ಸೋಮವಾರಪೇಟೆ: ಜೆಸಿಐನಿಂದ ಗಡಿಯಾರ ಸ್ತಂಭ ಉದ್ಘಾಟನೆ

| Published : Feb 02 2025, 11:47 PM IST

ಸಾರಾಂಶ

ಜೆಸಿಐ ಸೋಮವಾರಪೇಟೆ ಪುಷ್ಟಗಿರಿ ವತಿಯಿಂದ ಭಾರತದಲ್ಲಿ ಜೆಸಿಐ ಪ್ರಾರಂಭವಾಗಿ ೭೫ ವರ್ಷ ಹಾಗೂ ಸೋಮವಾರಪೇಟೆ ತಾಲೂಕು ಜೆಸಿಐ ಸಂಸ್ಥೆಗೆ ೫೦ ವರ್ಷ ತುಂಬುತ್ತಿರುವ ಸವಿನೆನಪಿಗಾಗಿ ಖಾಸಗಿ ಬಸ್ ನಿಲ್ದಾಣದಲ್ಲಿ ನಿರ್ಮಿಸಿರುವ ಗಡಿಯಾರ ಸ್ತಂಭದ ಉದ್ಘಾಟನೆಯನ್ನು ಗಡಿಯಾರ ದಾನಿಗಳಾದ ಹರಪಳ್ಳಿ ರವೀಂದ್ರ ಶನಿವಾರ ನೆರವೇರಿಸಿದರು.

ಕನ್ನಡಪ್ರಭ ವಾರ್ತೆ ಸೋಮವಾರಪೇಟೆ

ಇಲ್ಲಿನ ಜೆಸಿಐ ಸೋಮವಾರಪೇಟೆ ಪುಷ್ಟಗಿರಿ ವತಿಯಿಂದ ಭಾರತದಲ್ಲಿ ಜೆಸಿಐ ಪ್ರಾರಂಭವಾಗಿ ೭೫ ವರ್ಷ ಹಾಗೂ ಸೋಮವಾರಪೇಟೆ ತಾಲೂಕು ಜೆಸಿಐ ಸಂಸ್ಥೆಗೆ ೫೦ ವರ್ಷ ತುಂಬುತ್ತಿರುವ ಸವಿನೆನಪಿಗಾಗಿ ಖಾಸಗಿ ಬಸ್ ನಿಲ್ದಾಣದಲ್ಲಿ ನಿರ್ಮಿಸಿರುವ ಗಡಿಯಾರ ಸ್ತಂಭದ ಉದ್ಘಾಟನೆಯನ್ನು ಗಡಿಯಾರ ದಾನಿಗಳಾದ ಹರಪಳ್ಳಿ ರವೀಂದ್ರ ಶನಿವಾರ ನೆರವೇರಿಸಿದರು.ನಂತರ ಅಟಲ್ ಜೀ ಕನ್ನಡ ಭವನದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಉದ್ಯಮಿ ಹರಪಳ್ಳಿ ರವೀಂದ್ರ, ಜೆಸಿಐ ಭಾರತ ಸೇವಾ ಪುರಸ್ಕಾರ ಸ್ವೀಕರಿಸಿದರು.

