ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ, ಸಾಧಕರಿಗೆ ಸನ್ಮಾನ

| Published : Mar 28 2024, 12:47 AM IST

ಸಾರಾಂಶ

ಸೋಮವಾರಪೇಟೆ ಪತ್ರಿಕಾ ಭವನದಲ್ಲಿ ತಾಲೂಕು ಜಾನಪದ ಪರಿಷತ್ ವತಿಯಿಂದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಹಾಗು ಸಾಧಕ ಮಹಿಳೆಯರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು. ಪೌರಕಾರ್ಮಿಕರಾದ ಶಶಿಕಲಾ, ಹಿರಿಯ ಆಯುರ್ವೇದಿಕ್ ವೈದ್ಯೆ ಶರ್ಮಿಳಾ ಫರ್ನಾಂಡಿಸ್ ಅವರನ್ನು ಗೌರವಿಸಲಾಯಿತು.

ಕನ್ನಡಪ್ರಭ ವಾರ್ತೆ ಸೋಮವಾರಪೇಟೆ

ತಾಲೂಕು ಜಾನಪದ ಪರಿಷತ್ ವತಿಯಿಂದ ಪತ್ರಿಕಾ ಭವನದಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಹಾಗು ಸಾಧಕ ಮಹಿಳೆಯರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು.

ಸನ್ಮಾನ ಸ್ವೀಕರಿಸಿದ ಪೌರಕಾರ್ಮಿಕರಾದ ಶಶಿಕಲಾ ಮಾತನಾಡಿ, ಆರೋಗ್ಯ ಲೆಕ್ಕಿಸದೆ ಹೊಟ್ಟೆಪಾಡಿಗಾಗಿ ದುಡಿಯುವ ಪೌರಕಾರ್ಮಿಕರ ಮೇಲಿನ ಅವಮಾನ, ಶೋಷಣೆ, ತಾರತಮ್ಯ ನಿಲ್ಲಬೇಕು ಎಂದು ಹೇಳಿದರು.

ಪರಿಸರ ಸ್ವಚ್ಛವಾಗಿ ಇಡಬೇಕು. ಸಾಂಕ್ರಾಮಿಕ ರೋಗ ಹರಡಬಾರದು ಎಂದು ನಾವೇ ರೋಗಕ್ಕೆ ತುತ್ತಾದರೂ ಅಂಜದೆ ನಮ್ಮ ಕಸುಬು ಮಾಡುತ್ತೇವೆ. ಆದರೆ ನಾವು ನಮ್ಮ ಕೆಲಸ ನಿರ್ವಹಿಸುವಾಗ ನಮಗೆ ಅವಮಾನವಾಗುತ್ತಿದೆ. ನಮ್ಮನ್ನು ಕೀಳಾಗಿ ನೋಡಲಾಗುತ್ತಿದೆ ಇದರಿಂದ ಮನಸ್ಸಿಗೆ ನೋವಾಗುತ್ತದೆ ಇನ್ನಾದರೂ ಈ ಶೋಷಣೆ ನಿಲ್ಲಬೇಕು. ಪೌರಕಾರ್ಮಿಕರು ಬಾಯಾರಿಕೆಯಿಂದ ನೀರು ಕೇಳಿದರೆ ಮಾನವೀಯ ದೃಷ್ಟಿಯಿಂದಾಲಾದರೂ ಒಂದು ಲೋಟ ನೀರು ಕೊಡಬೇಕು ಎಂದರು.

