ಸಾರಾಂಶ
ಕನ್ನಡಪ್ರಭ ವಾರ್ತೆ ಸೋಮವಾರಪೇಟೆ
ಇಲ್ಲಿನ ಜೈ ಜವಾನ್ ಮಾಜೀ ಸೈನಿಕರ ಸಂಘದ ಆಶ್ರಯದಲ್ಲಿ ಪಟ್ಟಣದ ಪತ್ರಿಕಾಭವನ ಸಭಾಂಗಣದಲ್ಲಿ ಕಾರ್ಗಿಲ್ ವಿಜಯ್ ದಿವಸ್ ಕಾರ್ಯಕ್ರಮ ಆಯೋಜಿಸಲಾಗಿತ್ತು. ಸಂಘದ ಅಧ್ಯಕ್ಷ ಈರಪ್ಪ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾಜಿ ಸೈನಿಕರು, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ದೇಶಾಭಿಮಾನಿಗಳು ಭಾಗಿಯಾಗಿದ್ದರು.ಈ ಸಂದರ್ಭ ಮಾತನಾಡಿದ ಈರಪ್ಪ ಅವರು, ಕಾರ್ಗಿಲ್ ಯುದ್ಧದ ಸಂದರ್ಭ ದೇಶದ ಗಡಿಯಲ್ಲಿ ಆದ ಬೆಳವಣಿಗೆ, ಹುತಾತ್ಮರಾದ ಸೈನಿಕರ ಕೆಚ್ಚೆದೆಯ ಹೋರಾಟ, ಪಾಕಿಸ್ತಾನದ ಕಪಟ ಬುದ್ಧಿಯ ಬಗ್ಗೆ ವಿವರಿಸಿದರು.
ಈಗಾಗಲೇ ಭಾರತದೊಳಗೆ ಅಕ್ರಮವಾಗಿ ಬಾಂಗ್ಲಾ ವಲಸಿಗರು ನುಗ್ಗಿದ್ದು, ಇವರಿಂದ ದೇಶದ ಆಂತರಿಕ ಭದ್ರತೆಗೆ ಆತಂಕವಿದೆ. ಒಂದು ವೇಳೆ ಯುದ್ಧದ ಸನ್ನಿವೇಶ ನಿರ್ಮಾಣವಾದರೆ ದೇಶದ ಗಡಿಯಲ್ಲಿರುವ ಸೈನಿಕರಷ್ಟೇ ಮಂದಿ ದೇಶದ ಆಂತರಿಕ ಭದ್ರತೆಗೂ ಬೇಕಾಗುತ್ತದೆ. ಈ ವಿಷಯದ ಬಗ್ಗೆ ಗಂಭೀರ ಚಿಂತನೆ ಹರಿಸಬೇಕಿದೆ ಎಂದರು.ರೋಟರಿ ಸಂಸ್ಥೆಯ ಅಧ್ಯಕ್ಷ ಸಿ.ಕೆ. ಶಿವಕುಮಾರ್ ಮಾತನಾಡಿ, ಕಾರ್ಗಿಲ್ ಯುದ್ಧದಿಂದ ಭಾರತದ ಸೈನ್ಯದ ಪರಾಕ್ರಮ ಇಡೀ ವಿಶ್ವಕ್ಕೆ ಮನದಟ್ಟಾಗಿದೆ. ಹಗಲೂ ರಾತ್ರಿಯೆನ್ನದೆ ದೇಶದ ಗಡಿ ಕಾಯುತ್ತಿರುವ ಸೈನಿಕರ ಸೇವೆಯನ್ನು ಸ್ಮರಿಸಬೇಕು. ಅವರ ತ್ಯಾಗಕ್ಕೆ ಸ್ಥೈರ್ಯ ತುಂಬಬೇಕು. ಯುವ ಜನಾಂಗ ದೇಶ ಸೇವೆಯ ಪುಣ್ಯ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕು ಎಂದರು.
ಕೊಡಗು ಜಿಲ್ಲಾ ಯೋಧಾಭಿಮಾನಿ ಬಳಗದಿಂದ ರಚನೆಗೊಂಡಿರುವ ಅಮರ್ ಜವಾನ್ ಪ್ರತಿಮೆಗೆ ಕಾರ್ಯಕ್ರಮದಲ್ಲಿ ಪುಷ್ಪಾರ್ಚನೆ ಮಾಡಿ, ಸೈನಿಕರನ್ನು ಸ್ಮರಿಸಲಾಯಿತು.ರೋಟರಿ ಮಾಜಿ ಅಧ್ಯಕ್ಷ ಮಹೇಶ್, ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ಕೆ.ಎನ್.ದೀಪಕ್, ಹಿಂದೂ ಜಾಗರಣಾ ವೇದಿಕೆಯ ಸುಭಾಷ್ ತಿಮ್ಮಯ್ಯ, ಎಂ.ಬಿ. ಉಮೇಶ್, ಸಿ.ಕೆ. ಆರ್ಮಿ ಟ್ರೇನಿಂಗ್ ಅಕಾಡೆಮಿ ಮುಖ್ಯಸ್ಥ ಚಂದ್ರಕುಮಾರ್, ಮೋಟಾರ್ ಯೂನಿಯನ್ ಅಧ್ಯಕ್ಷ ಬಾಲಕೃಷ್ಣ ಸೇರಿದಂತೆ ಮಾಜಿ ಸೈನಿಕರು, ಮಹಿಳಾ ಸದಸ್ಯರು, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಇದ್ದರು.
ಹಿಂದೂ ಜಾಗರಣಾ ವೇದಿಕೆಯ ಸೋಮವಾರಪೇಟೆ ತಾಲೂಕು ಘಟಕದಿಂದ ಪಟ್ಟಣದ ಪುಟ್ಟಪ್ಪ ವೃತ್ತದಲ್ಲಿ ಕಾರ್ಗಿಲ್ ವಿಜಯ್ ದಿವಸ್ ಕಾರ್ಯಕ್ರಮ ನಡೆಯಿತು. ಅಗಲಿದ ಸೈನಿಕರ ಸ್ಮರಣೆಯೊಂದಿಗೆ ಪುಷ್ಪನಮನ ಸಲ್ಲಿಸಲಾಯಿತು.ಮಾಜೀ ಸೈನಿಕರ ಸಂಘದ ಅಧ್ಯಕ್ಷ ಈರಪ್ಪ, ಹಿಂದೂ ಜಾಗರಣಾ ವೇದಿಕೆ ಪ್ರಮುಖರಾದ ಬೋಜೇಗೌಡ, ಸುಭಾಷ್, ಎಂ.ಬಿ. ಉಮೇಶ್, ಪ್ರಮುಖರಾದ ಕೂತಿ ಪರಮೇಶ್, ರೂಪಾ ಸತೀಶ್, ದಯಾನಂದ, ಮಣಿ ಕುಶಾಲಪ್ಪ ಬಾಲಕೃಷ್ಣ ಸೇರಿದಂತೆ ಇತರರು ಇದ್ದರು.