ಸಾರಾಂಶ
ಸಭೆಯಲ್ಲಿ ಪಾಲ್ಗೊಂಡಿದ್ದ ಬೆಳೆಗಾರರು, ಕಾರ್ಮಿಕರ ವೇತನ ಮತ್ತು ಕೆಲಸದ ಸಮಯವನ್ನು ನಿಗದಿಗೊಳಿಸುವಂತೆ ಮನವಿ ಮಾಡಿದ ಹಿನ್ನೆಲೆಯಲ್ಲಿ ಎಲ್ಲ ತೋಟಗಳಲ್ಲಿ ಕಾರ್ಮಿಕರು ಬೆಳಗ್ಗೆ 9ರಿಂದ ಸಂಜೆ 4.30ರ ವರೆಗೆ ಕೆಲಸ ಮಾಡಬೇಕು. ಕಾರ್ಮಿಕರ ವೇತನ ಮತ್ತು ಪಿಕ್‍ಅಪ್ ವಾಹನದ ಬಾಡಿಗಗೆ ಸಂಬಂಧಿಸಿದಂತೆ ಮೇ 6ರಂದು ಮತ್ತೊಮ್ಮೆ ಬೆಳೆಗಾರರು, ಪಿಕ್‍ಅಪ್ ಮಾಲೀಕರು ಹಾಗೂ ಕಾರ್ಮಿಕ ಮುಖಂಡರೊಡನೆ ಚರ್ಚಿಸಿ ಸೂಕ್ತ ನಿರ್ಣಯ ಕೈಗೊಳ್ಳುವಂತೆ ಸಭೆ ತೀರ್ಮಾನಿಸಿತು.
ಕನ್ನಡಪ್ರಭ ವಾರ್ತೆ ಸೋಮವಾರಪೇಟೆ
ತಾಲೂಕು ಕಾಫಿ ಬೆಳೆಗಾರರ ಕುಂದುಕೊರತೆ ಸಭೆ ಸೋಮವಾರ ಇಲ್ಲಿನ ಕೊಡವ ಸಮಾಜದ ಮೇಲಿನ ಸಭಾಂಗಣದಲ್ಲಿ ಸಂಘ ಅಧ್ಯಕ್ಷ ಮೋಹನ್ ಬೋಪಣ್ಣ ಅಧ್ಯಕ್ಷತೆಯಲ್ಲಿ ನಡೆಯಿತು.ಸಭೆಯಲ್ಲಿ ಸಂಘದ ಅಧ್ಯಕ್ಷರು ಮಾತನಾಡಿ, ಇತ್ತೀಚಿನ ವರ್ಷಗಳಲ್ಲಿ ಕಾಫಿ ಬೆಳೆಗಾರರು ಸಂಕಷ್ಟದ ಜೀವನ ನಡೆಸುತ್ತಿದ್ದಾರೆ. ಹವಾಮಾನ ವೈಪರಿತ್ಯದಿಂದ ಕಾಫಿ ತೋಟ ಮತ್ತು ಬೆಳೆ ಉಳಿಸಿಕೊಳ್ಳುವುದೇ ಸಾಹಸವಾಗಿದೆ. ಬೆಳೆಗೆ ಬೆಲೆ ಇದ್ದರೂ, ತೋಟಗಳಲ್ಲಿ ಬೆಳೆ ಇಲ್ಲ. ಕೂಲಿ ಕಾರ್ಮಿಕರ ವೇತನ, ರಾಸಾಯನಿಕ ಗೊಬ್ಬರ ಸೇರಿದಂತೆ ಎಲ್ಲದರ ಬೆಲೆ ಹೆಚ್ಚಳದಿಂದಾಗಿ ತೋಟಗಳ ನಿರ್ವಹಣಾ ವೆಚ್ಚ ದುಪ್ಪಟ್ಟಾಗಿದೆ. ಆದುದ್ದರಿಂದ ಬೆಳೆಗಾರರ ಕೆಲವೊಂದು ನಿರ್ಣಯಗಳನ್ನು ಕೈಗೊಂಡು ಅದು ಪರಿಣಾಮಕಾರಿಯಾಗಿ ಜಾರಿಯಾಗುವಂತೆ ನೋಡಿಕೊಳ್ಳಬೇಕಾಗಿದೆ ಎಂದು ಹೇಳಿದರು.ಸಭೆಯಲ್ಲಿ ಪಾಲ್ಗೊಂಡಿದ್ದ ಬೆಳೆಗಾರರು, ಕಾರ್ಮಿಕರ ವೇತನ ಮತ್ತು ಕೆಲಸದ ಸಮಯವನ್ನು ನಿಗದಿಗೊಳಿಸುವಂತೆ ಮನವಿ ಮಾಡಿದ ಹಿನ್ನೆಲೆಯಲ್ಲಿ ಎಲ್ಲ ತೋಟಗಳಲ್ಲಿ ಕಾರ್ಮಿಕರು ಬೆಳಗ್ಗೆ 9ರಿಂದ ಸಂಜೆ 4.30ರ ವರೆಗೆ ಕೆಲಸ ಮಾಡಬೇಕು. ಕಾರ್ಮಿಕರ ವೇತನ ಮತ್ತು ಪಿಕ್‍ಅಪ್ ವಾಹನದ ಬಾಡಿಗಗೆ ಸಂಬಂಧಿಸಿದಂತೆ ಮೇ 6ರಂದು ಮತ್ತೊಮ್ಮೆ ಬೆಳೆಗಾರರು, ಪಿಕ್‍ಅಪ್ ಮಾಲೀಕರು ಹಾಗೂ ಕಾರ್ಮಿಕ ಮುಖಂಡರೊಡನೆ ಚರ್ಚಿಸಿ ಸೂಕ್ತ ನಿರ್ಣಯ ಕೈಗೊಳ್ಳುವಂತೆ ಸಭೆ ತೀರ್ಮಾನಿಸಿತು.ಸಭೆಯಲ್ಲಿ ಸಂಘದ ಉಪಾಧ್ಯಕ್ಷ ಬಿ.ಎಂ. ಲವ, ಕಾರ್ಯದರ್ಶಿ ಪ್ರಕಾಶ್, ಕಾಫಿ ಬೆಳೆಗಾರರಾದ ಎಸ್.ಜಿ. ಮೇದಪ್ಪ, ರಾಮಚಂದ್ರ ಇದ್ದರು.