ಸಾರಾಂಶ
ಕನ್ನಡಪ್ರಭ ವಾರ್ತೆ ಮಡಿಕೇರಿಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ಬೋಧಕ ಆಸ್ಪತ್ರೆ ಮಡಿಕೇರಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಡಿಕೇರಿ, ತಾಲೂಕು ಆರೋಗ್ಯಧಿಕಾರಿಗಳ ಕಚೇರಿ ಸೋಮವಾರಪೇಟೆ, ಸಾರ್ವಜನಿಕ ಆಸ್ಪತ್ರೆ ಸಂಯುಕ್ತ ಆಶ್ರಯದಲ್ಲಿ ಮಂಗಳವಾರ ಸೋಮವಾರಪೇಟೆ ಸಾರ್ವಜನಿಕ ಆಸ್ಪತ್ರೆಯಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ನಡೆಯಿತು.
ಈ ಶಿಬಿರದಲ್ಲಿ ಸಾಮಾನ್ಯ ವೈದ್ಯಶಾಸ್ತ್ರ, ಶಸ್ತ್ರ ಚಿಕಿತ್ಸೆ, ನೇತ್ರ ವಿಭಾಗ, ಪ್ರಸೂತಿ ಮತ್ತು ಸ್ತ್ರೀ ರೋಗ, ಮಕ್ಕಳ, ಚರ್ಮ ರೋಗ, ಕಿವಿ ಮೂಗು ಗಂಟಲು, ಮೂಳೆ ಮತ್ತು ಕೀಲು, ಸಮುದಾಯ ವ್ಯೆದ್ಯಕೀಯ, ದಂತ, ಮಾನಸಿಕ ರೋಗ, ಅಸಾಂಕ್ರಾಮಿಕ ರೋಗಗಳ ನುರಿತ ತಜ್ಞ ವ್ಯೆದ್ಯರು ವೈದ್ಯಕೀಯ ಸೇವೆಯನ್ನು ನೀಡಲಾಯಿತು.ಈ ಶಿಬಿರದಲ್ಲಿ ಸುಮಾರು 300ಕ್ಕಿಂತ ಹೆಚ್ಚು ಹೊರ ರೋಗಿಗಳ ವ್ಯೆದ್ಯರ ಭೇಟಿ, 6 ಯುಡಿಐಡಿ ಕಾರ್ಡ್‌ಗಳು, 100ಕ್ಕಿಂತ ಹೆಚ್ಚಿನ ಜನರು ಅಸಾಂಕ್ರಾಮಿಕ ರೋಗಗಳ ಪರೀಕ್ಷೆಯನ್ನು ಈ ಶಿಬಿರದಲ್ಲಿ ಸಾರ್ವಜನಿಕರಿಗೆ ಕಲ್ಪಿಸಿಕೊಡಲಾಯಿತು ಹಾಗೂ ಹೆಚ್ಚಿನ ಚಿಕಿತ್ಸೆಗಾಗಿ ವ್ಯೆದ್ಯಕೀಯ ಕಾಲೇಜು ಮಡಿಕೇರಿಗೆ 17 ರೋಗಿಗಳನ್ನು ರೆಫರ್ ಮಾಡಲಾಗಿದೆ.
ಈ ಕಾರ್ಯಕ್ರಮವನ್ನು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು ಡಾ.ಸತೀಶ್ ಕುಮಾರ್ ಉದ್ಘಾಟಿಸಿದರು.* ಆಯುಷ್ಮಾನ್ ಕಾರ್ಡ್ ಮಾಹಿತಿಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ನಂಜುಂಡಯ್ಯ ಮಾತನಾಡಿ, ಪ್ರಧಾನಮಂತ್ರಿ ಅವರು ಆಯುಷ್ಮಾನ್ ಭವ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದು, ಸೆಪ್ಟೆಂಬರ್‌ನಿಂದ ಮಾರ್ಚ್ ವರೆಗೂ ಜಿಲ್ಲೆಯ ವಿವಿಧ ಕಡೆ ಆರೋಗ್ಯ ಕಾರ್ಯಕ್ರಮಗಳು ಹಾಗೂ ಶಿಬಿರಗಳನ್ನು ಆಯೋಜನೆ ಮಾಡಿ ಎಲ್ಲರಿಗೂ ಉತ್ತಮ ಆರೋಗ್ಯ ಸೇವೆಯನ್ನು ಒದಗಿಸುವುದು ನಮ್ಮ ಗುರಿ ಹಾಗೂ ಕೊಡಗು ವೈದ್ಯಕೀಯ ಕಾಲೇಜಿನಲ್ಲಿ ಸಿಗುವ ಸೌಲಭ್ಯಗಳ ಕುರಿತು ಮಾಹಿತಿ ನೀಡಿದರು.