ಕಾನೂನು ಬದ್ಧವಾಗಿ ಸಮಸ್ಯೆ ಪರಿಹರಿಸಿ: ಡಿವೈಎಸ್ಪಿ

| Published : Dec 14 2023, 01:30 AM IST

ಸಾರಾಂಶ

ಪಟ್ಟಣದ ತಹಸೀಲ್ದಾರ್ ಕಚೇರಿಯಲ್ಲಿ ಬುಧವಾರ ಸಾರ್ವಜನಿಕರಿಂದ ಕುಂದು ಕೊರತೆ ಅವಹಾಲು ಸ್ವೀಕಾರ ಸಭೆಯಲ್ಲಿ ಅಹವಾಲು ಸ್ವೀಕರಸಿ ಮಾತನಾಡಿದ ಅವರು, ಸಾರ್ವಜನಿಕರ ಅನೂಕೂಲಕ್ಕಾಗಿ ಪ್ರತಿ ತಿಂಗಳಿಗೊಮ್ಮೆ ಒಂದೊಂದು ತಾಲೂಕಿನಲ್ಲಿಯೂ ಸಾರ್ವಜನಿಕರಿಗೆ ಆಗುತ್ತಿರುವ ಸಮಸ್ಯೆಗಳಿಗೆ ಸ್ಪಂದನೆ ಮಾಡಲು ಸಭೆಗಳನ್ನು ನಡೆಸಲಾಗುತ್ತಿದೆ. ಆದ್ದರಿಂದ ಸಾರ್ವಜನಿಕರು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದು ಹೇಳಿದರು.

ಕನ್ನಡಪ್ರಭ ವಾರ್ತೆ ಮಸ್ಕಿ

ಕಂದಾಯ, ಸರ್ವೇ ಇಲಾಖೆ, ಕೆಇಬಿ ಸೇರಿದಂತೆ ಎಲ್ಲಾ ಇಲಾಖೆಯ ಅಧಿಕಾರಿಗಳು ಸಾರ್ವಜನಿಕರ ಸಮಸ್ಯೆಗಳಿಗೆ ಅಧಿಕಾರಿಗಳು ಕಾನೂನು ಬದ್ಧ ರೀತಿಯಲ್ಲಿ ಪರಿಹರಿಸಿ ಇದರಿಂದ ಜನರಿಗೆ ಅನೂಕೂಲವಾಗಲಿ ಎಂದು ಲೋಕಾ ಯುಕ್ತ ಡಿವೈಎಸ್ಪಿ ಸಿದ್ದೇಶ್ವರ ಹೇಳಿದರು.

ಪಟ್ಟಣದ ತಹಸೀಲ್ದಾರ್ ಕಚೇರಿಯಲ್ಲಿ ಬುಧವಾರ ಸಾರ್ವಜನಿಕರಿಂದ ಕುಂದು ಕೊರತೆ ಅವಹಾಲು ಸ್ವೀಕಾರ ಸಭೆಯಲ್ಲಿ ಅಹವಾಲು ಸ್ವೀಕರಸಿ ಮಾತನಾಡಿದ ಅವರು, ಸಾರ್ವಜನಿಕರ ಅನೂಕೂಲಕ್ಕಾಗಿ ಪ್ರತಿ ತಿಂಗಳಿಗೊಮ್ಮೆ ಒಂದೊಂದು ತಾಲೂಕಿನಲ್ಲಿಯೂ ಸಾರ್ವಜನಿಕರಿಗೆ ಆಗುತ್ತಿರುವ ಸಮಸ್ಯೆಗಳಿಗೆ ಸ್ಪಂದನೆ ಮಾಡಲು ಸಭೆಗಳನ್ನು ನಡೆಸಲಾಗುತ್ತಿದೆ. ಆದ್ದರಿಂದ ಸಾರ್ವಜನಿಕರು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದು ಹೇಳಿದರು.

