ಸಾರಾಂಶ
ಸದ್ಯ ಬೇಸಿಗೆ ಕಾಲ ಪ್ರಾರಂಭವಾಗಿರುವುದರಿಂದ ಭೀಮಾ ನದಿಯಲ್ಲಿ ನೀರಿನ ಮಟ್ಟ ಬಹಳಷ್ಟು ಕಡಿಮೆಯಾಗಿದೆ. ಅಂತರ್ಜಲದ ಮಟ್ಟ ಕೂಡ ಬಹಳಷ್ಟು ಕುಸಿದಿದೆ.
ಕನ್ನಡಪ್ರಭ ವಾರ್ತೆ ಅಫಜಲ್ಪುರ
ತಾಲೂಕನ್ನು ಬರ ಪೀಡಿತ ತಾಲೂಕು ಎಂದು ಸರ್ಕಾರ ಈಗಾಗಲೇ ಘೋಷಣೆ ಮಾಡಿದೆ. ಸದ್ಯ ಬೇಸಿಗೆ ಕಾಲ ಪ್ರಾರಂಭವಾಗಿರುವುದರಿಂದ ಭೀಮಾ ನದಿಯಲ್ಲಿ ನೀರಿನ ಮಟ್ಟ ಬಹಳಷ್ಟು ಕಡಿಮೆಯಾಗಿದೆ. ಅಂತರ್ಜಲದ ಮಟ್ಟ ಕೂಡ ಬಹಳಷ್ಟು ಕುಸಿದಿದೆ. ಆದ್ದರಿಂದ ಇದ್ದ ಜಲಮೂಲಗಳ ಸಂರಕ್ಷಣೆ ಮತ್ತು ನಿರ್ವಹಣೆ ಮಾಡುವುದು ಬಹಳ ಮುಖ್ಯವಾಗಿದೆ ಎಂದು ತಾಪಂ ಕಾರ್ಯ ನಿರ್ವಾಹಕ ಅಧಿಕಾರಿ ವೀರಣ್ಣ ಕವಲಗಿ ಹೇಳಿದರು.ಅವರು ತಾಲೂಕಿನ 28 ಗ್ರಾಪಂಗೆ ಭೇಟಿ ನೀಡಿ, ಕುಡಿವ ನೀರಿನ ಸಮಸ್ಯೆ ಕುರಿತು ಗ್ರಾಪಂ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸರ್ವ ಸದಸ್ಯರು ಅಭಿವೃದ್ಧಿ ಅಧಿಕಾರಿಗಳ ಜೊತೆ ಸಭೆ ನಡೆಸಿ, ತಾಲೂಕಿನ ಎಲ್ಲಾ ಗ್ರಾಮ ಪಂಚಾಯ್ತಿಗಳಲ್ಲಿ ಗ್ರಾಪಂ ಹಂತದಲ್ಲಿಯೇ ಕುಡಿವ ನೀರಿನ ಸಮಸ್ಯೆ ಬಗೆಹರಿಸಲು ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು.
ಬೇಸಿಗೆಯಲ್ಲಿ ಅಫಜಲ್ಪುರ ತಾಪಂ ವ್ಯಾಪ್ತಿಯಲ್ಲಿ ಬರುವ ಯಾವುದೇ ಗ್ರಾಪಂನಲ್ಲಿ ಕುಡಿವ ನೀರಿನ ಸಮಸ್ಯೆ ಆಗದಂತೆ ನೋಡಿಕೊಳ್ಳಬೇಕು. ನೀರಿನ ಸಮಸ್ಯೆಯಾಗುವ ಗ್ರಾಮಗಳು, ಪರ್ಯಾಯವಾಗಿ ಹತ್ತಿರದಲ್ಲಿರುವ ಖಾಸಗಿಯವರ ಕೊಳವೆ ಬಾವಿ (ಬೋರ್‌ವೆಲ್) ಮಾಹಿತಿ ಸಂಗ್ರಹಿಸಬೇಕು. ಗ್ರಾಮಸ್ಥರಿಗೆ ಕುಡಿವ ನೀರಿಗೆ ತೊಂದರೆಯಾಗದಂತೆ ಮುಂಜಾಗೃತಾ ಕ್ರಮ ಕೈಗೊಳ್ಳಬೇಕು. ಪಿಡಿಒ ತಮ್ಮ ಕೇಂದ್ರ ಸ್ಥಾನದಲ್ಲಿ ಇದ್ದು, ತಮ್ಮ ಗ್ರಾಪಂ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಗ್ರಾಮಗಳಿಗೆ ಕಡ್ಡಾಯವಾಗಿ ಭೇಟಿ ನೀಡಿ ಕುಡಿವ ನೀರಿನ ವ್ಯವಸ್ಥೆ ಪರಿಶೀಲಿಸಬೇಕು. ಅನುದಾನದ ನೆಪ, ಅಭಿವದ್ಧಿ ಮೂಲಭೂತ ಸೌಲಭ್ಯ ಬಗ್ಗೆ ನೆಪ ಹೇಳಿದರೆ ನಡೆಯುವುದಿಲ್ಲ. ಯಾವುದೇ ಸಮಸ್ಯೆಗಳಿದ್ದರೆ ತಕ್ಷಣ ನನ್ನ ಗಮನಕ್ಕೆ ತರಬೇಕು ಎಂದು ಅಭಿವೃದ್ಧಿ ಅಧಿಕಾರಿಗಳಿಗೆ ತಾಕೀತು ಮಾಡಿದರು.ಕುಡಿವ ನೀರಿನ ಸಲುವಾಗಿ ಹೊಸ ಟಾಸ್ಕ್ ಪೋರ್ಸ್ ರಚಿಸುವಂತೆ ಸರ್ಕಾರ ಆದೇಶಿಸಿದೆ. ನೀರಿನ ಸಮಸ್ಯೆ ಇರುವ ಗ್ರಾಮಗಳಲ್ಲಿ ಮಾತ್ರ ಕೊಳವೆಬಾವಿ ಕೊರೆಯಿಸಬೇಕು. ಹೆಚ್ಚಿನ ಮಾಹಿತಿಗೆ ತಾಪಂ ಸಹಾಯವಾಣಿ ಮೊ. 9448140594ಕ್ಕೆ ಸಂಪರ್ಕಿಸಬಹುದು ಎಂದು ಹೇಳಿದರು.