ಕುಂದಗೋಳ ತಾಲೂಕಿನಲ್ಲಿ ಗೋವಿನಜೋಳದ ಸುಗ್ಗಿ ಮುಗಿಯುತ್ತಿದ್ದರೂ ಈ ವರೆಗೆ ಸರ್ಕಾರಿ ಖರೀದಿ ಕೇಂದ್ರ ಪ್ರಾರಂಭಿಸಿಲ್ಲ. ಇದರಿಂದ ರೈತರು ಅನಿವಾರ್ಯವಾಗಿ ದಲ್ಲಾಳಿಗಳಿಗೆ ಕಡಿಮೆ ಬೆಲೆಗೆ ಬೆಳೆ ಮಾರಾಟ ಮಾಡುವಂತಾಗಿದೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದರು.

ಕುಂದಗೋಳ:

ತಾಲೂಕಿನ ರೈತರು ಎದುರಿಸುತ್ತಿರುವ ಗೋವಿಜೋಳ ಹಾಗೂ ಕಡಲೆ ಖರೀದಿ ಕೇಂದ್ರದ ಸಮಸ್ಯೆ ಸೇರಿದಂತೆ ವಿವಿಧ ಬೇಡಿಕೆ ಈಡೇರಿಸುವಂತೆ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ತಾಲೂಕು ಘಟಕದಿಂದ ಗುರುವಾರ ತಹಸೀಲ್ದಾರ್‌ಗೆ ಮನವಿ ಸಲ್ಲಿಸಲಾಯಿತು.

ತಾಲೂಕಿನಲ್ಲಿ ಗೋವಿನಜೋಳದ ಸುಗ್ಗಿ ಮುಗಿಯುತ್ತಿದ್ದರೂ ಈ ವರೆಗೆ ಸರ್ಕಾರಿ ಖರೀದಿ ಕೇಂದ್ರ ಪ್ರಾರಂಭಿಸಿಲ್ಲ. ಇದರಿಂದ ರೈತರು ಅನಿವಾರ್ಯವಾಗಿ ದಲ್ಲಾಳಿಗಳಿಗೆ ಕಡಿಮೆ ಬೆಲೆಗೆ ಬೆಳೆ ಮಾರಾಟ ಮಾಡುವಂತಾಗಿದೆ. ತಕ್ಷಣವೇ ಗೋವಿನಜೋಳ ಹಾಗೂ ಕಡಲೆ ಖರೀದಿ ಕೇಂದ್ರ ತೆರೆಯಬೇಕು ಎಂದು ಒತ್ತಾಯಿಸಿದರು.

ತಾಲೂಕಿನಾದ್ಯಂತ ರೈತರ ಜಮೀನುಗಳಿಗೆ ತೆರಳುವ ದಾರಿ ಸಂಪೂರ್ಣವಾಗಿ ಹದಗೆಟ್ಟಿವೆ. ಸರ್ಕಾರ ಜಾರಿಗೆ ತಂದಿರುವ “ನಮ್ಮ ಹೊಲ ನಮ್ಮ ದಾರಿ” ಯೋಜನೆಯಡಿ ರಸ್ತೆ ನಿರ್ಮಿಸುವಂತೆ ಒತ್ತಾಯಿಸಿದರು.

ಸಂಶಿ ಮತ್ತು ಅತ್ತಿಗೇರಿ ರಸ್ತೆಯು ಅತ್ಯಂತ ಕಳಪೆಯಾಗಿದ್ದು, ಕೂಡಲೇ ದುರಸ್ತಿಗೊಳಿಸಬೇಕು. ತರ್ಲಘಟ್ಟ ಗ್ರಾಮದ ರೈತ ಮಹಬೂಬಸಾಬ್‌ ಸುಂಕದ ಈಚೆಗೆ ಆತ್ಮಹತ್ಯೆ ಮಾಡಿಕೊಂಡಿದ್ದು, ಅವರ ಕುಟುಂಬಕ್ಕೆ ₹ 25 ಲಕ್ಷ ಪರಿಹಾರ ಧನ ವಿತರಿಸುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಸಬೇಕೆಂದು ಮನವಿ ಸಲ್ಲಿಸಿದರು.

ಈ ವೇಳೆ ತಾಲೂಕು ಅಧ್ಯಕ್ಷ ಗುರುಪಾದಪ್ಪ ಐಂಕದ, ಜೆಡಿಎಸ್ ತಾಲೂಕು ಅಧ್ಯಕ್ಷ ಶಂಕರಗೌಡ ದೊಡ್ಡಮನಿ, ರಾಜ್ಯ ರೈತ ಸಂಘ (ವಾಸುದೇವ ಮೇಟಿ ಬಣ) ರಾಜ್ಯ ಉಪಾಧ್ಯಕ್ಷ ವೆಂಕನಗೌಡ ಕಂಠೆಪ್ಪಗೌಡ್ರ, ಪಿಎಲ್‌ಡಿ ಬ್ಯಾಂಕ್ ನಿರ್ದೇಶಕ ಚಂದ್ರು ಕುರುಬರ, ರೈತ ಸಂಘದ ಮಹಿಳಾ ಜಿಲ್ಲಾಧ್ಯಕ್ಷೆ ಶಂಕ್ರಮ್ಮ ಸುತಾರ, ಸಣ್ಣಮಾನಪ್ಪ ಕಮ್ಮಾರ, ದೇವಪ್ಪ ಇಚ್ಚಂಗಿ ಸೇರಿ ಹಲವರಿದ್ದರು.