ಸಾರಾಂಶ
ಕನ್ನಡಪ್ರಭ ವಾರ್ತೆ ಇಂಡಿ
ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮನೆ ಮನೆಗೆ, ಪ್ರತಿ ಗ್ರಾಮದ ವಸತಿ ಪ್ರದೇಶಳಿಗೆ ಭೇಟಿ ನೀಡಿ ಎಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆಯೋ ಅಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು. ಕುಡಿಯುವ ನೀರು ಪೂರೈಸುವುದಕಿಂತ ಮುಂಚಿತವಾಗಿ ನೀರಿನ ಗುಣಮಟ್ಟ ಪರೀಕ್ಷೆ ಮಾಡಿ ಶುದ್ಧ ಕುಡಿಯುವ ನೀರನ್ನು ಒದಗಿಸಬೇಕು ಎಂದು ಸಿಇಒ ರಿಷಿ ಆನಂದ ಪಿಡಿಒಗಳಿಗೆ ಸೂಚನೆ ನೀಡಿದರು.ತಾಲೂಕ ಪಂಚಾಯತಿ ಸಭಾಭವನದಲ್ಲಿ ಗ್ರಾಮದ ಸ್ವಚ್ಛತೆ, ಕುಡಿಯುವ ನೀರಿನ ಸಮಸ್ಯೆ ಹಾಗೂ ಅಂಗನವಾಡಿ ಕೇಂದ್ರಗಳ ಪ್ರಗತಿ ಪರಿಶೀಲನಾ ಸಭೆ ಹಾಗೂ ಇಂಡಿ ಮತ್ತು ಚಡಚಣ ತಾಲೂಕಿನ ಎಲ್ಲ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳ ಸಭೆಯ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು. ಕುಡಿಯುವ ನೀರಿನ ಮೂಲಗಳಿಂದ ನೀರು ಪೂರೈಸಬೇಕು. ಸಮಸ್ಯೆ ಇದ್ದಲ್ಲಿ ತಾಲೂಕು ಪಂಚಾಯತಿಗೆ ಮಾಹಿತಿ ನೀಡಿ ಕಾರ್ಯನಿರ್ವಾಹಕ ಅಧಿಕಾರಿಗಳು ಎಇಇ ಸಹಾಯಕ ಅಭಿಯಂತರರು ಜೊತೆ ಚರ್ಚಿಸುತ್ತಾರೆ. ಗ್ರಾಮ ಪಂಚಾಯಿತಿಗಳಲ್ಲಿ ಸಮಸ್ಯೆ ಬರುವುದಕ್ಕಿಂತ ಮುಂಚೆ ಪರಿಹಾರ ಕಂಡುಕೊಳ್ಳಿ ಎಂದು ತಿಳಿಸಿದರು.
ಜಿಲ್ಲೆಯಲ್ಲಿ ಶೇ.90 ರಷ್ಟು ಶಾಲೆಗಳಲ್ಲಿ, ಅಂಗನವಾಡಿ ಕೇಂದ್ರಗಳಲ್ಲಿ ನೀರಿನ ವ್ಯವಸ್ಥೆ ಇದೆ. ಇನ್ನು ಶೇ.10ರಷ್ಟು ನೀರಿನ ವ್ಯವಸ್ಥೆ ಮಾಡಬೇಕಾಗಿದೆ. ಪಂಚಾಯತಿ ವ್ಯಾಪ್ತಿಯಲ್ಲಿ ಶಾಲೆಗಳು, ಅಂಗನವಾಡಿಗಳು, ಗ್ರಂಥಾಲಯಗಳು ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಮಹತ್ವದಾಗಿದೆ. ಹಾಗಾಗಿ ಎಲ್ಲ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ನೀರು ಮತ್ತು ನೈರ್ಮಲ್ಯ ಇಲಾಖೆ ಸಹಾಯಕ ಅಭಿಯಂತರರ ಜೊತೆ ಜಂಟಿಯಾಗಿ ಕೆಲಸ ಮಾಡಬೇಕು ಎಂದು ಸೂಚನೆ ನೀಡಿದರು.