ಸಾರಾಂಶ
ಕನ್ನಡಪ್ರಭ ವಾರ್ತೆ ಗುರುಮಠಕಲ್
ಕ್ಷೇತ್ರದ ಜನರು ಸಾಕಷ್ಟು ಪ್ರೀತಿ ವಿಶ್ವಾಸ, ವಿಶೇಷವಾಗಿ ಯುವಕರು ತಮ್ಮ ಮೇಲೆ ಅತ್ಯಂತ ನಂಬಿಕೆಯಿಟ್ಟಿದ್ದಾರೆ. ಹಾಗಾಗಿ ಕ್ಷೇತ್ರದ ಅಭಿವೃದ್ಧಿ, ಯುವಕರ ಉದ್ಯೋಗ ಸಮಸ್ಯೆ ನೀಗಿಸಿ ಜನರ ಋಣ ತೀರಿಸುವೆ ಎಂದು ಶಾಸಕ ಶರಣಗೌಡ ಕಂದಕೂರು ಹೇಳಿದರು.ತಾಲೂಕಿನ ಯಲಸತ್ತಿಯಲ್ಲಿ ನಡೆದ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆಯ 2023-24ನೇ ಸಾಲಿನ 4702 ಆಣೆಕಟ್ಟು ಪಿಕಪ್ ಪ್ರಧಾನ ಕಾಮಗಾರಿ ಅನುದಾನದಡಿ ಬ್ರಿಡ್ಜ್ ಕಮ್ ಬ್ಯಾರೇಜ್ ನಿರ್ಮಾಣ ಕಾಮಗಾರಿಗೆ ಅಡಿಗಲ್ಲು ನೆರವೇರಿಸಿ ಮಾತನಾಡಿದರು.
ಯಲಸತ್ತಿ ಬ್ರಿಡ್ಜ್ ಕಮ್ ಬ್ಯಾರೇಜ್‌ನಿಂದ ಸುಮಾರು 200 ಎಕರೆ ಜಮೀನಿಗೆ ಅನುಕೂಲವಾಗಿ ಅಂತರ್ಜಲ ಮಟ್ಟ ಸುಧಾರಣೆಗೆ ಸಹಕಾರಿಯಾಗಲಿದೆ. ಇಲ್ಲಿನ ರೈತರ ಬಹುವರ್ಷಗಳ ಬೇಡಿಕೆಯಂತೆ ನೀರಾವರಿಗೆ ಅನುಕೂಲವಾಗುವಂತೆ ಕೆಲಸ ಮಾಡುವೆ. ಮಂತ್ರಿಗಳು ಹೆಚ್ಚಿನ ಅನುದಾನ ನೀಡಿದ್ದಕ್ಕೆ ಧನ್ಯವಾದ ಹೇಳಿದರು.ನಮ್ಮ ಭಾಗದ ರೈತರಿಗೆ ಅನುಕೂಲವಾಗಲು ಕೇಂದ್ರದಿಂದ ಅನುದಾನ ತರಲು ಅಧಿಕಾರಿಗಳ ಸಹಕಾರ ಕೇಳಿರುವೆ. ಕುಮಾರಸ್ವಾಮಿ ಅವರು ಕೇಂದ್ರದಲ್ಲಿ ಸಚಿವರಾಗಿದ್ದು, ಅನುದಾನ ಕೇಳುವ ಅಧಿಕಾರವಿದೆ. ಕೇಂದ್ರದಲ್ಲಿ ನಮ್ಮ ಪಾಲಿದೆ. ಲೋಕಸಭಾ ಚುನಾವಣೆಯಲ್ಲಿ 14 ಸಾವಿರಕ್ಕೂ ಹೆಚ್ಚಿನ ಲೀಡ್ ನೀಡಿದ್ದು ನಾನು ಎದೆ ಉಬ್ಬಿಸಿ ಅನುದಾನ ಕೇಳುವ ತಾಕತ್ತು ನೀಡಿದ್ದೀರಿ ಎಂದರು.
