ಸಾರಾಂಶ
ಸರ್ಕಾರಿ ರಸ್ತೆ ಅತಿಕ್ರಮಣ ವಾರದಲ್ಲಿ ತೆರವು- ವನ್ಯ ಜೀವಿಗಳಿಂದ ಬೆಳೆ ನಾಶಕ್ಕೆ ಪರಿಹಾರ
ಕನ್ನಡಪ್ರಭ ವಾರ್ತೆ ಶಿಗ್ಗಾಂವಿಜನತಾ ದರ್ಶನದಲ್ಲಿ ಸ್ವೀಕೃತಿಯಾದ ಸಾರ್ವಜನಿಕ ಅರ್ಜಿಗಳನ್ನು 15 ದಿನದೊಳಗಾಗಿ ವಿಲೇಗೊಳಿಸಬೇಕು. ಸರ್ಕಾರದ ಹಂತದಲ್ಲಿ ಇತ್ಯರ್ಥವಾಗುವ ಅರ್ಜಿಗಳನ್ನು ವಿವರಗಳೊಂದಿಗೆ ಜಿಲ್ಲಾಧಿಕಾರಿಗಳ ಕಚೇರಿಗೆ ಸಲ್ಲಿಸುವಂತೆ ಜಿಲ್ಲಾ ಮಟ್ಟದ ವಿವಿಧ ಇಲಾಖಾ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ರಘುನಂದನ್ ಮೂರ್ತಿ ನಿರ್ದೇಶನ ನೀಡಿದರು.
ಶಿಗ್ಗಾಂವಿಯ ತಹಸೀಲ್ದಾರ ಕಚೇರಿಯಲ್ಲಿ ಮಂಗಳವಾರ ತಾಲೂಕು ಮಟ್ಟದ ಜನತಾ ದರ್ಶನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಇಂದು ಸ್ವೀಕೃತವಾದ ಅರ್ಜಿಗಳನ್ನು ಪರಿಶೀಲಿಸಿ ತಹಸೀಲ್ದಾರ ಹಾಗೂ ಉಪವಿಭಾಗಾಧಿಕಾರಿಗಳ ಹಂತದಲ್ಲಿ ಪರಿಹಾರ ಒದಗಿಸಬೇಕು. ಮಾಹಿತಿಯನ್ನು ಐಪಿಜಿಆರ್‌ಎಸ್ ತಂತ್ರಾಂಶದಲ್ಲಿ ದಾಖಲಿಸಬೇಕು. ನಮ್ಮ ಹಂತದಲ್ಲಿ ನಿವಾರಣೆಯಾಗುವ ಸಮಸ್ಯೆಗಳಿಗೆ ಸ್ಥಳದಲ್ಲೇ ಅಥವಾ ಕಾಲಮಿತಿಯಲ್ಲಿ ಪರಿಹಾರ ಒದಗಿಸಬೇಕು. ಸರ್ಕಾರದ ಹಂತದಲ್ಲಿ ತೀರ್ಮಾನವಾಗುವ ಸಮಸ್ಯೆಗಳನ್ನು ಸರ್ಕಾರಕ್ಕೆ ಕಳುಹಿಸಲಾಗುವುದು ಎಂದರು.
