ತುಮಕೂರು ಮಠಗಳಿಗೆ ಸೋಮಣ್ಣ ಮತ್ತೆ ಭೇಟಿ

| Published : Feb 18 2024, 01:38 AM IST / Updated: Feb 18 2024, 03:16 PM IST

V Somanna

ಸಾರಾಂಶ

ತುಮಕೂರು ಲೋಕಸಭಾ ಕ್ಷೇತ್ರದ ಟಿಕೆಟ್‌ ಮೇಲೆ ಕಣ್ಣಿಟ್ಟಿರುವ ಮಾಜಿ ಸಚಿವ ವಿ.ಸೋಮಣ್ಣ ಅವರು ಶನಿವಾರ ಮೂರು ಮಠ-ಮಾನ್ಯಗಳಿಗೆ ಭೇಟಿ ನೀಡಿ ಸ್ವಾಮೀಜಿಗಳ ಆಶೀರ್ವಾದ ಪಡೆದಿದ್ದಾರೆ. ಈ ವೇಳೆ ಮಾತನಾಡಿದ ಅವರು ಹೈಕಮಾಂಡ್‌ ಹೇಳಿದರೆ ತುಮಕೂರು ಕ್ಷೇತ್ರದಿಂದ ಸ್ಪರ್ಧೆಗೆ ಸಿದ್ಧ ಎಂದು ತಿಳಿಸಿದ್ದಾರೆ.

ತುಮಕೂರು: ತುಮಕೂರು ಲೋಕಸಭಾ ಕ್ಷೇತ್ರದ ಟಿಕೆಟ್‌ ಮೇಲೆ ಕಣ್ಣಿಟ್ಟಿರುವ ಮಾಜಿ ಸಚಿವ ವಿ.ಸೋಮಣ್ಣ ಅವರು ಟೆಂಪಲ್‌ ರನ್‌, ವಿವಿಧ ಜಾತಿ ಮುಖಂಡರ ಭೇಟಿ ಬಳಿಕ ಇದೀಗ ಮೂರು ಮಠ-ಮಾನ್ಯಗಳಿಗೆ ಭೇಟಿ ನೀಡಿ ಸ್ವಾಮೀಜಿಗಳ ಆಶೀರ್ವಾದ ಪಡೆದಿದ್ದಾರೆ. 

ಮೊದಲಿಗೆ ಎಲೆರಾಂಪುರ ಹನುಮಂತನಾಥ್ ಸ್ವಾಮೀಜಿ, ಬಳಿಕ ಸಿದ್ದರಬೆಟ್ಟಕ್ಕೆ ಭೇಟಿ ನೀಡಿದ ಸೋಮಣ್ಣ ಅವರು ಬಳಿಕ ಶನಿವಾರ ಸಿದ್ಧಗಂಗೆಯಲ್ಲಿ ಪ್ರಸಾದ ಸ್ವೀಕರಿಸಿದ್ದಾರೆ.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ನನಗೂ ತುಮಕೂರಿಗೂ ಅವಿನಾಭಾವ ಸಂಬಂಧ ಇದೆ. ಯಾರನ್ನು ಎಲ್ಲೆಲ್ಲಿ ಕರೆಸಿಕೊಳ್ಳಬೇಕು, ಎಲ್ಲೆಲ್ಲಿ ಕೆಲಸ ಮಾಡಿಸಿಕೊಳ್ಳಬೇಕು ಅನ್ನೋದು ಭಗವಂತನ ನಿರ್ಣಯ ಎಂದು ಇದೇ ವೇಳೆ ಮಾರ್ಮಿಕವಾಗಿ ನುಡಿದರು.

ತುಮಕೂರು ಬಿಜೆಪಿಯ ಕ್ಷೇತ್ರ. ಇಲ್ಲಿ ಬಸವರಾಜು ಅವರು ಹಾಲಿ ಸಂಸದರು. ವಯಸ್ಸಿನ ಕಾರಣದಿಂದ ಅವರು ಮತ್ತೆ ಸ್ಪರ್ಧಿಸುವುದಿಲ್ಲ ಎಂದು ಹೇಳಿದ್ದಾರೆ. 

ಹಾಗಾಗಿ ಸಹಜವಾಗಿಯೇ ಬಿಜೆಪಿಯವರು ಕ್ಷೇತ್ರಕ್ಕೆ ನಮ್ಮ ಹಕ್ಕನ್ನು ಪ್ರತಿಪಾದಿಸುತ್ತಿದ್ದೇವೆ. ಮೈತ್ರಿ ಹಿನ್ನೆಲೆಯಲ್ಲಿ ಕ್ಷೇತ್ರ ಯಾರಿಗೆ ಹೋಗಬೇಕು ಎಂಬುದನ್ನು ಹೈಕಮಾಂಡ್ ತೀರ್ಮಾನ ಮಾಡುತ್ತದೆ ಎಂದರು.

ಹೈಕಮಾಂಡ್ ಟಿಕೆಟ್ ಕೊಟ್ಟರೆ ತುಮಕೂರಿನಲ್ಲಿ ಸ್ಪರ್ಧೆ ಮಾಡುತ್ತೇನೆ. ತುಮಕೂರು ಬೇಡ ಬೇರೆ ಕಡೆ ಸ್ಪರ್ಧೆ ಮಾಡು ಅಂದರೆ ಹಾಗೇ ಮಾಡುತ್ತೇನೆ. 

ನಾನು ಎಲ್ಲದಕ್ಕೂ ಸಿದ್ಧನಿದ್ದೇನೆ. ನಾನು ರಾಜ್ಯಸಭೆಗೆ ಸ್ಪರ್ಧೆ ಮಾಡುತ್ತೇನೆಂದು ಹೇಳಿದ್ದು ನಿಜ. ರಾಜ್ಯಸಭೆಯಲ್ಲಿ ಎಲ್ಲವೂ ಕೊನೆ ಹಂತಕ್ಕೆ ಬಂದಿತ್ತು. 

ಆದರೆ ಕೊನೇ ಕ್ಷಣದಲ್ಲಿ ಎಲ್ಲವೂ ಬದಲಾಗಿ ಒಬ್ಬ ಒಳ್ಳೆ ಕಾರ್ಯಕರ್ತನಿಗೆ ಸ್ಥಾನ ಕೊಟ್ಟಿದ್ದಾರೆ. ನಾನು ಅದನ್ನು ಸ್ವಾಗತಿಸುತ್ತೇನೆ. ಲೋಕಸಭೆಗೆ ಟಿಕೆಟ್ ಕೊಟ್ಟರೆ ನಿಲ್ಲುತ್ತೇನೆ. ಇದು ನನ್ನ ಬೇಡಿಕೆಯಲ್ಲ, ಮನವಿ ಎಂದರು.