ಜನ ಸೇವೆಯೇ ಜನಾರ್ದನ ಸೇವೆ ಎಂಬ ತತ್ವ ನಂಬಿದ ನಮ್ಮ ಸರ್ಕಾರ ಜನರ ಅಹವಾಲು ಆಲಿಸಿ ಮನೆ ಬಾಗಿಲಲ್ಲೇ ಪರಿಹಾರ ನೀಡಲು ಪ್ರಜಾ ಸೇವೆ ಅಭಿಯಾನ‌ ಕೈಗೊಂಡಿದ್ದೇವೆ. ಇದು ಆಳುವ ಸರ್ಕಾರವಲ್ಲ. ಜನರ ಸಮಸ್ಯೆ ಆಲಿಸುವ ಸರ್ಕಾರ ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.

ಕನ್ನಡಪ್ರಭ ವಾರ್ತೆ ಕಲಬುರಗಿ

ಜನ ಸೇವೆಯೇ ಜನಾರ್ದನ ಸೇವೆ ಎಂಬ ತತ್ವ ನಂಬಿದ ನಮ್ಮ ಸರ್ಕಾರ ಜನರ ಅಹವಾಲು ಆಲಿಸಿ ಮನೆ ಬಾಗಿಲಲ್ಲೇ ಪರಿಹಾರ ನೀಡಲು ಪ್ರಜಾ ಸೇವೆ ಅಭಿಯಾನ‌ ಕೈಗೊಂಡಿದ್ದೇವೆ. ಇದು ಆಳುವ ಸರ್ಕಾರವಲ್ಲ. ಜನರ ಸಮಸ್ಯೆ ಆಲಿಸುವ ಸರ್ಕಾರ ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.

ಕಮಲಾಪುರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ಪ್ರಜಾ ಸೇವೆ ಅಭುಯಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಜೆಗಳೇ ಪ್ರಭುಗಳು. ಪ್ರಜೆಗಳ‌ ಸೇವೆಯೇ ಮೊದಲ ಆದ್ಯತೆ, ನಿಮ್ಮ ಸೇವೆಗೆ ನಿಮ್ಮ ಬಾಗಿಲಿಗೆ‌ ಬಂದಿದ್ದೇವೆ ಎಂದರು.

ಸಿಎಂ ಡಿ.ಕೆ. ಶಿವಕುಮಾರ ಅವರು ಜನರ ಅಹವಾಲು ಕಾಲಮಿತಿಯಲ್ಲಿ ಖಾತ್ರಿಪಡಿಸಲು "ಪ್ರಜಾ ಸೇವಾ " ಎಂಬ ಇಲಾಖೆಯನ್ನೆ ತೆರೆದಿದ್ದಾರೆ. ಇಲ್ಲಿ ಪ್ರತಿ ಅರ್ಜಿಗೆ ಸ್ವೀಕೃತಿ ಸಂಖ್ಯೆ ನೀಡಿ ಕಾಲಮಿತಿಯಲ್ಲಿ ವಿಲೇವಾರಿ ಮಾಡಲಾಗುತ್ತದೆ. ಇನ್ನು ಮುಂದೆ ತಿಂಗಳ ಮೊದಲನೇ, ಮೂರನೇ ಶನಿವಾರ ತಾಲೂಕಿನಲ್ಲಿ ಸಾರ್ವಜನಿಕರ ಅಹವಾಲು ಆಲಿಸುತ್ತೇವೆಂದರು.