ಅಂಗನವಾಡಿ ಕೇಂದ್ರಗಳ ಸುತ್ತ - ಮುತ್ತಲಿನ ಪರಿಸರ ಸ್ವಚ್ಛತೆವಾಗಿರುವಂತೆ ನೋಡಿಕೊಳ್ಳಬೇಕು. ಮಕ್ಕಳ ಆರೋಗ್ಯಕ್ಕೆ ಮೊದಲ ಆದ್ಯತೆ ನೀಡಿ , ಪೋಲಿಯೋ ವೈರಸ್ ರೋಗದ ಉದಾಹರಣೆ ನೀಡಿ ರೋಗರುಜನೆ ಬರದ ಹಾಗೆ ಅಂಗನವಾಡಿ ಸುತ್ತ ಮುತ್ತ ಸ್ವಚ್ಛತೆ ಕಾಯ್ದುಕೊಂಡಲ್ಲಿ ಶೇ.60 ರಿಂದ 70 ರಷ್ಟು ಮಕ್ಕಳು ಆರೋಗ್ಯವಾಗಿರುತ್ತವೆ. ಎಲ್ಲ ಕೇಂದ್ರದಲ್ಲಿ ಸ್ವಚ್ಛತೆತೆ ಮಾಡಲೇ ಬೇಕು ಎಂದು ಸೂಚಿಸಿದರು. ಹಾಗೆಯೇ ಅಂಗನವಾಡಿ ಕೇಂದ್ರಗಳಿಗೆ ಆಟಿಕೆ ಸಾಮಾನುಗಳು, ಒಳ್ಳೆಯ ಪುಸ್ತಕಗಳು, ಕಲಿಕಾ ಸಾಮಗ್ರಿಗಳು ಶೇ.100 ರಷ್ಟು ಕೊಡಬೇಕು ಎಂದು ಪಿಡಿಒಗಳಿಗೆ ಸೂಚಿಸಿದರು.ನರೇಗಾ ಯೋಜನೆಯಡಿಯಲ್ಲಿ ಆದ್ಯತೆ ಮೇರೆಗೆ ಕಾಮಗಾರಿಗಳನ್ನು ಪ್ರಾರಂಭಿಸಿ ನಿಗದಿತ ಸಮಯದಲ್ಲಿ ಪೂರ್ಣಗೊಳಿಸಬೇಕು. ಶಾಲೆಗಳ ಶೌಚಾಲಯ ಕಾಮಗಾರಿಗಳ ಪೂರ್ಣಗೊಳಿಸಿ ಸ್ವಚ್ಛತೆ ಕಾಪಾಡಲು ಕ್ರಮವಹಿಸುವಂತೆ ಸೂಚಿಸಿದರು. ಪ್ರತಿ ಊರಿಗೊಂದು ಆಟದ ಮೈದಾನ ನಿರ್ಮಾಣ ಮಾಡಬೇಕು. ಎಲ್ಲ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಈ ಕಡೆ ಗಮನ ಹರಿಸಬೇಕು ಹಾಗೂ ಅತಿ ತ್ವರಿತವಾಗಿ ಕಾಮಗಾರಿ ಪ್ರಾರಂಭವಾಗಬೇಕು ಎಂದು ಸೂಚಿಸಿದರು. ಪ್ರತಿ ತಿಂಗಳು ತೆರಿಗೆ ಸಂಗ್ರಹ ತಿಂಗಳಿಂದ ತಿಂಗಳಿಗೆ ಹೆಚ್ಚಿಗೆ ಮಾಡಬೇಕು ಎಂದು ಸೂಚಿಸಿದರು.ತಾಪಂ ಕಾರ್ಯನಿರ್ವಾಹಕ ಅಧಿಕಾರಿಗಳು ನಂದೀಪ ರಾಠೋಡ, ಚಡಚಣ ಇಒ ಸಂಜಯ ಕಡಗೆಕರ್, ಸಹಾಯಕ ನಿರ್ದೇಶಕರು ( ಗ್ರಾ.ಉ) ಮಹಾಂತೇಶ್ ಹೊಗೆಡೆ, ಸಹಾಯಕ ನಿರ್ದೇಶಕರು (ಪಂ.ರಾ) ಪ್ರಕಾಶ ರಾಠೋಡ, ಚಡಚಣ ತಾಲೂಕಿನ ಎಲ್ಲ ಪಂಚಾಯತಿ ಅಭಿವೃದ್ದಿ ಅಧಿಕಾರಿಗಳು, ತಾಲೂಕು ಪಂಚಾಯತಿ ಸಿಬ್ಬಂದಿ ಸಭೆಯಲ್ಲಿ ಉಪಸ್ಥಿತರಿದ್ದರು.