲ್‌ ನಲ್ಲಿ ಒಂದೇ ಸೂರಿನಲ್ಲಿ ಲಭ್ಯವಾಗುವಂತೆ ತಂತ್ರಜ್ಞಾನವನ್ನು ಕೆಎಸ್‌ಆರ್‌ಎಸ್‌ಎಸಿ ಕೇಂದ್ರವು ಅಭಿವೃದ್ಧಿಪಡಿಸಿದೆ. ಇದರಲ್ಲಿ 41 ಮೊಬೈಲ್ ಅನ್ವಯಿಕೆಗಳು ಮತ್ತು 60 ವೆಬ್ ಅನ್ವಯಿಕೆ ಲಭ್ಯವಿದ್ದು, ನಾಗರಿಕರು ಮತ್ತು ಇಲಾಖೆಗಳು ಬಳಸಿಕೊಳ್ಳುತ್ತಿರುವುದಾಗಿ ತಿಳಿಸಿದರು.

ದಿಶಾಂಕ್ ಆ್ಯಪ್ ನಲ್ಲಿ ಯಾವ ಆಸ್ತಿ ಯಾರ ಹೆಸರಿನಲ್ಲಿ ಇದೆ ಎಂಬುದನ್ನು ತಿಳಿಯಬಹುದು. ಅದೇ ರೀತಿ ಎರಡು ಮೂರು ದಿನಗಳ ಮುಂಚೆ ಹವಾಮಾನದ ವರದಿ ನಿರ್ದಿಷ್ಟ ಆಪ್ ಮೂಲಕ ಪಡೆಯಬಹುದು. ಮೈಸೂರು ಮೂಡಾಗೆ 2009 ರಲ್ಲಿ ಮೂಡಾ ವ್ಯಾಪ್ತಿಯ ಆಸ್ತಿಗಳ ಬಗ್ಗೆ ಜಿಯೋ ಮ್ಯಾಪ್ ಮಾಡಿಕೊಡಲಾಗಿತ್ತು. 2016 ರಲ್ಲಿ ಕೆಜಿಐಎಸ್ 1.0 ಜಾರಿಗೆ ತರಲಾಗಿತ್ತು. 2024 ರಲ್ಲಿ ಕೆಜಿಐಎಸ್ 2.0 ಅನ್ನು ಅಭಿವೃದ್ಧಿ ಪಡಿಸಲಾಗಿದೆ. ಇದಕ್ಕೆ ಗೋಲ್ಡ್ ಅವಾರ್ಡ್ ದೊರೆತಿದೆ ಎಂದು ಅವರು ಮಾಹಿತಿ ನೀಡಿದರು.


ಕೆ- ಜಿಐಎಸ್ ಯೋಜನೆಗೆ 2024ನೇ ಸಾಲಿನ ರಾಷ್ಟ್ರೀಯ ಇ-ಆಡಳಿತ ಚಿನ್ನದ ಪ್ರಶಸ್ತಿಯು ಕೇಂದ್ರಕ್ಕೆ ಲಭಿಸಿರುವುದನ್ನು ಉಲ್ಲೇಖಿಸಿದರು. ಮುಂದುವರೆದು ಕೆ-ಜಿಐಎಸ್ 2.0 ಜಿಲ್ಲಾ ಮಟ್ಟದ ಕಾರ್ಯಾಗಾರದ ಮುಖ್ಯ ಉದ್ದೇಶಗಳ ಕುರಿತು ಮಾತನಾಡಿ, ಪ್ರತಿ ಜಿಲ್ಲೆ, ತಾಲೂಕು, ಗ್ರಾಪಂ ತನ್ನದೇ ಆದ ವೈಶಿಷ್ಟ್ಯಗಳ ಜೊತೆಗೆ ಸ್ಥಳೀಯ ಸಮಸ್ಯೆ ಹೊಂದಿದ್ದು, ಈ ಸಮಸ್ಯೆಗಳಿಗೆ ಭೂದೈಶಿಕ ದತ್ತಾಂಶದ ಮೂಲಕ ಪರಿಹಾರ ಕಂಡುಕೊಳ್ಳಲು ಹಾಗೂ ವೆಬ್ ಮತ್ತು ಮೊಬೈಲ್ ಅನ್ವಯಿಕೆ ತಯಾರಿಸಲು, ಈ ಜಿಲ್ಲಾ ಮಟ್ಟದ ಕೆ-ಜಿಐಎಸ್ 2.0 ಕಾರ್ಯಾಗಾರವನ್ನು ಜಿಲ್ಲಾಡಳಿತದ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದರು.