ಸಭೆಯಲ್ಲಿ ಭೋವಿ ಸಮಾಜದ ಜಾತಿ ಪ್ರಮಾಣ ಪತ್ರಗಳನ್ನು ಕೊಡಲು ಇಲ್ಲಿನ ಅಧಿಕಾರಿಗಳು ವರ್ಷಾನುಗಟ್ಟಲೇ ವಿಳಂಬ ಮಾಡುತ್ತಿದ್ದಾರೆ. ಇದರಿಂದ ನಮಗೆ ತೊಂದರೆಯಾಗುತ್ತಿದೆ. ಆದ್ದರಿಂದ ಸಮಸ್ಯೆ ಪರಿಹರಿಸಬೇಕು ಎಂದು ಯಮುನಪ್ಪಾ ಭೋವಿಗೆ ಅವರು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಡಿವೈಎಸ್‌ಪಿ ಸಿದ್ದೇಶ್ವರ ಮಾತನಾಡಿ, ಭೋವಿ ಜಾತಿ ಪ್ರಮಾಣ ಪತ್ರ ಗೊಂದಲ ನಿವಾರಣೆ ಮಾಡಿ ವಿಳಂಬ ಮಾಡದೆ 1ತಿಂಗಳು ಒಳಗೆ ಪರಿಹರಿಸಿ ಎಂದು ಹೇಳಿದರು.

ನಂತರ ಭೋವಿ ಸಮಾಜದ ರವಿ ಚಿಗರಿಯವರು ಮನವಿ ಮಾಡಿ ಭೋವಿ ಸಮಾಜದ ಜಾತಿ ಪ್ರಮಾಣ ಪತ್ರಗಳನ್ನು ಬೇರೆಯವರು ಪಡೆದುಕೊಳ್ಳದಂತೆ ಕ್ರಮ ಕೈಗೊಳ್ಳಿ ಎಂದು ಹೇಳಿದರು. ನಂತರ ಗ್ರೇಡ್ -2 ತಹಸೀಲ್ದಾರ್ ಮಾತನಾಡಿ, ಮೇಲಾಧಿಕಾರಿಗಳ ಗಮನಕ್ಕೆ ತಂದು ಈ ಸಮಸ್ಯೆಯನ್ನು ಪರಿಹರಿಸಲಾಗುವುದು.

ಯಾವುದೆ ಇಲಾಖೆಯಲ್ಲಿ ಸಾರ್ವಜನಿಕರು ಅರ್ಜಿ ಸಲ್ಲಿಸುವಾಗ ತಮ್ಮ ದೂರವಾಣಿ ಸಂಖ್ಯೆ ನಮೂದಿಸಿ ಇದರಿಂದ ನಿಮ್ಮ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸಹಾಯವಾಗುತ್ತೆ ಎಂದರು.

ಮಸ್ಕಿ ಪಟ್ಟಣದಲ್ಲಿ ಹಾದು ಹೋಗಿರುವ ರಸ್ತೆ ಕಾಮಗಾರಿಯಿಂದ ಜನರಿಗೆ ತೊಂದರೆಯಾಗುತ್ತಿದೆ. ಅಲ್ಲದೇ ಎರಡು ಕಡೆಗಳಲ್ಲಿ ಗ್ರಿಲ್‌ಗಳನ್ನು ಅಳವಡಿಸುವುದರಿಂದ ತೊಂದರೆಯಾಗುತ್ತದೆ. ಮಸ್ಕಿ ಪಟ್ಟಣಕ್ಕೆ ಬೈಪಾಸ್ ರಸ್ತೆ ಮಾಡಿದರೆ ಪಟ್ಟಣದಲ್ಲಿ ರಸ್ತೆಗೆ ಗ್ರಿಲ್ ಅಳವಡಿಸುವ ಅಗತ್ಯವಿಲ್ಲ. ಆದ್ದರಿಂದ ಇದನ್ನು ಪರಿಶೀಲನೆ ಮಾಡಿ ಎಂದು ಅಯ್ಯನಗೌಡ ನಾಗರಬೆಂಚಿ, ನಾಗಭೂಷಣ ಇತರರು ಮನವಿ ಮಾಡಿದರು. ಹೆದ್ದಾರಿ ಪ್ರಾಧಿಕಾರ ಹಾಗೂ ಸ್ಥಳೀಯರ ಜೊತೆಗೆ ಸಭೆ ನಡೆಸಿ, ಇದಕ್ಕೆ ಪರಿಹಾರ ಕಂಡುಕೊಳ್ಳಿ ಎಂದು ಲೋಕಾಯುಕ್ತ ಅಧಿಕಾರಿಗಳು ಪುರಸಭೆ ಮುಖ್ಯಾಧಿಕಾರಿ ನರಸರಡ್ಡಿಯವರಿಗೆ ತಿಳಿಸಿದರು.