ಜನತಾದರ್ಶನದಲ್ಲಿ ಮುಖ್ಯವಾಗಿ ಮನೆ ಬಿದ್ದ ಪ್ರಕರಣಗಳಿಗೆ ಸಂಬಂಧಿಸಿದಂತೆ ಅರ್ಜಿಗಳನ್ನು ಹೆಚ್ಚಾಗಿ ಸ್ವೀಕರಿಸಲಾಗಿದೆ. ಆದರೆ ಈಗಾಗಲೇ ತಹಸೀಲ್ದಾರ ಅವರು ಅತಿವೃಷ್ಟಿಯಿಂದ ಬಿದ್ದ ಮನೆಗಳ ಸರ್ವೇಮಾಡಿ ನಿಗಮಕ್ಕೆ ವರದಿ ಸಲ್ಲಿಸಿದ್ದಾರೆ. ನಿಗಮದ ಹಂತದಲ್ಲಿ ಅನುಮೋದನೆ ಬಾಕಿ ಉಳಿದಿವೆ. ಪಡಿತರ ಚೀಟಿಗೆ ಸಂಬಂಧಿಸಿದ ಅರ್ಜಿಗಳನ್ನು ಸ್ವೀಕರಿಸಲಾಗಿದೆ. ಹೊಸದಾಗಿ ರೇಷನ್ ಕಾರ್ಡ್ ಮಾಡಲು ಈಗ ಅವಕಾಶ ಇರುವುದಿಲ್ಲ. ಸರ್ಕಾರದ ಹಂತದಲ್ಲಿ ರೇಷನ್ ಕಾರ್ಡ್ ಪೋರ್ಟಲ್ ಬಂದ್ ಮಾಡಲಾಗಿದೆ. ಮುಂಬರುವ ದಿನಗಳಲ್ಲಿ ಸರ್ಕಾರ ಪುನಃ ಪೋರ್ಟಲ್ ಆರಂಭಿಸಲಿದೆ ಎಂದರು.ವಾರದೊಳಗಾಗಿ ತೆರವುಗೊಳಿಸಿ:
ರಸ್ತೆಗಳ ಸಮಸ್ಯೆ ಕುರಿತಂತೆ ಅರ್ಜಿಗಳನ್ನು ಸಲ್ಲಿಸಿದ್ದು, ಗ್ರಾಮದ ಗಾಂವಠಾಣಾ ನಕಾಶೆಯಲ್ಲಿರುವ ಸರ್ಕಾರಿ ದಾರಿಗಳನ್ನು ಯಾವುದೇ ಕಾರಣಕ್ಕೂ ಅಡ್ಡಿಪಡಿಸುವ ಹಾಗಿಲ್ಲ, ಮುಚ್ಚುವ ಹಾಗಿಲ್ಲ. ಯಾರಾದರೂ ಈ ದಾರಿಗಳನ್ನು ಒತ್ತುವರಿ ಮಾಡಿದ್ದರೆ ಒಂದು ವಾರದೊಳಗೆ ಕಡ್ಡಾಯವಾಗಿ ಅಧಿಕಾರಿಗಳು ತೆರವುಗೊಳಿಸಬೇಕು ಎಂದು ಸೂಚನೆ ನೀಡಿದರು.ಆದರೆ ರೂಢಿಗತ ದಾರಿ, ಬಂಡಿ ದಾರಿಗಳನ್ನು ತೆರವುಗೊಳಿಸಲು ಅಧಿಕಾರಿಗಳಿಗೆ ಯಾವುದೇ ಅಧಿಕಾರ ಇರುವುದಿಲ್ಲ. ಆದಾಗ್ಯೂ ಬೆಳೆಯ ಬಿತ್ತನೆ ಹಾಗೂ ಕಟಾವು ಸಂದರ್ಭದಲ್ಲಿ ದಾರಿ ಮಾಡಿಕೊಡಲು ಅವಕಾಶವಿದೆ. ಉಳಿದಂತೆ ಶಾಶ್ವತವಾಗಿ ದಾರಿ ಮಾಡಿಕೊಡಲು ಸರ್ಕಾರದ ಅಧಿಕಾರಿಗಳಿಗೆ ಅವಕಾಶವಿಲ್ಲ. ಈ ಕುರಿತಂತೆ ರೈತರು ಚರ್ಚಿಸಿ ಪರಿಹಾರ ಕಂಡುಕೊಳ್ಳಬಹುದು ಅಥವಾ ಸಿವಿಲ್ ನ್ಯಾಯಾಲದ ಮೊರೆಹೋಗಬೇಕು ಎಂದರು.