ಎಡಿಸಿ ಡಾ.ಪಿ.ಶಿವರಾಜ್ ಮಾತನಾಡಿ, ತಾಂತ್ರಿಕತೆಗೆ ಎಐ ತಂತ್ರಜ್ಞಾನ ಬಂದು ಆವರಿಸಿಕೊಳ್ಳುತ್ತಿದೆ. ಕೆಎಸ್‌ಆರ್‌ಎಸ್‌ಎ.ಸಿ ಮಾಡಿಕೊಟ್ಟಿರುವ ಅಪ್ಲಿಕೇಶನ್ ಕರಾರವಕ್ಕಾಗಿ ಇವೆ. ಈ ಅಪ್ಲಿಕೇಶನ್ ಗಳು ಸುರಕ್ಷಿತವಾಗಿವೆ. ನೀವು ಈ ಕೇಂದ್ರಕ್ಕೆ ಭೇಟಿ ನೀಡಿ ಜ್ಞಾನವನ್ನು ಪಡೆದುಕೊಳ್ಳಿ. ಈ ಸಂಸ್ಥೆ ಇಂದಿಗೂ ನಂ ಒನ್ ಸ್ಥಾನವನ್ನು ಉಳಿಸಿಕೊಂಡಿದೆ ಎಂದರು.

ಸಿಸಿಎಫ್ ರವಿಶಂಕರ್ ಮಾತನಾಡಿ, ಕರ್ನಾಟಕ ರಾಜ್ಯ ದೂರ ಸಂವೇದಿ ಅನ್ವಯಿಕ ಕೇಂದ್ರ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿರುವ ಸಂಸ್ಥೆಯಾಗಿದೆ. ದಿಶಾಂಕ್ ಅಪ್ ನಲ್ಲಿ ಭೂಮಿಯ ಮಾಲೀಕತ್ವ ತಿಳಿಯಬಹುದಾಗಿದೆ. ಅರಣ್ಯ ಇಲಾಖೆಯ ವಿಷಯಕ್ಕೆ ಬಂದಾಗ ನಮ್ಮ ಇಲಾಖೆಯ ಭೂಮಿಯ ಸಮಸ್ಯೆ ಬಂದಾಗ ನಾವು ಈ ಕೇಂದ್ರವನ್ನು ಸಂಪರ್ಕಿಸುತ್ತೇವೆ. ಈ ಸಂಸ್ಥೆಯು ನಮ್ಮ ಇಲಾಖೆಯ ಜೊತೆಗೆ ಉತ್ತಮ ಬಾಂಧವ್ಯ ಹೊಂದಿದೆ ಎಂದು ಮಾಹಿತಿ ನೀಡಿದರು.

ಎಎಸ್ಪಿ ಸಿ. ಮಲ್ಲಿಕ್ ಮಾತನಾಡಿ, ನಾವು ತಂತ್ರಜ್ಞಾನವನ್ನು ಅಳವಡಿಸಿಕೊಂಡಿದ್ದು ಸಿಗ್ನಲ್ ಗಳಲ್ಲಿ ಅಳವಡಿಸಿರುವ ತಂತ್ರಜ್ಞಾನದಿಂದ ರಸ್ತೆ ನಿಯಮ ಮೀರಿದರೆ ಸಂಬಂಧಿಸಿದ ವಾಹನ ಮಾಲೀಕರಿಗೆ ಅಟೋಮೆಟಿಕ್ ಆಗಿ ಫೈನ್ ಬೀಳುತ್ತದೆ. ಸಿಗ್ನಲ್ ಗಳು ತಂತ್ರಜ್ಞಾನದ ಆಧಾರದಲ್ಲಿ ಕಾರ್ಯ ನಿರ್ವಹಿಸುತ್ತವೆ. ಅರಣ್ಯ ಅಂಚಿನ ಜಾಗಗಳಲ್ಲಿ ಭೂಮಿಯ ವ್ಯಾಪ್ತಿ ಗುರುತಿಸುವುದು ಒಂದು ಸಮಸ್ಯೆಯಾಗಿದ್ದು ಈ ಸಂಸ್ಥೆ ಆಪ್ ಸಿದ್ಧಪಡಿಸಿರುವುದರಿಂದ ಸಮಸ್ಯೆ ಬಗೆಹರಿಯುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕಾರ್ಯಾಗಾರದಲ್ಲಿ ಸಿಸಿಎಫ್ ರವಿಶಂಕರ್, ಪೊಲೀಸ್ ಉಪ ಅಧೀಕ್ಷಕ ಮಲ್ಲಿಕ್, ಡಿಸಿಪಿ ಕೆ.ಎಸ್. ಸುಂದರ್ ರಾಜ್, ಮುಖ್ಯ ಯೋಜನಾಧಿಕಾರಿ ಪ್ರಭುಸ್ವಾಮಿ, ಜಿಪಂ ಉಪ ಕಾರ್ಯದರ್ಶಿ ಸವಿತಾ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.