ಪ್ರವಾಸಿ ತಾಣದ ಗಂಭೀರ ಸಮಸ್ಯೆ ಕೂಡಲೇ ಬಗೆಹರಿಸಿ: ದಿನಕರ ಶೆಟ್ಟಿ

| Published : Jun 19 2024, 01:01 AM IST

ಪ್ರವಾಸಿ ತಾಣದ ಗಂಭೀರ ಸಮಸ್ಯೆ ಕೂಡಲೇ ಬಗೆಹರಿಸಿ: ದಿನಕರ ಶೆಟ್ಟಿ
Share this Article
  • FB
  • TW
  • Linkdin
  • Email

ಸಾರಾಂಶ

ಎಲ್ಲೆಂದರಲ್ಲಿ ಚಿರೆಕಲ್ಲು ಗಣಿಗಾರಿಕೆಯು ನಡೆಯುತ್ತಿದೆ. ಗುಡ್ಡವನ್ನು ಬಗೆದು ಹೊಂಡ ಮಾಡಲಾಗಿದೆ. ಈ ಬಗ್ಗೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ಸೂಚಿಸಬೇಕು. ಈ ಅಕ್ರಮ ದಂಧೆಗೆ ಕಡಿವಾಣ ಹಾಕುವಂತೆ ಸಭೆಯಲ್ಲಿ ಆಗ್ರಹ ಕೇಳಿಬಂತು.

ಗೋಕರ್ಣ: ಪ್ರವಾಸಿ ತಾಣದ ಗಂಭೀರ ಸಮಸ್ಯೆಗಳ ಕುರಿತು ಶಾಸಕ ದಿನಕರ ಶೆಟ್ಟಿ ಅವರು ಇಲ್ಲಿನ ಗ್ರಾಮ ಪಂಚಾಯಿತಿ ಸಭಾಭವನದಲ್ಲಿ ಜನಪ್ರತಿನಿಧಿಗಳು ಮತ್ತು ಸಾರ್ವಜನಿಕರ ಸಭೆ ನಡೆಸಿ ಚರ್ಚಿಸಿ ನಂತರ ಸ್ಥಳ ಪರಿಶೀಲಿಸಿದರು.

ಮಹಾಬಲೇಶ್ವರ ಮಂದಿರದ ತೀರ್ಥ ಹೋಗುವ ಸ್ಥಳ ಸೋಮಸೂತ್ರದಿಂದ ಗರ್ಭಗುಡಿಗೆ ನೀರು ನುಗ್ಗುವ ಸಮಸ್ಯೆ ಕುರಿತು ಚರ್ಚಿಸಿದ ಶಾಸಕರು ಸ್ಥಳೀಯರು ಹಾಗೂ ಗ್ರಾಮ ಪಂಚಾಯಿತಿ ಸದಸ್ಯರ ಅಭಿಪ್ರಾಯವನ್ನು ಪಡೆದರು. ನಂತರ ಸ್ಮಶಾನ ಕಾಳಿ ಮಂದಿರಕ್ಕೆ ತೆರಳಲು ಸೇತುವೆ ನಿರ್ಮಾಣದ ವೇಳೆ ಹಾಕಿದ ಮಣ್ಣನ್ನು ತೆಗೆಯದಿರುವುದರಿಂದ ಪ್ರಸ್ತುತ ನೀರು ತುಂಬಿದ್ದು, ಇದಲ್ಲದೆ ಸಮುದ್ರದ ಅಲೆ ಹೆಚ್ಚಾದ ಅಂದರೆ ಭರತ್‍ದ ಸಮಯದಲ್ಲಿ ಸಂಗಮನಾಲಾ ನೀರು ಸಮುದ್ರಕ್ಕೆ ಸೇರದೆ ನೀರು ವಾಪಸ್ ಬಂದು ಸೋಮಸೂತ್ರ ಸೇರುವುದನ್ನು ವಿವರಿಸಲಾಯಿತು. ಈ ಬಗ್ಗೆ ಲೋಕೋಪಯೋಗಿ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಿ ಸೂಕ್ತ ಪರಿಹಾರಕ್ಕೆ ಸೂಚಿಸಿದರು.