ಅನ್ನ, ಅಕ್ಷರ, ಆರೋಗ್ಯ ಆವಿಷ್ಕಾರ ಯೋಜನೆ ಜಿಲ್ಲೆಯಲ್ಲಿ ಜಾರಿಗೊಳಿಸಿದೆ. ಕಳೆದ ವರ್ಷ ರಾಷ್ಟ್ರದಲ್ಲಿಯೇ ದಾಖಲೆ‌ ಪ್ರಮಾಣದಲ್ಲಿ ₹653 ಕೋಟಿ ಬೆಳೆ‌ ಪರಿಹಾರ ಜಿಲ್ಲೆಯ ರೈತರಿಗೆ ನೀಡಲಾಗಿದೆ. ಈ ವರ್ಷ ಸಹ ಜಿಲ್ಲೆಯಲ್ಲಿ 4.50 ಲಕ್ಷ ರೈತರು ಬೆಳೆ‌ ವಿಮೆ‌ ನೋಂದಣಿ ಮಾಡಿಕೊಂಡಿದ್ದು, ಈ ಬಾರಿಯೂ ಪ್ರಾಮಾಣಿಕ ಪರಿಹಾರ ನೀಡಲಾಗುವುದು ಎಂದರು.

ಶಾಸಕ‌ ಬಸವರಾಜ ಮತ್ತಿಮೂಡ ಅವರು ಬರಗಾಲ‌ ಪೀಡಿತ ಘೋಷಣೆ ಮಾಡಬೇಕೆಂಬ ಪ್ರಸ್ತಾವನೆ ಕುರಿತು ಮಾತನಾಡಿದ ಸಚಿವ ಪ್ರಿಯಾಂಕ್ ಖರ್ಗೆ, ಕೇಂದ್ರದ ಎನ್.ಡಿ‌.ಆರ್.ಎಫ್ ಮಾರ್ಗಸೂಚಿಯೆ ಸರ್ಕಾರಕ್ಕೆ ಬರಗಾಲ ಪ್ರದೇಶ ಘೋಷಣೆಗೆ ಕಟ್ಟಿ ಹಾಕಿದೆ. ಇದು ಸರಳೀಕರಣಗೊಳ್ಳಬೇಕೆಂದರು.

ಮಹಿಳೆಯನ್ನು ಮಾತನಾಡಿಸಿದ ಸಿ.ಎಂ: ಕಮಲಾಪೂರ ಪ್ರಜಾ ಸೇವೆಯಲ್ಲಿ ಭಾಗವಹಿಸಿದ ಶೇಖಮ್ಮ, ಮನೆ ನಿರ್ಮಾಣಕ್ಕೆ ಎರಡು ಕಂತು ಹಣ ಬಂದಿದೆ, ಮೂರನೇ ಕಂತು ಬಂದಿಲ್ಲ. ಗಂಡ ನಿಧನ ಹೊಂದಿದ್ದಾರೆ, ಮಕ್ಕಳು ಇರಲು, ಮನೆ ಕಕಟ್ಟಿಸಿಕೊಡಿ ಎಂದು ಸಿ.ಎಂ.ಗೆ ಬೇಡಿಕೆ ಇಟ್ಟರು. ಸಚಿವ ಪ್ರಿಯಾಂಕ್ ನಿಮ್ಮ ಬೇಡಿಕೆ ಈಡೇರಿಸಲಿದ್ದಾರೆಂದರು. ಶಾಸಕ‌ ಬಸವರಾಜ ಮತ್ತಿಮೂಡ ಅವರು ಸಿ.ಎಂ. ಅವರೊಂದಿಗೆ ಮಾತನಾಡಿ, ಕಮಲಾಪೂರ ತಾಲೂಕು ಬರಗಾಲ ಪೀಡಿತ ಪ್ರದೇಶ ಎಂದು ಘೋಷಿಸಬೇಕೆಂದು ಮನವಿ ಮಾಡಿಕೊಂಡರು.

ಎಂಎಲ್‌ಸಿ ತಿಪ್ಪಣ್ಣಪ್ಪ ಕಮಕನೂರ ಮಾತನಾಡಿ, ದೇಶದಲ್ಲಿಯೇ ಮಾದರಿಯಾಗಿ ಪ್ರಜಾ ಸೇವೆ ಅಭಿಯಾನ ಸರ್ಕಾರ ಕೈಗೊಂಡಿದೆ ಎಂದರು.