ಸಂತೆಕಲ್ಲೂರು ಗ್ರಾಮದಲ್ಲಿ ಕಂದಾಯ ಅಧಿಕಾರಿಗಳು ಗ್ರಾಮದಲ್ಲಿ ಇರುವುದಿಲ್ಲ. ಇದರಿಂದ ರೈತರಿಗೆ ಸಮಸ್ಯೆಯಾಗಿದೆ. ಅವರಿಗೆ ಗ್ರಾಮದಲ್ಲಿಯೇ ಇರುವಂತೆ ಸೂಚಿಸಿಬೇಕು ಎಂದು ಗ್ರಾಮಸ್ಥರಾದ ಚೆನ್ನಾರಡ್ಡಿ ಸೇರಿದಂತೆ ಇತರರು ದೂರು ಸಲ್ಲಿಸಿದರು. ತಕ್ಷಣ ತಹಸೀಲ್ದಾರ್ ಅರಮನೆ ಸುಧಾ ಅವರು ಅಧಿಕಾರಿಗಳನ್ನು ಕರೆದು ಗ್ರಾಮದಲ್ಲಿಯೇ ಇದ್ದು ಜನರಿಗೆ ಸ್ಪಂದಿಸಿ ಎಂದು ಸೂಚಿಸಿದರು.

ಸಂತೆಕಲ್ಲೂರಿನಲ್ಲಿ ಜೆಸ್ಕಾಂ ಸಿಬ್ಬಂದಿ ಅಲ್ಲಿ ಬೇರೆಯೊಬ್ಬರಿಗೆ ತಮ್ಮ ಕೆಲಸವನ್ನು ಹಚ್ಚಿ ಅವರು ಅಲ್ಲಿ ಇರುವುದಿಲ್ಲ ಎಂದು ಲಿಖಿತವಾಗಿ ದೂರು ನೀಡಿದರು. ನಂತರ ಲೋಕಾಯುಕ್ತ ಅಧಿಕಾರಿಗಳು ಜೆಸ್ಕಾಂ ಎಇಇ ವೇಂಕಟೇಶ ಅವರಿಗೆ ಮೂರು ದಿನಗಳಲ್ಲಿ ಇದಕ್ಕೆ ಪರಿಹಾರ ಒದಗಿಸಿ ಎಂದು ಹೇಳಿದರು.

ಮಸ್ಕಿಯಲ್ಲಿ ಅಕ್ರಮ ಮರಳು ಸಾಗಣೆ ಮಾಡಲಾಗುತ್ತಿದೆ. ಅಧಿಕಾರಿಗಳು ಕ್ರಮಕೈಗೊಳ್ಳುತ್ತಿಲ್ಲ ಎದು ಸುರೇಶ ಬ್ಯಾಳಿ ಸೇರಿದಂತೆ ಇತರರು ದೂರು ನೀಡಿದರು. ಕೂಡಲೇ ಸ್ಯಾಂಡ್ ಕಮಿಟಿಯವರಿಗೆ ಪತ್ರ ಬರೆದು ಅಕ್ರಮ ಸಾಗಣೆಗೆ ಕಡಿವಾಣ ಹಾಕಿ ಎಂದು ತಹಸೀಲ್ದಾರ್ ಅವರಿಗೆ ಹೇಳಿದರು.