ಗೋಕರ್ಣದಲ್ಲಿ ಎಲ್ಲೆಂದರಲ್ಲಿ ಗುಡ್ಡ ಕಡಿಯುತ್ತಿದ್ದು, ಇದರಿಂದ ಮಳೆ ಬಂದ ಸಮಯದಲ್ಲಿ ಬೃಹದಾಕಾರದಲ್ಲಿ ಮಣ್ಣಿನ ರಾಶಿ ಚರಂಡಿ ತುಂಬಿ ರಸ್ತೆಯಲ್ಲಿ ಜಲಾವೃತಗೊಂಡಿದ್ದು, ಚರಂಡಿ ಎಷ್ಟೇ ಸ್ವಚ್ಛಗೊಳಿಸಿದರೂ ಪುನಃ ರಾಡಿ ನೀರು ಬಂದು ಸಂಚಾರಕ್ಕೆ ತೊಂದರೆಯಾಗುತ್ತಿದೆ. ಎಲ್ಲೆಂದರಲ್ಲಿ ಚಿರೆಕಲ್ಲು ಗಣಿಗಾರಿಕೆಯು ನಡೆಯುತ್ತಿದೆ. ಗುಡ್ಡವನ್ನು ಬಗೆದು ಹೊಂಡ ಮಾಡಲಾಗಿದೆ. ಈ ಬಗ್ಗೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ಸೂಚಿಸಬೇಕು. ಈ ಅಕ್ರಮ ದಂಧೆಗೆ ಕಡಿವಾಣ ಹಾಕುವಂತೆ ಸಭೆಯಲ್ಲಿ ಆಗ್ರಹ ಕೇಳಿಬಂತು.

ಕೃಷಿ ಇಲಾಖೆಯಿಂದ ನೀಡುವ ರಿಯಾಯಿತಿ ದರದಲ್ಲಿ ನೀಡುವ ಜಯ ತಳಿಯ ಬಿತ್ತನೆ ಬೀಜ ರೈತರಿಗೆ ಸಿಗುತ್ತಿಲ್ಲ. ಬಿತ್ತನೆ ಸಮಯವಾದ್ದರಿಂದ ತಕ್ಷಣ ಪೂರೈಕೆ ಮಾಡುವಂತೆ ರೈತರು ಆಗ್ರಹಿಸಿದರು.ಕೃಷಿ ಇಲಾಖೆ ಅಧಿಕಾರಿಗಳು ಮಾತನಾಡಿ, ಬೇರೆ ತಳಿಯ ಭತ್ತದ ಲಭ್ಯವಿದ್ದು, ಬಳಸುವಂತೆ ವಿನಂತಿಸಿದರು. ಈ ಪ್ರದೇಶಕ್ಕೆ ಜಯ ತಳಿ ಸೂಕ್ತವಾಗಿದ್ದು, ಇದನ್ನೆ ಪೂರೈಸುವಂತೆ ಪಟ್ಟು ಹಿಡಿದರು. ಶಾಸಕರು ಮಾತನಾಡಿ, ಈಗಾಗಲೇ ಉಸ್ತುವಾರಿ ಸಚಿವರಿಗೆ ಅಗತ್ಯ ಬಿತ್ತನೆ ಬೀಜ ಇಲ್ಲಿಗೆ ಪೂರೈಸುವಂತೆ ತಿಳಿಸಿದ್ದೇನೆ. ಅವರು ಸ್ಪಂದಿಸಿದ್ದಾರೆ. ಆದರೇ ನೀವೇ ಅಭಾವವಿದೆ ಎಂದು ಹೇಳುತ್ತಿದ್ದಿರಿ ಎಂದು ಕೃಷಿ ಇಲಾಖೆ ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡು ತಕ್ಷಣ ಪೂರೈಸುವಂತೆ ತಿಳಿಸಿದರು.

ಪ್ರತಿ ಮನೆ ನೀರಿನ ಸಂರ್ಪಕದ ಮೀಟರ್ ಅಳವಡಿಕೆ ಹಾಗೂ ಶುಲ್ಕ ವಸೂಲಿ ಇತರ ಮಾಹಿತಿ ಬಗ್ಗೆ ಶಾಸಕರು ಪ್ರಶ್ನಿಸಿದಾಗ, ಸಮರ್ಪಕ ಉತ್ತರ ನೀಡದ ಪಂಚಾಯಿತಿ ಅಧಿಕಾರಿಗಳಿಗೆ ತೀವ್ರ ತರಾಟೆಗೆ ತೆಗೆದುಕೊಂಡು ಪ್ರತಿಯೊಂದು ಮನೆಯಲ್ಲಿ ನೀರಿನ ಮೀಟರ್ ಅಳವಡಿಸಿದ್ದನ್ನು ಪರಿಶೀಲಿಸಿ ಬಿಲ್‌ ನೀಡಬೇಕು. ನೀರಿನ ಸಂಗ್ರಹದ ಪ್ರಮಾಣ ಹಾಗೂ ಪೂರೈಕೆಯಾಗುತ್ತಿರುವ ನೀರು ಸಮನಾಗಿದೆಯೇ ಹಾಗೂ ಇಲ್ಲಿ ಪೋಲಾಗುತ್ತಿಯೇ ಎಂಬುದನ್ನು ತಿಳಿಯಬೇಕು ಅಕ್ರಮವಾಗಿ ಸಂಪರ್ಕವಿದ್ದರೆ ಕ್ರಮ ಕೈಗೊಳ್ಳಬೇಕು ಎಂದು ಪಂಚಾಯಿತಿ ಅಧಿಕಾರಿಗೆ ಖಡಕ್ ಎಚ್ಚರಿಕೆ ನೀದರು.