40 ಸ್ಟಾಲ್ ಸ್ಥಾಪನೆ: ಪ್ರಜಾ ಸೇವೆ ಅಂಗವಾಗಿ ತಾಲೂಕಿನ 19 ಗ್ರಾಪಂ ವಾರು ಮತ್ತು‌ ಕಮಲಾಪುರ ಪಟ್ಟಣ ಪಂಚಾಯತಿಗೆ ಸಂಬಂಧಿಸಿದಂತೆ ಸ್ಟಾಲ್ ತೆರೆದು ಸಾರ್ವಜನಿಕರ ಅರ್ಜಿ ಸ್ವೀಕರಿಸಲಾಯಿತು. ಕೃಷಿ, ತೋಟಗಾರಿಕೆ, ರೇಷ್ಮೆ, ಮೀನುಗಾರಿಕೆ, ಕಂದಾಯ, ಗ್ರಾಮೀಣಾಭಿವೃದ್ಧಿ, ಪಟ್ಟಣ ಪಂಚಾಯತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಲೀಡ್ ಬ್ಯಾಂಕ್,‌ ಎಸ್.ಐ.ಆರ್., ವಿಬಿ-ಜಿ-ರಾಮ್ ಜಿ, ಭಾರತ ಜೋಡೊ ಯುವ ಸಂಘ, ಸಮಾಜ ಕಲ್ಯಾಣ, ಅಲ್ಪಸಂಖ್ಯಾತ, ಹಿಂದುಳಿದ, ಆಹಾರ, ಜೆಸ್ಕಾಂ, ಯುವ ನಿಧಿ, ಸಹಕಾರ ಸೇರಿದಂತೆ ಹೀಗೆ ಒಟ್ಟಾರೆ 40 ಇಲಾಖೆಗಳ ಸ್ಟಾಲ್ ತೆರೆದು ಯೋಜನೆಗಳ ಕುರಿತು ಅರಿವು ಮೂಡಿಸಲಾಯಿತು.

ಸಾಲ‌ ಮನ್ನಾ ಮಾಡಿ: ಜಿಲ್ಲೆಯ 11 ತಾಲೂಕುಗಳು ಬರಗಾಲಕ್ಕೆ ತುತ್ತಾಗಿವೆ. ಬೆಳೆದ ಬೆಳೆಗಳು ರೈತರ ಕೈಗೆ ಹತ್ತಿಲ್ಲ.‌ ಎರಡ್ಮೂರು ಬಾರಿ ಬಿತ್ತಿದರೂ ಮಳೆ ಇಲ್ಲದ ಕಾರಣ ಬೆಳೆಯಲ್ಲಿ ಬೆಳವಣಿಗೆ ಕಂಡಿಲ್ಲ. ಕುಡಿವ ನೀರಿಗೆ ಹಾಹಾಕರ ಇದೆ. ಇತ್ತೀಚೆಗೆ ಜಿಲ್ಲೆಯ 6 ತಾಲೂಕು ಬರಗಾಲ ಪೀಡಿತ ಪ್ರದೇಶವೆಂದು ಘೋಷಣೆಯಾಗಿದೆ. ಕಮಲಾಪೂರ ಸೇರಿ 5 ತಾಲೂಕು ಬಾಕಿ ಇದ್ದು, ಉಳಿದ ತಾಲೂಕುಗಳನ್ನು ಕೂಡಲೆ‌ ಬರಗಾಲ ಘೋಷಿಸಿ, ರೈತರಿಗೆ ಎಕರೆಗೆ ₹50 ಸಾವಿರ ಪರಿಹಾರ ಘೋಷಿಸಬೇಕು ಮತ್ತು ಸಂಕಷ್ಟದಲ್ಲಿರುವ ರೈತರ ಬೆಳೆ ಸಾಲ ಗರಿಷ್ಟ ₹5 ಲಕ್ಷದವರೆಗೆ ಸಾಲ ಮನ್ನಾ ಮಾಡಬೇಕೆಂದು ಗ್ರಾಮೀಣ ಶಾಸಕ ಬಸವರಾಜ ಮತ್ತಿಮೂಡ ಸಚಿವ‌ ಪ್ರಿಯಾಂಕ್‌ ಖರ್ಗೆ ಅವರಿಗೆ ‌ಮನವಿ ಮಾಡಿದರು.

