ಸಾರಾಂಶ
ಕೊಳ್ಳೇಗಾಲದ ತಾಪಂ ಸಭಾಂಗಣದಲ್ಲಿ ನಡೆದ ಅಧಿಕಾರಿಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಹನೂರು ಕ್ಷೇತ್ರದ ಶಾಸಕ ಮಂಜುನಾಥ್ ಮಾತನಾಡಿದರು. ಇಓ ಶ್ರೀನಿವಾಸ್ ಇನ್ನಿತರರು ಇದ್ದರು.
ಕೊಳ್ಳೇಗಾಲ: ಗ್ರಾಮ ಪಂಚಾಯ್ತಿಗಳಲ್ಲಿ ಸ್ವಚ್ಛತೆ ಎಂಬುದು ಮಾಯವಾಗಿದ್ದು ಕೂಡಲೆ ಜೂನ್ ತಿಂಗಳ ಕೊನೆಯವರೆಗೂ ಪ್ರತಿ ಪಂಚಾಯ್ತಿ ವ್ಯಾಪ್ತಿಯಲ್ಲೂ ಕುಡಿಯುವ ನೀರಿನ ಸಮಸ್ಯೆ ಹಾಗೂ ಸ್ವಚ್ಛತೆಗೆ ಸಂಬಂಧಪಟ್ಟ ಅಧಿಕಾರಿಗಳು ಗಮನಹರಿಸಬೇಕು. ಇಲ್ಲದಿದ್ದಲ್ಲಿ ಅಧಿಕಾರಿಗಳನ್ನೇ ಹೊಣೆಗಾರರನ್ನಾಗಿಸಬೇಕಾಗುತ್ತದೆ ಎಂದು ಹನೂರು ಶಾಸಕ ಎಂ.ಆರ್. ಮಂಜುನಾಥ್ ಎಚ್ಚರಿಸಿದರು.
ತಾಪಂ ಸಭಾಂಗಣದಲ್ಲಿ ಕೊಳ್ಳೇಗಾಲ ಹಾಗೂ ಪಾಳ್ಯ ಹೋಬಳಿಗೆ ಸಂಬಂಧಿಸಿದಂತೆ ಕರೆಯಲಾಗಿದ್ದ ಅಧಿಕಾರಿಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ, ಅಭಿವೃದ್ದಿ ಕಾರ್ಯ ತಡವಾದರೂ ಸಹಾ ಸ್ವಚ್ಛತೆ ಹಾಗೂ ಕುಡಿಯುವ ನೀರಿನ ಸಮಸ್ಯೆ ಪರಿಹಾರವಾಗಬೇಕು. ಪ್ರತಿ ಗ್ರಾಪಂ ವ್ಯಾಪ್ತಿಗಳಲ್ಲೂ ಸಮರ್ಪಕ ರೀತಿ ಸ್ವಚ್ಛತಾ ಕಾರ್ಯ ಆಗುತ್ತಿಲ್ಲ, ಸ್ವಚ್ಛತೆ ಹಾಗೂ ಕುಡಿಯುವ ನೀರಿನ ತೊಂದರೆ ಈ ತಿಂಗಳಲ್ಲೆ ಪರಿಹಾರವಾಗಬೇಕು. ಜೂನ್ ತಿಂಗಳ ಕೊನೆಯಲ್ಲಿ ನಾನು ಗ್ರಾಪಂಗಳಿಗೆ ಹಾಗೂ ಆಯಾ ಗ್ರಾಮಗಳಿಗೆ ಭೇಟಿ ನೀಡಿ ಪರಿಶಿಲಿಸುವೆ. ಈ ವೇಳೆ ಅಂತಹ ಕೆಲಸ, ಕಾರ್ಯಗಳು ಕೈಗೊಳ್ಳದೆ ನಿರ್ಲಕ್ಷ್ಯ ಪ್ರದರ್ಶಿಸಿದರೆ ಸಂಬಂಧಪಟ್ಟ ಅಧಿಕಾರಿಗಳನ್ನೇ ಹೊಣೆಗಾರರನ್ನಾಗಿಸಲಾಗುವುದು ಎಂದರು.ಗ್ರಾಪಂ ವ್ಯಾಪ್ತಿಯಲ್ಲಿ ಬಾಕಿ ಇರುವ ಕಾಮಗಾರಿಗಳು ಹಾಗೂ ಮುಂದೆ ಆಗಬೇಕಾಗಿರುವ ಕಾಮಗಾರಿಗಳ ಬಗ್ಗೆ ಮಾಹಿತಿ ನೀಡಬೇಕು. ಎಂದು ಇದೆ ವೇಳೆ ಗ್ರಾಪಂ ಪಿಡಿಒ ಹಾಗೂ ಕಾರ್ಯದರ್ಶಿಗಳಿಗೆ ಸೂಚಿಸಿದರು. ಆರೋಗ್ಯ ಇಲಾಖೆ ರೋಗಗಳು ಹರಡದಂತೆ ಜಾಗ್ರತೆಯಿಂದ ಕ್ರಮವಹಿಸಬೇಕು ಎಂದು ಸೂಚಿಸಿದರು.
ಸಭೆಯಲ್ಲಿ ತಾಪಂ ಇಒ ಶ್ರೀನಿವಾಸ್, ಚೆಸ್ಕಾಂ ಇಇ ತಬಸ್ಸುಮ್, ಸಮಾಜ ಕಲ್ಯಾಣಾಧಿಕಾರಿ ಕೇಶವಮೂರ್ತಿ, ಜಿಪಂ ಉಪವಿಭಾಗ ಎಇಇ ಶಿವಪ್ರಕಾಶ್, ಕುಡಿಯುವ ನೀರು ನೈರ್ಮಲ್ಯ ವಿಭಾಗದ ಎಇಇ ಹರೀಶ್ ಕುಮಾರ್, ತಾಲೂಕು ಆರೋಗ್ಯಾಧಿಕಾರಿ ಡಾ.ಗೋಪಾಲ್, ಬಿ.ಆರ್.ಸಿ ಮಹದೇವ ಕುಮಾರ್, ಸಿಡಿಪಿಒ ನಂಜಮ್ಮಣಿ ಇನ್ನಿತರರಿದ್ದರು.