ಲಕ್ಷಾಂತರ ರುಪಾಯಿ ವೆಚ್ಚದಲ್ಲಿ ನೂತನ ಮೀನು ಮಾರುಕಟ್ಟೆಯನ್ನು ನಿರ್ಮಿಸಿ ಹಾಗೆ ಬಿಡಲಾಗಿದ್ದು, ರಸ್ತೆ ಅಂಚಿನಲ್ಲಿ ಹೊಲಸು ರಾಡಿ ನೀರಿನ ಬಳಿ ಕುಳಿತು ಮೀನು ಮಾರುತ್ತಿದ್ದು, ಇದನ್ನು ಸ್ಥಳಾಂತರಿಸಲು ಸಾರ್ವಜನಿಕರು ಆಗ್ರಹಿಸಿದರು.

ಗ್ರಾಪಂ ಸದಸ್ಯರಾದ ಪ್ರಭಾಕರ್ ಪ್ರಸಾದ್, ರಮೇಶ್ ಪ್ರಸಾದ್, ಸುಜಯ್ ಶೆಟ್ಟಿ, ಗಣಪತಿ ನಾಯ್ಕ್, ಭಾರತೀ ದೇವತೆ, ಶೇಖರ್ ನಾಯ್ಕ್, ಮೋಹನ್ ಮೋಡಂಗಿ, ಶಾರದಾ ಮೂಡಂಗಿ ಸಾಮಾಜಿಕ ಕಾರ್ಯಕರ್ತ ಚಂದ್ರಹಾಸ್ ನಾಯಕ್, ನಾಡುಮಾಸ್ಕೇರಿ ಗ್ರಾಪಂ ಸದಸ್ಯ ರಾಜೇಶ ನಾಯಕ, ಚಂದ್ರಶೇಖರ್ ನಾಯ್ಕ್, ನಾಗೇಶ ಸೂರಿ, ಗಣೇಶ ಪಂಡಿತ, ದಯಾನಂದ ನಾಯ್ಕ ಮತ್ತಿತರರು ಸ್ಥಳೀಯ ಸಮಸ್ಯೆಯನ್ನು ವಿವರಿಸಿದರು.

ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುಮನಾ ಗೌಡ, ಉಪಾಧ್ಯಕ್ಷೆ ನಾತಲಾ ರೆಬ್ಬೆಲ್ಲೂ ಉಪಸ್ಥಿತಿಯಲ್ಲಿ ನಡೆದ ಸಭೆಯಲ್ಲಿ ಲೋಕೋಪಯೋಗಿ ಇಲಾಖೆ ಕೃಷಿ ಇಲಾಖೆ ನೀರಾವರಿ ಇಲಾಖೆ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು. ಕಾರ್ಯದರ್ಶಿ ವಿನಾಯಕ ಸಿದ್ದಾಪುರ ನಿರ್ವಹಿಸಿದರು.ಸ್ಥಳ ಪರಿಶೀಲನೆ

ಮಹಾಬಲೇಶ್ವರ ಮಂದಿರದ ತೀರ್ಥ ಸೋಮಸೋತ್ರ ಸಂಗಮನಾಲಾ ಸೇರುವ ಸ್ಥಳವನ್ನು ಶಾಸಕರು ಭೇಟಿ ನೀಡಿ ಮಂದಿರದ ಮೇಲುಸ್ತುವಾರಿ ಸಮಿತಿ ಸದಸ್ಯರಾದ ವೇ. ಮಹಾಬಲ ಉಪಾಧ್ಯ, ಮಂದಿರದ ವ್ಯವಸ್ಥಾಪಕರು ಹಾಗೂ ಸಿಬ್ಬಂದಿಯಿಂದ ಮಾಹಿತಿ ಪಡೆದು ನೀರು ಒಳಬರದಂತೆ ಜಂತ್ರಡ್ಡಿ ಮಾದರಿಯಲ್ಲಿ ಗೇಟ್ ಅಳವಡಿಸಲು ಸೂಚಿಸಿದರು.

ನಂತರ ಬಸ್ ನಿಲ್ದಾಣಕ್ಕೆ ತೆರಳಿ, ಅಲ್ಲಿನ ಪರಿಸ್ಥಿತಿಯನ್ನು ಅವಲೋಕಿಸಿದ ಶಾಸಕರು ಕುಡಿಯುವ ನೀರು, ಬಸ್ ನಿಲ್ದಾಣ ಸೋರುವುದು ಮತ್ತಿತರ ಸಮಸ್ಯೆಯನ್ನು ತಕ್ಷಣ ಬಗೆಹರಿಸುವಂತೆ ವಾಯವ್ಯ ಕರ್ನಾಟಕ ರಾಜ್ಯ ರಸ್ತೆಗಳಿಗೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಿಗೆ ದೂರವಾಣಿ ಕರೆ ಮಾಡಿ ಸೂಚಿಸಿದರು.