ಈ ರೀತಿ ಆರೋಗ್ಯ ಶಿಬಿರಗಳನ್ನು ನಡೆಸುವುದರಿಂದ ಈ ಭಾಗದ ಜನರಿಗೆ ಗುಣಮಟ್ಟದ ಆರೋಗ್ಯ ಸೇವೆಯನ್ನು ಒದಗಿಸುವುದು ನಮ್ಮ ಸಂಸ್ಥೆಯ ಉದ್ದೇಶ. ಈ ಶಿಬಿರದಲ್ಲಿ ಚಿಕಿತ್ಸೆ ಪಡೆದು ಹೆಚ್ಚಿನ ಚಿಕಿತ್ಸೆ ಬೇಕಾದಲ್ಲಿ ವೈದ್ಯಕೀಯ ಕಾಲೇಜು ಬೋಧಕ ಆಸ್ಪತ್ರೆ ಮಡಿಕೇರಿಗೆ ಬರಲು ನಮ್ಮ ಸಂಸ್ಥೆಯ ವ್ಯೆದ್ಯರು ತಿಳಿಸಿದಲ್ಲಿ ಮಡಿಕೇರಿಯ ಟೋಲ್‌ಗೇಟ್ ಬಳಿ ಇರುವ ವ್ಯೆದ್ಯಕೀಯ ಕಾಲೇಜು ಆಸ್ಪತ್ರೆಗೆ ಬಂದು ಹೆಚ್ಚಿನ ಚಿಕಿತ್ಸೆ ಪಡೆದುಕೊಳ್ಳಲು ತಿಳಿಸಿದರು.
ಹಾಗೆಯೇ ಬರುವ ಸಂದರ್ಭದಲ್ಲಿ ಆಯುಷ್ಮಾನ್ ಕಾರ್ಡ್/ ಪಡಿತರ ಚೀಟಿ ಹಾಗೂ ಆಧಾರ್ ಕಾರ್ಡ್‌ಗಳನ್ನು ತಂದರೆ ಎಲ್ಲಾ ರೀತಿಯ ಪರೀಕ್ಷೆ ಹಾಗೂ ಚಿಕಿತ್ಸೆಗಳು ಉಚಿತವಾಗಿ ದೊರೆಯುವುದು. ಈ ವಿಷಯವನ್ನು ತಮ್ಮ ವ್ಯಾಪ್ತಿಯ ಸುತ್ತಮುತ್ತಲಿನ ಎಲ್ಲ ಸಾರ್ವಜನಿಕರಿಗೆ ಮಾಹಿತಿ ನೀಡಬೇಕು ಎಂದು ತಿಳಿಸಿದರು.ನೋಡಲ್ ಅಧಿಕಾರಿ ಡಾ.ರಾಮಚಂದ್ರ ಕಾಮತ್ ಮಾತನಾಡಿ, ತಾಲೂಕಿನಲ್ಲಿ ಪ್ರತಿ ಮಂಗಳವಾರ ತಜ್ಞ ವೈದ್ಯರು ಹಾಗೂ ಆಸ್ಪತ್ರೆಯಲ್ಲಿ ಲಭ್ಯವಿರುವ ವೈದ್ಯರೊಂದಿಗೆ ತಾಲೂಕಿನ ಎಲ್ಲ ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳು/ ಪ್ರಾಥಮಿಕ/ ಸಮುದಾಯ/ ತಾಲೂಕು/ ಆಸ್ಪತ್ರೆಗಳಲ್ಲಿ ಆರೋಗ್ಯ ಶಿಬಿರಗಳನ್ನು ನಡೆಸುತ್ತಿದ್ದು, ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕು. ಆಯುಷ್ಮಾನ್ ಭಾರತ ಆರೋಗ್ಯ ಕರ್ನಾಟಕ ಯೋಜನೆಯಡಿ ಜಿಲ್ಲೆಯ ಎಲ್ಲಾ ಸಾರ್ವಜನಿಕ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ ಇದ್ದು, ಪಡಿತರ ಚೀಟಿ ಆಧಾರ್ ಕಾರ್ಡ್ ನೀಡಿ ಚಿಕಿತ್ಸೆ ಪಡೆಯಬಹುದು ಎಂದರು.
ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಶ್ರೀನಿವಾಸ್ ಮಾತನಾಡಿ, ಆಯುಷ್ಮಾನ್ ಭವ ಕಾರ್ಯಕ್ರಮದಲ್ಲಿ ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳ ಪತ್ರ ಹಾಗೂ ಯೋಜನೆಯ ಲಾಭಗಳ ಕುರಿತು ಮಾತನಾಡಿದರು.ಈ ಸಂದರ್ಭ ಸೋಮವಾರಪೇಟೆ ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ಶಿವಪ್ರಸಾದ್, ತಾಲೂಕು ಆರೋಗ್ಯ ಅಧಿಕಾರಿ ಡಾ.ಇಂದುಧರ್ ಉಪಸ್ಥಿತರಿದ್ದರು. ಸೋಮವಾರಪೇಟೆ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಎಚ್.ಕೆ. ಶಾಂತಿ ವಂದಿಸಿದರು.
ಈ ಶಿಬಿರದಲ್ಲಿ ಕೊಡಗು ವ್ಯೆದ್ಯಕೀಯ ವಿಜ್ಞಾನಗಳ ಸಂಸ್ಥೆಯ ವತಿಯಿಂದ ಆಯುಷ್ಮಾನ್ ಭಾರತ ಆರೋಗ್ಯ ಕರ್ನಾಟಕ ಯೋಜನೆ, ಉಚಿತ ಆಯುಷ್ಮಾನ್ ಕಾರ್ಡ್‌ಗಳ ನೋಂದಣಿ, ಉಚಿತ ಯುಡಿಐಡಿ ನೋಂದಣಿ, ದೇಹದಾನ, ನೇತ್ರದಾನ, ಅಂಗಾಂಗ ದಾನ ಕುರಿತು ಹಾಗೂ ಇನ್ನಿತರ ಯೋಜನೆಗಳ ಬಗ್ಗೆ ಆರೋಗ್ಯ ಮಿತ್ರರಾದ ಕವನ್ ಮತ್ತು ದಿಲೀಪ್ ಮಾಹಿತಿ ನೀಡಿದರು.ಈ ಸಂದರ್ಭ ಮೂಳೆ ಮತ್ತು ಕೀಲು ವಿಭಾಗದ ಡಾ.ಪ್ರಶಾಂತ್ ಮತ್ತು ತಂಡ, ಕಣ್ಣಿನ ವಿಭಾಗದ ವೈದ್ಯ ಡಾ. ವಿಕ್ರಂ ಮತ್ತು ತಂಡ, ಮಕ್ಕಳ ವಿಭಾಗದ ವೈದ್ಯರಾದ ಡಾ.ಸಲ್ಮಾ ಸಜಿಯಾ ಮತ್ತು ತಂಡ, ಡಾ.ರಶ್ಮಿ ಸ್ತ್ರೀ ಮತ್ತು ಪ್ರಸೂತಿ ವಿಭಾಗದ ವ್ಯೆದ್ಯರು, ಡಾ.ರಾಜಶ್ರೀ ಸಮುದಾಯ ಶಾಸ್ತ್ರ ವೈದ್ಯ ವಿಭಾಗ ಮತ್ತು ತಂಡ, ರಮೇಶ್ ಕ್ಲಿನಿಕಲ್ ಸೈಕೊಲಜಿಸ್ಟ್ ಮಾನಸಿಕ ಆರೋಗ್ಯ ವಿಭಾಗ, ಅಸಂಕ್ರಾಮಿಕ ರೋಗಗಳ ತಪಾಸಣೆಗಳ ತಂಡ, ಕಪಾಲಿ ಎಸ್. ನಾಯಕ್ ಶ್ರವಣ ತಜ್ಞರು ಹಾಗೂ ವ್ಯೆದ್ಯಕೀಯ ಕಾಲೇಜಿನ ವ್ಯೆದ್ಯರು, ವ್ಯೆದ್ಯಕೀಯ ವಿದ್ಯಾರ್ಥಿಗಳು, ಅರೆ ವ್ಯೆದ್ಯಕೀಯ ವಿದ್ಯಾರ್ಥಿಗಳು, ಸಿಬ್ಬಂದಿ, ಸಾರ್ವಜನಿಕ ಆಸ್ಪತ್ರೆ ಸೋಮವಾರಪೇಟೆ ವ್ಯೆದ್ಯರು ಹಾಗೂ ಸಿಬ್ಬಂದಿಗಳು, ತಾಲೂಕು ಹಿರಿಯ ಆರೋಗ್ಯ ಸುರಕ್ಷಣಾಧಿಕಾರಿಗಳು, ತಾಲೂಕು ಆರೋಗ್ಯ ಅಧಿಕಾರಿಗಳ ಕಚೇರಿ ಸಿಬ್ಬಂದಿ ಇತರರು ಇದ್ದರು.