ಅವಧಿ ಮೀರಿದ ಕಬ್ಬಿಗೆ ಪರಿಹಾರ: ಶಾಸಕ ದರ್ಶನ್ ಪುಟ್ಟಣ್ಣಯ್ಯ ಭರವಸೆ

| Published : Sep 11 2024, 01:08 AM IST

ಅವಧಿ ಮೀರಿದ ಕಬ್ಬಿಗೆ ಪರಿಹಾರ: ಶಾಸಕ ದರ್ಶನ್ ಪುಟ್ಟಣ್ಣಯ್ಯ ಭರವಸೆ
Share this Article
  • FB
  • TW
  • Linkdin
  • Email

ಸಾರಾಂಶ

ಮಂಡ್ಯ ಜಿಲ್ಲಾಡಳಿತ ಈಗಾಗಲೇ ಕಬ್ಬು ಕಟಾವಿಗೆ ಸಂಬಂಧಿಸಿದಂತೆ ಕಾರ್ಖಾನೆ ವ್ಯಾಪ್ತಿ ಗುರುತಿಸಿರುವುದನ್ನು ಹಿಂಪಡೆಯುವಂತೆ ಮನವರಿಕೆ ಮಾಡಿಕೊಡಲಾಗುವುದು. ಏಕೆಂದರೆ ರೈತರಿಗೆ ಯಾವ ಕಾರ್ಖಾನೆಗಾದರೂ ಸರಿ ಮೊದಲು ಕಟಾವಿಗೆ ಬಂದಿರುವ ಕಬ್ಬನ್ನು ತೆಗೆದುಕೊಂಡು ಹೋಗಲು ಕಡಿವಾಣ ಹಾಕಬಾರದು.

ಕನ್ನಡಪ್ರಭ ವಾರ್ತೆ ಮಂಡ್ಯ

ಕಬ್ಬು ಕಟಾವು ವಿಳಂಬವಾಗಿ ೧೬ ಮತ್ತು ೧೭ ತಿಂಗಳು ಕಳೆದ ಹಾಗೂ ಅವಧಿ ಮೀರಿರುವ ಕಬ್ಬಿನ ಮಾಹಿತಿ ಪಡೆದು ರೈತರಿಗೆ ಪರಿಹಾರ ಕೊಡಿಸುವ ಬಗ್ಗೆ ಸರ್ಕಾರ ಗಮನಕ್ಕೆ ತರಲಾಗುವುದು ಎಂದು ಶಾಸಕ ದರ್ಶನ್ ಪುಟ್ಟಣ್ಣಯ್ಯ ಭರವಸೆ ನೀಡಿದರು.

ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಂಗಳವಾರ ಮಾತನಾಡಿ, ಜಿಲ್ಲಾಡಳಿತ ಈಗಾಗಲೇ ಕಬ್ಬು ಕಟಾವಿಗೆ ಸಂಬಂಧಿಸಿದಂತೆ ಕಾರ್ಖಾನೆ ವ್ಯಾಪ್ತಿ ಗುರುತಿಸಿರುವುದನ್ನು ಹಿಂಪಡೆಯುವಂತೆ ಮನವರಿಕೆ ಮಾಡಿಕೊಡಲಾಗುವುದು. ಏಕೆಂದರೆ ರೈತರಿಗೆ ಯಾವ ಕಾರ್ಖಾನೆಗಾದರೂ ಸರಿ ಮೊದಲು ಕಟಾವಿಗೆ ಬಂದಿರುವ ಕಬ್ಬನ್ನು ತೆಗೆದುಕೊಂಡು ಹೋಗಲು ಕಡಿವಾಣ ಹಾಕಬಾರದು ಎಂದರು.

ಕಟಾವಿಗೆ ಬಂದಿರುವ ಕಬ್ಬನ್ನು ನಿಗಧಿತ ಸಮಯದಲ್ಲಿ ಕಟಾವು ಮಾಡಲು ಸಾಧ್ಯವಾಗದೇ ಇದ್ದರೆ ಅಂತಹ ಕಬ್ಬುಗಳನ್ನು ಬೇರೆ ಕಾರ್ಖಾನೆಗೆ ಕಟಾವು ಮಾಡಿಕೊಂಡು ತೆಗೆದುಕೊಂಡು ಹೋಗಲು ಅವಕಾಶ ಮಾಡಿಕೊಟ್ಟರೆ ರೈತರಿಗೆ ಹೆಚ್ಚು ಅನುಕೂಲವಾಗಲಿದೆ. ಇದನ್ನು ಪರಿಗಣಿಸುವಂತೆ ಸಂಬಂಧಪಟ್ಟವರಿಗೆ ತಿಳಿಸುತ್ತೇನೆ ಎಂದರು.

ಗ್ಯಾರಂಟಿ ಯೋಜನೆಗಳು ಜನರಿಗೆ ತಲುಪುತ್ತಿದಿಯಾ ಎಂಬುದನ್ನು ಪರಿಶೀಲನೆ ನಡೆಸಬೇಕಿದೆ. ಅಭಿವೃದ್ಧಿಗೆ ಇದರಿಂದ ತೊಂದರೆ ಇದಿಯಾ ಎಂಬ ಅಂಶವನ್ನು ತಿಳಿದುಕೊಂಡು ಅದನ್ನು ಮರು ಪರಿಶೀಲನೆ ನಡೆಸಿದರೆ ಒಳಿತಾಗುತ್ತದೆ. ಅಭಿವೃದ್ಧಿಗೆ ಹೆಚ್ಚು ಒತ್ತು ನೀಡುವ ನಿಟ್ಟಿನಲ್ಲಿ ಕೆಲಸ ನಡೆಯಬೇಕೆಂದು ಕೆಲವು ಜನರು ಹೇಳುತ್ತಿದ್ದಾರೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಭ್ರೂಣ ಹತ್ಯೆ ಪ್ರಕರಣ ಭೇದಿಸಿದ ಪೊಲೀಸರಿಗೆ ಧನ್ಯವಾದ ತಿಳಿಸುತ್ತೇನೆ, ಇಂತಹ ಪ್ರಕರಣಗಳು ಜಿಲ್ಲೆಯಲ್ಲಿ ಅಷ್ಟೇ ಅಲ್ಲ ಎಲ್ಲಿಯೂ ಇದು ನಡೆಯಬಾರದು, ಎಲ್ಲರಿಗೂ ಬದುಕುವ ಹಕ್ಕಿದೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಭ್ರೂಣ ಹತ್ಯೆ ನಡೆಯುವುದನ್ನು ತಡೆಯುವಲ್ಲಿ ಎಲ್ಲರ ಸಹಕಾರವೂ ಮುಖ್ಯವಾಗಿದೆ. ಆರೋಗ್ಯ ಇಲಾಖೆ, ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆಯು ಹೆಚ್ಚು ನಿಗಾವಹಿಸಬೇಕು ಎಂದರು.

ರೈತ ಸಂಘ ಜಿಲ್ಲಾ ಘಟಕದ ಅಧ್ಯಕ್ಷ ಎ.ಎಲ್.ಕೆಂಪೂಗೌಡ, ತಾಲ್ಲೂಕು ಅಧ್ಯಕ್ಷ ಚಂದ್ರಶೇಖರ್ ಶಿವಳ್ಳಿ ಇದ್ದರು.