ರೈಲ್ವೇ ಸಚಿವ ವಿ.ಸೋಮಣ್ಣ ಅವರೊಂದಿಗೆ ಸೈದಾಪುರ, ಯಾದಗಿರಿ ರೈಲು ನಿಲ್ದಾಣ ಅಭಿವೃದ್ಧಿಗೆ ಮಾತನಾಡಿದ್ದು, ಕೇಂದ್ರದಿಂದ ಹೆಚ್ಚಿನ ಅನುದಾನ ತರಲು ಪ್ರಯತ್ನಿಸುವೆ ಎಂದರು. ಅಲ್ಲದೇ ನಿರುದ್ಯೋಗ ಸಮಸ್ಯೆ ನಿವಾರಣೆಗೆ ವಿಶೇಷ ಕಾಳಜಿವಹಿಸುವುದಾಗಿ ಭರವಸೆ ನೀಡಿದರು.ಕ್ಷೇತ್ರದಲ್ಲಿ ಶಿಕ್ಷಣ, ಮೂಲಸೌಕರ್ಯ, ಆರೋಗ್ಯಕ್ಕೆ ಮೊದಲ ಆದ್ಯತೆ ನೀಡಲಾಗಿದೆ. 20 ಲಕ್ಷ ರು. ಅನುದಾನ ಯಲಸತ್ತಿ ರಸ್ತೆ ಅಭಿವೃದ್ಧಿಗೆ ಒದಗಿಸಲಾಗಿದೆ. ಅಗತ್ಯವಿದ್ದರೆ ಇನ್ನೂ ಹೆಚ್ಚು ಅನುದಾನ ನೀಡುವ ಭರವಸೆ ನೀಡಿದರು. ಶಾಲೆ ಅಭಿವೃದ್ಧಿಗೆ 9.50 ಲಕ್ಷ ರು., 1 ಲಕ್ಷ ರು. ಕುಡಿಯುವ ನೀರು, ಗ್ರಂಥಾಲಯ, ಕಂಪ್ಯೂಟರ್ ಹೀಗೆ ಸೌಕರ್ಯಕ್ಕೆ ಅನುದಾನ ಒದಗಿಸಲಾಗಿದೆ. ಶಾಲೆಗೆ ಶುದ್ಧ ಕುಡಿಯುವ ನೀರಿನ ಘಟಕ ತಕ್ಷಣವೇ ಮಂಜೂರುಗೆ ಕ್ರಮವಹಿಸಲಾಗುವುದು. ಅಧಿಕಾರಿಗಳು ಉತ್ತಮ ಗುಣಮಟ್ಟದ ಕಾಮಗಾರಿ ನಿರ್ವಹಣೆ ಮಾಡಬೇಕು ಎಂದು ಸೂಚಿಸಿದರು.
ಸಣ್ಣ ನೀರಾವರಿ ಇಲಾಖೆ ಸಹಾಯಕ ಕಾರ್ಯನಿರ್ವಹಣಾಧಿಕಾರಿ ನರೇಂದ್ರ ಕುಮಾರ್ ಎಂ. ಪ್ರಾಸ್ತಾವಿಕವಾಗಿ ಮಾತನಾಡಿ, ಬ್ರಿಡ್ಜ್ ಕಾಮಗಾರಿ ಆರಂಭವಾಗಿದೆ. ಇದರಿಂದ 200 ಎಕರೆಗೆ ಅನುಕೂಲವಾಗಲಿದೆ. ಕಳೆದ ಬಾರಿ ದಿ.ಮಾಜಿ ಶಾಸಕ ನಾಗನಗೌಡ ಕಂದಕೂರ ಅವರು 28 ಕೆರೆಗಳ ಜೀರ್ಣೋದ್ಧಾರ 30 ಕೋಟಿ ರು. ಅನುದಾನದಲ್ಲಿ ಮಾಡಿದ್ದಾರೆ. ಕೇಂದ್ರಕ್ಕೆ 30 ಕೋಟಿ ರು. ಹೆಚ್ಚಿನ ಅನುದಾನಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ ಎಂದು ತಿಳಿಸಿದರು.ಗ್ರಾಮ ಪಂಚಾಯ್ತಿ ಅಧ್ಯಕ್ಷ ವಿಜಯ ಕುಮಾರ, ಸುಭಾಶ್ಚಂದ್ರ ಕಟಕಟೆ, ಅಜಯರೆಡ್ಡಿ ಎಲ್ಹೇರಿ, ನರಸಪ್ಪ ಕವಡೆ, ಮಲ್ಲಿಕಾರ್ಜುನ ಅರುಣಿ, ಶಂಕರರೆಡ್ಡಿ ಪೊ.ಪಾಟೀಲ್, ರಾಮಪ್ಪ ಕೋಟಗೇರಾ, ಅಮರೇಶ ರಾಠೋಡ, ಪಿಡಿಓ ಸರಸ್ವತಿ, ಸಿಪಿಐ ವಿನಾಯಕ, ಬಂದೆಪ್ಪ ಗೌಡ ಸೇರಿ ವಿವಿಧ ಇಲಾಖೆ ಅಧಿಕಾರಿಗಳು ಹಾಗೂ ಪ್ರಮುಖರಾದ ಚನ್ನಾರೆಡ್ಡಿ, ಹಣಮಂತ ಕಣೇಕಲ್, ರಮೇಶ್ ಕರಣಗಿ, ಇಬ್ರಾಹಿಂ ಸಾಬ್, ಶಂಕರ ಕಲಾಲ್, ಶಿವಕುಮಾರ, ನಾಗರಾಜ ಹೂಗಾರ್, ಬುಗ್ಗಪ್ಪ ಇತರರಿದ್ದರು.