೧೬೩ ಅರ್ಜಿಗಳ ಸ್ವೀಕಾರ:ಸರ್ಕಾರಿ ದಾರಿ ಒತ್ತುವರಿ, ವಿದ್ಯುತ್ ಟ್ರಾನ್ಸ್‌ಫಾರ್ಮರ್ ಬದಲಾವಣೆ ವಿಳಂಬ, ಕೃಷಿ ಪಂಪ್‌ಸೆಟ್‌ಗಳಿಗೆ ವೋಲ್ಟೇಜ್ ತೊಂದರೆ, ರೈತರ ಅವಶ್ಯಕತೆಗೆ ಅನುಗುಣವಾಗಿ ಚೆಕ್ ಡ್ಯಾಂ ನಿರ್ಮಾಣ, ಸರ್ಕಾರಿ ರಸ್ತೆ ಒತ್ತುವರಿ, ಬರ ಪರಿಹಾರ, ಕಾಡು ಪ್ರಾಣಿಗಳ ಹಾವಳಿ ತಡೆ, ಮನೆ ಮಂಜೂರಾತಿ, ಮನೆ ಬಿದ್ದ ಪ್ರಕರಣ, ದಾರಿ ಸಮಸ್ಯೆ, ರೇಷನ್ ಕಾರ್ಡ್ ಸಮಸ್ಯೆ, ಸ್ಮಶಾನ ಭೂಮಿ ಸೇರಿದಂತೆ ಸಾರ್ವಜನಿಕರಿಂದ ೧೬೩ ಅರ್ಜಿಗಳನ್ನು ಸ್ವೀಕರಿಸಲಾಯಿತು.
ಗ್ಯಾರಂಟಿ ಯೋಜನೆಗಳ ನೋಂದಣಿ ಸಮಸ್ಯೆ ಇಲ್ಲ. ಬ್ಯಾಂಕಿನ ಖಾತೆಗೆ ಹಣ ಜಮೆಯಾಗದಿದ್ದರೆ ಮಾಹಿತಿ ನೀಡಿದರೆ ಸಮಸ್ಯೆ ಇತ್ಯರ್ಥಪಡಿಸಲಾಗುವುದು. ಗೃಹಲಕ್ಷ್ಮೀ ಯೋಜನೆ ಫಲಾನುಭವಿಗಳಿಗೆ ಶೇ.೯೯ರಷ್ಟು ಹಣ ಜಮೆ ಮಾಡಲಾಗಿದೆ. ಆಧಾರ್ ಸಿಡಿಂಗ್ ಸೇರಿದಂತೆ ಸಣ್ಣ-ಪುಟ್ಟ ತಾಂತ್ರಿಕ ಸಮಸ್ಯೆ ಸರಿಪಡಿಸಿ ಹಣ ಜಮೆ ಮಾಡಲು ಈಗಾಗಲೇ ಕ್ರಮವಹಿಸಲಾಗಿದೆ. ನಿರ್ದಿಷ್ಟ ಪ್ರಕರಣಗಳಿದ್ದರೆ ಆಯಾ ತಾಲೂಕು ಶಿಶು ಅಭಿವೃದ್ಧಿ ಅಧಿಕಾರಿಗಳನ್ನು ಸಂಪರ್ಕಿಸಿ ಪರಿಹಾರ ಕಂಡುಕೊಳ್ಳಬಹುದು ಎಂದು ಸಲಹೆ ನೀಡಿದರು.ಸ್ಥಳ ಪರಿಶೀಲನೆಗೆ ಸೂಚನೆ:
ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡತೆ ಮುನ್ಸಿಪಲ್ ರಸ್ತೆ ಅತಿಕ್ರಮಣ ದೂರು ಸಲ್ಲಿಕೆಯಾಗಿದ್ದು, ತಕ್ಷಣ ಸ್ಥಳ ಪರಿಶೀಲಿಸಿ ಜನತಾ ದರ್ಶನ ಮುಗಿಯುವುದರೊಳಗಾಗಿ ವರದಿ ಸಲ್ಲಿಸುವಂತೆ ಶಿಗ್ಗಾಂವಿ ಪುರಸಭೆ ಎಂಜಿನಿಯರ್ ಹಾಗೂ ಲೋಕೋಪಯೋಗಿ ಇಲಾಖೆ ಅಭಿಯಂತರರಿಗೆ ಸೂಚನೆ ನೀಡಿದರು.ಬೇಸಿಗೆ ಅವಧಿಯಲ್ಲಿ ಜಾನುವಾರುಗಳಿಗೆ ಕುಡಿಯುವ ನೀರಿಗಾಗಿ ನಿರ್ಮಾಣ ಮಾಡಿರುವ ಸಿಮೆಂಟ್ ತೊಟ್ಟಿಗಳಲ್ಲಿ ಕಸ ತುಂಬಿದವರ ಮೇಲೆ ಕ್ರಮಕೈಗೊಳ್ಳಬೇಕು ಎಂಬ ಸಾರ್ವಜನಿಕರ ದೂರು ಆಲಿಸಿದ ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಕ್ಷಯ್ ಶ್ರೀಧರ್, ಪಂಚಾಯಿತಿವಾರು ಜಾನುವಾರು ನೀರಿನ ತೊಟ್ಟಿಯಲ್ಲಿ ಕಸ ತುಂಬಿದೆ ಎಂಬುದನ್ನು ಪರಿಶೀಲಿಸಿ ಸ್ವಚ್ಛಗೊಳಿಸಿ ನೀರು ತುಂಬಿಸಲಾಗುವುದು ಎಂದರು.