ಕಾರ್ಯಕ್ರಮ ಉದ್ಘಾಟಿಸಿದ ನಗರ ಪತ್ರಕರ್ತರ ಸಂಘದ ಅಧ್ಯಕ್ಷ ಎಸ್.ಮಹೇಶ್ ಮಾತನಾಡಿ, ಸಮಾಜ ಮತ್ತು ದೇಶದ ಕಲ್ಯಾಣಕ್ಕೆ ಮಹಿಳೆಯರು ಗಣನೀಯ ಕೊಡುಗೆ ನೀಡಿದ್ದಾರೆ. ಸಮಾಜದಲ್ಲಿ ಮಹಿಳೆಯರಿಗೆ ಬಗ್ಗೆ ಮೆಚ್ಚುಗೆ, ಗೌರವ, ಪ್ರೀತಿ ಮತ್ತು ಕಾಳಜಿ ತೋರಿಸಬೇಕು. ಮಹಿಳೆಗೆ ಸಮಾನ ಗೌರವ ನೀಡಲೇಬೇಕು ಎಂದು ಹೇಳಿದರು.

ಆರೋಗ್ಯವಂತ ಸಮಾಜ ನಿರ್ಮಾಣದಲ್ಲಿ ಪೌರಕಾರ್ಮಿಕರ ಪಾತ್ರ ಅತೀ ಮುಖ್ಯವಾಗಿದೆ. ಪೌರಕಾರ್ಮಿಕರ ಹಿತ ಕಾಪಾಡಲು ಸರ್ಕಾರ ಹಲವು ಯೋಜನೆಗಳನ್ನು ಜಾರಿಗೊಳಿಸಿದೆ. ಆದು ಸಮರ್ಪಕವಾಗಿ ಪೌರಕಾರ್ಮಿಕರಿಗೆ ತಲುಪಬೇಕಾಗಿದೆ. ಪೌರಕಾರ್ಮಿಕರ ಹುದ್ದೆಗಳನ್ನು ಸರ್ಕಾರ ಕಾಯಂಗೊಳಿಸದಿದ್ದರೆ, ಮುಂದಿನ ದಿನಗಳಲ್ಲಿ ಆ ಕಸುಬನ್ನು ನಿರ್ವಹಿಸಲು ಯಾರು ಮುಂದೆ ಬರುವುದಿಲ್ಲ. ಪೌರಕಾರ್ಮಿಕರಿಲ್ಲದ ಸಮಾಜವನ್ನು ಊಹಿಸಿಕೊಳ್ಳಲು ಅಸಾಧ್ಯ ಎಂದು ಹೇಳಿದರು.

ಸನ್ಮಾನ ಸ್ವೀಕರಿಸಿದ ಹಿರಿಯ ಆಯುರ್ವೇದಿಕ್ ವೈದ್ಯೆ ಶರ್ಮಿಳಾ ಫರ್ನಾಂಡಿಸ್ ಮಾತನಾಡಿ, ಶುಚಿತ್ವದಿಂದ ಮಾತ್ರ ಆರೋಗ್ಯವಂತ ಸಮಾಜ ಸೃಷ್ಟಿಯಾಗುತ್ತದೆ. ಮಹಿಳೆಯರು ತಮ್ಮ ಆರೋಗ್ಯದ ಕಡೆ ಹೆಚ್ಚಿನ ಗಮನಹರಿಸಬೇಕು. ಮಿತವಾದ ಪೌಷ್ಟಿಕ ಆಹಾರ ಒಂದಷ್ಟು ವ್ಯಾಯಾಮದ ಕಡೆ ಗಮನಹರಿಸಬೇಕು. ಒತ್ತಡ ಮುಕ್ತ ಬದುಕಿನಿಂದ ಉತ್ತಮ ಆರೋಗ್ಯ ಪಡೆದುಕೊಳ್ಳಬಹುದು ಎಂದು ಹೇಳಿದರು.

ಪರಿಷತ್ ತಾಲೂಕು ಅಧ್ಯಕ್ಷ ಕೆ.ಎ.ಪ್ರಕಾಶ್, ಕಾರ್ಯದರ್ಶಿ ಎಂ.ಎ.ರುಬಿನಾ ಇದ್ದರು. ರಾಣಿ ರವೀಂದ್ರ ಸ್ವಾಗತಿಸಿ, ಶರ್ಮಿಳಾ ರಮೇಶ್ ನಿರೂಪಿಸಿದರು.