ಶಾಸಕ ಅಲ್ಲಮಪ್ರಭು ಪಾಟೀಲ, ಅಧ್ಯಕ್ಷ ಮಹೆಮೂದ್ ಚಿಸ್ತಿ, ಜೆಸ್ಕಾಂ ಅಧ್ಯಕ್ಷ ಪ್ರವೀಣ ಪಾಟೀಲ, ಕೆ.ಕೆ.ಆರ್.ಟಿ.ಸಿ ಅರುಣಕುಮಾರ ಪಾಟೀಲ, ಕುಡಾ ಅಧ್ಯಕ್ಷ‌ ಮಜಹರ್ ಆಲಂ ಖಾನ್, ಕಾಡಾ‌ ಅಧ್ಯಕ್ಷ ಡಾ.ಅಬ್ದುಲ್ ರಶೀದ್, ಚಂದ್ರಿಕಾ ಪರಮೇಶ್ವರ್, ಮಾಜಿ‌ ಸಚಿವ ರೇವುನಾಯಕ್ ಬೆಳಮಗಿ, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಸುಬೋಧ ಯಾದವ, ಐ.ಜಿ.ಪಿ. ಶಾಂತನು ಸಿನ್ಹಾ, ಕೆ.ಕೆ.ಆರ್.ಟಿ.ಸಿ. ಎಂ.ಡಿ. ಡಾ. ಬಿ. ಸುಶೀಲಾ, ಡಿಸಿ ಇಕ್ರಂ ಶರೀಫ್, ಎಸ್.ಪಿ. ಅಡ್ಡೂರು ಶ್ರೀನಿವಾಸುಲು, ಜಿಪಂ ಸಿಇಒ ರಾಹುಲ್ ಸಂಕನೂರು, ಸಹಾಯಕ ಅಯುಕ್ತ ಸಾಹಿತ್ಯ ಅಲದಕಟ್ಟಿ, ಪ್ರಭು ರೆಡ್ಡಿ, ತಹಸೀಲ್ದಾರ್‌ ಮೊಹಮ್ಮದ್ ಮೋಹಸೀನ್ ಇದ್ದರು. ಅಪರ‌ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ ಸ್ವಾಗತಿಸಿದರು.

ಮೂರು ವರ್ಷದಿಂದ ಮಾಶಾಸನ ಬಂದಿಲ್ಲ. ಹಿಂದೆ ಮಾಸಿಕ‌ ₹1,200 ಬರುತ್ತಿತ್ತು, ಇದೀಗ‌ ನಿಂತಿದೆ. ಪಿಂಚಣಿ ಮತ್ತೆ ಆರಂಭಿಸಿ ಎಂದು ಸಚಿವರಲ್ಲಿ ಮನವಿ ಮಾಡಿಕೊಂಡಿದ್ದು,‌ ಮತ್ತೆ ಶುರು ಮಾಡಿಸುವುದಾಗಿ ಸಚಿವರು ಭರವಸೆ‌ ನೀಡಿದ್ದಾರೆ. ಪತಿ ಇಲ್ಲ, ಇದ್ದೊಬ್ಬ ಮಗನೂ ಸರಿಯಾಗಿ ನೋಡುತ್ತಿಲ್ಲ. ಪಿಂಚಣಿ ಬಂದರೆ ಜೀವನ ನಡೆದುಕೊಂಡು ಹೋಗುತ್ತೆ ಎಂದು ವಿ.ಕೆ.ಸಲಗರ್ ಗ್ರಾಮದ ವಯೋವೃದ್ಧೆ ಸಿದ್ದಮ್ಮ ಹೇಳಿದರು.