ದುಂಡಶಿ ಅರಣ್ಯ ಪ್ರದೇಶ ವ್ಯಾಪ್ತಿಯಲ್ಲಿರುವ ರೈತರ ಜಮೀನುಗಳಿಗೆ ಹಂದಿ, ಜಿಂಕೆಗಳು ಸೇರಿದಂತೆ ವನ್ಯಜೀವಿಗಳ ಕಾಟದಿಂದ ಬೆಳೆ ರಕ್ಷಿಸಿಕೊಳ್ಳುವುದು ಕಷ್ಟವಾಗಿದೆ. ಬೆಳೆ ರಕ್ಷಣೆಗೆ ತಂತಿಬೇಲಿ ನಿರ್ಮಾಣಕ್ಕೆ ರೈತರು ಮನವಿ ಸಲ್ಲಿಸಿದರು.ಈ ಕುರಿತಂತೆ ಜಿಲ್ಲಾ ಅರಣ್ಯ ಅಧಿಕಾರಿ ಬಾಲಕೃಷ್ಣ ಮಾತನಾಡಿ, ಕಾಡು ಪ್ರಾಣಿ ಹಾವಳಿಯಿಂದ ಬೆಳೆಹಾನಿ ಉಂಟಾದರೆ ಅರಣ್ಯ ಇಲಾಖೆಯಿಂದ ರೈತರಿಗೆ ಪರಿಹಾರ ನೀಡಲಾಗುವುದು. ರೈತರ ಜಮೀನುಗಳಿಗೆ ಕಾಡು ಪ್ರಾಣಿ ಹಾವಳಿ ತಡೆಗೆ ತಡೆಬೇಲಿ ನಿರ್ಮಾಣಕ್ಕೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು. ಸ್ಥಳೀಯ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಈ ಕುರಿತಂತೆ ನಿರ್ದೇಶನ ನೀಡಿ, ಸ್ಥಳೀಯ ರೈತರೊಂದಿಗೆ ಚರ್ಚಿಸಿ ಎಲ್ಲೆಲ್ಲಿ ಬೇಲಿಯ ಅವಶ್ಯವಿದೆ ಎಂಬ ಮಾಹಿತಿಯನ್ನು ಪಡೆಯಲಾಗುವುದು ಎಂದರು.
ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಪೂಜಾರ ವೀರಮಲ್ಲಪ್ಪ, ಜಿಪಂ ಉಪಕಾರ್ಯದರ್ಶಿ ಸೋಮಶೇಖರ ಮುಳ್ಳಳ್ಳಿ, ಉಪವಿಭಾಗಾಧಿಕಾರಿ ಮಹ್ಮದ್ ಖಿಜರ್, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾಧಿಕಾರಿ ಮಮತಾ, ತಹಸೀಲ್ದಾರ ಸಂತೋಷ ಹಿರೇಮಠ, ತಾಪಂ ಕಾರ್ಯನಿರ್ವಹಣಾಧಿಕಾರಿ ವಿಶ್ವನಾಥ ಇತರರು ಉಪಸ್ಥಿತರಿದ್ದರು.