ಸಾರಾಂಶ
ಕನ್ನಡಪ್ರಭ ವಾರ್ತೆ ಅರಕಲಗೂಡು
ಕಾಫಿ ಬೆಳೆಗಾರರು ಸಂಘಟಿತರಾದಾಗ ಮಾತ್ರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗುತ್ತದೆ ಎಂದು ಜಿಲ್ಲಾ ಕಾಫಿ ಬೆಳೆಗಾರರ ಸಂಘದ ಅಧ್ಯಕ್ಷ ಎ.ಎಸ್. ಪರಮೇಶ್ ತಿಳಿಸಿದರು.ತಾಲೂಕಿನ ಮಲ್ಲಿಪಟ್ಟಣದಲ್ಲಿ ನಡೆದ ತಾಲೂಕು ಕಾಫಿ ಬೆಳೆಗಾರರ ಸಂಘದ 2024- 25ನೇ ಸಾಲಿನ ಸರ್ವಸದಸ್ಯರ ವಾರ್ಷಿಕ ಮಹಾಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಕಾಡಾನೆ ಹಾವಳಿ, ಹವಾಮಾನ ವೈಪರೀತ್ಯದಿಂದ ಬೆಳೆ ನಷ್ಟ, ಕಾರ್ಮಿಕರ ಸಮಸ್ಯೆ ಸೇರಿದಂತೆ ಹಲವಾರು ಸಮಸ್ಯೆಗಳು ನಿರಂತರವಾಗಿ ಕಾಡುತ್ತಿದೆ. ಸಮಸ್ಯೆ ಪರಿಹಾರಕ್ಕೆ ಜಿಲ್ಲಾ ಮತ್ತು ರಾಜ್ಯ ಸಂಘಗಳು ನಿರಂತರ ಪ್ರಯತ್ನ ನಡೆಸಿವೆ. ಬೆಳೆಗಾರರು ಸಂಘಟಿತರಾಗಬೇಕು ಹಾಗೂ ಸಂಘದ ಸದಸ್ಯತ್ವ ಪಡೆಯಬೇಕು ಎಂದರು.ಬ್ಯಾಂಕುಗಳಲ್ಲಿ ಒಟಿಎಸ್ ಮೂಲಕ ಸಾಲ ಮರುಪಾವತಿ ಮಾಡಿದ ಬೆಳೆಗಾರರಿಗೆ ಶೇ. 4ರ ದರದಲ್ಲಿ ಬೆಳೆ ಸಾಲ ನೀಡುತ್ತಿದ್ದು, ಇದರ ಪ್ರಯೋಜನ ಪಡೆದುಕೊಳ್ಳುವಂತೆ ತಿಳಿಸಿದರು. ಜಿಲ್ಲಾ ಸಂಘದ ಕಾರ್ಯದರ್ಶಿ ಕೆ.ಬಿ. ಲೋಹಿತ್ ಬೆಳೆಗಾರರಿಗೆ ದೊರೆಯುವ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು.
ಕಾಫಿ ಬೆಳೆಗಾರ ಎಚ್.ಎನ್. ವೆಂಕಟೇಶ್ ಮಾತನಾಡಿ, ವಾಣಿಜ್ಯ ದರದಲ್ಲಿ ವಿದ್ಯುತ್ ಶುಲ್ಕ ವಿಧಿಸುತ್ತಿದ್ದು, ಇದು ಬೆಳೆಗಾರರಿಗೆ ಹೊರೆಯಾಗಿದೆ. ಸರ್ಕಾರ ಉಚಿತ ವಿದ್ಯುತ್ ನೀಡಲು ಕ್ರಮ ವಹಿಸಬೇಕು. ಬೆಳೆಗಾರರು ಸೋಲಾರ್ ಪಂಪ್‌ಸೆಟ್ ಅಳವಡಿಸಿ ಕೊಳ್ಳುವುದರಿಂದ ವಿದ್ಯುತ್ ವೆಚ್ಚವನ್ನು ಕಡಿಮೆ ಮಾಡಿಕೊಳ್ಳಲು ಸಾಧ್ಯವಾಗುತ್ತದೆ ಎಂದರು.ಬೆಳೆಗಾರ ಪತ್ರಿಕೆ ಸಂಪಾದಕ ಟಿ.ಪಿ. ಸುರೇಂದ್ರ, ಮಾಗೋಡು ಬಸವರಾಜ್ ಮಾತನಾಡಿದರು. ಸಂಘದ ಅಧ್ಯಕ್ಷ ಪಿ. ಕೃಷ್ಣರಾಜ್ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ಸುಮಿತ್ರಮ್ಮ, ಗೌರವ ಕಾರ್ಯದರ್ಶಿ ಕೆ.ಟಿ. ಚಂದ್ರಶೇಖರ್, ಸಂಘಟನಾ ಕಾರ್ಯದರ್ಶಿ ರೋಹಿತ್, ಜಂಟಿ ಕಾರ್ಯದರ್ಶಿ ಎಂ.ಎಲ್ ಕೃಷ್ಣಮೂರ್ತಿ, ಖಜಾಂಚಿ ಕೆ.ಆರ್. ನಿರ್ವಾಣೇಗೌಡ, ಸಲಹಾ ಸಮಿತಿ ಸದಸ್ಯರಾದ ಎ.ಕೆ. ಧರಣೇಂದ್ರ, ಅಣ್ಣೇಗೌಡ, ಬಿ.ವಿ.ಲಿಂಗಪ್ಪ, ಎಚ್.ಎಂ. ರೇವಣ್ಣ, ಎಂ.ಎಂ. ವಿಶ್ವನಾಥ್, ಎಂ.ಕೆ. ಅರುಣ್ ಕುಮಾರ್ ಭಾಗವಹಿಸಿದ್ದರು.
ಮಾಜಿ ಪ್ರಧಾನಿ ಮನಮೋಹನ್ ಸಿಂಗ್, ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಹಾಗೂ ಸಂಘದ ಮಾಜಿ ಅಧ್ಯಕ್ಷ ನಟೇಶ್ ಕುಮಾರ್ ನಿಧನಕ್ಕೆ ಶ್ರದ್ದಾಂಜಲಿ ಸಲ್ಲಿಸಲಾಯಿತು. ಸಂಘದ ನೂತನ ಪದಾಧಿಕಾರಿಗಳಾಗಿ ಆಯ್ಕೆಯಾದ ಎಂ.ಸಿ. ಬಸವರಾಜ್ (ಅಧ್ಯಕ್ಷ), ಎ.ಸಿ.ದೇವರಾಜೇಗೌಡ (ಉಪಾಧ್ಯಕ್ಷ), ವಿಜಯಕುಮಾರ್ (ಕಾರ್ಯದರ್ಶಿ), ರವಿ (ಸಹ ಕಾರ್ಯದರ್ಶಿ), ಶೇಖರ್ (ಸಂಘಟನಾ ಕಾರ್ಯದರ್ಶಿ), ಸುಧಾಕರ್ (ಖಜಾಂಚಿ) ಅವರಿಗೆ ಅಧಿಕಾರ ಹಸ್ತಾಂತರ ಮಾಡಲಾಯಿತು.