ನಂತರ ಮಾತನಾಡಿ, ಪ್ರಪಂಚದಲ್ಲಿ ಜೇಸಿ ಸಂಸ್ಥೆ ಸೇವಾ ವಲಯದಲ್ಲಿ ಗುರುತಿಸಿಕೊಂಡಿರುವ ಅತಿ ದೊಡ್ಡ ಸಂಸ್ಥೆಯಾಗಿದೆ. ಹಲವಾರು ಜನಪರ ಕಾರ್ಯಕ್ರಮಗಳನ್ನು ಮಾಡಿಕೊಂಡು ಬರುತ್ತಿರುವ ಸಂಸ್ಥೆಗೆ ದಾನಿಗಳು ಹೆಚ್ಚಿನ ಸಹಕಾರ ನೀಡಿದಲ್ಲಿ ಇನ್ನಷ್ಟು ಕೆಲಸ ಮಾಡಲು ಅನುಕೂಲವಾಗುವುದು ಎಂದು ಹೇಳಿದರು.ಜೇಸಿ ವಲಯ ೧೪ರ ನಿಕಟಪೂರ್ವ ಅಧ್ಯಕ್ಷೆ ಆಶಾ ಜೈನ್ ಮಾತನಾಡಿ, ನಮ್ಮ ಸಮಯ ಪಾಲನೆಯಲ್ಲಿ ಗಡಿಯಾರ ಅತಿ ಪ್ರಮುಖ ಸ್ಥಾನ ಪಡೆದಿದ್ದು, ಜೇಸಿ ಸಂಸ್ಥೆಯ ವತಿಯಿಂದ ದೇಶದೆಲ್ಲೆಡೆ ಗಡಿಯಾರ ಸ್ತಂಭವನ್ನು ನಿರ್ಮಾಣ ಮಾಡಲು ರಾಷ್ಟ್ರೀಯ ಸಮಿತಿ ತೀರ್ಮಾನಿಸಿತ್ತು. ಆದರೆ ಅವುಗಳಲ್ಲಿ ಕೇವಲ ೫ ಮಾತ್ರ ಕಾರ್ಯಾರಂಭ ಮಾಡಿದರೆ, ಉಳಿದವು ಕೆಲವು ಸಮಸ್ಯೆಗಳಿಂದ ಪ್ರಾರಂಭವಾಗಲಿಲ್ಲ. ಪಟ್ಟಣದ ಪ್ರಮುಖ ಸ್ಥಳದಲ್ಲಿ ಗಡಿಯಾರ ಸ್ತಂಭ ನಿರ್ಮಾಣ ಮಾಡಿರುವುದರಿಂದ ಇದು ಹಲವರಿಗೆ ಒಳಿತಾಗಲಿದೆ ಎಂದರು.ಅಧ್ಯಕ್ಷತೆಯನ್ನು ಜೇಸಿ ಸಂಸ್ಥೆಯ ೨೦೨೪ರ ಅಧ್ಯಕ್ಷ ಎಸ್.ಆರ್. ವಸಂತ್ ವಹಿಸಿದ್ದರು. ವೇದಿಕೆಯಲ್ಲಿ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಜಯಂತಿ ಶೀವಕುಮಾರ್, ಸ್ಥಾಯಿ ಸಮಿತಿ ಅಧ್ಯಕ್ಷ ಮಹೇಶ್, ಬರಹಗಾರರಾದ ಪ್ರಶಾಂತ್ ಹುಲುಕೋಡು, ಜೆಸಿಐ ಅಧ್ಯಕ್ಷೆ ಜಗದಾಂಬ ಗುರುಪ್ರಸಾದ್, ಪ್ರಮುಖರಾದ ನೆಲ್ಸನ್, ಕೆ.ಎನ್. ತೇಜಸ್ವಿ ಹಾಗೂ ಎ.ಆರ್. ಮಮತ ಉಪಸ್ಥಿತರಿದ್ದರು.ಸಾಧಕರಾದ ಕಿರಗಂದೂರಿನ ಎ.ಎನ್. ಪದ್ಮನಾಭ, ಗುತ್ತಿಗೆದಾರ ಆರ್.ಸಿ. ಗಣೇಶ್, ನಿವೃತ್ತ ಆರೋಗ್ಯ ಸಹಾಯಕಿ ಶೋಭಾ ಮಂದಣ್ಣ, ಪತ್ರಕರ್ತರಾದ ಕವನ್ ಕಾರ್ಯಪ್ಪ, ಡಿ.ಪಿ. ಲೋಕೇಶ್, ಹಿರಿಯ ಕರಾಟೆಪಟು ಎಚ್.ಆರ್. ಶಿವಪ್ಪ, ಛಾಯಾಗ್ರಾಹಕ ವಿನೋದ್ ಜಯರಾಮ್ ಹಾಗೂ ಪೌರ ಕಾರ್ಮಿಕ ವೀರೇಶ್ ಅವರನ್ನು ಸನ್ಮಾನಿಸಲಾಯಿತು.