ಮಸ್ಕಿ ತಾಲೂಕಿನಲ್ಲಿ ಸಾರ್ವಜನಿಕರಿಂದ 18 ಅರ್ಜಿಗಳು ಬಂದಿವೆ. ಒಮದು ಅರ್ಜಿಯನ್ನು ಸ್ಥಳದಲ್ಲಿಯೇ ಇತ್ಯರ್ಥ ಮಾಡಲಾಗಿದೆ ಇನ್ನುಳಿದ ಅರ್ಜಿಗಳಿಗೆ ನಿಗದಿತ ಸಮಯ ನೀಡಲಾಗಿದೆ ಅಷ್ಟರೊಳಗೆ ಕೆಲವೊಂದು ಇಲಾಖೆಯವರು ಸಾರ್ವಜಿನಿಕರ ಜೊತೆಗೆ ಸಭೆ ನಡೆಸಿ ಪರಿಹಾರ ಕಂದುಕೊಳ್ಳಲು ಅನುಕೂಲ ವಾಗುತ್ತೆ ಇಲ್ಲದಿದ್ದರೆ ನೇರವಾಗಿ ಬಂದು ದೂರು ಸಲ್ಲಿಸಿ ಎಂದು ಹೇಳಿದರು.

ಈ ಸಂದರ್ಭದಲ್ಲಿ ತಾಲೂಕಿನ ವಿವಿಧ ಇಲಾಖೆಯ ಅಧಿಕಾರಿಗಳು ಸೇರಿದಂತೆ ಸಾರ್ವಜನಿಕರು ಇದ್ದರು.

ಸರ್ಕಾರಿ ಕಚೇರಿಗಳಲ್ಲಿ ಬಯೋಮೆಟ್ರಿಕ್ ಅಳವಡಿಸಿ: ಮಸ್ಕಿ ಪಟ್ಟಣದ ತಹಸೀಲ್ದಾರ್ ಕಚೇರಿಯಲ್ಲಿ ಸಿಬ್ಬಂದಿ ನಿಗದಿತ ಸಮಯಕ್ಕೆ ಕಚೇರಿಗೆ ಬರುವುದಿಲ್ಲ ಇದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ ಎಂದು ವ್ಯಕ್ತಿಯೊಬ್ಬರು ಲೋಕಾಯುಕ್ತ ಅಧಿಕಾರಿಗಳಿಗೆ ಹೇಳಿದರು. ಕೂಡಲೇ ತಹಸೀಲ್ದಾರ್ ಕಚೇರಿಯಲ್ಲಿ ಬಯೋಮೆಟ್ರಿಕ್ ಅಳವಡಿಸಿ ಇಲ್ಲದಿದ್ದರೆ ಮಸ್ಕಿಗೆ ಭೇಟಿ ನೀಡಿ ದೂರು ದಾಖಲಿಸಲಾಗುವುದು ಎಂದು ಡಿವೈಎಸ್ಪಿ ಗರಂ ಅದ ಘಟನೆ ನಡೆಯಿತು.

ರೈತ ಸಂಪರ್ಕ ಕೇಂದ್ರದ ಸಿಬ್ಬಂದಿ ಮಾಹಿತಿ ಫಲಕದಲ್ಲಿ ಹಾಕಿ: ಮಸ್ಕಿಯ ರೈತ ಸಂಪರ್ಕ ಕೇಂದ್ರದಲ್ಲಿ ಖಾಸಗಿ ವ್ಯಕ್ತಿಗಳು ಕಾರ್ಯ ನಿರ್ವಹಿಸುತ್ತಿದ್ದು, ಇದರಿಂದ ರೈತರಿಗೆ ತೊಂದರೆ ಆಗುತ್ತಿದೆ ಎಂದು ಮಲ್ಲಿಕ್ ದೂರು ನೀಡಿದರು. ಇದರಿಂದ ಡಿವೈಎಸ್ಪಿ ಸಿದ್ದೇಶ್ವರ ಕೃಷಿ ಇಲಾಖೆಯ ಅಧಿಕಾರಿಗಳು ಸಭೆಗೆ ಬಾರದೆ ಇದ್ದದ್ದು ಕಂಡು ತಕ್ಷಣ ಅವರಿಗೆ ದೂರವಾಣಿ ಕರೆ ಮಾಡಿ ಕೃಷಿ ಅಧಿಕಾರಿಗಳಿಗೆ ತರಾಟೆಗೆ ತೆಗೆದುಕೊಂಡ ಘಟನೆ ನಡೆಯಿತು.