ವಾಲ್ಮೀಕಿ ಸಮಾಜವನ್ನು ದಾರಿತಪ್ಪಿಸುವ ಯತ್ನ: ಲೋಹಿತ್ ಕುಮಾರ್

| Published : Oct 26 2023, 01:00 AM IST

ವಾಲ್ಮೀಕಿ ಸಮಾಜವನ್ನು ದಾರಿತಪ್ಪಿಸುವ ಯತ್ನ: ಲೋಹಿತ್ ಕುಮಾರ್
Share this Article
  • FB
  • TW
  • Linkdin
  • Email

ಸಾರಾಂಶ

ವಾಲ್ಮೀಕಿ ಸಮಾಜವನ್ನು ದಾರಿತಪ್ಪಿಸುವ ಯತ್ನ: ಲೋಹಿತ್ ಕುಮಾರ್14ನೇ ದಿನಕ್ಕೆ ಕಾಲಿಟ್ಟ ಆಹೋರಾತ್ರಿ ಧರಣಿಯಲ್ಲಿ ಮುಖಂಡ । ಪುತ್ಥಳಿ ನಿರ್ಮಾಣ ಜಾಗ ಹೆದ್ದಾರಿ ಪ್ರಾಧಿಕಾರದ್ದು
14ನೇ ದಿನಕ್ಕೆ ಕಾಲಿಟ್ಟ ಆಹೋರಾತ್ರಿ ಧರಣಿಯಲ್ಲಿ ಮುಖಂಡ । ಪುತ್ಥಳಿ ನಿರ್ಮಾಣ ಜಾಗ ಹೆದ್ದಾರಿ ಪ್ರಾಧಿಕಾರದ್ದು ಕನ್ನಡಪ್ರಭ ವಾರ್ತೆ ಚನ್ನಗಿರಿ ತಾಲೂಕು ವಾಲ್ಮೀಕಿ ನಾಯಕ ಸಮಾಜದ ವತಿಯಿಂದ ಮಹರ್ಷಿ ವಾಲ್ಮೀಕಿ ಅವರ ಪುತ್ಥಳಿಯನ್ನು ಪ್ರತಿಷ್ಠಾಪಿಸಲು ಗುರುತಿಸಿರುವ ಜಾಗವು ಹೆದ್ದಾರಿ ಪ್ರಾಧಿಕಾರಕ್ಕೆ ಸೇರಿರುವ ಜಾಗವಾಗಿದ್ದು, ಇದು ಯಾವುದೇ ಖಾಸಗಿ ವ್ಯಕ್ತಿಗಳಿಗೆ ಸೇರಿದ್ದಲ್ಲ. ನಮ್ಮ ಹೋರಾಟಗಾರರ ದಿಕ್ಕು ತಪ್ಪಿಸುವ ಉದ್ದೇಶದಿಂದ ಹಲವಾರು ಗಾಳಿಸುದ್ದಿಗಳನ್ನು ಹರಡಿಸುತ್ತಿದ್ದು, ಇಂತಹ ಸುಳ್ಳು ಸುದ್ದಿಗಳಿಗೆ ಸಮಾಜ ಬಾಂಧವರು ಕಿವಿಗೊಡಬಾರದು ಎಂದು ತಾಲೂಕು ವಾಲ್ಮೀಕಿ ನಾಯಕ ಸಮಾಜದ ಮುಖಂಡ ಮಂಗೇನಹಳ್ಳಿ ಪಿ. ಲೋಹಿತ್ ಕುಮಾರ್ ಹೇಳಿದರು. ಅವರು ಪಟ್ಟಣದ ಸರ್ಕಾರಿ ಡಿಗ್ರಿ ಕಾಲೇಜಿನ ಬಳಿ ಇರುವ ವೃತ್ತದಲ್ಲಿ ಮಹರ್ಷಿ ವಾಲ್ಮೀಕಿ ಅವರ ಪುತ್ಥಳಿಯನ್ನು ಪ್ರತಿಷ್ಠಾಪಿಸಲು ಅನುಮತಿ ನೀಡುವಂತೆ ಒತ್ತಾಯಿಸಿ ನಡೆಸುತ್ತಿರುವ ಆಹೋರಾತ್ರಿ ಧರಣಿ ಸತ್ಯಾಗ್ರಹವು ಬುಧುವಾರ 14ನೇ ದಿನಕ್ಕೆ ಕಾಲಿಟ್ಟಿದ್ದು, ಈ ಧರಣಿ ಸತ್ಯಾಗ್ರಹದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸರ್ಕಾರಿ ಡಿಗ್ರಿ ಕಾಲೇಜಿನ ಬಳಿ ರಾಷ್ಟ್ರೀಯ ಹೆದ್ದಾರಿ 13 ಮತ್ತು ಬೈಪಾಸ್ ರಸ್ತೆ ಹಾದು ಹೋಗಿದ್ದು, ಈ ಎರಡು ರಸ್ತೆಗಳ ಮಧ್ಯ ಭಾಗದಲ್ಲಿರುವ ಜಾಗವು ಹೆದ್ದಾರಿ ಪ್ರಾಧಿಕಾರಕ್ಕೆ ಸೇರಿದ್ದಾಗಿದ್ದು, ಈಗಾಗಲೇ ಹೆದ್ದಾರಿ ಪ್ರಾಧಿಕಾರದ ಅಭಿಯಂತರರು ಈ ಬಗ್ಗೆ ಮಾಹಿತಿ ನೀಡಿದ್ದಾರೆ ಎಂದರು. ಪುರಸಭೆಯ ಸಾಮಾನ್ಯ ಸಭೆಯಲ್ಲಿ ಮಹರ್ಷಿ ವಾಲ್ಮೀಕಿ ಅವರ ಪುತ್ಥಳಿಯನ್ನು ಪ್ರತಿಷ್ಠಾಪಿಸಲು ಠರಾವು ಪ್ರಕ್ರಿಯೆ ಮುಗಿಸಿ ಜಿಲ್ಲಾಧಿಕಾರಿ ಕಚೇರಿಗೆ ಶಿಫಾರಸ್ಸು ಮಾಡಿದೆ. ಜಿಲ್ಲಾಧಿಕಾರಿ ಸತ್ಯಾಸತ್ಯತೆಯನ್ನು ಪರಿಶೀಲನೆ ನಡೆಸಿ ಸೂಕ್ತ ತೀರ್ಮಾನವನ್ನು ಕೈಗೊಳ್ಳಲಿದ್ದು, ಅವರ ತೀರ್ಮಾನ ನಮ್ಮ ಪರವಾಗಿ ಬರುವ ವಿಶ್ವಾಸವಿದೆ. ಡಿಸಿ ಆದೇಶ ಬರುವವರೆಗೂ ನಮ್ಮ ಹೋರಾಟ ಮುಂದುವರೆಯಲಿದೆ ಎಂದರು. ಪುರಸಭೆಯ ಮಾಜಿ ಸದಸ್ಯ ಪಿ.ಬಿ. ನಾಯಕ ಮಾತನಾಡಿ, ಇದೇ ತಿಂಗಳು 28ರಂದು ನಡೆಯಲಿರುವ ಮಹರ್ಷಿ ವಾಲ್ಮೀಕಿ ಅವರ ಜಯಂತಿಯ ಒಳಗಾಗಿ ಪುತ್ಥಳಿಯನ್ನು ಪ್ರತಿಷ್ಠಾಪಿಸಲು ಅನುಮತಿ ನೀಡದೆ ಇದ್ದರೆ ಜಿಲ್ಲಾಡಳಿತದ ವತಿಯಿಂದ ನಡೆಯುವ ವಾಲ್ಮೀಕಿ ಜಯಂತಿಯನ್ನು ಬಹಿಷ್ಕರಿಸಲಿದ್ದು, ತಾಲೂಕು ಆಡಳಿತದ ವತಿಯಿಂದ ನಡೆಯಲಿರುವ ವಾಲ್ಮೀಕಿ ಜಯಂತಿಯಲ್ಲಿ ಕಪ್ಪು ಬಾವುಟವನ್ನು ಪ್ರದರ್ಶಿಸಲಾಗುವುದು ಎಂದರು. ಇದೇ ಸಂದರ್ಭದಲ್ಲಿ ತಾಲೂಕು ಕೊರಚ, ಕೊರಮ ಸಮಾಜ ಬಾಂಧವರು ತಾಲೂಕು ವಾಲ್ಮೀಕಿ ನಾಯಕ ಸಮಾಜದ ವತಿಯಿಂದ ನಡೆಸುತ್ತಿರುವ ಆಹೋರಾತ್ರಿ ಧರಣಿ ಸತ್ಯಾಗ್ರಹದಲ್ಲಿ ಭಾಗವಹಿಸಿ ಬೆಂಬಲ ವ್ಯಕ್ತ ಪಡಿಸಿದರು. ಇದೇ ಸಂದರ್ಭದಲ್ಲಿ ವಾಲ್ಮೀಕಿ ನಾಯಕ ಸಮಾಜದ ಪ್ರಮುಖರಾದ ಕೊಂಡದಹಳ್ಳಿ ಜಯಣ್ಣ, ತಾಲೂಕು ಮಾದಿಗ ಸಮಾಜದ ಅಧ್ಯಕ್ಷ ಮಂಜುನಾಥ್, ತಿಪ್ಪಣ್ಣ, ಸುರೇಶ್, ರವಿ, ಸಂತೋಷ್, ಸಂದೀಪ್, ದರ್ಶನ್, ಚನ್ನಗಿರಿ ನವೀನ್, ಆಶೋಕ್, ನಾಗರಾಜ್, ಹೇಮಂತ್, ಸುನೀಲ್, ನಾಗರಾಜಪ್ಪ, ರಮೇಶ್, ಕರ್ತಪ್ಪ, ಗೋವಿಂದಪ್ಪ, ಸುಣಿಗೆರೆ ಕುಮಾರ್, ರಂಗನಾಥ್, ಜ್ಞಾನೇಶ್, ಪ್ರಶಾಂತ್ ಸೇರಿದಂತೆ ಮೊದಲಾದವರು ಹಾಜರಿದ್ದರು. - - - 25ಕೆಸಿಎನ್ಜಿ1 ತಾಲೂಕು ವಾಲ್ಮೀಕಿ ನಾಯಕ ಸಮಾಜದ ವತಿಯಿಂದ ನಡೆಸುತ್ತಿರುವ ಆಹೋರಾತ್ರಿ ಧರಣಿ ಸತ್ಯಾಗ್ರಹದಲ್ಲಿ ಸಮಾಜದ ಮುಖಂಡ ಮಂಗೇನಹಳ್ಳಿ ಲೋಹಿತ್ ಮಾತನಾಡಿದರು.