ರೋಟರಿ ಸಂಸ್ಥೆಯು ಸಮಾಜ ಮುಖಿ ಕಾರ್ಯಚಟುವಟಿಕೆಗಳ ಮೂಲಕ ಜನರ ಸಂಕಷ್ಟಗಳಿಗೆ ಸ್ಪಂದಿಸುತ್ತಿದ್ದು, ಸಾಮಾಜಿಕ ಸೇವೆಯಲ್ಲಿ ಮುಂಚೂಣಿಯಲ್ಲಿದೆ ಎಂದು ರೋಟರಿ ಜಿಲ್ಲಾ ರಾಜ್ಯಪಾಲ ಸತೀಶ್ ಬೋಳಾರ್ ಹೇಳಿದರು.

ಸೋಮವಾರಪೇಟೆ: ರೋಟರಿ ಸಂಸ್ಥೆಯು ಸಮಾಜ ಮುಖಿ ಕಾರ್ಯಚಟುವಟಿಕೆಗಳ ಮೂಲಕ ಜನರ ಸಂಕಷ್ಟಗಳಿಗೆ ಸ್ಪಂದಿಸುತ್ತಿದ್ದು, ಸಾಮಾಜಿಕ ಸೇವೆಯಲ್ಲಿ ಮುಂಚೂಣಿಯಲ್ಲಿದೆ ಎಂದು ರೋಟರಿ ಜಿಲ್ಲಾ ರಾಜ್ಯಪಾಲ ಸತೀಶ್ ಬೋಳಾರ್ ಹೇಳಿದರು.

ಸೋಮವಾರಪೇಟೆ ರೋಟರಿ ಕ್ಲಬ್‌ಗೆ ಭೇಟಿ ನೀಡಿ, ಕ್ಲಬ್ ವತಿಯಿಂದ ಅನುಷ್ಠಾನಗೊಳ್ಳುತ್ತಿರುವ ವಿವಿಧ ಯೋಜನೆಗಳು ಹಾಗೂ ಸೇವಾ ಕಾರ್ಯಗಳ ಕುರಿತು ಮಾಹಿತಿ ಪಡೆದುಕೊಂಡ ಅವರು, ಮಂಗಳವಾರ ಜಾನಕಿ ಕನ್ವೆನ್ಷನ್ ಹಾಲ್‌ನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದರು.

ಇಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿ ರೋಟರಿ ವತಿಯಿಂದ ಸ್ಕ್ಯಾನಿಂಗ್ ಸೆಂಟರ್ ಸ್ಥಾಪಿಸುವ ಕುರಿತು ಚರ್ಚೆ ನಡೆಯುತ್ತಿದ್ದು, ಇದು ಕಾರ್ಯರೂಪಕ್ಕೆ ಬಂದರೆ ಗ್ರಾಮೀಣ ಭಾಗದ ಜನರಿಗೆ ಆರೋಗ್ಯ ಸೇವೆ ಪಡೆಯಲು ಅನುಕೂಲವಾಗಲಿದೆ ಎಂದು ಹೇಳಿದರು.

ರೋಟರಿ ಅಧ್ಯಕ್ಷ ಬಿ.ಎಸ್. ಸುಂದರ್ ಮಾತನಾಡಿ, ಕ್ಲಬ್ ವತಿಯಿಂದ ಹಲವು ಜನಪರ ಯೋಜನೆಗಳನ್ನು ಕೈಗೊಳ್ಳಲಾಗಿದೆ. ಪ್ರವಾಸಿ ತಾಣವಾದ ಮಲ್ಲಳ್ಳಿ ಜಲಪಾತದಲ್ಲಿ ಪ್ರವಾಸಿಗರ ಅನುಕೂಲಕ್ಕಾಗಿ ಹೈಟೆಕ್ ಶೌಚಗೃಹ ನಿರ್ಮಿಸುವ ಕುರಿತು ಶಾಸಕರೊಂದಿಗೆ ಚರ್ಚಿಸಲಾಗಿದೆ. ಬೇಳೂರು ಸರ್ಕಾರಿ ಶಾಲೆಗೆ ಸಿಸಿ ಕ್ಯಾಮೆರಾಗಳನ್ನು ಒದಗಿಸಲಾಗಿದೆ. ಯಡೂರು ಮತ್ತು ಬೇಳೂರು ಸರ್ಕಾರಿ ಆಂಗ್ಲ ಮಾಧ್ಯಮ ಶಾಲೆಗಳಿಗೆ ಪ್ರೋತ್ಸಾಹಧನ ನೀಡಲಾಗಿದೆ. ಕ್ಯಾನ್ಸರ್‌ನಿಂದ ಬಳಲುತ್ತಿರುವ ಫಲಾನುಭವಿಗಳಿಗೆ ಆರ್ಥಿಕ ನೆರವು ನೀಡುವ ಮೂಲಕ ಸಂಕಷ್ಟದ ಸಮಯದಲ್ಲಿ ಅವರೊಂದಿಗೆ ನಿಲ್ಲುವ ಪ್ರಯತ್ನ ಮಾಡಲಾಗಿದೆ ಎಂದರು.

ಸಹಾಯಕ ರಾಜ್ಯಪಾಲ ಎಚ್.ಎಸ್. ವಸಂತ್ ಕುಮಾರ್, ವಲಯ ಸೇನಾನಿ ಎ.ಎಸ್. ಮಲ್ಲೇಶ್, ರೋಟರಿ ಕಾರ್ಯದರ್ಶಿ ಪಿ.ಕೆ. ರವಿ ಹಾಗೂ ಮುಂದಿನ ಸಾಲಿನ ಅಧ್ಯಕ್ಷ ಪ್ರದೀಪ್ ಉಪಸ್ಥಿತರಿದ್ದರು. ಇದೇ ಸಂದರ್ಭ ಹತ್ತನೆ ತರಗತಿಯಲ್ಲಿ ಅತೀ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗೆ ಪ್ರೋತ್ಸಾಹ ಧನ ನೀಡಲಾಯಿತು.